
ಇ-ವೇಸ್ಟ್.
ಈ ಭೂಮಿ ನಮ್ಮ ಮನೆ. ನಾವೆಲ್ಲ ವಸುಂಧರೆಯ ಮಕ್ಕಳು. ಆದರೆ, ಪ್ರಗತಿಯ ಹೆಸರಿನಲ್ಲಿ ನಾವು ಮಾಡುತ್ತಿರುವುದು ಪರಿಸರ ನಾಶ. ಇದರಿಂದ ಭೂಮಿ ತಲ್ಲಣಿಸುತ್ತಿದ್ದು, ಬದುಕು ಏರುಪೇರಾಗುತ್ತಿದೆ. ಮಾತೇ ಆಡದ ನಿಸರ್ಗ ತನ್ನನ್ನು ತಾನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೆ ಅನ್ನೋದನ್ನ ಗಮನಿಸಿದ್ದೀರಾ? ಅದರ ಪಾಡಿಗೆ ಅದನ್ನು ಬಿಟ್ಟರೆ ಭೂಮಿ ಹಸಿರಿನ ಉಡುಗೆ ತೊಡ್ತದೆ. ನದಿಗಳು ಸ್ವಚ್ಛವಾಗ್ತವೆ. ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಇರ್ತವೆ. ಆದ್ರೆ, ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ನಿಸರ್ಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡ್ತಾನೆ. ಜೈವಿಕ ಸಮತೋಲನ ಹದಗೆಡಿಸ್ತಾನೆ. ಅದಕ್ಕೆ ಲೇಟೆಸ್ಟ್ ಕೊಡುಗೆ ಅಂದ್ರೆ ಇ-ವೇಸ್ಟ್. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಮಾಡಿದ ಅನಾಚಾರದ ವಿಕೃತ ರೂಪ. ಯಾವುದನ್ನ ನಾವು ಪ್ರಗತಿ ಅಂತೀವೋ ಅದು ಕೊನೆಗೆ ಪ್ರಕೃತಿಯ ಮಡಿಲು ಸೇರೋದು ಬೆಡದ ವಸ್ತುವಾಗಿ( ಕಸವಾಗಿ)
ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಹೊಸ ವಸ್ತುಗಳು ಸಂಶೋಧನೆಯಾಗ್ತಿವೆ. ದೊಡ್ಡ ಪ್ರಮಾಣದಲ್ಲಿ ಅವನ್ನು ಉತ್ಪಾದಿಸ್ತೇವೆ. ಒಂದಷ್ಟು ಕಾಲ ಅವನ್ನು ಬಳಸ್ತೇವೆ. ಅಷ್ಟರಲ್ಲಿ ಸುಧಾರಿತ ಉತ್ಪನ್ನ ಮಾರ್ಕೆಟ್ಟಿಗೆ ಬಂದಿರ್ತದೆ ಎಂದೋ, ಅಥವಾ ಈ ವಸ್ತು ಹಳೆಯದಾಗಿದೆ ಅಂತಾನೋ ಬೀಸಾಕ್ತೀವಿ.
ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾದ ಇಂಥ ಎಲ್ಲ ವಸ್ತುಗಳು ಬಳಕೆ ಅವಧಿ ಮುಗಿದ ನಂತರ ಕಸವಾಗಿ ಬೀಡತ್ತದೆ. ಖರೀದಿಸಿ, ಬಳಸಿ, ಬೀಸಾಡಿ ಎಂಬುದು ನಾಗರಿಕತೆಯ ಹೊಸ ಮಂತ್ರ. ಆನಂತರ ಏನು ಮಾಡ್ಬೇಕು ಅನ್ನೋದು ಯಾರಿಗೂ ಗೊತ್ತಿಲ್ಲ. ಉತ್ಪಾದಿಸುವವರಾಗಲಿ, ಬಳಸುವವರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ, ನಮ್ಮ ಹೆಮ್ಮೆಯ ವಸ್ತುಗಳು, ಉತ್ಪಾದನೆಗಳು ಕೊನೆಗೆ ತಲುಪುವ ಸ್ಥಿತಿ ಇದು. ಇವನ್ನು ಹೀಗೇ ಬಿಟ್ರೆ ಭೂಮಿ, ನೀರು ಹಾಗೂ ವಾಯುಮಂಡಲವನ್ನು ಕಲುಷಿತಗೊಳಿಸಬಲ್ಲವು. ನಾಗರಿಕತೆಗೇ ಕುತ್ತು ತರಬಲ್ವು. "ಇಟ್ಟರೆ ಸೆಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ" ಎನ್ನಲು ಇವೇನು ಸಾವಯವ ವಸ್ತುಗಳಲ್ಲ. ಹಲವಾರು ಅಪಾಯಕಾರಿ ವಸ್ತುಗಳು ಇವುಗಳ ಉತ್ಪಾದನೆಯಲ್ಲಿ ಬಳಕೆಯಾಗಿರ್ತವೆ. ಪ್ಲ್ಯಾಸ್ಟಿಕ್, ವಿಷಕಾರಿ ಲೋಹಗಳು, ರಾಸಾಯನಿಕಗಳು, ವಿಕಿರಣ ಸೂಸುವಂಥ ಸಂಯುಕ್ತಗಳು ಇರ್ತವೆ.
ಪ್ರಕೃತಿಯ ಕೆಲಸದಲ್ಲಿ ಮನುಷ್ಯ ಮಾಡುವ ಹಸ್ತಕ್ಷೇಪವೇ ನಾಗರಿಕತೆ. ಒಂದು ಹಂತದವರೆಗೆ ಪ್ರಕೃತಿ ಇದನ್ನು ಸಹಿಸುತ್ತೆ. ಹಸ್ತಕ್ಷೇಪವನ್ನು ಜೀರ್ಣಿಸಿಕೊಂಡು ಮತ್ತೆ ಎಂದಿನಂತಾಗಲು ಪ್ರಯತ್ನಿಸುತ್ತೆ. ಆದರೆ, ಮನುಷ್ಯನ ದಾಹಕ್ಕೆ ಕೊನೆ ಎಲ್ಲಿದೆ? ಇವತ್ತು ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ಮಾಡುತ್ತಿರುವ ಅನಾಚಾರ ಈ ಸುಂದರ ಜಗತ್ತನ್ನು ದೊಡ್ಡ ಕೊಳೆಗೇರಿಯನ್ನಾಗಿ ಮಾಡ್ತಿದೆ.
ಕಂಪ್ಯೂಟರ್‌ಗಳು, ಮಾನಿಟರ್‌ಗಳು, ಕೀ ಬೋರ್ಡ್‌ಗಳು, ಸರ್ಕ್ಯೂಟ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಅವುಗಳ ಬಿಡಿ ಭಾಗಗಳು, ವೈರುಗಳು, ಗಾಜು ಮುಂತಾದವೆಲ್ಲ ಒಂದು ಸಮಯದಲ್ಲಿ ನಮ್ಮ ನಿತ್ಯಬಳಕೆಯ ವಸ್ತುಗಳೇ. ಬಳಕೆಯ ಅವಧಿ ಮುಗಿದ ನಂತರ ಇವು ಕಸದ ಪಟ್ಟಿಗೆ ಸೇರಿವೆ. ನಮ್ಮ ನಾಗರಿಕತೆಯ ಅನಿವಾರ್ಯ ಅಂಗಗಳು ಇವೆಲ್ಲ. ಈ ಉಪಕರಣಗಳಿಲ್ಲದೇ ಮನುಷ್ಯನ ನಿತ್ಯದ ಜೀವನ ನಡೆಯುವುದು ಸಾಧ್ಯವಿಲ್ಲ. ಅಷ್ಟೊಂದು ಅವಲಂಬನೆ ಈ ಉಪಕರಣಗಳ ಮೇಲಿದೆ.
ಯಂತ್ರೋಪಕರಣಗಳ ಮೇಲಿನ ಅವಲಂಬನೆ ಹೆಚ್ಚಾದಂತೆ, ಅವುಗಳ ಉತ್ಪಾದನೆಯೂ ಹೆಚ್ತಿದೆ. ಈಗ ಅಭಿವೃದ್ಧಿ ಅಂದ ಕೂಡಲೇ ಕೇಳಿಬರುವುದು ಐಟಿ ಮತ್ತು ಬಿಟಿ ಹೆಸರು. ನಮ್ಮ ದಿನಚರಿಯ ಎಲ್ಲ ಆಗುಹೋಗು ಇಂದು ಸಂಪೂರ್ಣವಾಗಿ ಅವಲಂಬಿಸಿರೋದು ಇವನ್ನೇ. ಬೆಳಿಗ್ಗೆ ಏಳಿಸುವ ಅಲಾರಾಮ್‌ನಿಂದ ಹಿಡಿದು, ರೆಡಿಯೋ, ಟಿವಿ, ಕ್ಯಾಲ್ಕುಲೇಟರ್, ಮೊಬೈಲ್, ವಾಷಿಂಗ್ ಮಷೀನ್, ಫ್ರಿಜ್, ವಿಸಿಡಿ, ಸಿಡಿ, ಕಂಪ್ಯ್ಯೂಟರ್- ಹೀಗೆ ಪ್ರತಿಯೊಂದು ವಸ್ತುವೂ ಎಲೆಕ್ಟ್ರಾನಿಕ್‌ಮಯ.ಇವುಗಳಿಂದಾಗಿ ಹೊಸ ಹೊಸ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅವಿಷ್ಕಾರ ದಿನೇ ದಿನೇ ಹೆಚ್ಚಿದೆ.
ಹೀಗಾಗಿ, ಮಾರುಕಟ್ಟೆಗೆ ಮಾತ್ರವಲ್ಲದೆ ನಮ್ಮ ಮನೆಗೂ ಈ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರವಾಹ ಹರಿದು ಬರ್ತಿದೆ. ಇದನ್ನು ತಡೆಯುವುದಂತೂ ಅಸಾಧ್ಯ. ಜೊತೆಗೆ, ಇವುಗಳಿಂದ ಉಂಟಾಗುತ್ತಿರುವ ತ್ಯಾಜ್ಯದ ವಿಲೇವಾರಿ ಕೂಡ ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ.
ಇದರಿಂದ ಏನಾಗ್ತದೆ? ಯಾವ ವಸ್ತುಗಳು ನಮಗೆ ತೀರ ಅವಶ್ಯವೋ, ಅವು ಬಳಕೆ ಅವಧಿ ಮುಗಿದ ನಂತರ ನಮಗೆ ಬೇಡಾದ, ನಿಸರ್ಗಕ್ಕೆ ಹಾನಿಕರವಾದ ವಸ್ತುಗಳಾಗಿ ಬದಲಾಗ್ತವೆ
ಹೀಗಾಗಿ, ಇಂಥ ವಸ್ತುಗಳನ್ನು ಉತ್ಪಾದಿಸುವಾಗಿನ ಯೋಜನೆ ಅವುಗಳ ತ್ಯಾಜ್ಯ ವಿಲೇವಾರಿಗೂ ಇರಬೇಕಾಗುತ್ತೆ. ಆದರೆ, ಅಂಥ ಪ್ರಯತ್ನಗಳು ನಡೀತಿಲ್ಲ.
ನೈಸರ್ಗಿಕ ಸಂಪನ್ಮೂಲಗಳನ್ನು ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸ್ತಾ ಹೋಗ್ತಾನೆ. ಭೂಮಿ ಉಳುಮೆ ಮಾಡಿ ಬಿತ್ತುವುದು, ಹರಿಯುವ ನೀರನ್ನು ತಡೆದು ನೀರಾವರಿ ಮಾಡಿಕೊಳ್ಳೋದು, ಮರ ಕಡಿದು ಉರುವಲಿಗೆ ಬಳಸೋದು ಇಂಥ ಚಟುವಟಿಕೆಗಳು. ಇದನ್ನೆಲ್ಲ ಪ್ರಕೃತಿ ಒಂದು ಹಂತದವರೆಗೆ ಸಹಿಸಿಕೊಳ್ಳುತ್ತದೆ. ಆದರೆ, ಪುನರ್‌ಬಳಕೆಯಾಗದ ವಸ್ತುಗಳ ನಿರಂತರ ತ್ಯಾಜ್ಯ ಉತ್ಪಾದನೆ ಜೀರ್ಣಿಸಿಕೊಳ್ಳುವುದು ಪ್ರಕೃತಿಗೆ ಸಾಧ್ಯವಿಲ್ಲ. ಇಂಥ ತ್ಯಾಜ್ಯವಸ್ತುಗಳು ಅಪಾಯಕಾರಿ ರಾಸಾಯನಿಕ ವಸ್ತುಗಳ ಉತ್ಪತ್ತಿಗೆ ಕಾರಣವಾಗ್ತವೆ. ಇವನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸದಿದ್ದರೆ, ಅಪಾಯ ತಪ್ಪಿದ್ದಲ್ಲ. ಎಲೆಕ್ಟ್ರಾನಿಕ್ಸ್ ವಸ್ತುಗಳ ಸಂಶೋಧನೆ ಹಾಗೂ ಉತ್ಪಾದನೆ ನಿರಂತರವಾಗಿ ನಡೆದಿದೆ. ಭಾರತವೊಂದರಲ್ಲೇ ಪ್ರತಿ ಒಂದು ವರದಿಯ ಪ್ರಕಾರ ಕಂಪ್ಯೂಟರ್ ಬಳಕೆದಾರರು ೧೯೯೭ರಲ್ಲಿ ಪ್ರತಿ ಆರು ವರ್ಷಕೊಮ್ಮೆ ಸಿಸ್ಟಮ್ ಬದಲಾಯಿಸ್ತಿದ್ರು. ಆದ್ರೆ, ೨೦೦೫ರಲ್ಲಿ ಈ ಪ್ರಮಾಣ ಎರಡು ವರ್ಷಕ್ಕೆ ಇಳೀತು. ಈಗ ಪ್ರಪಂಚದಲ್ಲಿ ಅಂದಾಜು ೭೧೬೦ ಲಕ್ಷ ಕಂಪ್ಯೂಟರ್ ಬಳಕೆದಾರರಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಸುಮಾರು ೮೦೦ ಲಕ್ಷ. ಬೆಂಗಳೂರೊಂದರಲ್ಲೇ ವರ್ಷಕ್ಕೆ ೧೭,೦೦೦ ಲಕ್ಷ ಸಾಫ್ಟವೇರ್ ಉಪಕರಣಗಳನ್ನ ತಯಾರಿಸುವ ಕಂಪನಿಗಳಿವೆ.ವರ್ಷ ೨೦೦ರಿಂದ ೫೦೦ ಲಕ್ಷ ಟನ್ ಎಲೆಕ್ಟ್ರಾನಿಕ್ಸ್ ತ್ಯಾಜ್ಯ ಉತ್ಪತ್ತಿಯಾಗ್ತಿದೆ. ಒಂದು ಅಧ್ಯಯನದ ಪ್ರಕಾರ ೧೮ ತಿಂಗಳಿಗೊಮ್ಮೆ ಹೊಸ ಮಾದರಿಯ ಕಂಪ್ಯೂಟರ್ ಮಾರ್ಕೆಟ್‌ಗೆ ಬರ್ತಿದೆ. ಆದೆ, ಅದೇ ಒಂದು ಹಳೆಯ ಕಂಪ್ಯೂಟರ್ ವಿಲೇವಾರಿ ಮಾಡಲು ೪ರಿಂದ ೫ ವರ್ಷಗಳೇ ಬೇಕಾಗುತ್ತೆ.
ಹೊಸ ಉಪಕರಣಗಳ ಖರೀದಿಯೂ ಭರದಿಂದ್ಲೇ ನಡೀತಿದೆ. ಮಾರ್ಕೆಟ್ನಲ್ಲಿ ಯಾವುದೇ ಹೊಸ ಫೀಚರ್‍ಸ್, ಗೆಜೆಟ್, ಮೊಬೈಲ್, ಕಂಪ್ಯೂಟರ್ ಬರೋದೇ ತಡ, ಅದನ್ನ ಕೊಳ್ಳಲು ಜನ ನುಗ್ತಾರೆ. ಹೊಸ ಪೀಳಿಗೆಯ ಈ ಉತ್ಸಾಹ ಇ-ವೇಸ್ಟ್ ಹೆಚ್ಚಳಕ್ಕೆ ಪ್ರಮುಖ ಕಾರಣ.
ಈಗ ಕಂಪ್ಯೂಟರ್ ಹಾದಿಯಲ್ಲಿ ಮೊಬೈಲ್ ಬಂದಿದೆ. ಪ್ರತಿ ೨ ವರ್ಷಕ್ಕೊಮ್ಮೆ ಮೊಬೈಲ್ ಬದಲಾಯಿಸಲಾಗ್ತಿದೆ. ಒಮ್ಮೆ ಬಳಸಿದ ಮೊಬೈಲ್‌ಗಳು ಮತ್ತೆ ಬಳಕೆಗೆ ಬರೋದು ಅಪರೂಪ. ಇಂಥ ಮೊಬೈಲ್‌ಗಳ ಜೊತೆಗೆ ಅದರ ಪೂರಕ ಉಪಕರಣಗಳೂ ಸೇರ್ತಿರೋದ್ರಿಂದ ಎಲೆಕ್ಟ್ರಾನಿಕ್ಸ್ ತ್ಯಾಜ್ಯದ ಪ್ರಮಾಣ ಸತತವಾಗಿ ಏರ್ತಿದೆ. ಅಮೇರಿಕಾ ಒಂದರಲ್ಲೇ ಸುಮಾರು ೨೦೦ ಕೋಟಿ ಮೊಬೈಲ್‌ಗಳು ಬಳಕೆಯಾಗ್ತಿವೆ. ಎಷ್ಟೋ ಜನ ೨ ಹಾಗೂ ೩ನೇ ಮೊಬೈಲ್ ಕೂಡ ಬಳಸ್ತಿದಾರೆ. ಹೀಗಾಗಿ, ಪ್ರತಿ ವರ್ಷ ಅಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣ ಸುಮಾರು ೬೦೦೦ರಿಂದ ೮೦೦೦ ಟನ್. ಭಾರತದಲ್ಲಿಯೂ ಇಂಥ ತ್ಯಾಜ್ಯದ ಪ್ರಮಾಣ ನಿಧಾನವಾಗಿ ಏರ್ತಾ ಇದೆ. ತಂತ್ರಜ್ಞಾನದ ಬಳಕೆ ಹೆಚ್ತಿರೋ ಜೊತೆಗೆ ಅದು ಉಂಟು ಮಾಡುವ ಸಮಸ್ಯೆಯ ಗಂಭೀರತೆಯೂ ಹೆಚ್ತಿದೆ. ಏಕೆಂದ್ರೆ, ಎಲೆಕ್ಟ್ರಾನಿಕ್ಸ್ ತ್ಯಾಜ್ಯ, ಅಂದ್ರೆ ಇ-ತ್ಯಾಜ್ಯದ ವಿಲೇವಾರಿ ಅಷ್ಟು ಸುಲಭವಲ್ಲ.
ಪ್ರತಿ ವರ್ಷ ಜಗತ್ತಿನಾದ್ಯಂತ ೪೦೦ ಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತೆ. ಇದರಲ್ಲಿ ಮೊಬೈಲ್ ಫೋನ್‌ಗಳದು ಸಿಂಹಪಾಲು. ಭಾರತದಲ್ಲಿ ಸದ್ಯ ೧೭೦೦ ಟನ್ ಮೊಬೈಲ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ.
೨೦೦೭ರಲ್ಲಿ ಜಾಗತಿಕ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಉತ್ಪಾದನೆ ಪ್ರಮಾಣ ೧೦೦ ಕೋಟಿಗೂ ಹೆಚ್ಚು. ಆದ್ರೆ, ಈ ಪೈಕಿ ಬಹುಪಾಲು ಮೊಬೈಲ್‌ಗಳು ಕಸದ ತೊಟ್ಟಿ ಸೇರ್ತವೆ ಎಂಬುದು ಒಂದು ಅಂದಾಜು. ಇನ್ನೆರಡು ವರ್ಷ ಕಳೆದರೆ, ಸುಮಾರು ೮೦೦೦ ಟನ್ ಮೊಬೈಲ್ ತ್ಯಾಜ್ಯ ಉತ್ಪತ್ತಿಯಾಗುವ ಅಂದಾಜಿದೆ. ಇಷ್ಟೊಂದು ಪ್ರಮಾಣದ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡೋದು ಹೇಗೆ?
ಮೊಬೈಲ್, ಕಂಪ್ಯೂಟರ್‌ಗಳಷ್ಟೇ ಅಲ್ಲ, ಒಟ್ಟಾರೆ ಎಲೆಕ್ಟ್ರಾನಿಕ್ ತ್ಯಾಜ್ಯದ ಉತ್ಪಾದನೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇದರಲ್ಲಿ ಅಮೆರಿಕಾ ದೇಶದ್ದು ಸಿಂಹಪಾಲು. ಪ್ರತಿ ವರ್ಷ ಅಮೆರಿಕಾ ಒಂದೇ ೩೦ ಲಕ್ಷ ಟನ್ ಇ-ವೇಸ್ಟ್ ಉತ್ಪಾದಿಸ್ತಿದೆ.
ಅಮೆರಿಕಾದ ನಂತರ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದಿಸ್ತಿರೋದು ಚೀನಾ. ಅದು ಪ್ರತಿ ವರ್ಷ ೨೩ ಲಕ್ಷ ಟನ್ ಇ-ತ್ಯಾಜ್ಯ ಹೊರಹಾಕ್ತಿದೆ. ಸದ್ಯಕ್ಕೆ ಭಾರತದ ಇ-ವೇಸ್ಟ್ ಕೊಡುಗೆ ವರ್ಷಕ್ಕೆ ೧.೪೫ ಲಕ್ಷ ಟನ್ ಇದೆಯಾದ್ರೂ, ಇನ್ನೆರಡು ವರ್ಷದಲ್ಲಿ ಈ ಪ್ರಮಾಣ ೮ ಲಕ್ಷ ಟನ್‌ಗೆ ಏರುವ ಸಂಭವವಿದೆ. ಒಂದು ಅಂದಾಜಿನ ಪ್ರಕಾರ, ಭಾರತದ ಇ-ವೇಸ್ಟ್ ಪ್ರತಿ ವರ್ಷ ಶೇಕಡಾ ೫೦೦ರ ಪ್ರಮಾಣದಲ್ಲಿ ಹೆಚ್ತಾ ಇದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ.
ಸರ್ಕಾರೇತರ ಸಂಸ್ಥೆಯೊಂದರ ವರದಿಯ ಪ್ರಕಾರ, ಬೆಂಗಳೂರು ನಗರದಲ್ಲಿ ೧,೩೨೨ ಸಾಫ್ಟ್‌ವೇರ್ ಕಂಪನಿಗಳು ಹಾಗೂ ೩೬ ಹಾರ್ಡ್‌ವೇರ್ ಕಂಪನಿಗಳಿವೆ. ಇವೆಲ್ಲ ಸೇರಿ ಪ್ರತಿ ವರ್ಷ ೮೦೦೦ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಉತ್ಪಾದಿಸ್ತಿವೆ. ಆದ್ರೆ, ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂಥ ಒಂದೇ ಒಂದು ಯೋಜನೆಯೂ ಇಲ್ಲ.
ಎಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಇಷ್ಟೊಂದು ಧಾವಂತ ಏಕೆ ಎಂಬ ಪ್ರಶ್ನೆ ಎದುರಾಗುತ್ತೆ. ನಿಜ, ಮೇಲ್ನೋಟಕ್ಕೆ ಈ ವಸ್ತುಗಳು ಅಷ್ಟೊಂದು ಅಪಾಯಕಾರಿ ಅನ್ನಿಸಲ್ಲ. ಆದ್ರೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ರೆ, ಇವು ಪರಿಸರಕ್ಕೆ ಉಂಟು ಮಾಡುವ ಹಾನಿ ಅಷ್ಟಿಷ್ಟಲ್ಲ.
ಏಕೆಂದ್ರೆ, ಜೀವಜಗತ್ತಿಗೆ ಅಪಾಯಕಾರಿಯಾದ ಸೀಸ, ಪಾದರಸ, ಕ್ರೋಮಿಯಮ್, ಕ್ಯಾಡ್ಮಿಯಮ್, ಪಾಲಿವಿನೈಲ್ ಕ್ಲೋರೈಡ್, ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್, ಡಯಾಕ್ಸಿನ್ಸ್, ಫ್ಯೂರಾನ್ಸ್, ಬ್ರೊಮೈಡ್ಸ್, ಆಂಟಿಮನಿ ಆಕ್ಸೈಡ್‌ಗಳಂಥ ಹಲವಾರು ಅಪಾಯಕಾರಿ ರಸಾಯನಿಕಗಳು ಎಲೆಕ್ಟ್ರಾನಿಕ್ ವಸ್ತುಗಳಲ್ಲಿರುತ್ವೆ. ಇವುಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತೆ.
ಎಲೆಕ್ಟ್ರಾನಿಕ್ ತ್ಯಾಜ್ಯ ಪರಿಸರ ಸೇರೋದು ಹೇಗೆ? ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಕ್ಯಾಥೋಡ್ ರೇ ಟ್ಯೂಬ್‌ಗಳು, ಪ್ರಿಂಟೆಡ್ ಬೋರ್ಡ್ ಅಸೆಂಬ್ಲಿಗಳು, ಕೆಪ್ಯಾಸಿಟರ್‌ಗಳು, ಮರ್ಕ್ಯೂರಿ ಸ್ವಿಚ್‌ಗಳು, ರಿಲೇಗಳು, ಬ್ಯಾಟರಿಗಳು ಹಾಗೂ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇಗಳು ಫೊಟೊ ಕಾಪಿಯಿಂಗ್ ಯಂತ್ರಗಳಲ್ಲಿರುವ ಕಾರ್‍ಟ್ರಿಜ್‌ಗಳು, ಸೆಲೆನಿಯಮ್ ಡ್ರಮ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಅಪಾಯ ತಪ್ಪಿದ್ದಲ್ಲ.
ಸರ್ಕ್ಯೂಟ್ ಬೋರ್ಡ್‌ಗಳಲ್ಲಿ ಸೀಸ ಮತ್ತು ಕ್ಯಾಡ್ಮಿಯಂ ಅಂಶ ಇರುತ್ತೆ. ಮಾನಿಟರ್‌ಗಳಲ್ಲಿರುವ ಕ್ಯಾಥೋಡ್ ರೇ ಟ್ಯೂಬ್‌ನಲ್ಲಿ ಸೀಸದ ಆಕ್ಸೈಡ್ ಮತ್ತು ಕ್ಯಾಡ್ಮಿಯಂ ಬಳಸಿರ್ತಾರೆ. ಸ್ವಿಚ್ ಹಾಗೂ ಸಮತಟ್ಟಾದ ಮೇಲ್ಮೈನ ಮಾನಿಟರ್‌ಗಳಲ್ಲಿ ಪಾದರಸವಿದ್ದರೆ ಕಂಪ್ಯೂಟರ್ ಬ್ಯಾಟರಿಗಳಲ್ಲಿ ಕ್ಯಾಡ್ಮಿಯಂ, ಹಳೆಯ ಕೆಪ್ಯಾಸಿಟರ್‌ಗಳು ಹಾಗೂ ಟ್ರಾನ್ಸ್‌ಫಾರಮ್‌ಗಳಲ್ಲಿ ಪಾಲಿಕ್ಲೋರಿನೇಟೆಡ್ ಬೈಫಿನೈಲ್ ಎಂಬ ರಾಸಾಯನಿಕ ಇರುತ್ತದೆ. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಪ್ಲ್ಯಾಸ್ಟಿಕ್ ಆವರಣಗಳು, ಕೇಬಲ್‌ಗಳು ಹಾಗೂ ಪಾಲಿವಿನೈಲ್ ಕ್ಲೋರೈಡ್ ಕೇಬಲ್ ಇನ್ಸುಲೇಶನ್‌ಗಳಲ್ಲಿ ಬ್ರೋಮಿನೇಟೆಡ್ ಬೆಂಕಿ ನಿರೋಧಕಗಳಿರ್ತವೆ. ಇವನ್ನು ಸುಟ್ಟಾಗ ಅತ್ಯಂತ ವಿಷಕಾರಿಯಾದ ಅನಿಲಗಳನ್ನು ಹೊರಸೂಸುತ್ವೆ.
ಇಷ್ಟೊಂದು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸೂಕ್ತವಾಗಿ ಸಂಸ್ಕರಿಸದಿದ್ದರೆ ಅವು ನೀರು, ಗಾಳಿ, ಮಣ್ಣಲ್ಲಿ ಸೇರಿಕೊಳ್ಳುತ್ತವೆ. ಆಗ ಉಂಟಾಗುವ ಹಾನಿಯನ್ನು ಸುಲಭದಲ್ಲಿ ಊಹಿಸಲಾಗದು.
ಜಗತ್ತಿನ ಶೇಕಡಾ ೮೦ರಷ್ಟು ಇ-ತ್ಯಾಜ್ಯವನ್ನ ವಿಲೇವಾರಿ ಹೆಸರಿನಲ್ಲಿ ಭೂಮಿಗೆ ಹಾಕಲಾಗ್ತಿದೆ ಅಥವಾ ಸುಡಲಾಗ್ತಿದೆ. ಇದರಿಂದಾಗಿ ಅಂತರ್ಜಲ ವಿಷಪೂರಿತವಾಗುತ್ತೆ. ಇಂಥ ನೀರನ್ನ ಕುಡಿದಾಗ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟಾಗುತ್ತೆ.
ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಸುಡುವ ಅಥವಾ ಹೂಳುವ ಪ್ರದೇಶಗಳ ಮಕ್ಕಳ ರಕ್ತ ತಪಾಸಣೆ ನಡೆಸಿದಾಗ, ಶೇಕಡಾ ೭೦ರಷ್ಟು ಜನ ಮಕ್ಕಳ ರಕ್ತದಲ್ಲಿ ಅತಿ ಹೆಚ್ಚು ಪ್ರಮಾಣದ ಸೀಸ ಕಂಡು ಬಂದಿದೆ. ಇದು ಮೆದುಳು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತೆ.
ಮುಂದುವರಿದ ದೇಶಗಳು ತಮ್ಮ ಇ-ತ್ಯಾಜ್ಯವನ್ನು ಭಾರತದಂಥ ದೇಶಗಳಿಗೆ ರಫ್ತು ಮಾಡ್ತಿವೆ. ಇದರಿಂದಾಗಿ, ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗ್ತಿವೆ.
ಸೂಕ್ತ ಯೋಜನೆ ಹಾಗೂ ಉತ್ತಮ ದರ್ಜೆಯ ಸಂಸ್ಕರಣ ಘಟಕಗಳ ನಿರ್ಮಾಣದಿಂದ ಮಾತ್ರ ಇ-ವೇಸ್ಟ್‌ನಿಂದಾಗುವ ಅಪಾಯ ಪ್ರಮಾಣವನ್ನು ತಗ್ಗಿಸಬಹುದು. ಇದಕ್ಕಾಗಿ ಸರ್ಕಾರ,
ಪ್ರತಿ ಜಿಲ್ಲೆಗೆ ಒಂದು ಇ-ತ್ಯಾಜ್ಯ ವಿಲೇವಾರಿ ಘಟಕ ತೆರೆಯಬೇಕು
ಇ-ತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ಕಾನೂನುಗಳನ್ನ ರಚಿಸಬೇಕು
ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಪರಿಸರಸ್ನೇಹಿ ಕಚ್ಚಾ ಪದಾರ್ಥಗಳನ್ನ ಬಳಸುವುದನ್ನು ಕಡ್ಡಾಯ ಮಾಡಬೇಕು
ಉತ್ಪಾದನೆಯಾಗುವ ಹಾಗೂ ಆಮದು-ರಫ್ತಾಗುವ ಉಪಕರಣಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಬೇಕು.
ಹೊರರಾಷ್ಟ್ರಗಳಿಂದ ಆಮದಾಗುತ್ತಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳ ಪರೀಕ್ಷೆ ಕಡ್ಡಾಯವಾಗಬೇಕು.
ಎಲೆಕ್ಟ್ರಾನಿಕ್ಸ್ ತ್ಯಾಜ್ಯವನ್ನು ಹೂಳುತ್ತಿರುವ ಪದ್ಧತಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಜವಾಬ್ದಾರಿ ಕೇವಲ ಸರ್ಕಾರದ್ದಷ್ಟೇ ಅಲ್ಲ, ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದಕರದೂ ಹೌದು. ಅಪಾಯಕಾರಿ ವಸ್ತುಗಳ ಬಳಕೆ ನಿಲ್ಲಿಸುವುದು, ಗುಣಮಟ್ಟಕ್ಕೆ ಗಮನ, ದೀರ್ಘಕಾಲ ಬಾಳುವಂಥ ವಸ್ತುಗಳ ಉತ್ಪಾದನೆ, ಮರುಬಳಕೆ ಮೂಲಕ ಇ-ತ್ಯಾಜ್ಯ ಉತ್ಪಾದನೆ ಪ್ರಮಾಣ ತಗ್ಗಿಸಬಹುದು.
ಇದುವರೆಗೆ ಕೇವಲ ಶೇಕಡಾ ೧೮ರಿಂದ ೨೦ರಷ್ಟು ಇ-ತ್ಯಾಜ್ಯ ಮಾತ್ರ ಮರು ಬಳಕೆಯಾಗ್ತಿದೆ. ಈ ಪ್ರಮಾಣ ಸಾಕಷ್ಟು ಹೆಚ್ಚಬೇಕು. ಸೂಕ್ತ ತಿಳಿವಳಿಕೆ, ತಂತ್ರಜ್ಞಾನ ಹಾಗೂ ಕಾನೂನಿನಿಂದ ಮಾತ್ರ ಎಲೆಕ್ಟ್ರಾನಿಕ್ ತ್ಯಾಜ್ಯ ವಿಲೇವಾರಿ ಸಮಸ್ಯೆ ಹತೋಟಿಗೆ ಬರಲು ಸಾಧ್ಯ. ಅಂಥದೊಂದು ಪ್ರಯತ್ನಕ್ಕೆ ನಾವೆಲ್ಲ ಕೈ ಜೋಡಿಸೋಣ
No comments:
Post a Comment