
ಮಲಿನ ನೀರು, ಜೀವ ದ್ರವ್ಯ ವಿಷವಾಗತ್ತಿದೆ.
ಭೂಮಿಯ ಮೊದಲ ಜೀವ ನೀರಿನಲ್ಲಿ ಹುಟ್ಟಿತು. ಜೀವಜಗತ್ತಿನ ಉಳಿವಿಗೆ ನೀರೇ ಮುಖ್ಯ ಆಧಾರ. ಆದರೆ, ಇಂಥ ಜೀವದಾಯಿನಿ ನೀರು ಈಗ ಜೀವ ತೆಗೆಯುವ ಸಾಧನವಾಗುತ್ತಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ೩೦ ಲಕ್ಷ ಜನ ಕಲುಷಿತ ನೀರಿನಿಂದ ಸಾಯುತ್ತಿದ್ದಾರೆ. ಬದುಕಿನ ಮೂಲ ಅವಶ್ಯಕತೆಯಾದ ನೀರು ಮಲಿನಗೊಳ್ಳಲು ಕಾರಣಗಳೇನು? ಇದಕ್ಕೇನು ಪರಿಹಾರ?
ನೀರು ಸಕಲ ಜೀವ ಸಂಕುಲಕ್ಕೆ ಆಧಾರ. ನೀರಿಲ್ಲದೆ ಯಾವ ಜೀವಿಯು ಬದುಕಲಾರದು. ನಾಗರಿಕತೆ ಹುಟ್ಟಿ ಬೆಳೆದಿದ್ದೇ ಜಲಮೂಲಗಳ ಸುತ್ತ. ಪ್ರತಿಯೊಂದು ನಾಗರಿಕತೆಯೂ ನೀರನ್ನು ದೇವರೆಂದು ಪೂಜಿಸಿವೆ. ಗೌರವಾನ್ವಿತ ಸ್ಥಾನ ನೀಡಿವೆ. ಬದುಕಲು ಬೇಕಾದಂತೆ ನಮ್ಮ ನಿತ್ಯದ ಅವಶ್ಯಕತೆಗಳಿಗೂ ನೀರು ಅವಶ್ಯ. ಅಡುಗೆಗೆ, ಸ್ನಾನಕ್ಕೆ, ಸ್ವಚ್ಛತೆಗೆ, ಕೃಷಿಗೆ ಅಷ್ಟೇ ಅಲ್ಲ, ಬಹುತೇಕ ಉದ್ಯಮಗಳಿಗೂ ನೀರು ಬೇಕು. ಹೀಗಾಗಿ, ನೀರು ಮೂಲಭೂತ ಅವಶ್ಯಕತೆ.
ಭೂಮಿ ಕೂಡ ನೀರಿನಿಂದ ಸಮೃದ್ಧ. ಜಗತ್ತಿನ ೭೯ ಭಾಗ ನೀರಿನಿಂದ ಆವೃತವಾಗಿದ್ದು, ಅದರಲ್ಲಿ ಶೇಕಡಾ ೯೭.೨ ಭಾಗ ಸಮುದ್ರದಲ್ಲಿರುವ ಉಪ್ಪು ನೀರು. ಬಳಕೆಗೆ ಯೋಗ್ಯವಾದ ಶೇಕಡಾ ೩ ಭಾಗ. ಇದರಲ್ಲಿ ಭೂಮೇಲ್ಭಾಗದಲ್ಲಿರುವ ನೀರಿನ ಪ್ರಮಾಣ ಶೇಕಡಾ ೨.೫೯. ಇದರ ಪೈಕಿ ಶೇಕಡಾ ೧.೭೯ ಭಾಗ ಹಿಮಗಡ್ಡೆಗಳ ರೂಪದಲ್ಲಿದೆ.
ವಿಜ್ಞಾನಿಗಳು ಏನೆಲ್ಲ ಸಂಶೋಧನೆಗಳನ್ನು ಮಾಡಿದ್ದಾರೆ. ಬದುಕಿನ ಮಟ್ಟ ಏರಿಸಿದ್ದಾರೆ. ಆದರೆ, ನೀರಿಗೆ ಪರ್ಯಾಯ ಕಂಡುಹಿಡಿಯಲು ಆಗಿಲ್ಲ. ಹೀಗಾಗಿ ಅದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳೋದು ಅನಿವಾರ್ಯ.
ಮಾನವನಿಗೆ ಬದುಕಲು ಗಾಳಿಯಷ್ಟೇ ಅವಶ್ಯಕ ನೀರು. ನಮ್ಮ ದೇಹದ ಶೇಕಡಾ ೭೦ ಭಾಗ ನೀರಿನಿಂದ ಕೂಡಿದೆ. ಅಂದರೆ, ಆರೋಗ್ಯವಂತ ಮನುಷ್ಯನ ದೇಹದಲ್ಲಿ ಸುಮಾರು ೪೨ ಲೀಟರ್ ನೀರಿರುತ್ತದೆ. ಇದರಲ್ಲಿ ಕೇವಲ ೨.೭ ಲೀಟರ್ ನೀರಿನ ಕೊರತೆಯಾದರೂ ಡಿಹೈಡ್ರೇಶನ್ ಆಗುತ್ತದೆ. ವ್ಯಕ್ತಿ ಅಸ್ವಸ್ಥನಾಗುತ್ತಾನೆ. ಅಸಮಾಧಾನ, ಸುಸ್ತು ತಲೆದೋರುತ್ತದೆ. ಕಣ್ಣ ಸುತ್ತಲಿನ ಭಾಗ ಕಪ್ಪುಗಟ್ಟುತ್ತದೆ. ತಲೆನೋವಿನಿಂದ ವ್ಯಕ್ತಿ ಬಳಲತೊಡಗುತ್ತಾನೆ. ನಿತ್ಯ ಕನಿಷ್ಠ ಎಂಟು ಗ್ಲಾಸ್ ಅಥವಾ ೨ ಲೀಟರ್ ನೀರು ಕುಡಿಯುವುದರಿಂದ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಇದು ದೇಹದ ಅವಶ್ಯಕತೆಗಾಯ್ತು. ನಿತ್ಯದ ಬಳಕೆಗೆ ಎಷ್ಟು ಲೀಟರ್ ನೀರು ಬೇಕು? ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಬಳಸುವ ನೀರಿನ ಪ್ರಮಾಣ ೧೬೮ ಲೀಟರ್‌ನಷ್ಟು. ಯುರೋಪ್‌ನಲ್ಲಿ ೧೩೫ ಲೀಟರ್. ಭಾರತದಲ್ಲಿ ನಿತ್ಯ ಬಳಕೆಯ ನೀರಿನ ಪ್ರಮಾಣ ಸರಾಸರಿ ೧೦೦ ಲೀಟರ್. ಆದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಾಗ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರಪಂಚದಾದ್ಯಂತ ೧೦ ಲಕ್ಷ ಜನ ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಪ್ರತಿ ೮ ನಿಮಿಷಕ್ಕೆ ೧ ಮಗು ಜೀವ ಕಳೆದುಕೊಳ್ಳುವುದು ಕಲುಷಿತ ನೀರಿನಿಂದ. ಇದಕ್ಕೆ ಕಾರಣ ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ವಾಹನಗಳ ಸ್ವಚ್ಛತೆಗೆ ಕುಡಿಯುವ ನೀರನ್ನೇ ಬಳಸುತ್ತಿರುವುದು.
ಭಾರತದಲ್ಲಿ ಲಭ್ಯವಿರುವ ಅಂತರ್ಜಲದಲ್ಲಿ ಶೇಕಡಾ ೬೦ರಷ್ಟು ವ್ಯವಸಾಯಕ್ಕೇ ಬಳಕೆಯಾಗ್ತದೆ. ಉಳಿದಿದ್ದು ಮನುಷ್ಯನ ಬಳಕೆಗೆ. ಆದರೆ, ಮರುಪೂರಣ ವ್ಯವಸ್ಥೆ ಮಳೆಯನ್ನೇ ಅವಲಂಬಿಸಿರುವ ನಮ್ಮ ದೇಶದಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರ ನೇರ ಪರಿಣಾಮವಾಗ್ತಿರೋದು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಮೇಲೆ.
ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದಲ್ಲಿರುವ ಒಟ್ಟು ೨೦೮ ಸ್ಥಳಿಯ ಸಂಸ್ಥೆಗಳ ಪೈಕಿ ೪೧ ಸಂಸ್ಥೆಗಳು ಸಂಪೂರ್ಣವಾಗಿ ಅವಲಂಬಿಸಿರೋದು ಅಂತರ್ಜಲವನ್ನ. ಭಾರತದಲ್ಲಿ ಇಂದಿಗೂ ೧೧.೮ ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದು ಪರಿಸ್ಥಿತಿಯ ಗಂಭೀರತೆಗೆ ನಿದರ್ಶನ.
ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ಹಾಗೂ ಸೂಕ್ತ ಮರುಪೂರಣ ವ್ಯವಸ್ಥೆ ಇಲ್ಲದ್ದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಶೇಕಡಾ ೬೦ರಷ್ಟು ಅಂತರ್ಜಲ ವ್ಯವಸಾಯಕ್ಕೆ ಬಳಕೆಯಾಗ್ತಿರೋದ್ರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ, ನಗರ ಪ್ರದೇಶದಲ್ಲಿಯೂ ಇದು ದೊಡ್ಡ ಸಮಸ್ಯೆ.
ಮಹಾನಗರಗಳು ಕೂಡ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ರಾಜಧಾನಿ ಬೆಂಗಳೂರು ಈಗ ೧೯೮ ವಾಡ್ಗಳ ಬೃಹತ್ ಮಹಾನಗರ ಪಾಲಿಕೆ. ಕಾವೇರಿ ನದಿಯನ್ನೇ ಅವಲಂಬಿಸಿರುವ ಬೆಂಗಳೂರಿನ ನೀರಿನ ದಾಹ ಸುಲಭವಾಗಿ ತೀರುವಂಥದಲ್ಲ. ಇಂಥದೇ ಪರಿಸ್ಥಿತಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲೂ ಇದೆ. ಧಾರವಾಡ, ಹುಬ್ಬಳ್ಳಿ ಉದಾಹರಣೆ ತೆಗೆದುಕೊಳ್ಳುವುದಾದರೆ ಅಲ್ಲಿ ನೂತನವಾಗಿ ೬೧ ಹೊಸ ವಲಯಗಳು, ವಸತಿ ಸಂಕೀರ್ಣಗಳು ನಿರ್ಮಾಣವಾಗಿವೆ. ಆದರೆ ಇಂದಿಗೂ ಹೊಸ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲ. ೨೦೦೭ರಲ್ಲಿನ ಅಧ್ಯಯನ ಒಂದರ ಅಂಕಿ-ಅಂಶಗಳ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ೧೧ ಸಾವಿರ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ೨೦೦೯ಕ್ಕೆ ಇವುಗಳ ಸಂಖ್ಯೆ ೨೫% ಏರಿಕೆ ಕಂಡಿದೆ.
ಒಂದೆಡೆ ನಾವು ಭೂಮಿ ಬಗೆದು ನೀರು ತೆಗೆಯುತ್ತಿದ್ದೆವೆ. ಇನ್ನೊಂದೆಡೆ ಔದ್ಯೋಗಿಕ ರಂಗದ ಕ್ರಾತಿಯ ಹೆಸರಿನಲ್ಲಿ, ಇರುವ ನೀರನ್ನು ದಿನದಿಂದ ದಿನಕ್ಕೆ ಮಲಿನಗೊಳಿಸುತ್ತಾ ನಡೆದಿದ್ದೇವೆ. ಭಾರತದಲ್ಲಿ ೧೧.೮ ಕೋಟಿ ಕುಟುಂಬಗಳು ಇಂದಿಗೂ ಶುದ್ಧ ಕುಡಿಯುವ ನೀರಿಲ್ಲದೇ ಬದುಕುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾದರೆ ಅಚ್ಚರಿಯಿಲ್ಲ.
ಮನುಷ್ಯ ನಡೆಯುವ ದಾರಿಯಲ್ಲಿ ಹುಲ್ಲು ಕೂಡ ಬೆಳೆಯಲ್ಲ. ಇದರರ್ಥ: ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಪ್ರಮಾಣದಲ್ಲೇ ಹಾನಿಯನ್ನೂ ಮಾಡುತ್ತಾನೆ ಮನುಷ್ಯ. ಹಾಗಾದ್ರೆ, ಜೀವಜಲ ನೀರು ಮಾಲಿನ್ಯವಾಗ್ತಿರೋದಾದ್ರೂ ಹೇಗೆ?
ನೀರು ಎರಡು ರೀತಿಯಲ್ಲಿ ಮಾಲಿನ್ಯಕ್ಕೊಳಗಾಗುತ್ತೆ. ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗೋದ್ರಿಂದ ಹಾಗೂ ಕೈಗಾರಿಕೆಗಳು ಹಾಗೂ ಮನುಷ್ಯನ ನಿತ್ಯ ಬಳಕೆಯಿಂದ ಬರುವ ತ್ಯಾಜ್ಯದಿಂದ.
ಶೇಕಡಾ ೮೦ ಪ್ರಮಾಣ ನೀರು ಮಾಲಿನ್ಯವಾಗಲು ಕೊಳಚೆ ನೀರು ಮುಖ್ಯ ಕಾರಣ. ಮನುಷ್ಯನ ಬಳಕೆಯಿಂದ ಹೊರಬರುವ ತ್ಯಾಜ್ಯ ನೀರಿನಲ್ಲಿ ಡಿಟರ್ಜೆಂಟ್ ಮಿಶ್ರಿತ ರಾಸಾಯನಿಕ ಅಂಶ ಸೇರಿಕೊಂಡಿರುತ್ತೆ. ಇದರ ಜೊತೆಗೆ, ಘನ ತ್ಯಾಜ್ಯಗಳೂ ಸೇರಿಕೊಂಡು ಸಮುದ್ರ ಹಾಗೂ ನದಿ ನೀರನ್ನ ಮಲಿನಗೊಳಿಸುತ್ವೆ.
ಪ್ರತಿ ವರ್ಷ ಸುಮಾರು ೮೦ ಲಕ್ಷ ಟನ್ ಕರಗದ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ. ಇನ್ನು ಕೊಳಚೆ ನೀರಿನಲ್ಲಿ ಸೇರಿರುವ ಬಣ್ಣ, ಮಸಿ, ತೈಲದಂಥ ವಸ್ತುಗಳು ನೀರಿನಲ್ಲಿ ಕರಗದ್ದರಿಂದ ಜಲಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ.
ವ್ಯವಸಾಯವೂ ನೀರಿನ ಮಾಲಿನ್ಯ ಹೆಚ್ಚಿಸುತ್ತಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆಧುನಿಕ ವ್ಯವಸಾಯ ಪದ್ಧತಿಯ ಹೆಸರಿನಲ್ಲಿ, ಹೆಚ್ಚು ಇಳುವರಿ ಆಸೆಯಿಂದ ಹೆಚ್ಚೆಚ್ಚು ರಾಸಾಯನಿಕಗಳ ಬಳಕೆಯಾಗ್ತಿದೆ. ಇವುಗಳಲ್ಲಿರೋ ನೈಟ್ರೇಟ್ ಅಂಶ ಮಣ್ಣಿನ ಮೂಲಕ ನದಿ ನೀರನ್ನ ಸೇರುತ್ತೆ. ನೀರಿನಲ್ಲಿನ ಬ್ಯಾಕ್ಟೀರಿಯಾಗಳ ವೃದ್ಧಿಗೆ ಈ ರಾಸಾಯನಿಕ ಸಹಾಯ ಮಾಡೋದ್ರಿಂದ, ಜಲಮಾಲಿನ್ಯ ತೀವ್ರವಾಗಿ ಹರಡ್ತಿದೆ.
ಇಂಥದೇ ಮಾಲಿನ್ಯ ಕೈಗಾರಿಕೆಗಳ ತ್ಯಾಜ್ಯದಿಂದ್ಲೂ ಆಗ್ತಿದೆ. ಒಂದು ಅಧ್ಯಯನದ ಪ್ರಕಾರ ೨ನೇ ಮಹಾಯುದ್ಧದ ನಂತರದ ದಿನಗಳಲ್ಲಿ ಪ್ರಾರಂಭವಾದ ಕೆಮಿಕಲ್ ಕ್ರಾಂತಿ ಇದಕ್ಕೆ ಮುಖ್ಯ ಕಾರಣ. ಜಗತ್ತಿನಾದ್ಯಂತ ಹರಡಿರುವ ಕಾರ್ಖಾನೆಗಳಲ್ಲಿ ೧೨ ಸಾವಿರ ವಿಭಿನ್ನ ರೀತಿಯ ವಿಷಕಾರಿ ರಾಸಾಯನಿಕಗಳನ್ನು ಬಳಸ್ತಿದ್ದಾರೆ. ಇದಲ್ಲದೇ ಪ್ರತಿ ವರ್ಷ ೫೦೦ಕ್ಕೊ ಹೆಚ್ಚು ರಸಾಯನಿಕಗಳ ಸಂಶೋಧನೆಯಾಗ್ತಿದೆ. ಇವುಗಳ ಪೈಕಿ ಜನರಿಗೆ ಗೊತ್ತಿರೋದು ಕೇವಲ ಶೇಕಡಾ ೪೦ ರಸಾಯನಿಕಗಳು ಮಾತ್ರ. ಉಳಿದ ೨೦೦ ರೀತಿಯ ರಸಾಯನಿಕಗಳು ಪರೀಕ್ಷೆಗೆ ಒಳಪಡದೆ ಬಳಕೆಯಾಗ್ತಿವೆ.
ಪ್ರಪಂಚದಲ್ಲಿ ಇಂದು ೧೮,೧೦೦ ವಿಷಪೂರಿತ ಕೈಗಾರಿಕೆ ಕೊಳಚೆ ಹೊಂಡಗಳಿವೆ. ಪ್ರತಿ ವರ್ಷ ಇವುಗಳಿಂದ ಹೊರಬರುವ ವಿಷಕಾರಿ ರಾಸಾಯನಿಕ ತ್ಯಾಜ್ಯದ ಮೊತ್ತ ೪ ಸಾವಿರ ಲಕ್ಷ ಟನ್. ಸೂಕ್ತ ನಿರ್ವಹಣೆಗೆ ಒಳಪಡದ ಈ ತ್ಯಾಜ್ಯ ಕೊಳಚೆ ನೀರಿನ ಮೂಲಕ ಸಮುದ್ರ ಸೇರುತ್ತಿದೆ. ಹವಾಮಾನ ಏಜೆನ್ಸಿಯೊಂದರ ಪ್ರಕಾರ ಸುಮಾರು ೭೭೦ ಲಕ್ಷ ಟನ್ ರಾಸಾಯನಿಕ ಮಿಶ್ರಿತ ನೀರನ್ನ ಅಮೆರಿಕವೊಂದೇ ಸಮುದ್ರಕ್ಕೆ ಬಿಡ್ತಿದೆ.
ನಾವು ಬಳಸುವ ಕುಡಿಯುವ ನೀರಿನಲ್ಲಿ ಕೆಲವು ಕಡೆ ೨೦೦ಕ್ಕೊ ಹೆಚ್ಚು ರಾಸಾಯನಿಕಗಳು ಮಿಶ್ರವಾಗಿರ್ತವೆ. ೨೦೦೮ರ ಹವಾಮಾನ ಏಜೆನ್ಸಿಯೊಂದರ ವರದಿ ಪ್ರಕಾರ, ಇಂಥ ರಾಸಾಯನಿಕಗಳಿಂದ ೪ ಸಾವಿರಕ್ಕೂ ಹೆಚ್ಚಿನ ಬೇರೆ ಬೇರೆ ಕಾಯಿಲೆಗಳಿಗೆ ಜನ ಬಲಿಯಾಗ್ತಿದ್ದಾರೆ.
ಅಮೇರಿಕಾದಲ್ಲಿ ನಿತ್ಯ ೪ ಲಕ್ಷ ಕಾರ್ಖಾನೆಗಳು ಶುದ್ಧ ನೀರನ್ನು ಬಳಸಿಕೊಂಡು ಮಲಿನ ನೀರನ್ನು ಸಮುದ್ರಕ್ಕೆ ಸೇರಿಸ್ತಿವೆ. ಇಂಥ ನೀರು ಆಮ್ಲಜನಕದ ಪ್ರಮಾಣವನ್ನು ತಗ್ಗಿಸಿ ನೀರನ್ನ ಗಡಸಾಗಿಸ್ತದೆ. ಮಲಿನ ನೀರಿನ ಸೇವನೆಯಿಂದ ಕಾಲರಾ, ಟೈಫಾಯಿಡ್, ಜ್ವರ, ಮಲೇರಿಯಾ, ಪೋಲಿಯೊ, ಕಾಮಾಲೆ ಮುಂತಾದ ಗಂಭೀರ ಕಾಯಿಲೆಗಳು ಹರಡುತ್ವೆ. ಇವೆಲ್ಲಕ್ಕೂ ಮುನ್ನ ಅಪ್ಪಳಿಸೋದೇ ಅತಿಸಾರ ರೋಗ.
ಭಾರತ, ಆಫ್ರಿಕಾ, ದಕ್ಷಿಣ ಅಮೇರಿಕಾದಲ್ಲಿ ಪ್ರತಿ ವರ್ಷ ೩೦ ಲಕ್ಷ ಜನ ಅತಿಸಾರದಿಂದಾಗಿ ಸಾಯ್ತಿದ್ದಾರೆ. ಕೈಗಾರಿಕಾ ತ್ಯಾಜ್ಯವಾದ ಅಲ್ಯಮೀನಿಯಂ ಸಲ್ಫೇಟ್, ಸೀಸ ಮುಂತಾದವು ನೀರನ್ನು ಹೆಚ್ಚು ಪ್ರಮಾಣದಲ್ಲಿ ಮಲಿನಗೊಳಿಸ್ತಿವೆ. ಇಂಥ ನೀರು ಸೇವಿಸಿದರೆ ನರ ದೌರ್ಬಲ್ಯ, ಕಿಡ್ನಿ ಸಮಸ್ಯೆ ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುವಿಕೆಯಂಥ ಸಮಸ್ಯೆಗಳು ತಲೆದೋರ್ತವೆ.
ನೀರನ್ನು ಮಲಿನಗೊಳಿಸುತ್ತಿರುವ ಪ್ರಮುಖ ಕೈಗಾರಿಕೆಗಳೆಂದರೆ ಅಣುಸ್ಥಾವರ, ಸಕ್ಕರೆ ಕಾರ್ಖಾನೆ ಹಾಗೂ ಚರ್ಮ ಉತ್ಪಾದನಾ ಘಟಕಗಳು. ಅಣುಸ್ಥಾವರದಿಂದ ಬರುವ ತ್ಯಾಜ್ಯಗಳು ನೀರಿನ ಸಂಪರ್ಕಕ್ಕೆ ಬಂದಾಗ ಹೈಡ್ರೋಜನ್ ಸಲ್‌ಫೈಡ ಎನ್ನುವ ಅನಿಲವನ್ನು ಉತ್ಪತ್ತಿ ಮಾಡ್ತವೆ. ನೀರಿಗೆ ಆಗ ಕೊಳೆತ ಮೊಟ್ಟೆಯ ವಾಸನೆ ಹರಡುತ್ತದೆ. ಇಂಥ ನೀರು ಮನುಷ್ಯನಿಗಷ್ಟೇ ಅಲ್ಲ, ಪರಿಸರಕ್ಕೂ ಅಪಾಯಕಾರಿ.
ವಸುಂಧರೆಯ ಪುಸ್ತಕದಲ್ಲಿ ಆದಾಯ ಮತ್ತು ಖರ್ಚಿನ ಲೆಕ್ಕ ಸಮನಾಗಲೇಬೇಕು. ಬಳಕೆಯಾದ ನೀರನ್ನ ಹೆಚ್ಚು ಮಲಿನಗೊಳಿಸದೇ ಮರಳಿ ಬಿಡುವುದು ನಮ್ಮೆಲ್ಲರ ಹೊಣೆ.
No comments:
Post a Comment