Sunday, 26 December 2010

ವೈದ್ಯೋ ನಾರಾಯಣೋ ಹರಿ


ಅಸ್ಪತ್ರೆ ತ್ಯಾಜ್ಯ

ಸೋಂಕು ತಗುಲಿದಾಗ ಅನಾರೋಗ್ಯ ಉಂಟಾಗುತ್ತದೆ. ಆಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೀತೀವಿ. ಆದರೆ, ಆಸ್ಪತ್ರೆಗಳೇ ರೋಗ ಹರಡೋ ತಾಣಗಳಾದ್ರೆ ಗತಿ ಏನು? ನಮಗೆ ಗೊತ್ತಿಲ್ಲದಂತೆ, ಆಸ್ಪತ್ರೆ ತ್ಯಾಜ್ಯಗಳು ರೋಗ ಹರಡ್ತಾ ಹೋಗ್ತಿವೆ.
ವೈದ್ಯೋ ನಾರಾಯಣೋ ಹರಿ ಅಂತೀವಿ. ಅಂದ್ರೆ, ಗುಣಪಡಿಸೋ ವೈದ್ಯನೇ ದೇವರ ಸಮಾನ. ವೈದ್ಯರೊಂದಿಗೆ ನಾವೆಲ್ಲ ವರ್ತಿಸುವುದೂ ಹಾಗೇನೇ. ಅನಾರೋಗ್ಯ ಕಾಡಿದಾಗ, ಗುಣಮುಖರಾಗಲು ಆಸ್ಪತ್ರೆಗಳಿಗೆ ಹೋಗ್ತೀವಿ. ಆದ್ರೆ, ಅಲ್ಲಿಗೆ ಹೋಗಿದ್ದರಿಂದಲೆ, ಹಲವಾರು ಗಂಭೀರ ಕಾಯಿಲೆಗಳು ಅಂಟಿಕೊಳ್ಳಬಹುದೆಂಬ ವಿಷಯ ನಿಮಗೆ ಗೊತ್ತೆ? ಇವತ್ತಿನ ಬಹುತೇಕ ಸೋಂಕು ರೋಗಗಳ ಮೂಲ ಆಸ್ಪತ್ರೆಗಳು ಎಂಬ ಮಾತು ನಿಮಗೆ ಅಚ್ಚರಿ ಉಂಟು ಮಾಡಬಹುದು. ಇದಕ್ಕೆ ಕಾರಣ ಆಸ್ಪತ್ರೆಗಳಲ್ಲಿನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ.
ಎಲ್ಲಕ್ಕಿಂತ ಮುಖ್ಯ: ತ್ಯಾಜ್ಯ ಅಂದ್ರೆ ಏನು? ವಸ್ತುವೊಂದರ ಬಳಕೆ ನಂತರ ಬೇಡವಾಗಿ ಉಳಿಯುವ ಉತ್ಪನ್ನವೇ ತ್ಯಾಜ್ಯ. ಮನೆ, ಆಸ್ಪತ್ರೆ, ಕಾರ್ಖಾನೆ, ಕಚೇರಿ- ಹೀಗೆ, ಹಲವಾರು ಸ್ಥಳಗಳು ತ್ಯಾಜ್ಯವನ್ನು ಉತ್ಪಾದಿಸ್ತಾ ಹೋಗ್ತವೆ. ಒಬ್ಬರಿಗೆ ತ್ಯಾಜ್ಯವೆನಿಸುವ ವಸ್ತುಗಳು ಇನ್ನೊಬ್ಬರಿಗೆ ಉಪಯುಕ್ತ ಅನಿಸಬಹುದು. ಕಬ್ಬಿನ ರಸ ಮಾರುವ ವ್ಯಕ್ತಿಗೆ ಕಬ್ಬಿನ ಸಿಪ್ಪೆ ತ್ಯಾಜ್ಯವಾದರೆ, ಕಾಗದ ಕಾರ್ಖಾನೆಗೆ ಅದೇ ಮೂಲವಸ್ತು. ಜೀವ ವೈದ್ಯಕೀಯ ತ್ಯಾಜ್ಯವೂ ಇಂತಹದ್ದೇ. ಗಾಳಿ, ನೀರು ಹಾಗೂ ಮನುಷ್ಯನ ಮೇಲೆ ಈ ಜೀವ ವ್ಯದ್ಯಕೀಯ ತಾಜ್ಯ ಅಪಾಯಕಾರಿ ಪರಿಣಾಮವನ್ನು ಬೀರಬಲ್ಲುದು. ಸೋಂಕಿತ ತ್ಯಾಜ್ಯ, ದ್ರವರೂಪದ ತ್ಯಾಜ್ಯ, ಹಾನಿಕಾರಕ ತ್ಯಾಜ್ಯ ಹಾಗೂ ಗೃಹಕೃತ್ಯದ ತ್ಯಾಜ್ಯಗಳೆಂಬ ನಾಲ್ಕು ರೂಪಗಳಲ್ಲಿರುತ್ತದೆ ಇದು. ವಿವಿಧ ಆರೋಗ್ಯ ಪಾಲನಾ ಕೇಂದ್ರಗಳು, ಆಸ್ಪತ್ರೆಗಳು, ಪಶು ಚಿಕಿತ್ಸಾಲಯಗಳು, ಔಷಧಾಲಯಗಳು, ನರ್ಸಿಂಗ್ ಹೋಮ್‌ಗಳು, ಪ್ರಯೋಗಾಲಯಗಳಿಂದ ಬರುವ ತ್ಯಾಜ್ಯವೇ ಜೀವ ವೈದ್ಯಕೀಯ ತ್ಯಾಜ್ಯ. ಇವುಗಳ ಪೈಕಿ ದೊಡ್ಡ ಪ್ರಮಾಣದಲ್ಲಿರುವ ಸೋಂಕಿತ ತಾಜ್ಯಗಳಲ್ಲಿ ಹೆಚ್ಚಿನವು ಆಪರೇಷನ್ ಥೇಟರ್‌ಗಳಿಂದಲೇ ಬರುವಂಥವು. ನಳಿಕೆಗಳು, ಮೂತ್ರ ನಳಿಕೆಗಳು, ಡ್ರಿಪ್ ಸೆಟ್‌ಗಳು, ಗ್ರಾಸ್‌ಗಳು, ಮಾನವನ ಶರೀರದ ಅಂಗಾಂಶಗಳು, ಅವಯವಗಳು ಮತ್ತು ಮಾನವನ ಹಾಗೂ ಪ್ರಾಣಿಗಳ ಶರೀರದ ಅಂಗಾಂಗಗಳೆಲ್ಲ ಇರ್ತವೆ. ಅಲ್ಲದೇ, ಪ್ರಯೋಗಾಲಯದ ಮೂಳೆಗಳು, ತಳಿಗಳು, ಲಸಿಕೆಗಳು, ಜೀವ ವಿಜ್ಞಾನದಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು, ಜೀವಾಣು ವಿಷಯುಕ್ತ ವಸ್ತುಗಳು, ಸೂಜಿ, ಸಿರೀಂಜುಗಳು, ಚಾಕು, ಬ್ಲೇಡುಗಳು ಇರುತ್ತವೆ. ತಿರಸ್ಕೃತ ಔಷಧಿಗಳು, ಹತ್ತಿ, ಗಾಯದ ಪಟ್ಟಿ, ಬಟ್ಟೆಗಳು, ಕೊಳಕಾದ ಪ್ಲಾಸ್ಟರ್ ಅಚ್ಚುಗಳು, ಹಾಸಿಗೆ ಮತ್ತು ರಕ್ತದಿಂದ ಸೋಂಕಿತವಾದ ಇತರೆ ವಸ್ತುಗಳು ಸೇರಿರುತ್ತವೆ. ಗೃಹ ತಾಜ್ಯಗಳ ಪಟ್ಟಿಯೂ ದೊಡ್ಡದು. ಆಸ್ಪತ್ರೆಗೆ ಬರುವ ಎಳನೀರು, ತಿಂಡಿ ಪದಾರ್ಥಗಳು, ಕಾಗದ, ಪ್ಲಾಸ್ಟಿಕ್, ಗಾಜಿನ ಪಾತ್ರೆಗಳನ್ನೆಲ್ಲ ಗೃಹ ತಾಜ್ಯಗಳೆಂದು ವಿಂಗಡಿಸಬಹುದು. ಹಾನಿಕಾರಕ ತಾಜ್ಯಗಳಲ್ಲಿ ರೇಡಿಯೋ ವಿಕರಣ ಸೂಸುವ ವಸ್ತುಗಳು, ಸೈಟೋಟ್ಯಾಕ್ಸಿಕ್ ಔಷಧಿಗಳು ಹಾಗೂ ಹೆಚ್ಚು ಒತ್ತಡದ ಧಾರಕಗಳು ಬರುತ್ತವೆ.

ದ್ರವ ತಾಜ್ಯಗಳಲ್ಲಿ ವಾಷ್ ಬೇಸಿನ್, ಅಡಿಗೆಗೆ ಬಳಿಸಿದ ಹಾಗೂ ಶೌಚಾಲಯದಿಂದ ಬರುವ ನೀರು, ರೋಗಿಗಳ ರಕ್ತ, ಮಲ, ಮೂತ್ರ, ಮತ್ತು ಶರೀರದಿಂದ ಸ್ರ್ರವಿಸುವ ದ್ರವಗಳಿರುತ್ತವೆ. ಇಷ್ಟೆಲ್ಲ ವಿವಿಧ ರೀತಿಯ ತ್ಯಾಜ್ಯಗಳನ್ನು ಒಂದೆಡೆ ಸುರಿದಾಗ ಉಂಟಾಗುವ ಅಪಾಯವನ್ನು ಊಹಿಸಲೂ ಆಗದು. ಆಸ್ಪತ್ರೆಯ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಪರಿಸರ ಹಾಗೂ ಮನುಷ್ಯರ ಮೇಲೆ ಅವು ಗಂಭೀರ ಪರಿಣಾಮಗಳನ್ನು ಬೀರುತ್ತವೆ.
ಸಾಮಾನ್ಯ ತ್ಯಾಜ್ಯಗಳಿಂದಲೇ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಹೀಗಿರುವಾಗ, ಅಪಾಯಕಾರಿ ರೋಗಾಣುಗಳನ್ನು, ವಿಕಿರಣಶೀಲ ವಸ್ತುಗಳನ್ನು ಹೊಂದಿರುವ ಜೀವವೈದ್ಯಕೀಯ ತ್ಯಾಜ್ಯದಿಂದ ಅದೆಂಥ ಗಂಭೀರ ಅಪಾಯಗಳು ಸಂಭವಿಸಬಹುದು, ಯೋಚಿಸಿ. ಜೀವ ವೈದ್ಯಕೀಯ ತ್ಯಾಜ್ಯ ಅಷ್ಟು ಸುಲಭವಾಗಿ ನಾಶವಾಗುವಂಥದಲ್ಲ. ಇದು ಚರಂಡಿ ಸೇರಿದರೆ, ಹರಿಯುವ ನೀರಿನೊಂದಿಗೆ ಬಹುದೂರಕ್ಕೆ ಹರಡಬಲ್ಲುದು. ಸಂಸ್ಕರಿಸದೇ ನೆಲದಲ್ಲಿ ಹೂಳಿದರೆ, ಅಲ್ಲಿಯೂ ನಾಶವಾಗದೇ ಇರಬಲ್ಲುದು. ಬಹಿರಂಗವಾಗಿ ಬಿಟ್ಟರೆ, ಗಾಳಿ ಹಾಗೂ ನೊಣಗಳ ಮೂಲಕ ಸೋಂಕು ತರುವ ರೋಗಾಣುಗಳು ಪ್ರಸಾರವಾಗುತ್ತವೆ. ಪ್ರಾಣಿಗಳು ಅಥವಾ ಮನುಷ್ಯರ ದೇಹ ಸೇರಿ ಎಲ್ಲೆಡೆ ಹಬ್ಬುತ್ತವೆ. ಒಂದು ವೇಳೆ ತಿಪ್ಪೆಗುಂಡಿಯಲ್ಲಿ ಬಿಸಾಕಿರುವ ಜೀವವೈದ್ಯಕೀಯ ತಾಜ್ಯಗಳಿಗೆ ಬೆಂಕಿ ಏನಾದರೂ ತಗುಲಿದರೆ, ಅನೇಕ ರೀತಿಯ ವಿಷಾನಿಲಗಳು ಉತ್ಪತಿಯಾಗುತ್ತವೆ. ಗಾಳಿ ಮೂಲಕ ನಮ್ಮ ಪುಪ್ಫುಸಗಳನ್ನು ಸೇರಿಕೊಳ್ತವೆ. ಇಂಥ ತಾಜ್ಯಗಳಿಂದ ಹರಡಬಹುದಾದ ರೋಗಗಳೆಂದರೆ, ಹೆಪಟೈಟಿಸ್ ಎ. ಬಿ. ಮತ್ತು ಸಿ.; ಎಚ್.ಐ.ವಿ. ಏಡ್ಸ್, ಕಾಲರಾ, ಟೈಫಾಯ್ಡ್, ಆಮಶಂಕೆ, ಸ್ಟ್ರೆಪ್ಟೋಕೊಕಾಲ್ ಸೋಂಕು, ನೆರಡಿ (ಅಂಥ್ರಾಕ್ಸ್), ಕ್ಯಾಂಡಿಡಾ ಮುಂತಾದವು. ಇಂಥ ತ್ಯಾಜ್ಯಗಳ ವಿಲೇವಾರಿ ನಿರ್ವಹಣೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಸ್ವಲ್ಪ ಹೆಚ್ಚು ಕಡಿಮೆ ಮಾಡಿದರೆ, ಅವರ ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ. ಜೀವವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ತುಂಬಾ ಜವಾಬ್ದಾರಿಯ ಕೆಲಸ. ಯಾವ ಯಾವ ವಸ್ತುಗಳನ್ನು ಉಪಯೋಗಿಸಲಾಗಿದೆ? ಅವುಗಳ ಪೈಕಿ ತ್ಯಾಜ್ಯಗಳಾವವು? ಎಂಬುದನ್ನು ಚೆನ್ನಾಗಿ ತಿಳಿದಿರಬೇಕು. ಇವುಗಳಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂಬುದು ಖಚಿತವಾಗುವವರೆಗೂ ಈ ಪ್ರಕ್ರಿಯೆ ನಡೆಯಬೇಕು. ಕೇವಲ ತ್ಯಾಜ್ಯವನ್ನು ತೆಗೆದು, ತಿರಸ್ಕರಿಸಿ ಅಥವಾ ವಿಲೇವಾರಿ ಮಾಡುವುದಷ್ಟೇ ಕೆಲಸವಾಗಬಾರದು ಆರೋಗ್ಯ ಪಾಲನಾ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ತ್ಯಾಜ್ಯ ವಸ್ತುಗಳಲ್ಲಿ ಶೇಕಡಾ ೧೦ರಿಂದ ೧೫ ಭಾಗ ತ್ಯಾಜ್ಯ ಸೋಂಕಿತವಾಗಿರುತ್ತದೆ. ಇದನ್ನು ನಿಭಾಯಿಸಲು ಸಂಘಟಿತ ಪ್ರಯತ್ನ ಅಗತ್ಯ. ಇದರಲ್ಲಿ ಆಸ್ಪತ್ರೆಗಳು ಹಾಗೂ ಜೀವವೈದ್ಯಕೀಯ ತ್ಯಾಜ್ಯ ಉತ್ಪಾದಿಸುವ ಘಟಕಗಳ ಜವಾಬ್ದಾರಿ ಹೆಚ್ಚು. ತ್ಯಾಜ್ಯ ನಿರ್ವಹಣೆಯನ್ನು ಅವು ಆರೋಗ್ಯ ಪಾಲನೆಯ ಅಂಗವಾಗಿ ಪರಿಗಣಿಸಬೇಕು. ಇದಕ್ಕಾಗಿ ಸೂಕ್ತ ತಂತ್ರಜ್ಞಾನ ಹಾಗೂ ವಿಧಾನಗಳನ್ನು ಅವು ಅಳವಡಿಸಿಕೊಳ್ಳಬೇಕು. ಸೋಂಕಿತ ತ್ಯಾಜ್ಯದೊಂದಿಗೆ ಬೆರೆತಾಗ ಸೋಂಕಿತವಲ್ಲದ ತ್ಯಾಜ್ಯ ಕೂಡ ಹಾನಿಕಾರಕವಾಗುತ್ತದೆ. ಆದ್ದರಿಂದ, ವಸ್ತುಗಳ ಬಳಕೆ ನಂತರ ಆಸ್ಪತ್ರೆಗಳು ತ್ಯಾಜ್ಯ ವಸ್ತುಗಳನ್ನು ತಕ್ಷಣ ವರ್ಗೀಕರಿಸಬೇಕು. ಒಂದು ಅಂದಾಜಿನ ಪ್ರಕಾರ ಆಸ್ಪತ್ರೆಗಳಲ್ಲಿ ಪ್ರತಿ ಹಾಸಿಗೆಗೆ ದಿನವೊಂದಕ್ಕೆ ಒಂದುವರೆ ಕೆ.ಜಿ.ಯಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಾಧಾರಣ ಆಸ್ಪತ್ರೆಗಳಲ್ಲಿ ಇದರ ಪ್ರಮಾಣ ವರ್ಷಕ್ಕೆ ೨೦೦ ಕೆ.ಜಿ. ಇವೆಲ್ಲವೂ ಅಪಾಯಕಾರಿ ರೋಗಾಣುಗಳನ್ನು ಒಳಗೊಂಡಿರುತ್ತವೆ ಎಂಬುದು ಗಮನಾರ್ಹ. ಹಾಗಾದರೆ, ಇವುಗಳ ವಿಲೇವಾರಿ ಹೇಗೆ? ಜೀವವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಒಂದು ಕಡೆ ಒಟ್ಟುಗೂಡಿಸಬೇಕು. ಇದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಮೀಸಲಾಗಿಡಬೇಕು. ಪ್ರತಿ ತ್ಯಾಜ್ಯಕ್ಕೂ ಡಬ್ಬ ಅಥವಾ ಚೀಲಗಳು ಬೇರೆಯಾಗಿರಬೇಕು. ಇದಕ್ಕೆ ಕಲರ್ ಕೋಡಿಂಗ್ ಅಂತಾರೆ. ಅಂದರೆ, ಹಳದಿ ಬಣ್ಣದ ಬಕೆಟ್‌ನಲ್ಲಿ ಸೋಂಕಿತ ತ್ಯಾಜ್ಯ, ನೀಲಿ ಹಾಗೂ ಅರೆಪಾರರ್ದಕ ಬಿಳಿ ಡಬ್ಬಗಳಲ್ಲಿ ಪುನರ್ ಸಂಸ್ಕರಣೆಯಾಗುವಂಥ ತ್ಯಾಜ್ಯ, ಕೆಂಪು ಬಕೆಟ್‌ನಲ್ಲಿ ಮಾನವ ಅಂಗಗಳನ್ನ ಮತ್ತು ಕಪ್ಪು ಬಕೆಟ್‌ನಲ್ಲಿ ಮುನಸಿಪಲ್ ಕಸ ಸಂಗ್ರಹಕ್ಕೆ ಸಾಗಿಸುವ ತ್ಯಾಜ್ಯವನ್ನು ಶೇಖರಿಸುವುದು ಕಡ್ಡಾಯ. ತ್ಯಾಜ್ಯ ಸಂಗ್ರಹಿಸಿರುವ ಪ್ರತಿ ಬಕೆಟ್‌ನ ಮುಚ್ಚಳದ ಮೇಲೆ ವಿವರಗಳನ್ನು ಬರೆದಿರುವ ಚೀಟಿಯನ್ನು ಅಂಟಿಸಬೇಕು. ಶೇಖರಿಸಿದ ತ್ಯಾಜ್ಯಗಳು ತುಂಬ ಭಾರವಿರಬಾರದು. ಒಣ ತ್ಯಾಜ್ಯವನ್ನು ಗರಿಷ್ಠ ೧೦೦ ಲೀಟರ್ ಮತ್ತು ದ್ರವ ತ್ಯಾಜ್ಯವನ್ನು ಗರಿಷ್ಠ ೫೦ ಲೀಟರ್ ಪಾತ್ರೆಗಳಲ್ಲಿ ಶೇಖರಿಸಬೇಕು. ಅನಧಿಕೃತ ವ್ಯಕ್ತಿಗಳು ತ್ಯಾಜ್ಯದ ಹತ್ತಿರ ಸುಳಿಯದಂತೆ ಕ್ರಮ ಕೈಗೊಳ್ಳಬೇಕು. ಶೇಖರಣಾ ಕೊಠಡಿಗಳಲ್ಲಿ ಕೆಲಸ ಮಾಡುವವರು ಸೂಕ್ತ ಉಡುಪು, ಗ್ಲೋಸ್, ಬೂಟು ಇತ್ಯಾದಿಗಳನ್ನು ಧರಿಸಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಂದು ವೇಳೆ ಯಾವುದೇ ಕಾಯಿಲೆ/ಗಾಯ ಆದರೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಬೇಕು. ಪ್ರತಿಯೊಂದು ಜೀವ ವೈದ್ಯಕೀಯ ತ್ಯಾಜ್ಯ ಉತ್ಪಾದನಾ ಸ್ಥಳಕ್ಕೆ ವಿಂಗಡಣಾ-ಸಂಗ್ರಹಣಾ ವಾಹನ ದಿನಕ್ಕೆ ಕನಿಷ್ಟ ೨ ಸಲವಾದರೂ ಬರುವಂತಿರಬೇಕು. ತ್ಯಾಜ್ಯ ಸಾಗಾಟಕ್ಕೆ ಉಪಯೋಗಿಸುವ ಕೈಗಾಡಿಯನ್ನು ಪ್ರತಿ ಸಲವೂ ಸಾಬೂನು ಮತ್ತು ಬಿಸಿ ನೀರಿನಿಂದ ತೊಳೆಯಬೇಕು ಹಾಗೂ ಸೋಂಕುಹರಣಗೊಳಿಸಿ ಬಳಸಬೇಕು. ಇದು ಸಾಮಾನ್ಯ ಎಚ್ಚರಿಕೆ ಕ್ರಮದ ಮಾತಾಯ್ತು. ಆದ್ರೆ, ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಶೇಕಡಾ ೫೦ರಷ್ಟು ಸಿರಿಂಜ್‌ಗಳು ಮರುಬಳಕೆಯಾಗ್ತಿವೆ. ಇದು ಅತ್ಯಂತ ಅಪಾಯಕಾರಿ. ಇದನ್ನ ತಡೆಯೋದು ಹೇಗೆ?

ವೈದ್ಯಕೀಯ ವಸ್ತುಗಳ ಮರುಬಳಕೆ ಒಂದು ಗಂಭೀರ ಸಾಮಾಜಿಕ-ಆರ್ಥಿಕ ಸಮಸ್ಯೆ. ಕಡಿಮೆ ಬೆಲೆಯಲ್ಲಿ ಸಿಕ್ತವೆ ಅನ್ನೋ ಕಾರಣಕ್ಕೆ, ಮರುಬಳಕೆ ಸಿರಿಂಜ್ ಮತ್ತು ಸೂಜಿಗಳನ್ನು ಬಳಸಬಾರದು. ಸರ್ಕಾರ ಕೂಡ ಇವನ್ನು ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೊಸಾ ಸಿರಿಂಜ್ ಮತ್ತು ಸೂಜಿಗಳೇ ಆಗಿರಲಿ, ಅವನ್ನು ಉಪಯೋಗಿಸುವ ಮುಂಚೆ ಸೋಂಕುಹರಣ ದ್ರಾವಕದಲ್ಲಿ ತೊಳೆಯಬೇಕು. ಬಳಕೆಯ ನಂತರ ಅವನ್ನು ವಿರೂಪಗೊಳಿಸಿ ಹರಿತ ತ್ಯಾಜ್ಯ ಧಾರಕದಲ್ಲಿ ತಕ್ಷಣ ವಿಸರ್ಜಿಸಬೇಕು. ಇಲ್ಲದಿದ್ರೆ, ಅವು ಹಿಂಬಾಗಿಲಿನ ಮೂಲಕ ಮತ್ತೆ ಬಳಕೆಗೆ ಬರ್ತವೆ. ಜೊತೆಗೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗ್ತವೆ. ಆಸ್ಪತ್ರೆ ತ್ಯಾಜ್ಯವನ್ನು ನಿಶ್ಚಿತ ಗುತ್ತಿಗೆದಾರರಿಗೇ ನೀಡುವ ವ್ಯವಸ್ಥೆ ಆಗಬೇಕು. ಈ ತ್ಯಾಜ್ಯವನ್ನು ವಿಲೇವಾರಿ ಮಾಡಲೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೀವ ವೈದ್ಯಕೀಯ ತ್ಯಾಜ್ಯ ಸಾಗಿಸುವ ವಾಹನ ಮುಚ್ಚಿದ ವಾಹನವಾಗಿರಬೇಕು. ಜೀವ ವೈದ್ಯಕೀಯ ತ್ಯಾಜ್ಯವನ್ನು ಆಸ್ಪತ್ರೆಗಳ ನಿಗದಿತ ದಹನ ಕುಂಡದಲ್ಲಿ ಹಾಕಿ ಸುಡಬೇಕು. ಆದರೆ, ಕ್ಲೋರಿನೀಕೃತ ಪ್ಲಾಸ್ಟಿಕ್‌ಗಳನ್ನು ಯಾವ ಕಾರಣಕ್ಕೂ ಸುಡಬಾರದು. ತ್ಯಾಜ್ಯದ ಬೂದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿರುವ ಸ್ಥಳದಲ್ಲೇ ಹೂಳಬೇಕು. ೫ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ಹೂಳಲು ಅವಕಾಶವಿರುತ್ತದೆ. ದಹನ ಕಟ್ಟಡ ಹೇಗಿರಬೇಕೆಂಬುದಕ್ಕೂ ನಿಯಮಗಳಿವೆ. ಇಂಥ ಕಟ್ಟಡದಲ್ಲಿ ಎರಡು ಕೋಣೆಗಳಿರಬೇಕು. ತ್ಯಾಜ್ಯ ಸುಡಲು ಒಂದು ಕೋಣೆಯಾದರೆ, ಅದರಿಂದ ಬರುವ ಇತರೆ ವಸ್ತುಗಳನ್ನು ಸುಡಲು ಇನ್ನೊಂದು. ಹೀಗಿದ್ದಲ್ಲಿ ಮಾತ್ರ ಅಪಾಯಕಾರಿ ಅನಿಲಗಳು ನಿರುಪದ್ರವಿಗಳಾಗುತ್ತವೆ. ಹೊಗೆ ಕೊಳವೆಗಳ ಉದ್ದ ೩೦ ಅಡಿಗೂ ಹೆಚ್ಚಿರಬೇಕು. ಇದನ್ನು ಇಷ್ಟೆಲ್ಲ ವಿವರವಾಗಿ ಏಕೆ ಹೇಳ್ತಿದ್ದೀನಿ ಅಂದ್ರೆ, ತುಂಬಾ ಕಡೆ ಜೀವ ವೈದ್ಯಕೀಯ ತ್ಯಾಜ್ಯದ ವಿಲೇವಾರಿ ನಿಯಮದ ಪ್ರಕಾರ ನಡೀತಿಲ್ಲ. ಒಂದ್ವೇಳೆ, ಎಲ್ಲಿಯಾದ್ರೂ ಇಂಥ ತ್ಯಾಜ್ಯ ಸುಡುತ್ತಿರುವ ವಾಸನೆ ನಿಮಗೆ ಬಂದ್ರೆ, ಅಥವಾ ಬಹಿರಂಗವಾಗಿ ಇಂಥ ತ್ಯಾಜ್ಯ ಸುರಿದಿದ್ದು ಕಂಡು ಬಂದ್ರೆ, ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನ ಸಂಪರ್ಕಿಸಿ. ಏಕೆಂದ್ರೆ, ನಿರ್ಲಕ್ಷ್ಯ ತೋರಿದ್ರೆ, ನಿಮಗೇ ಅಪಾಯ ಸಂಭವಿಸ್ಬಹುದು.
ನಿಮಗೆ ಗೊತ್ತಿರಲಿ: ಪ್ಲಾಸ್ಟಿಕ್ ಬಾಟಲ್‌ಗಳು, ಇಂಜಕ್ಷನ್ ಟ್ಯೂಬ್‌ಗಳು, ಐವಿ ಟ್ಯೂಬ್‌ಗಳು, ನಳಿಕೆಗಳನ್ನು ಮರುಬಳಕೆ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ, ಇಂಥ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಪುಡಿ ಮಾಡುವ ಮೂಲಕ ಶಾಶ್ವತವಾಗಿ ನಾಶ ಮಾಡಬೇಕು. ಜೀವ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಕೊಟ್ಟಷ್ಟೇ ಗಮನ ನಾಶಪಡಿಸುವಿಕೆಗೂ ಅಗತ್ಯ ಆರೋಗ್ಯ ಪಾಲನೆಯಲ್ಲಿ ತ್ಯಾಜ್ಯ ವಿಲೇವಾರಿ ಒಂದು ಮಹತ್ವದ ಸಂಗತಿ. ಜೀವವೈದ್ಯಕೀಯ ತ್ಯಾಜ್ಯವಂತೂ ಎಲ್ಲಕ್ಕಿಂತ ಅಪಾಯಕಾರಿ. ಈ ಕುರಿತ ನಿರ್ಲಕ್ಷ್ಯ ಇಡೀ ಸಮುದಾಯದ ಆರೋಗ್ಯದ ಮೇಲೆ ಪ್ರಭಾವ ಬೀರಬಲ್ಲದು. ಇವುಗಳನ್ನು ಸಮರ್ಥವಾಗಿ ನಿರ್ವಹಿಸುವುದು ಸಂಬಂಧಿಸಿದ ಸಂಸ್ಥೆಗಳದಷ್ಟೇ ಅಲ್ಲ, ನಮ್ಮ ನಿಮ್ಮ ಕರ್ತವ್ಯವೂ ಹೌದು. ಆಗ ಮಾತ್ರ ನಮ್ಮ ಪರಿಸರ ಆರೋಗ್ಯಕರವಾಗಬಲ್ಲುದು. ಅಂಥದೊಂದು ಸಾರ್ವತ್ರಿಕ ಅರಿವು ಎಲ್ಲರಲ್ಲೂ ಮೂಡಲಿ ಅಂತ ಆಶಿಸ್ತಾನೆ.

No comments:

Post a Comment