
ಕೆರೆ.. ಕೆರೆ.. ಕೆರೆ
ಬೆಂದಕಾಳೂರಿನ ಹೃದಯ ಬಾಗದಲ್ಲಿದ್ದ ಧರ್ಮಾಂಬುದಿ ಕೆರೆ ಮೆಜೆಸ್ಟಿಕ್ ಆಗಿದೆ ಚಳಘಟ್ಟಕೆರೆ ಗಾಲ್ಪ್ ಕೋರ್ಸ ಆಗಿಬದಲಾಗಿದೆ ಕೋರಮಂಗಲದ ಕೆರೆ ನ್ಯಾಷನಲ್ ಗೇಮ್ಸ ವಿಲೆಜ್ ಆಗಿಬದಲಾಗಿದೆ ಇದು ಬರಿ ಬೆಂಗಳುರಿನ ಕೆರೆಗಳ ಕತೆಅಲ್ಲ ರಾಜ್ಯದ ಪ್ರತಿ ಉರಿನ ಕೆರೆಯ ಕತೆಯು ಇದೆ ಆಗಿದೆ.ಕೆರೆಗಳು ನಾಶವಾಗ್ತಿರೋದು ನಿಜ. ಅದ್ಕೂ ಮುಂಚೆ, ಕೆರೆಗಳನ್ನು ಏಕೆ ನಿರ್ಮಿಸ್ತಿದ್ರು ಎಂಬ ಪ್ರಶ್ನೆ ಮುಖ್ಯ
ಮೂಲ ದ್ರವ್ಯಗಳಲ್ಲಿ ನೀರು ಅತ್ಯಂತ ಪ್ರಾಥಮಿಕವಾದದ್ದು. ಜೀವ ಸೃಷ್ಟಿ ಮತ್ತು ಪೋಷಣೆಗೆ ನೀರೇ ಪ್ರಾಣಾಧಾರ. ವಿಶಾಲ ಅರ್ಥದಲ್ಲಿ ನೋಡುವುದಾದರೆ ನೀರು ಮತ್ತು ಮನುಷ್ಯನ ನಡುವೆ ಏರ್ಪಟ್ಟ ಸಂಘರ್ಷವೇ ಜಗತ್ತಿನ ಚರಿತ್ರೆ. ನೀರಿನ ಬಳಕೆಯನ್ನು ಮನುಷ್ಯ ಕಂಡುಕೊಂಡಿದ್ದೇ ಕೃಷಿ, ವಿಜ್ಞಾನ ಮತ್ತು ನಾಗರಿಕತೆಗಳ ಹುಟ್ಟಿಗೆ ಕಾರಣವಾಯ್ತು. ಪ್ರಪಂಚದ ಎಲ್ಲಾ ನಾಗರಿಕತೆಗಳೂ ನೀರನ್ನು ಒಂದು ಮೌಲ್ಯವಾಗಿ, ಪ್ರಕೃತಿಯ ಪ್ರತೀಕವಾಗಿ ಮಹಾಮಾತೃದೇವತೆಯಾಗಿ ಸ್ವೀಕರಿಸಿವೆ. ವಿಶ್ವವನ್ನು ವಿವರಿಸುವ ಮುಖ್ಯ ಚಿಂತನ ಕ್ರಮಗಳಲ್ಲಿ ಜಲಸಂಸ್ಕೃತಿಯ ಪರಿಕಲ್ಪನೆಯೂ ಒಂದು. ಇಂದಿಗೂ ಜನಪದರ ಜೀವನ ಕ್ರಮಗಳನ್ನು ರೂಪಿಸಿರುವ ಅಂತಃಸತ್ವವು ಜಲತತ್ವವೇ ಆಗಿದೆ. ಆದ್ದರಿಂದಲೇ ಜನಪದ ಸಂಸ್ಕೃತಿಯನ್ನು ಜಲಸಂಸ್ಕೃತಿ ಎಂದು ಗುರುತಿಸಲಾಗಿದೆ. ನೀರಿನ ಮಹತ್ವ ಗೊತ್ತಿದ್ದರಿಂದಲೇ ನಮ್ಮ ಹಿರಿಯರು ಅದಕ್ಕೆ ದೈವತ್ವವದ ರೂಪ ಕೊಟ್ಟಿದ್ದರು. ಹೆಚ್ಚಿನ ನಾಗರಿಕತೆಗಳು ನದಿದಡದಲ್ಲೆ ಬೆಳೆದಿವೆ. ಜನಸಂಖ್ಯ ಹೆಚ್ಚಾದಂತೆ, ಜನ ನಿಬಿಡ ಪ್ರದೇಶಗಳಿಗೆ ಜಲಾಧಾರವಾಗಿದ್ದು ಕೆರೆಗಳೇ. ನಿತ್ಯದ ಅವಶ್ಯಕತೆಗಳಿಗೆ ಮತ್ತು ಕೃಷಿಗೆ ನೀರು ಕೆರೆಗಳಿಂದಲೇ ಪೂರೈಕೆಯಾಗುತ್ತಿತ್ತು. ಪ್ರಕೃತಿಯ ಮಡಿಲಲ್ಲಿ ಮಳೆನೀರನ್ನ ಸಂಗ್ರಹಿಸಿ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದಲ್ಲದೇ ಅಂತರ್ಜಲ ಮಟ್ಟ ಕಾಪಾಡುವಲ್ಲಿ ಕೆರೆಗಳ ಪಾತ್ರ ಮಹತ್ವದ್ದು.
ಹೀಗಾಗಿ ಕೆರೆಗಳು ನೀರು ಸಂಗ್ರಹಿಸುವ ಸ್ಥಳವಾಗದೆ, ನಮ್ಮ ಸಂಸ್ಕೃತಿ ಹಾಗು ಆಚಾರ ವಿಚಾರಗಳ ಅವಿಭಾಜ್ಯ ಅಂಗವಾದವು. ಕೆರೆಗಳಿಗೆ ಸಾಮಾಜಿಕ, ಆರ್ಥಿಕ ಹಾಗು ಧಾರ್ಮಿಕ ಆಚರಣೆಗಳಲ್ಲೂ ಪ್ರಾಮುಖ್ಯತೆ ನೀಡಲಾಗಿತ್ತು. ನಿಸರ್ಗವನ್ನು ಚನ್ನಾಗಿ ಅರ್ಥೈಸಿಕೊಂಡಿದ್ದ ನಮ್ಮ ಹಿರಿಯರು ಪರಿಸರಕ್ಕೆ ಮಹತ್ವವನ್ನು ಕೊಟ್ಟಿದ್ದರು. ನಿಸರ್ಗ ಹಸಿರಾಗಿದ್ದರೆ ನಮ್ಮ ಬದುಕು ಸಮೃದ್ಧವಾಗಿರುತ್ತೆ ಎನ್ನುವುದನ್ನ ಅರ್ಥ ಮಾಡಿಕೊಂಡಿದ್ದ ನಮ್ಮ ಪೂರ್ವಜರ ಪ್ರತಿ ಆಚರಣೆಯಲ್ಲೂ ಇದನ್ನ ಗಮನಿಸಬಹುದು. ಹಾಗೆಯೇ ಕೆರೆಗಳ ನಿರ್ಮಾಣದಲ್ಲಿ ಕೂಡಾ. ಇಂಜಿನಿಯರಿಂಗ್ ಓದಿರದ ಜನ ನಿರ್ಮಿಸಿದ ಕೆರೆಗಳ ತಂತ್ರಜ್ಞಾನ ನಿಬ್ಬೆರಗಾಗುವಂಥದ್ದು.
ನಿಸರ್ಗದಲ್ಲಿನ ಸಹಜವಾದ ತಗ್ಗು ಪ್ರದೇಶಗಳನ್ನ ಕೆರೆಯಾಗಿ ನಿರ್ಮಿಸಲಾಗುತ್ತಿತ್ತು. ಆಗ ಸುತ್ತಮುತ್ತಲಿನ ಪ್ರದೇಶದ ಮಳೆನೀರು ಸಹಜವಾಗಿ ಅಲ್ಲಿಗೆ ಹರಿದು ಬರುತಿತ್ತು. ಪ್ರತಿ ಕೆರೆಗೂ ನೀರು ಹರಿದು ಬರಲು ಅವಕಾಶವಿದ್ದಂತೆ, ಹರಿದು ಮುಂದಿನ ಕೆರೆಗೆ ಹೋಗಲೂ ಅವಕಾಶವಿರುತಿತ್ತು. ಕೆರೆಗಳಿಗೆ ಪರಸ್ಪರ ಸಂಪರ್ಕವಿದ್ದರಿಂದ ಅತಿಯಾಗಿ ಮಳೆಯಾದಾಗಲೂ ಪ್ರವಾಹ ಉಂಟಾಗುತ್ತಿರಲಿಲ್ಲ. ಅಷ್ಟೆ ಅಲ್ಲ, ಸುತ್ತಮುತ್ತಲಿನ ಕೃಷಿಪ್ರದೇಶಕ್ಕೆ ಅವಶ್ಯಕವಾಗುವಷ್ಟು ನೀರನ್ನು ಸಂಗ್ರಹಿಸಿ ಉಳಿದಿದ್ದನ್ನ ಮುಂದಿನ ಕೆರೆಗೆ ಬಿಡಲಾಗುತ್ತಿತ್ತು. ಮಳೆನೀರನ್ನ ಸಂಗ್ರಹಿಸುವುದರಿಂದ ಆ ಪ್ರದೇಶದ ಅಂತರ್ಜಲ ಸಮೃದ್ಧವಾಗಿರುತ್ತಿತ್ತು. ಹೀಗಾಗಿ ಬಾವಿಗಳಲ್ಲಿ ಸದಾ ನೀರಿರುತ್ತಿತ್ತು. ಕೆರೆಗಳಲ್ಲಿ ಸಂಗ್ರಹವಾದ ನೀರಿನ ಪ್ರಮಾಣವನ್ನ ಆಧರಿಸಿ ಆ ವರ್ಷದ ಬೆಳೆಗಳನ್ನ ನಿರ್ಧರಿಸಲಾಗುತ್ತಿತ್ತ್ತು.
ಕೆರೆ ಅಂದ್ರೆ ಬರಿ ನೀರು ನಿಲ್ಲುವ ಜಾಗವಲ್ಲ. ಹಿಂದಿನ ಕಾಲದಲ್ಲಿ ರಾಜಮಾತೆಯರು ತಮ್ಮ ಮಕ್ಕಳ ಕಿವಿಯಲ್ಲಿ, ‘ಕೆರೆ ಕಟ್ಟಿಸು, ಕಾಡು ಬೆಳೆಸು’ ಅಂತ ಹೇಳುತ್ತಿದ್ದರು. ಊರಿನಲ್ಲಿ ಯಾವುದೆ ಧಾರ್ಮಿಕ ಕಾರ್ಯ ನಡೆದರೂ ಮೊದಲ ಪೂಜೆಯನ್ನು ಕೆರೆಗೆ ಸಲ್ಲಿಸಲಾಗುತ್ತಿತ್ತು. ಕೆರೆ ಎಂಬುದು ಇಡಿ ಊರಿನ ಅರ್ಥಿಕ ಬೆನ್ನೆಲುಬಾಗಿರುತ್ತಿತ್ತು. ಊರ ಕೆರೆಯಲ್ಲಿ ನೀರುಕ್ಕಲಿ ಅಂತ ನರಬಲಿ ಕೊಟ್ಟ ‘ಕೆರೆಗೆ ಹಾರ’ ಎಂಬ ಜಾನಪದ ಹಾಡನ್ನು ನಾವೆಲ್ಲ ಕೇಳಿದ್ದೀವಿ. ಆದ್ರೆ, ಈಗ ಪರಿಸ್ಥಿತಿ ಬದಲಾಗಿದೆ. ಮನುಷ್ಯನೇ ಕೆರೆಯನ್ನು ಬಲಿ ತೆಗೆದುಕೊಳ್ತಿದ್ದಾನೆ. ಇದು ರಿವರ್ಸ್ ಜಾನಪದ.
ನಮ್ಮ ಕೆರೆಗಳು ಏಕೆ ಮಾಯವಾಗ್ತಿವೆ? ಯಾರು ಈ ಕೆಲಸ ಮಾಡ್ತಿರೋದು? ಇದ್ರಿಂದ ನಮ್ಮ ಪರಿಸರ, ಜನಜೀವನದ ಮೇಲೆ ಎಂಥ ಪರಿಣಾಮವಾಗ್ತಿದೆ ಅನ್ನೂ ಗಂಭಿರ ಸಮಸ್ಯೆಯ ಬಗ್ಗೆ ನಾವ್ಯಾರು ಇಂದು ಯೋಚಿಸುತ್ತಿಲ್ಲ. ಆದರೆ ನಮ್ಮ ಮುಂದಿನ ಪಿಳಿಗಯವರು ಖಂಡಿತವಾಗಲು ಇದರ ಪರಿಣಾಮಗಳನ್ನ ಎದುರಿಸುತ್ತಾರೆ.
೧೮ನೆ ಶತಮಾನದಲ್ಲಿ ಕರ್ನಾಟಕದ ೨೭೦೨೮ ಹಳ್ಳಿಗಳಲ್ಲಿ ೩೮ ಸಾವಿರಕ್ಕೂ ಹೆಚ್ಚು ಕೆರೆಗಳು ೬೯ ಲಕ್ಷ ಎಕರೆ ಜಾಗದಲ್ಲಿ ಹರಡಿಕೊಂಡಿದ್ದವು. ಕುಡಿಯುವ ನೀರಿನ ಜೊತೆಗೆ ಸುಮಾರು ೨೪ ಲಕ್ಷ ಎಕರೆ ಕೃಷಿ ಭೂಮಿಗೆ ಈ ಕೆರೆಗಳಿಂದ ನೀರು ಪೂರೈಕೆಯಾಗುತ್ತಿತ್ತು. ಸ್ವಾತಂತ್ರದ ನಂತರದ ದಿನಗಳಲ್ಲಿ ಅಭಿವೃದ್ಧಿ ಹಾಗೂ ನಗರಿಕರಣದ ಹೆಸರಿನಲ್ಲಿ ಈ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಈಗ ರಾಜ್ಯದಲ್ಲಿ ಉಳಿದಿರುವ ಕೆರೆಗಳ ಸಂಖ್ಯೆ ೩೦ ಸಾವಿರ. ಅವುಗಳಲ್ಲಿ ೨೫೦೦ಕ್ಕೂ ಹೆಚ್ಚು ಕೆರೆಗಳು ಬಳಕೆಗೆ ಯೋಗ್ಯವಾಗಿ ಉಳಿದಿಲ್ಲ.
ಕೆರೆಗಳು ಹೆಚ್ಚಾಗಿ ಸಮುದಾಯದ ಆಸ್ತಿಗಳಾಗಿದ್ದವು. ನಗರಿಕರಣ ಹೆಚ್ಚಾದಾಗ ಇವುಗಳ ಜವಾಬ್ದಾರಿಯನ್ನ ಹೊರುವವರು ಯಾರು ಇರಲಿಲ್ಲ. ಹೀಗಾಗಿ ಸರ್ಕಾರದ ಆಧೀನದಲ್ಲಿದ್ದ ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಜನ ಹೆಚ್ಚಾದರು. ಹಾಗಾದ್ರೆ ಇಷ್ಟೊಂದು ಕೆರೆಗಳು ಎಲ್ಲಿಗ ಹೋದ್ವು? ಆ ಜಾಗಗಳು ಈಗ ಅಪಾರ್ಟ್‌ಮೆಂಟ್, ಬಸ್ ನಿಲ್ದಾಣ, ಮಾರ್ಕೆಟ್, ಬಿಲ್ಡಿಂಗ್ ಇತ್ಯಾದಿಗಳಾಗಿವೆ.
ನಗರಿಕರಣ ಹೆಚ್ಚಾದಂತೆ ಅದಕ್ಕೆ ಮೊದಲು ಬಲಿಯಾಗಿದ್ದೇ ಕೆರೆಗಳು. ಬೆಂಗಳೂರು ಇದಕ್ಕೆ ಉತ್ತಮ ನಿದರ್ಶನ. ಇಲ್ಲಿನ ಹೆಚ್ಚಿನ ಕೆರೆಗಳು ಇಂದು ಬಿಡಿಏ ಲೇಔಟ್‌ಗಳಾಗಿವೆ. ಆದರೆ, ನೀರಿಗೆ ಈ ವಿಷಯ ಗೊತ್ತಿಲ್ಲ. ಪಾಪ, ಅದಕ್ಕೆ ಹರಿದು ಬರುವ ಹಳೇ ಅಭ್ಯಾಸ. ಹೀಗಾಗಿ, ಮಳೆ ಬೀಳುತ್ತಲೇ ಹರಿದು ಓಡೋಡಿ ಕೆರೆಯಿದ್ದ ಜಾಗಕ್ಕೆ ಬರುತ್ತದೆ. ಆದ್ರೆ, ಇಲ್ಲಿ ನಿಲ್ಲಲು ಅದಕ್ಕೆ ಕೆರೆಯೇ ಇಲ್ಲ. ಏನ್ಮಾಡೋದು? ಅಪಾರ್ಟ್‌ಮೆಂಟ್ ಒಳಗೆ ನುಗ್ಗುತ್ತೆ. ಅಯ್ಯೋ ಪಾಪ, ಅಪಾರ್ಟ್‌ಮೆಂಟು. ಅದೀಗ ಮಳೆ ನೀರಿನ ಕಂಪಾರ್ಟ್‌ಮೆಂಟು.
ಕೆರೆ ಜಾಗದಲ್ಲಿ ಬಿಲ್ಡಿಂಗ್ ಕಟ್ಟಿದ್ರೆ ಏನಾಗುತ್ತೆ? ಬಿಲ್ಡಿಂಗೊಳಗೆ ನೀರು ನುಗ್ಗುತ್ತೆ. ಸಹಜ ಪರಿಸರದಲ್ಲಿ ನಿಲ್ಲುವ ನೀರು ಯಾವ ಸಮಸ್ಯೆಯನ್ನೂ ಮಾಡಲ್ಲ. ಆದ್ರೆ, ಮನುಷ್ಯ ನಿರ್ಮಿಸಿದ ಪರಿಸರದಲ್ಲಿ ನಿಲ್ಲುವ ನೀರು ಎಂತೆಂಥ ಸಮಸ್ಯೆ ಉಂಟು ಮಾಡ್ತದೆ ಗೊತ್ತ? ಅದು ತರುವ ಫಜೀತಿ ಅಷ್ಟಿಷ್ಟಲ್ಲ ಅದಕ್ಕೊಂದು ಉತ್ತಮ ಉದಾಹರಣೆ ಹರಳುಕುಂಟೆ ಕೆರೆ,
ಕೆರೆಯನ್ನು ಹುಡುಕಲು ಕಷ್ಟಪಡಬೇಕೆ? ಬೆಂಗಳೂರಿನಲ್ಲಿ ನಿಮಗೆ ಇಂಥದೊಂದು ಪ್ರಶ್ನೆ ಎದುರಾದ್ರೆ ಅಚ್ಚರಿಯಿಲ್ಲ. ಈಗ ನಾನು ಹೇಳುತ್ತಿರುವ ಹರಳುಗುಂಟೆ ಕೆರೆ ಅಂಥದ್ದು. ಈ ಕೆರೆಯನ್ನು ಹುಡುಕುವುದೇ ಸಾಹಸದ ಕತೆ. ಏಕೆಂದ್ರೆ ದೊಡ್ಡ ಕೆರೆಯಿದ್ದ ಜಾಗದಲ್ಲಿ ಈಗ ಉಳಿದಿರುವುದು ಒಂದು ಕೊಳಚೆ ಹೊಂಡ ಮಾತ್ರ. ಹಿಂದೂಮ್ಮೆ ಈ ಕೆರೆ ೧೭ ಎಕರೆಯಷ್ಟು ವಿಸ್ತಾರವಾಗಿತ್ತು. ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರನ್ನು ಹಾಗು ರೈತರು ಬೆಳೆಯುತ್ತಿದ್ದ ಕಬ್ಬು ಬೆಳೆಗೆ ನೀರನ್ನ ಪುರೈಸುತ್ತಿತ್ತು.
ಇಂದಿಲ್ಲಿ ಕಬ್ಬು ಇಲ್ಲ. ಕಬ್ಬು ಬೆಳೆಯವರು ಇಲ್ಲ. ಏಕೆಂದ್ರೆ ಹರಳುಕುಂಟೆ ಕೆರೆಯೇ ಉಳಿದಿಲ್ಲ. ಬೆಂಗಳೂರು ಬೆಳೆದಂತೆ ಕೊರಮಂಗಲ ಎಚ್.ಎಸ್.ಆರ್. ಲೇಔಟ್‌ನಲ್ಲಿ ಜಮಿನಿಗೆ ಚಿನ್ನದ ಬೆಲೆ ಬಂದಾಗ ಈ ಕೆರೆಯನ್ನು ಒಂದು ಕಡೆಯಿಂದ ರಿಯಲ್ ಎಸ್ಟೇಟ್‌ನವರು ಒತ್ತುವರಿ ಮಾಡುತ್ತಾ ಬಂದರು. ಇನ್ನೊಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಕಸವನ್ನೆಲ್ಲ ಇಲ್ಲಿಗೆ ತಂದು ಹಾಕುವ ಮೂಲಕ ಕೆರೆಯನ್ನು ಮುಚ್ಚುತ್ತಾ ಹೋಯಿತು. ಸಾಲದ್ದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಡಿಎ ಈ ಭಾಗದಲ್ಲಿನ ಕೆರೆಗಳನ್ನು ಲೇಔಟ್‌ಗಳನ್ನಾಗಿ ಮಾಡಿತು.
ಇದೆಲ್ಲದರ ಪರಿಣಾಮ ಏನಾಯ್ತೆಂದ್ರೆ, ಜೋರು ಮಳೆ ಬಂದಾಗ, ಮಳೆ ನೀರು ಇಲ್ಲಿನ ಲೇಔಟ್‌ಗಳತ್ತ ಹರಿದು ಬರುತ್ತದೆ. ಮುಂದೆ ಹರಿದುಹೋಗುವ ದಾರಿ ಮುಚ್ಚಿಹೋಗಿದ್ದರಿಂದ ಇಲ್ಲಿಯೇ ನಿಲ್ಲುತ್ತೆ. ಹೀಗಾಗಿ, ಒಮ್ಮೆ ಸಮೃದ್ಧ ಕೆರೆ ಇದ್ದ ಜಾಗ ಈಗ ಕೊಚ್ಚೆಗುಂಡಿಯಾಗಿ ಮಾರ್ಪಟ್ಟಿದೆ. ಕೆರೆ ದಂಡೆಯ ಮೇಲೆ ಸುರಿಯುತ್ತಿರುವ ಕಸ-ತ್ಯಾಜ್ಯವೆಲ್ಲ ಕೆರೆಯನ್ನು ಸೇರುತ್ತದೆ.
ಹೀಗಾಗಿ, ಒಮ್ಮೆ ಕುಡಿಯಲು ಯೋಗ್ಯವಾಗಿದ್ದ ಯೂಗ್ಯವಾಗಿದ್ದ ಹರಳುಕುಂಟೆ ಕೆರೆ ನೀರು ಇಂದು ವಿಷಪೂರಿತವಾಗಿದೆ. ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇಲ್ಲಿನ ನೀರಿನಲ್ಲಿ ಕಂಡು ಬಂದಿದೆ. ಕೆರೆಯ ನೀರು ಭೂಮಿಯಲ್ಲಿ ಇಂಗುವುದರಿಂದ ಸುತ್ತಮುತ್ತಲಿನ ಪ್ರದೇಶದ ಅಂರ್ತಜಲ ಕೂಡಾ ಕಲುಷಿತಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ತಂಡ ಇತ್ತಿಚೆಗೆ ನಡೆಸಿದ ಅಧ್ಯಯನದಲ್ಲಿ ಹರಳುಕುಂಟೆ ಕೆರೆ ನೀರಿನಲ್ಲಿ ಸುಮಾರು ೧೨ ರಿತಿಯ ವಿಷಕಾರಿ ರಾಸಾಯನಿಕಗಳಿರುವುದನ್ನು ಪತ್ತೆ ಹಚ್ಚಿದೆ. ಕೆರೆಯಲ್ಲಿರುವ ಕಲುಷಿತ ನೀರಿನಿಂದಾಗಿ ಇಲ್ಲಿನ ಗಾಳಿ ಮತ್ತು ಮಣ್ಣು ಕೂಡ ಸಂಪುರ್ಣವಾಗಿ ಕಲುಷಿತಗೊಂಡಿವೆ.
ಇದು ಕೇವಲ ಹರಳಕುಂಟೆ ಕೆರೆಯ ಕತೆ ಮಾತ್ರ ಅಲ್ಲ. ರಾಜ್ಯದಾದ್ಯಂತ ಸಾವಿರಾರು ಕೆರೆಗಳು ಇಂಥ ಕಣ್ಣೀರ ಕತೆ. ಈ ಕಥೆ ನಿಮ್ಮಲ್ಲಿ ಜಲಪ್ರಜ್ಞೆ ಮೂಡಿಸಲಿ, ಕೆರೆಗಳ ಮಹತ್ವದ ಅರಿವು ಹೆಚ್ಚಿಸಲಿ ಅನ್ನೋದು ನನ್ನ ಆಶಯ.
No comments:
Post a Comment