Thursday, 2 December 2010

ಇದು ಗಾಳಿ ಮಾತಲ್ಲ


ಪ್ರಾಣವಾಯುವಿಗೆ ಕುತ್ತು.

ಗಾಳಿ ಎಲ್ಲ ಜೀವಿಗಳ ಪ್ರಾಣವಾಯು. ಗಾಳಿಯ ಒಂದು ಪ್ರಮುಖ ಅಂಶ ಆಮ್ಲಜನಕ. ಇದಿಲ್ಲದೆ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲಾರದು. ಆದರೆ, ಇಂಥ ಜೀವವಾಯು ಅತ್ಯಂತ ವೇಗವಾಗಿ ಕಲುಷಿತಗೊಳ್ಳುತ್ತಿದೆ. ಇಡೀ ಜೀವಜಗತ್ತನ್ನೇ ಆಪತ್ತಿಗೆ ಸಿಲುಕಿಸಿದೆ.
ಭೂಮಿಯನ್ನು ರೂಪಿಸಿರುವ ಮೂಲವಸ್ತುಗಳ ಪೈಕಿ ಆಮ್ಲಜನಕದ್ದು ಪ್ರಮುಖ ಪಾಲು. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಐದರಲ್ಲಿ ಒಂದು ಭಾಗ. ಭೂಮಿಯ ಘನಭಾಗದಲ್ಲಿ ಶೇಕಡಾ ೪೯ ಹಾಗೂ ನೀರಿನಲ್ಲಿ ಶೇಕಡಾ ೮೯ರಷ್ಟು ಆಮ್ಲಜನಕವಿದೆ
ಹಾಗಂತ ಗಾಳಿಯಲ್ಲಿ ಬರೀ ಆಮ್ಲಜನಕವೇ ತುಂಬಿಕೊಂಡಿಲ್ಲ. ನಾವು ಉಸಿರಾಡುವ
ಗಾಳಿಯಲ್ಲಿ ಶೇಕಡಾ ೭೮ರಷ್ಟು ಭಾಗ ಸಾರಜನಕ, ಅಂದ್ರೆ ನೈಟ್ರೋಜನ್‌ನಿಂದ ತುಂಬಿದೆ. ಉಳಿದಂತೆ ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್ ಹಾಗೂ ಇತರ ಅನಿಲಗಳಿವೆ.

ಉಸಿರಾಡುವ ಗಾಳಿಯನ್ನು ಪ್ರಾಣವಾಯು ಅಂತೀವಿ. ಆದರೆ, ನಮ್ಮ ಪ್ರಯೋಗಗಳ ಮೊದಲ ಬಲಿಪಶುವೇ ಈ ವಾತಾವರಣ. ತಂತ್ರಜ್ಞಾನದ ಅವಲಂಬನೆ ಹೆಚ್ಚಿದಂತೆ ಪರಿಸರ ಕಲುಷಿತವಾಗ್ತಿದೆ. ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲೂ, ಗಾಳಿ ಕಲುಷಿತಗೊಳ್ಳುವ ವೇಗ ತುಂಬ ಗಂಭೀರ ಪರಿಣಾಮಗಳನ್ನು ಉಂಟು ಮಾಡ್ತಿದೆ. ಏಕೆಂದರೆ, ಜೀವಿಗಳೆಲ್ಲ ಬದುಕಿರುವುದೇ ಉಸಿರಾಟದಿಂದ. ಮನುಷ್ಯ ಪ್ರತಿ ನಿಮಿಷಕ್ಕೆ ೧೬ ಬಾರಿ ಉಸಿರಾಡುತ್ತಾನೆ. ಆದರೆ, ಈ ಕ್ರಿಯೆ ನಮ್ಮ ಇಚ್ಛೆಗೆ ಒಳಪಟ್ಟಿಲ್ಲ. ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ಹೀಗಾಗಿ, ಉಸಿರಾಟದ ಮಹತ್ವದ ಬಗ್ಗೆ ನಾವು ಯೋಚಿಸುವುದು ಕಡಿಮೆ.
ಶುದ್ಧ ಗಾಳಿಯಿಂದ ಲಾಭಗಳು ಬಹಳ. ದೀರ್ಘವಾಗಿ ಉಸಿರೆಳೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಉಸಿರಾಟದ ಗತಿ ನಿಮಿಷಕ್ಕೆ ೭ ಅಥವಾ ೮ಕ್ಕೆ ಇಳಿಯುತ್ತದೆ. ರಕ್ತದೊತ್ತಡ ತಗ್ಗಿ, ಮಾಂಸಖಂಡಗಳು ಸಡಿಲಗೊಂಡು ದೇಹಕ್ಕೆ ವಿಶ್ರಾಂತಿ ಸಿಕ್ಕಂತಾಗುತ್ತದೆ. ಶುದ್ಧ ಗಾಳಿಯ ದೀರ್ಘ ದೀರ್ಘ ಸ್ವಾಸೋಚ್ಛಾಸದಿಂದ ಹೃದಯ ಬಡಿತವೂ ಕಡಿಮೆಯಾಗುತ್ತದೆ. ದೀರ್ಘಾಯುಷ್ಟದ ಗುಟ್ಟು ಇದೇ ಶುದ್ಧ ಗಾಳಿಯ ಶ್ವಾಸೋಚ್ಛಾಸದಿಂದ ಮಾನಸಿಕ ಉದ್ವೇಗ ತಗ್ಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಆದರೆ, ಈಗಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ನಿಜಕ್ಕೂ ನಾವು ಮಾಲಿನ್ಯಗೊಂಡ ವಾಯುವನ್ನೇ ಅವಸರದಿಂದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡುತ್ತಿದ್ದೇವೆ. ಇದರಿಂದಾಗಿ ಮಾನಸಿಕ ಒತ್ತಡ, ಆತಂಕ ಹಾಗೂ ಉದ್ವೇಗಗೊಳ್ಳುವಿಕೆ ಹೆಚ್ಚಾಗುತ್ತಿದೆ. ಬದುಕಲು ಇಷ್ಟೊಂದು ಅವಶ್ಯವಾಗಿರುವ ಪ್ರಾಣವಾಯು ಅಪಾಯದಲ್ಲಿದೆ. ಪರಿಸರಕ್ಕೆ ತೀವ್ರ ಹಾನಿಯಾಗ್ತಿದೆ. ಜೀವರಾಶಿಗಳು ತೊಂದರೆಗೆ ಸಿಲುಕಿವೆ.
ವಾಯು ಮಾಲಿನ್ಯ ಎಂಬುದು ನಿಧಾನವಾಗಿ ಹಬ್ಬುವಂಥದು. ಸಸ್ಯ, ಪ್ರಾಣಿ, ಸಹಜ ಪರಿಸರಕ್ಕೆ ಹಾನಿಯುಂಟು ಮಾಡುವ ರಾಸಾಯನಿಕಗಳು, ಸೂಕ್ಷ್ಮ ಕಣಗಳು ಅಥವಾ ಜೈವಿಕ ಸಾಮಗ್ರಿಗಳು ವಾತಾವರಣಕ್ಕೆ ಸೇರಿಕೊಳ್ಳುವುದನ್ನ ವಾಯುಮಾಲಿನ್ಯ ಎಂದು ಕರೀತಾರೆ.
ವಾತಾವರಣ ಎಂಬುದು ಒಂದು ಸಂಕೀರ್ಣ ಹಾಗೂ ಚಲನಶೀಲ ವ್ಯವಸ್ಥೆ. ಭೂಮಿಯ ಮೇಲಿನ ಜೀವಜಾಲಕ್ಕೆ ಅಗತ್ಯವಾಗಿ ಬೇಕಿರುವಂಥದ್ದು. ವಾಯು ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಪ್ರಾಥಮಿಕ ಹಾಗೂ ದ್ವಿತೀಯ ಎಂದು ವರ್ಗೀಕರಿಸಬಹುದು. ಪ್ರಾಥಮಿಕ ಕಾರಣಗಳಲ್ಲಿ ವಾಯುಮಾಲಿನ್ಯ ನೈಸರ್ಗಿಕ ಕ್ರಿಯೆಯಿಂದ ಉಂಟಾಗ್ತವೆ. ಉದಾಹರಣೆಗೆ ಅಗ್ನಿಪರ್ವತದ ಸ್ಫೋಟ. ಅಗ ಹೊರಚಿಮ್ಮುವ ಬೂದಿ ಮತ್ತು ಇಂಧನಗಳು ದಹನ ಕ್ರಿಯೆಗೆ ಒಳಪಡ್ತವೆ. ಸಾರಜನಕದ ಆಕ್ಸೈಡ್‌ಗಳು, ಗಂಧಕದ ಡೈಆಕ್ಸೈಡ್, ದೂಳುಕಣಗಳು ಹಾಗೂ ಅತಿ ಸೂಕ್ಷ್ಮ ಕಣಗಳು ನೇರವಾಗಿ ಗಾಳಿಯಲ್ಲಿ ಸೇರುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ದ್ವಿತೀಯ ಮಾಲಿನ್ಯಕಾರಕಗಳು ನೇರವಾಗಿ ಹೊಮ್ಮುವುದಿಲ್ಲ. ಪ್ರಾಥಮಿಕ ಮಾಲಿನ್ಯಕಾರಕಗಳು ವಾತಾವರಣವನ್ನು ಸೇರಿದಾಗ ನಡೆಯುವ ರಾಸಾಯನಿಕ ಕ್ರಿಯೆಯಿಂದ ಇವು ಉತ್ಪತ್ತಿಯಾಗ್ತವೆ. ಇಲ್ಲಿ ಗಂಧಕದ ಆಕ್ಸೈಡ್‌ಗಳು ಸಲ್ಫೇಟ್ ಆಗಿ ಮಾರ್ಪಡ್ತ್ತವೆ. ಸಾರಜನಕದ ಆಕ್ಸೈಡ್‌ಗಳು ಸಲ್ಫೈಡ್ ಹಾಗೂ ಅಮೋನಿಯಾ ಆಗಿ ಬದಲಾಗ್ತವೆ. ಇವೇ ದ್ವಿತೀಯ ಮಾಲಿನ್ಯಕಾರಕಗಳು.
ಇನ್ನು ದೂಳು ಕಣಗಳು ಹಾಗೂ ಸೂಕ್ಷ್ಮಕಣಗಳ ಬಗ್ಗೆ. ಇವುಗಳಲ್ಲಿ ಎರಡು ವಿಧ: ಸೊನ್ನೆಯಿಂದ ೧೦ ಮೈಕ್ರಾನ್ ಗಾತ್ರದ ದೂಳುಕಣಗಳು ನಾವು ಉಸಿರಾಡುವಾಗ ಶ್ವಾಸಕೋಶವನ್ನು ಸೇರಬಲ್ಲಂಥವು. ಇದೇ ರೀತಿ ಸೊನ್ನೆಯಿಂದ ೧೦೦ ಮೈಕ್ರಾನ್ ಗಾತ್ರದ ದೂಳುಕಣಗಳೂ ವಾತಾವರಣದಲ್ಲಿ ತೇಲಾಡುತ್ತಿರುತ್ತವೆ. ಇವು ಘನ ಅಥವಾ ದ್ರವ ರೂಪದ ಪದಾರ್ಥಗಳಾಗಿರಬಹುದು. ನೈಸರ್ಗಿಕ ಅಥವಾ ಮನುಷ್ಯ ನಿರ್ಮಿತವಾಗಿರಬಹುದು. ಕಟ್ಟಡ ನಿರ್ಮಾಣದ ವೇಳೆ ಹಾಗೂ ವಾಹನಗಳ ಓಡಾಟದಿಂದಾಗಿ ಇಂಥ ಧೂಳಿನ ಕಣಗಳು ಉತ್ಪತಿಯಾಗುತ್ತವೆ.
ವಾಯುಮಾಲಿನ್ಯದ ಕಾರಣದಿಂದ ಉಂಟಾಗುವ ದುಷ್ಪರಿಣಾಮಗಳು ಅನೇಕ, ಇವುಗಳಲ್ಲಿ ವಾಯುಮಂಡಲದ ಓಝೋನ್ ಪದರ ಕರಗುವುದೂ ಒಂದು. ಇದರಿಂದಾಗಿ ಸೂರ್ಯನಿಂದ ಬರುವ ಅಪಾಯಕಾರಿ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ. ಇವು ಚರ್ಮದ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗ್ತಿವೆ. ವಾಯುಮಾಲಿನ್ಯ ಹಲವಾರು ಮೂಲಗಳಿಂದ ಉಂಟಾಗ್ತದೆ. ತೈಲ ಉದ್ಯಮದಿಂದ ಶೇಕಡಾ ೫ರಷ್ಟು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳು ಶೇಕಡಾ ೯ರಷ್ಟು ವಾಯುಮಾಲಿನ್ಯಕ್ಕೆ ಕಾರಣವಾಗ್ತವೆ. ಅತಿ ಹೆಚ್ಚಿನ ಮಾಲಿನ್ಯ ಉಂಟಾಗ್ತಿರೋದು ವಾಹನಗಳಿಂದ. ಶೇಕಡಾ ೮೫ರಷ್ಟು ಮಾಲಿನ್ಯ ವಾಹನಗಳಿಂದ ಆಗ್ತಿರೋದು ಕಳವಳಕಾರಿ ಅಂಶ.
ಜಗತ್ತಿನಲ್ಲಿ ೮೦೦೦ ಲಕ್ಷ ವಾಹನಗಳಿವೆ ಎಂಬುದು ಒಂದು ಅಂದಾಜು. ಜಗತ್ತಿನ ಜನಸಂಖ್ಯೆಯ ಶೇಕಡಾ ೨ರಷ್ಟು ಜನ ಮಾತ್ರ ಕಾರುಗಳನ್ನ ಬಳಸುತ್ತಿದ್ದರೆ ದ್ವಿಚಕ್ರವಾಹನಗಳನ್ನ ಬಳಸುವವರು ಶೇಕಡಾ ೧೮ ಮಾತ್ರ. ಕರ್ನಾಟಕದ ಅಂಕಿಅಂಶಗಳು ಹೀಗಿವೆ: ೧೯೯೦ರಲ್ಲಿ ನೊಂದಣಿಯಾಗಿದ್ದು ೧೪ ಲಕ್ಷದ ೩೭ ಸಾವಿರ ವಾಹನಗಳು ಮಾತ್ರ. ಆದರೆ, ಕೇವಲ ೨೦೦೯ರ ಜನವರಿಯಿಂದ ನವೆಂಬರ್‌ವರೆಗೆ ನೊಂದಣಿಯಾದ ವಾಹನಗಳ ಸಂಖ್ಯೆ ೯೦ ಲಕ್ಷಕ್ಕೆ ಏರಿತು. ಇವುಗಳ ಪೈಕಿ, ಶೇಕಡಾ ೭೧ರಷ್ಟು ದ್ವಿಚಕ್ರವಾಹನಗಳು. ಉಳಿದಂತೆ ಶೇಕಡಾ ೧೧ರಷ್ಟು ಕಾರುಗಳು, ಶೇಕಡಾ ೩ರಷ್ಟು ಆಟೊರಿಕ್ಷಾಗಳು ಹಾಗೂ ಶೇಕಡಾ ೧೫ರಷ್ಟು ಇತರ ವಾಹನಗಳು ಸೇರಿವೆ. ಇನ್ನು, ರಾಜ್ಯದಲ್ಲಿರುವ ವಾಹನಗಳ ಪೈಕಿ ಬೆಂಗಳೂರು ನಗರದ ಪಾಲು ಅತಿ ಹೆಚ್ಚು. ಕೇವಲ ೭ ಲಕ್ಷ ವಾಹನಗಳಿಗಷ್ಟೇ ಅವಕಾಶ ಇರುವ ರಾಜಧಾನಿಯಲ್ಲಿ ಇಂದು ೨೩ ಲಕ್ಷ ವಾಹನಗಳಿವೆ. ಪ್ರತಿ ದಿನ ೨ ಸಾವಿರಕಕೂ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿ ನೊಂದಣಿಯಾಗ್ತಿವೆ. ಈ ವಾಹನಗಳಿಂದ ಹೊರಬರುವ ಕಾರ್ಬನ್ ಮೋನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಹಾಗೂ ದೊಡ್ಡ ಪ್ರಮಾಣದ ದೂಳಿನ ಕಣಗಳು ತೀವ್ರ ವಾಯುಮಾಲಿನ್ಯ ಉಂಟು ಮಾಡ್ತಿವೆ.
ಅಮೆರಿಕಾದ ಹಾರ್ವರ್ಡ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ನ ಪರಿಸರ ವಿಜ್ಞಾನಿಗಳು ಹೇಳುವಂತೆ, ಜಗತ್ತಿನಾದ್ಯಂತ ಸುಮಾರು ೨೪ ಲಕ್ಷ ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ಅಮೆರಿಕವೊಂದರಲ್ಲೇ ಶೇಕಡಾ ೪ ರಷ್ಟು ಜನರ ಸಾವಿಗೆ ಇದೇ ಕಾರಣ. ಇನ್ನು ನಮ್ಮ ದೇಶದ ಪರಿಸ್ಥಿತಿ ಹೇಗಿರಬೇಡ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಜನ ಸಾಯುತ್ತಿದ್ದಾರೆ. ಆದರೆ ಜಗತ್ತಿನಾದ್ಯಂತ ವಾಹನಗಳ ಅಪಘಾತದಲ್ಲಾಗುಗುವ ಸಾವಿಗಿಚಿತ, ವಾಯುಮಾಲಿನ್ಯದಿಂದಾಗಿ ಸಂಭವಿಸುವ ಸಾವುಗಳೇ ಅಧಿಕ. ಇದು ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು. ೨೦೦೫ರ ಪರಿಸರ ಏಜೆನ್ಸಿ ವರದಿಯೊಂದರ ಪ್ರಕಾರ, ಪ್ರತಿ ವರ್ಷ ಯುರೋಪ್ ಒಂದರಲ್ಲೇ ೩ ಲಕ್ಷ ೧೦ ಸಾವಿರ ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ಭಾರತದಲ್ಲಿ ಈ ಪ್ರಮಾಣ ೫,೨೭,೭೦೦ ಜನ. ಪ್ರತಿ ವರ್ಷ ಜಗತ್ತಿನಾದ್ಯಂತ ೨೦
ಲಕ್ಷಕ್ಕೂ ಹೆಚ್ಚು ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ವಾಯುಮಾಲಿನ್ಯ ಹೇಗೆ ಕೊಲ್ತದೆ ಗೊತ್ತೆ? ವಾಹನಗಳಿಂದ ಹೂರಹಾಕಲ್ಪಡುವ ಇಂಗಾಲದ ಡೈಆಕ್ಸೈಡ್ ನೈಟ್ರರೋಜನ್ ಆಗಿ ಬದಲಾಗ್ತದೆ. ನೆಲಮಟ್ಟದಿಂದ ೩ ಅಡಿಗಳವರೆಗೆ ಇದರ ಸಾಂದ್ರತೆ ಹೆಚ್ಚು. ಚಿಕ್ಕಮಕ್ಕಳು ಈ ಮಲಿನಯುಕ್ತ ಗಾಳಿ ಉಸಿರಾಡುವುದರಿಂದ, ತೀವ್ರ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೆ ಈಡಾಗ್ತಾರೆ. ಮಕ್ಕಳ ದೈಹಿಕ ಬೆಳವಣಿಗೆ ಚಿಕ್ಕ ವಯಸ್ಸಿನಲ್ಲಿಯೇ ಜೋರಾಗಿರ್‍ತದೆ. ಆದರೆ, ನೆಲ ಮಟ್ಟದ ೩ ಅಡಿ ಎತ್ತರ ದಾಟಿ ಬರುವಷ್ಟರಲ್ಲಿ, ಅವರಲ್ಲಿನ ಜೀವಕೋಶಗಳು ಹಾಗೂ ಹಾರ್‍ಮೋನ್‌ಗಳ ಸ್ರವಿಕೆ ಹಾನಿಗೊಳಗಾಗಿರುತ್ವೆ. ಹೀಗಾಗಿ, ವಯಸ್ಕರಲ್ಲಿ ಕಾಣಿಸಿಕೊಳ್ಳುವ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಮಕ್ಕಳು ತುತ್ತಾಗ್ತಾರೆ. ಬೆಂಗಳೂರಿನ ಟ್ರಾಫಿಕ್ ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ವಾಯುಮಾಲಿನ್ಯವಿದೆ. ಅದರಲ್ಲೂ ವಿಕ್ಟೋರಿಯಾ ಆಸ್ಪತ್ರೆ, ಆನಂದರಾವ್ ಸರ್ಕಲ್, ಸಿಟಿ ರ್ಮಾಕೆಟ್‌ನಂಥ ಬಹುತೇಕ ಪ್ರದೇಶಗಳಲ್ಲಿ ನೈಟ್ರೋಜನ್ ಪ್ರಮಾಣ ನಿಗದಿತ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿರ್‍ತದೆ. ಟ್ರಾಫಿಕ್ ಜಾಮ್ ಉಂಟಾದಾಗಲಂತೂ ವಾಯುಮಾಲಿನ್ಯ ಸಮಸ್ಯೆ ವಿಪರೀತ.

ವಾಯುಮಾಲಿನ್ಯಕ್ಕೆ ಕಾರಣವಾಗುವ ಅನಿಲಗಳಿಂದ ಬರುವ ರೋಗಗಳ ಪಟ್ಟಿ ದೊಡ್ಡದು ಹಾಗೂ ಅಪಾಯಕಾರಿ. ಸಲ್ಫರ್ ಡೈಆಕ್ಸೈಡ್‌ನಿಂದ ಆಸ್ತಮಾದಂಥ ಪುಪ್ಫುಸ ಸಂಬಂಧಿ ರೋಗಗಳು ಬರ್‍ತವೆ. ಆಕ್ಸೈಡ್ ಆಫ್ ನೈಟ್ರೋಜನ್ ಗಾಳಿಯಲ್ಲಿ ಸೇರಿದಾಗ ವಿಷಕಾರಿ ಅನಿಲವಾಗಿ ಮಾರ್ಪಡುತ್ತದೆ. ಇದು ಪರಿಸರದ ಮೇಲೆ ಬೀರುವ ದುಷ್ಪರಿಣಾಮ ಅಷ್ಟಿಷ್ಟಲ್ಲ. ಈ ಕಾರಣದಿಂದಾಗಿಯೇ ಆಮ್ಲ ಮಳೆಯಾಗುತ್ತದೆ. ಇದು ಮನುಷ್ಯನ ಗಂಟಲು ಹಾಗೂ ಮೂಗಿಗೆ ಕಿರಿಕಿರಿ ಉಂಟುಮಾಡುತ್ತದೆ. ಧೂಳಿನ ಕಣಗಳಿಂದಾಗಿ ಹೃದಯ ಬಡಿತ ಏರುಪೇರಾಗ್ತದೆ. ಶ್ವಾಸಕೋಶ ತೊಂದರೆ ತಲೆದೋರುವುದಲ್ಲದೇ ಹೃದಯಾಘಾತಕ್ಕೂ ಕಾರಣವಾಗ್ತದೆ. ಕಣ್ಣು ಉರಿ, ತಲೆ ನೋವು, ಚiಸಂಬಂಧಿ ಸಮಸ್ಯೆಗಳಿಗೆ ಕಾರಣ ಗಾಳಿಯಲ್ಲಿನ ಬೆಂಝೀನ್.
ವಾಯುಮಾಲಿನ್ಯದ ದುಷ್ಪರಿಣಾಮಗಳ ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ. ಎಲ್ಲ್ಲ ರೀತಿಯ ಮಾಲಿನ್ಯಗಳಿಗೆ ಮನುಷ್ಯನೆ ಕಾರಣನಾಗಿದ್ದರಿಂದ, ಪರಿಹಾರವೂ ನಮ್ಮಿಂದಲೇ ಶುರುವಾಗಬೇಕಿದೆ. ಸರ್ಕಾರವೇ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ, ಮಾಲಿನ್ಯ ನಿಯಂತ್ರಣಕ್ಕೆ ನಾವು ವೈಯಕ್ತಿಕ ಮಟ್ಟದಲ್ಲೇ ಪ್ರಯತ್ನಗಳನ್ನು ಮಾಡಬೇಕಿದೆ.
ಓಡಾಟಕ್ಕೆ ಸಾಧ್ಯವಾದಷ್ಟೂ ಸಾರ್ವಜನಿಕ ವಾಹನಗಳನ್ನೇ ಬಳಸುವುದು; ೨ ಸ್ಟ್ರೋಕ್ ವಾಹನಗಳ ಬದಲಿಗೆ ೪ ಸ್ಟ್ರೋಕ್ ವಾಹನಗಳ ಬಳಕೆ; ವಾಹನಳಿಂದ ಹೆಚ್ಚು ಹೂಗೆ ಬಾರದಂತೆ ನೋಡಿಕೊಳ್ಳುವುದು; ಚಿಕ್ಕಮಕ್ಕಳಿರುವ ಶಾಲೆ, ಆಸ್ಪತ್ರೆ ಹಾಗೂ ವಾಸಸ್ಥಳಗಳ ಸುತ್ತಮುತ್ತ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳುವುದು ಕೆಲ ಮುಖ್ಯ ಪರಿಹಾರ ಮಾರ್ಗಗಳು. ಎಲ್ಲಕ್ಕಿಂತ ಹೆಚ್ಚಾಗಿ ಪರಿಸರವನ್ನು ಸದಾ ಹಸಿರಾಗಿಡಲು ನಾವೆಲ್ಲ ಪ್ರಯತ್ನಿಸಬೇಕು. ಏಕೆಂದರೆ, ಮರಗಿಡಗಳು ಗಾಳಿಯಲ್ಲಿನ ಇಂಗಾಲದ ಡೈಆಕ್ಸೈಡ್‌ಗಳನ್ನು ಹೀರಿಕೊಂಡು ನಮಗೆ ಅವಶ್ಯವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ನಮಗೆ ಅಗತ್ಯವಲ್ಲದ ವಸ್ತುಗಳ ಬಳಕೆ ಕಡಿಮೆ ಮಾಡುವುದು, ಪರಿಸರಸ್ನೇಹಿ ವಸ್ತುಗಳನ್ನೇ ಹೆಚ್ಚು ಬಳಸುವುದು ಕೂಡ ಎಲ್ಲ ರೀತಿಯ ಮಾಲಿನ್ಯವನ್ನು ನಿಯಂತ್ರಿಸಬಲ್ಲುದು.
ನಾವೆಲ್ಲ ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು. ಹಾಗೇನೇ, ಉಸಿರಾಡುವ ಗಾಳಿಯೂ ಒಂದೇ. ಯಾವುದನ್ನ ಪ್ರಾಣವಾಯು ಅಂತ ಹೇಳುತ್ತೇವೆಯೋ, ಅದನ್ನೇ ಮಲಿನಗೊಳಿಸಿದರೆ, ಎಲ್ಲರ ಜೀವಕ್ಕೂ ಆಪತ್ತು ತಪ್ಪಿದ್ದಲ್ಲ. ಅಂಥ ತಪ್ಪನ್ನು ನಾವ್ಯಾರೂ ಮಾಡದಿರೋಣ. ಹಸಿರುಪ್ರೀತಿಯನ್ನು ಬೆಳೆಸಿಕೊಳ್ಳೋಣ ಅಂತ ಆಶಿಸ್ತಾತ್ತೆನೆ.

No comments:

Post a Comment