Friday, 17 December 2010

ಎಲ್ಲಿದೆ ಗೋಮಾಳ?


ಎಲ್ಲಿದೆ ಗೋಮಾಳ?
ಭಾರತಾದ್ಯಂತ ನಗರೀಕರಣವು ಭರದಿಂದ ಸಾಗಿದೆ.ಎಲ್ಲೆಲ್ಲಿ ನೋಡಿದರೂ ಹೊಸ ಹೊಸ ನಿವೇಶನಗಳು, ಮಳಿಗೆ ಕಾಂಪ್ಲೆಕ್ಸುಗಳು, ಮಾಲ್‍ಗಳು... ಇವುಗಳಿಂದ ದೇಶದ ಗ್ರಾಮೀಣ ಪ್ರದೇಶಗಳ ಮೇಲಾಗುತ್ತಿರುವ ಪರಿಣಾಮಗಳೇನು ಎಂಬುದನ್ನು ಊಹಿಸುವುದಕ್ಕೂ ಕಷ್ಟವಾಗುವಷ್ಟು ಕ್ಲಿಷ್ಟಕರವಾಗುತ್ತಿದೆ. ದೊಡ್ಡ ದೊಡ್ಡ ನಗರಗಳ ಸುತ್ತಮುತ್ತಲಿನ ಕೃಷಿ ಪ್ರದೇಶಗಳು ನೀವೇಶನಗಳಾಗಲು ಸಜ್ಜಾಗಿ ಬೇಸಾಯ ಕಾಣದೇ, ಬೀಳಾಗಿ ನಿಂತಿವೆ. ಬೇಸಾಯಕ್ಕೊಳಪಟ್ಟಿರುವ ಕೃಷಿ ಪ್ರದೇಶಗಳು ಆಹಾರಧಾನ್ಯಗಳನ್ನು ಬದಿಗೊತ್ತಿ ನಗರಪ್ರದೇಶಕ್ಕೆ ಬೇಕಾದ ಹಣ್ಣು-ತರಕಾರಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಆಹ್ವಾನಿಸಿವೆ; ಮಾರುಕಟ್ಟೆಯ ಏರಿಳಿತದ ಬಿಸಿಯನ್ನು ರೈತರ ಮನೆಯ ಬಾಗಿಲಿಗೇ ತಂದಿವೆ. ಆದರೆ ಇವೆಲ್ಲದರ ನಡುವೆ,ಭಾರತೀಯ ಗ್ರಾಮೀಣ ಸಂಸ್ಕೃತಿಯ ವಿಶಿಷ್ಟ ಮತ್ತು ಅವಿಭಾಜ್ಯ ಅಂಗವಾಗಿದ್ದ ಗೋಮಾಳಗಳು ಭಾರತದೆಲ್ಲೆಡೆ ತ್ವರಿತಗತಿಯಲ್ಲಿ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಿವೆ.
ಗೋಮಾಳಗಳ ಹಲವು ಪ್ರಯೋಜನಗಳು ಇಂದು ಗ್ರಾಮೀಣಪ್ರದೇಶದಲ್ಲಿ ಸಿಗದಂತಾಗಿದೆ. ಗ್ರಾಮದೆಲ್ಲ ಜನರ ಜಾನುವಾರುಗಳನ್ನು ಮೇಯಿಸಲು ಇದ್ದ ಗೋಮಾಳಗಳಿಗೆ, ಸಾಮಾನ್ಯವಾಗಿ ಇತರ ಗ್ರಾಮಗಳ ಜಾನುವಾರುಗಳಿಗೆ ಪ್ರವೇಶವಿರಲಿಲ್ಲ. ಕೇವಲ ದನಕರುಗಳ ಮೇವಲ್ಲದೇ, ಮನೆಗೆ ಬೇಕಾಗುತ್ತಿದ್ದ ಕಟ್ಟಿಗೆ, ಸೌದೆ,ಸಣ್ಣ ಪುಟ್ಟ ಹಣ್ಣು ಹಂಪಲುಗಳನ್ನೂ ಗೋಮಾಳದಿಂದ ಪಡೆಯಬಹುದಾಗಿತ್ತು. ಇದರ ಜೊತೆಗೆ ಗೋಮಾಳಗಳು ಅರಣ್ಯ ಮತ್ತು ಜನನಿಬಿಡ ಪ್ರದೇಶಗಳ ನಡುವೆ ಅತ್ಯುತ್ತಮ Buffer ಪ್ರದೇಶವಾಗಿತ್ತು. ಅಂತರ್ಜಲದ ಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲೂ ಇವುಗಳ ಪಾತ್ರವಿತ್ತು. ಗೋಮಾಳಗಳಂತಹ ಸಾರ್ವಜನಿಕ ಆಸ್ತಿಗಳ ಮೇಲ್ವಿಚಾರಣೆಯು ಗ್ರಾಮೀಣ ಭಾರತದ ವಿಕೇಂದ್ರೀಕೃತ ಆಡಳಿತದ ವಿಶೇಷವಾಗಿತ್ತು.
ಸಮೃದ್ಧವಾಗಿದ್ದ ಗೋಮಾಳಗಳು, ಕಾಲಾಂತರದಲ್ಲಿ ಕೆಲಸಕ್ಕೆ ಬಾರದಷ್ಟು ಸೊರಗಿಹೋಗಿರುವುದು ಇಂದಿನ ವಾಸ್ತವ. ಬೆಳೆಯುತ್ತಿರುವ ಜನಸಂಖ್ಯೆ, ಆಮೆಗತಿಯಲ್ಲಿ ಬೆಳೆದ ಕೃಷಿಯ ಉದ್ಯೋಗಾವಕಾಶ,ಪಟ್ಟಣಗಳಿಗೆ ಗ್ರಾಮೀಣ ಪ್ರದೇಶದ ಯುವಪೀಳಿಗೆಯ ವಲಸೆ,ಕೃಷಿಯ ಯಾಂತ್ರೀಕರಣ, ಕೇವಲ ಹಾಲಿಗಾಗಿ ಜಾನುವಾರುಗಳ ಪಾಲನೆ ಹೀಗೆ ಹಲವು ಬೆಳವಣಿಗೆಗಳು ಗೋಮಾಳಗಳ ಪ್ರಾಮುಖ್ಯತೆಯನ್ನು ಕಮ್ಮಿಗೊಳಿಸಿವೆ. ಹಾಗೆಯೇ, ಬರ್ತಾ ಬರ್ತಾ, ಇತರ ಕಸುಬುಗಳಿಗೆ ಹೋಲಿಸಿದಲ್ಲಿ ಕೃಷಿಯ ಲಾಭಾಂಶವೂ ಕಮ್ಮಿಯಾಗುತ್ತಾ ಹೋದಂತೆ, ಗೋಮಾಳಗಳ ಕಬಳಿಕೆ, ಒತ್ತುವರಿಯೂ ಹೆಚ್ಚಾಯಿತು.
ಇನ್ನು, ಸರ್ಕಾರದ ಭೂಸುಧಾರಣೆ ಕಾಯ್ದೆಯಡಿ ಸರ್ಕಾರ ತೆಗೆದುಕೊಂಡ ಹೆಚ್ಚುವರಿ ಜಾಗಗಳನ್ನು ಬಡವರಿಗೆ, ಸಮಾಜದ ಕೆಳಸ್ತರದಲ್ಲಿರುವವರಿಗೆ ಹಂಚಲು ಆರಂಭಿಸಿದಾಗ, ಈ ಹೆಚ್ಚುವರಿ ಪ್ರದೇಶಗಳ ಜೊತೆಗೆ, ಸುಮಾರು ಗೋಮಾಳಗಳನ್ನು ಬರಡು, ಬಂಜರು ಭೂಮಿಯೆಂದು ಪರಿಗಣಿಸಿ, ಅವುಗಳನ್ನೂ ಫಲಾನುಭವಿಗಳಿಗೆ ಹಂಚಲಾಯಿತು. ತಮಗೆ ಸಿಕ್ಕ ಜಾಗವು ಈಗಾಗಲೇ ಅತಿಕ್ರಮವಾಗಿರುವುದನ್ನು ಕಂಡು ಹಲವರಿಗೆ ಹೆಸರಿಗೆ ಜಮೀನು ಬಂದರೂ ವಾಸ್ತವದಲ್ಲಿ ಏನೂ ಇಲ್ಲದಂತಾಯಿತು. ಅವರು ಹತಾಶರಾಗಿ ಮತ್ತಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಂಡರು. ಹೀಗೆ, ಇಂದು ಅಕ್ರಮ ಭೂಸಾಗುವಳಿಗೆ ಎಲ್ಲರ ಬಳಿಯೂ ಹಲವು ಕಾರಣಗಳಿವೆ, ನೈತಿಕ ಸಮಜಾಯಷಿಗಳಿವೆ.
ಇಂದು, ನಮ್ಮ ರೈತರ ದೃಷ್ಟಿಯಲ್ಲಿ ಒತ್ತುವರಿಯು ಒಂದು ಅಕ್ರಮ ಹೆಜ್ಜೆಯಾಗಿಯೋ ಅನೈತಿಕ ಕೆಲಸವಾಗಿಯೋ ಉಳಿದೇ ಇಲ್ಲ. ರಾಜಕಾರಣಿಗಳು, ಹಳ್ಳಿಯ ಮುಖ್ಯಸ್ಥರೂ, ಮೇಲು-ಕೀಳೆನ್ನದೇ ಸಕಲರೂ ಈ ದುಷ್ಕೃತ್ಯದಲ್ಲಿ ಸಮಭಾಗಿಗಳಾಗಿರುವುದು ಮುಕ್ತಗುಟ್ಟಾಗಿದೆ. ಇದು ಎಷ್ಟರಮಟ್ಟಿಗೆ ನಮ್ಮ ಯೋಚನೆಗಳಲ್ಲಿ ಹಾಸುಹೊಕ್ಕಾಗಿದೆಯೆಂದರೆ, ಮಾರಟಕ್ಕಿರುವ ಜಮೀನಿನ ಪಕ್ಕ ಒತ್ತುವರಿಗೆ ಅವಕಾಶವಿದ್ದರೆ, ಆ ಜಮೀನಿನ ದರ ಸಾಮಾನ್ಯಕ್ಕಿಂತಲೂ ಹೆಚ್ಚಿರುತ್ತದೆ. ಅಕ್ರಮವನ್ನು ಸಕ್ರಮ ಮಾಡಿಸಿಕೊಂಡುಬಿಡುವ ಭಂಡ ಧೈರ್ಯ ಸಮಸ್ತರಿಗೂ ಇರುವುದು ದುರ್ಧೈವ.ಇದು ಎಷ್ಟು ದೊಡ್ಡ ಸಮಸ್ಯೆಯೆಂದರೆ, ರಾಜ್ಯದಲ್ಲಿ ಬಂದ ಹಲವು ಸರ್ಕಾರಗಳು ಇದನ್ನು ಪರಿಹರಿಸಲಾಗದೇ, ಅಕ್ರಮ ಭೂಮಿಯನ್ನು ಸಕ್ರಮಗೊಳಿಸುವುದೇ ದೊಡ್ಡ ಸಾಧನೆಗಳನ್ನಾಗಿ, ಗುರಿಗಳನ್ನಾಗಿ ಗುರುತಿಸಿಕೊಂಡಿವೆ. ಇದನ್ನು ಚೆನ್ನಾಗಿ ಅರಿತಿರುವ ರೈತರು, ಭಯ ಬಿಟ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದಕ್ಕೇ ಪೈಪೋಟಿ ನಡೆಸಿದ್ದಾರೆ.
ಸರ್ಕಾರವು ಅಳಿದುಳಿದ ಗೋಮಾಳಗಳನ್ನು ಸಾಮಾಜಿಕ ಅರಣ್ಯಗಳನ್ನಾಗಿ (social forestry) ಅಭಿವೃದ್ಧಿಗೊಳಿಸಲು, ಪ್ರಯತ್ನಿಸಿದೆ. ಸ್ಥಳೀಯರ ಸಹಮತ, ಸಹಕಾರದೊಂದಿಗೆ ಈ ಪ್ರಯತ್ನಗಳು ಸಫಲವಾಗಿರುವುದು ಕೆಲವೇ ಉದಾಹರಣೆಗಳಲ್ಲಿ. ಇತ್ತ, ಗೋಮಾಳಗಳಿಲ್ಲದೇ ಜನರು ಹಲವು ತೊಂದರೆಗಳಿಗೆ ಒಳಗಾಗಿದ್ದಾರೆ. ಅಳಿದುಳಿದ ಗೋಮಾಳಗಳು ಮೇವನ್ನು ಉತ್ಪಾದಿಸುವ ಶಕ್ತಿಯನ್ನು ಕಳೆದುಕೊಂಡು ಕೇವಲ ಹೆಸರಿಗಷ್ಟೇ ಇವೆ.ಹಲವು ಸನ್ನಿವೇಶಗಳಲ್ಲಿ, ಜಾನುವಾರುಗಳ ಪೂರ್ತಿ ಮೇವನ್ನು ಹೊರಗಡೆಯಿಂದಲೇ ತರಿಸಿಕೊಳ್ಳಲಾಗುತ್ತದೆ. ವರ್ಷವಿಡೀ ಮೇವು ಲಭ್ಯವಿರುವುದೇ ಅನಿಶ್ಚತೆಯಿಂದ ಕೂಡಿದೆ. ಮೇವಿನ ವಿಷಯದಲ್ಲಿ ಹಳ್ಳಿಗರಲ್ಲಿ ಹೊಡೆದಾಟಗಳೂ ನಡೆದಿವೆ. ರೈತನು ಭದ್ರ ಬುನಾದಿಯಿಲ್ಲದೇ ಮಾರುಕಟ್ಟೆಯಲ್ಲಿ ವಿಲೀನನಾಗಿ ಗೋಳಾಡಲು ಗೋಮಾಳಗಳ ಅವನತಿಯೂ ಒಂದು ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಗೋಮಾಳಗಳನ್ನು ಪುನಃಶ್ಚೇತನಗಳಿಸಬೇಕು ಎಂಬ ಪ್ರಯತ್ನವೇ ಅವ್ಯಾವಹಾರಿಕ ಎನ್ನುವ ಮಟ್ಟಕ್ಕೆ ಬಂದಿದೆ.ಇಂದಿನ ಸಾಮಾಜಿಕ ಮತ್ತ್ತುಆರ್ಥಿಕ ಒತ್ತಡಗಳ ನಡುವೆಯೂ ಹಿಂದಿನಂತೆಯೇ ಗೋಮಾಳಗಳಿರಬೇಕು ಎನ್ನುವುದು ಅಪ್ರಸ್ತುತವಾದರೂ, ಕಾಲಕ್ಕೆ ತಕ್ಕಂತೆ ಇರುವ ಪೋಲಾಗುತ್ತಿರುವ ಗೋಮಾಳಗಳ ಸದ್ಬಳಕೆಯಾದರೂ ಆಗಲೇ ಬೇಕು.ಗೋಮಾಳಗಳು ಹಿಂದಿನಷ್ಟು ಮುಖ್ಯವಲ್ಲದಿರಬಹುದು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಹಾಲು ಮತ್ತು ಮಾಂಸಾಹಾರದ ಬಳಕೆಯು,ಮೇವಿನ ಬೇಡಿಕೆಯನ್ನು ಪೂರೈಕೆಗಿಂತ ಹೆಚ್ಚಿಸಲಿದೆ. ಈ ಪರಿಸ್ಥಿತಿಯಲ್ಲಿ ಗೋಮಾಳಗಳ ಉಪಸ್ಥಿತಿ ಕೃಷಿಕನಿಗೂ ಸಹಕಾರಿಯಾಗಬಲ್ಲದು, ಪರಿಸರದ ಮೇಲಿನ ಒತ್ತಡ ಕಡಿಮೆಯಾಗಬಹುದು (ಮತ್ತು ಇದರಿಂದ ರೈತನೂ ಲಾಭ ಪಡೆಯಬಹುದು) ಎಂಬುದನ್ನು ಹಲವು ಸಂಶೋಧನೆಗಳು ಎತ್ತಿ ತೋರಿಸಿವೆ. ಗ್ರಾಮೀಣ ಜನತೆ ಮತ್ತು ಸ್ಥಳೀಯ ಸರ್ಕಾರದ ಮಧ್ಯೆ ಉತ್ತಮ ಸಹಕಾರವಿದ್ದಲ್ಲಿ ಉಳಿದಿರುವ ಗೋಮಾಳಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವುದು ಅಸಾಧ್ಯವೇನಲ್ಲ. ಇದು ಇಂದಿನ ಮತ್ತು ಭವಿಷ್ಯದ ಅವಶ್ಯಕತೆ ಕೂಡ.

No comments:

Post a Comment