
ಆಕಾಶಕ್ಕೆ ಎಲ್ಲೆ ಇಲ್ಲ, ಮನುಷ್ಯನ ಆಸೆಗೆ ಕೊನೆ ಇಲ್ಲ. ಇವತ್ತು ನಾವು ನೋಡುವ ಬಹುತೇಕ ಪರಿಸರ ಸಮಸ್ಯೆಗಳಿಗೆ ಮನುಷ್ಯನ ಕೊನೆಯಿಲ್ಲದ ಆಸೆಯೇ ಕಾರಣ. ಏಕೆಂದರೆ, ಭೂಮಿ ತಾಯಿ ನಮ್ಮ ಅವಶ್ಯಕತೆಗಳನ್ನು ಈಡೇರಿಸಬಲ್ಲಳೇ ಹೊರತು ದುರಾಸೆಗಳನ್ನಲ್ಲ. ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಂದಾಗಿ ವಸುಂಧರೆ ಒಡಲು ಬರಿದಾಗುತ್ತಿದೆ. ಮಡಿಲು ಕೊಳೆಯಾಗುತ್ತಿದೆ. ಇದಕ್ಕೆ ಕಾರಣ: ಆಧುನಿಕ ಜೀವನಶೈಲಿ. ಇದರಿಂದಾಗಿ ವಸ್ತುಗಳ ಉತ್ಪನ್ನ ಹಾಗೂ ಬಳಕೆ ಹೆಚ್ಚಿದೆ. ಇವುಗಳ ಪೈಕಿ ಶೇಕಡಾ ೮೦ರಷ್ಟು ಉತ್ಪನ್ನಗಳು ಪ್ಲಾಸ್ಟಿಕ್‌ಮಯ. ಬೆಳಿಗ್ಗೆ ಬಳಸುವ ಟೂತ್‌ಬ್ರ್ರಷ್‌ನಿಂದ ಪ್ರಾರಂಭವಾಗಿ ಮೊಬೈಲ್ ಫೋನ್, ಪೆನ್, ಪ್ಲೇಟ್, ಕ್ಯಾರಿಬ್ಯಾಗ್, ಕಂಪ್ಯೂಟರ್, ವಾಹನ ಭಾಗಗಳು, ಆಹಾರ ಉತ್ಪನ್ನಗಳ ಕವರ್‌ಗಳು- ಹೀಗೆ ಎಲ್ಲವೂ ಪ್ಲಾಸ್ಟಿಕ್ ನಿರ್ಮಿತ. ಇವುಗಳ ಮೇಲಿನ ಅವಲಂಬನೆ ಎಷ್ಟೊಂದು ಹೆಚ್ಚಿದೆ ಎಂದರೆ, ಪ್ಲಾಸ್ಟಿಕ್ ನಮಗೆ ಅನಿವಾರ್ಯ ಪೀಡೆ.
ಇದರಿಂದ ಏನಾಗ್ತಿದೆ. ನಿಧಾನವಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಮೂಲ, ವಾಯುಮೂಲಗಳು ಮಲಿನಗೊಳ್ಳುತ್ತಿವೆ. ಹೀಗೆ ಮುಂದುವರಿದಲ್ಲಿ ಇನ್ನು ೨೫ ಅಥವಾ ೩೦ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗ, ಚರ್ಮರೋಗ ಮುಂತಾದ ಕಾಯಿಲೆಗಳು ಸಾಮಾನ್ಯವಾಗಬಹುದು ಅದಕ್ಕಿಂತ ಹೆಚ್ಚಿನ ಅಪಾಯ ಈಗಾಗಲೇ ಕಾಣಿಸಿಕೊಂಡಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಪ್ಲಾಸ್ಟಿಕ್ ತಯಾರಿಸುವಾಗ ಬಿಡುಗಡೆಯಾಗುವ ವಿಷಾನಿಲಗಳ ಸೇವನೆಯಿಂದ ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಎಲ್ಲಕ್ಕಿಂತ ಗಂಭೀರ ಸಮಸ್ಯೆ ಎಂದರೆ ಪ್ಲಾಸ್ಟಿಕ್ ತ್ಯಾಜ್ಯ ನೂರಾರು ವರ್ಷಗಳಾದರೂ ಕರಗುವುದಿಲ್ಲ. ಇದರಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಳೆ ನೀರು ಭೂಮಿಯಲ್ಲಿ ಇಂಗದಂತೆ ತಡೆಯುತ್ತದೆ. ಒಂದು ಪ್ಲಾಸ್ಟಿಕ್ ಚೀಲ ಮಣ್ಣಿನಲ್ಲಿ ಲೀನವಾಗಲು ಸಾವಿರ ವರ್ಷಗಳು ಬೇಕು.
೧೯೮೦ರಿಂದ ಈಚೆಗೆ ಪ್ಲಾಸ್ಟಿಕ್‌ನ ಬಳಕೆಯಲ್ಲಿ ಶೇ.೨೦ ರಷ್ಟು ಹೆಚ್ಚಳವಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ೧೦೦೦ ಲಕ್ಷ ಟನ್ ಪ್ಲಾಸ್ಟಿಕ್ ವಸ್ತುಗಳು ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಭಾರತದ ಪಾಲು ೨೦ ಲಕ್ಷ ಟನ್. ಈ ಪೈಕಿ ಶೇಕಡಾ ೮೦ರಷ್ಟು ಪ್ಲಾಸ್ಟಿಕ್ ಸೀದಾ ಮಣ್ಣು ಸೇರಿದರೆ ಪುನರ್‌ಬಳಕೆಯಾಗುವ ಪ್ಲಾಸ್ಟಿಕ್ ಪ್ರಮಾಣ ಕೇವಲ ಶೇಕಡಾ ೭ ಮಾತ್ರ. ಜಗತ್ತಿನಾದ್ಯಂತ ಪ್ರತಿ ವರ್ಷ ೩೮ ಸಾವಿರ ಕೋಟಿ ಪ್ಲಾಸ್ಟಿಕ್ ಬ್ಯಾಗ್‌ಗಳು ಉತ್ಪತ್ತಿಯಾಗುತ್ತವೆ. ಈ ಪೈಕಿ ಕೇವಲ ಶೇಕಡಾ ೫.೨ರಷ್ಟು ಪ್ರಮಾಣದ ಬ್ಯಾಗ್‌ಗಳನ್ನು ಮಾತ್ರ ಪುನರ್‌ಬಳಕೆ ಮಾಡಲಾಗುತ್ತದೆ.
ಭಾರತದಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳು ೨ ಕೆಜಿ. ಆದರೆ, ಈ ಪ್ರಮಾಣ ಯುರೋಪ್‌ನಲ್ಲಿ ೬೦ ಕೆಜಿ ಹಾಗು ಅಮೆರಿಕಾದಲ್ಲಿ ೮೦ ಕೆಜಿಯಷ್ಟು. ಪ್ರತಿ ವರ್ಷ ಪ್ರಪಂಚದಾದ್ಯಂತ ಬಳಕೆಯಾಗುವ ಪ್ಲಾಸ್ಟಿಕ್ ಬ್ಯಾಗ್‌ಗಳ ತೂಕವೇ ೫೦೦ ಮಿಲಿಯನ್ ಟನ್. ಇದರಲ್ಲಿ ಅಮೆರಿಕಾದ ಪಾಲು ೧೦೦೦ ಲಕ್ಷ ಬ್ಯಾಗ್‌ಗಳು. ಒಟ್ಟಾರೆ ಪ್ರಪಂಚಾದ್ಯಂತ ಉತ್ಪಾದನೆ ಆಗುವ ಈ ೫೦೦೦ ಲಕ್ಷ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕೇವಲ ಶೇ.೧ ರಷ್ಟು ಮಾತ್ರ ಪುನರ್ ಬಳಕೆ ಆಗುತ್ತದೆ.
ಇನ್ನು ನೀರಿನ ಕಥೆ. ನೀರನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಕೊಳಚೆ ನೀರು ಹರಿಯಲು ತಡೆ ಒಡ್ಡುತ್ತದೆ. ಇದರಿಂದ ರೋಗಾಣುಗಳ ಹೆಚ್ಚಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ೧೯೯೮ರಲ್ಲಿ ಮುಂಬೈನಲ್ಲಿ ಭಾರಿ ಮಳೆ ಬಿದ್ದಾಗ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಮಳೆ ನೀರು ಹರಿದುಹೋಗಲು ಅಡ್ಡಿಯಾಗಿ, ಇಡೀ ನಗರ ತೊಂದರೆ ಎದುರಿಸಬೇಕಾಯ್ತು. ಜಗತ್ತಿನಾದ್ಯಂತ ಕೊಳಚೆ ನೀರು, ಹಳ್ಳ, ನದಿ ನೀರಿನ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ವರ್ಷಕ್ಕೆ ೮೦ ಲಕ್ಷ ಟನ್. ಸಮುದ್ರ ಜೀವಿಗಳು ಪ್ಲಾಸ್ಟಿಕ್‌ನ್ನು ಆಹಾರವೆಂದು ಭಾವಿಸಿ ಸೇವಿಸುತ್ತವೆ. ಆದರೆ, ಜಠರ ಹಾಗು ಕರುಳಿಗೆ ಪ್ಲಾಸ್ಟಿಕ್ ಸುತ್ತಿಕೊಳ್ಳುವುದರಿಂದ ಸಾಯುತ್ತವೆ. ಇದರಿಂದಾಗಿ ವರ್ಷಕ್ಕೆ ಸುಮಾರು ಒಂದು ನೂರು ಕೋಟಿ ಕಡಲ ಪಕ್ಷಿಗಳು ಹಾಗೂ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಸುಮಾರು ೧ ಲಕ್ಷಕ್ಕೂ ಹೆಚ್ಚು ಜಲಚರಿಗಳು ಸಾವಿಗೀಡಾಗುತ್ತಿವೆ. ಸಾಕು ಪ್ರಾಣಿಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಿನ್ನುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸತ್ತ ಹಸುವಿನ ದೇಹದಲ್ಲಿ ೩೫ ಕೆ.ಜಿ. ಪ್ಲಾಸ್ಟಿಕ್ ಪತ್ತೆಯಾಗಿತ್ತು ಮಣ್ಣು, ನೀರು, ಯಾವುದರಲ್ಲೂ ಸೇರಿ ನಾಶವಾಗದ, ಪುನರ್ ಬಳಕೆಯಾಗದ ಪ್ಲಾಸ್ಟಿಕ್‌ನ್ನು ಸುಟ್ಟು ನಾಶ ಮಾಡಲು ಹೊರಡುವುದೂ ಅನಾಹುತಕಾರಿಯೇ. ಏಕೆಂದರೆ, ಸುಡುವ ಪ್ಲಾಸ್ಟಿಕ್ ವಿಷಾನಿಲ ಸೂಸುತ್ತದೆ.
ಈ ಅಂಕಿ ಅಂಶಗಳನ್ನೆಲ್ಲಾ ಗಮನಿಸಿದಾಗ ಗಾಳಿ, ನೀರು, ಹಾಗು ಮನುಷ್ಯನ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಪರಿಣಾಮ ಎಂಥಹದ್ದು ಎಂದು ಗೊತ್ತಾಗುತ್ತದೆ. ಪುನರ್‌ಬಳಕೆ ಇವೆಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ವೆ ಅಂತ ಅನಿಸಬಹುದು. ಆದರೆ, ಅದು ದುಬಾರಿ ಕೆಲಸ. ಒಂದು ಸಾವಿರ ಕೆ.ಜಿ. ಬಳಸಿದ ಪ್ಲಾಸ್ಟಿಕ್ ಬ್ಯಾಗ್‌ಗಳ ಪುನರ್‌ಬಳಕೆಗೆ ಸುಮಾರು ೧ ಲಕ್ಷದ ೭೨ ಸಾವಿರ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ, ಉತ್ಪಾದಕರು ಇದಕ್ಕೆ ಒಲವು ತೋರುತ್ತಿಲ್ಲ. ಅಲ್ಲದೇ, ಪುನರ್‌ಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಸದಿಂದ ಬೇರ್ಪಡಿಸುವುದೂ ಖರ್ಚಿನ ಕೆಲಸವೇ. ಸಮಸ್ಯೆ ಇಷ್ಟಕ್ಕೇ ಮುಗಿದಿಲ್ಲ. ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಪಿವಿಸಿ, ಪಿಇಟಿ ಮುಂತಾದ ಪ್ಲಾಸ್ಟಿಕ್ ಉತ್ಪಾದನೆಗಳ ಪುನರ್‌ಬಳಕೆ ಭಾರತದಲ್ಲಿ ಇನ್ನೂ ಪ್ರಾರಂಭವೇ ಆಗಿಲ್ಲ. ಇದಕ್ಕೆ ಕಾರಣ, ಪುನರ್‌ಬಳಕೆ ಸಂಸ್ಕರಣದಲ್ಲಿ ಅವು ಹೆಚ್ಚಿನ ಪ್ರಮಾಣದ ವಿಷಾನಿಲ ಹೊರಸೂಸುವುದು. ಅಪಾಯಕಾರಿ ಸಂಗತಿ ಎಂದರೆ, ಮಕ್ಕಳ ಆಟಿಕೆಗಳು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವುದು ಇಂಥ ಪ್ಲಾಸ್ಟಿಕ್‌ನಿಂದಲೇ. ಇದರಿಂದಾಗಿ ಎಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಪುನರ್‌ಬಳಕೆಯಾಗಬೇಕೆಂದರೆ ಪ್ಲಾಸ್ಟಿಕ್ ಬ್ಯಾಗ್‌ನ ದಪ್ಪ ೨೦ ಮೈಕ್ರಾನ್‌ಗಿಂತ ಹೆಚ್ಚಿರಬೇಕು. ಆದರೆ, ಬಳಕೆಯನ್ನೇ ನಿಲ್ಲಿಸುವ ದೃಷ್ಟಿಯಿಂದ ೪೦ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಉತ್ಪಾದನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ.
ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧ ಈಗಾಗಲೇ ಜಾರಿಯಲ್ಲಿದೆ. ಆದರೆ, ಎಷ್ಟೇ ನಿಷೇಧ ಕ್ರಮಗಳನ್ನು ಪ್ರಕಟಿಸಿದರೂ, ಸರಿಯಾಗಿ ಜಾರಿಗೊಳಿಸದ ಕಾರಣ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಲ್ಲಿ ಅವು ವಿಫಲವಾಗುತ್ತಿವೆ. ಇದಕ್ಕೆ ಕಣ್ಣೆದುರಿನ ಉದಾಹರಣೆ ಎಂದರೆ ಬೆಂಗಳೂರಿನ ಸಮಿಪವಿರುವ ನಂದಿ ಬೆಟ್ಟ. ಇಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದರೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದನ್ನು ನೋಡಬಹುದು ತನ್ನ ಜೀವಿತಾವಧಿಯಲ್ಲಿ ಒಬ್ಬ ಮನುಷ್ಟ ೨೨,೧೭೬ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತಾನೆ. ಒಂದು ವೇಳೆ ನಾವು ಬಟ್ಟೆ ಬ್ಯಾಗ್ ಬಳಸಲು ಪ್ರಾರಂಭಿಸಿದರೆ ದಿನಕ್ಕೆ ೬ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಉಳಿಸಬಹುದು. ಅಂದರೆ, ವರ್ಷಕ್ಕೆ ೨ ಕೆ.ಜಿ.ಯಷ್ಟು ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ನಿಲ್ಲುತ್ತದೆ. ಚೀನಾ ದೇಶ ಈ ನಿಟ್ಟಿನಲ್ಲಿ ನಮಗೆಲ್ಲ ಮಾದರಿ. ಅಲ್ಲೀಗ ಪ್ಲಾಸ್ಟಿಕ ಬ್ಯಾಗ್‌ಗಳ ಉತ್ಪಾದನೆಯನ್ನೇ ನಿಷೇದಿಸಲಾಗಿದೆ. ಇದರಿಂದಾಗಿ ಅಲ್ಲಿ ಪ್ರತಿ ವರ್ಷ ಉಳಿತಾಯವಾಗುವ ಇಂಧನದ ಮೊತ್ತ ೩೭ ಲಕ್ಷ ಬ್ಯಾರಲ್. ಅಮೆರಿಕಾದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ದರವನ್ನು ಹೆಚ್ಚಿಸುವ ಮೂಲಕ ಅದರ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಇಂಗ್ಲೆಂಡ್ ಮತ್ತು ಆಸ್ತ್ರಿಯಾದಲ್ಲಿ ಕರಗಿಹೋಗುವ ಪ್ಲಾಸ್ಟಿಕ್ ಬಳಕೆಯಲ್ಲಿದೆ. ಇವಿಷ್ಟು ಎಚ್ಚರಿಕೆ ಕ್ರಮಗಳಾದರೆ, ಪ್ರತಿ ವರ್ಷ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವ ನಿಟ್ಟಿನಲ್ಲೂ ಪ್ರಯೋಗಗಳು ನಡೆದಿವೆ. ಮಧುರೈನಲ್ಲಿರುವ ಪ್ರೊ. ಆರ್. ವಾಸುದೇವನ್ ಅವರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣದಲ್ಲಿ ಬಳಸಿಕೊಳ್ಳುವುದನ್ನು ತೋರಿಸಿಕೊಟ್ಟಿದ್ದಾರೆ. ಬೆಂಗಳೂರು ಮತ್ತು ಮದ್ರಾಸ್‌ನಲ್ಲಿ ಕೆಲ ರಸ್ತೆಗಳು ಈ ವಿಧಾನದಲ್ಲಿ ನಿರ್ಮಾಣವಾಗಿವೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ತಯಾರಿಸಬಹುದು ಎನ್ನುವುದನ್ನು ನಾಗಪುರದಲ್ಲಿ ೨೦೦೩ರಲ್ಲಿಯೇ ಸಾಧಿಸಲಾಗಿದೆ.
ಇಷ್ಟೆಲ್ಲ ಬದಲಿ ಮಾರ್ಗಗಳಿದ್ದರೂ, ಪ್ಲಾಸ್ಟಿಕ್ ಬ್ಯಾಗ್ ತಯಾರಿಕೆ ಮೇಲೆ ನಿಷೇಧ ಹೇರಲು, ಇರುವ ಬ್ಯಾಗ್‌ಗಳ ಪುನರ್‌ಬಳಕೆ ಕ್ರಮಗಳನ್ನು ಜಾರಿಗೊಳಿಸುವ ಮನಸ್ಸು ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ, ಪ್ಲಾಸ್ಟಿಕ್ ಬಳಕೆ ಹಾಗೂ ಬೀಸಾಡುವಿಕೆ ಎಲ್ಲೆಡೆ ಹೆಚ್ಚುತ್ತಲೇ ಇದೆ. ಇದಕ್ಕೆ ಒಂದೇ ಪರಿಹಾರ ಎಂದರೆ, ವೈಯಕ್ತಿಕವಾಗಿ ನಾವೆಲ್ಲ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಕಡಿಮೆ ಮಾಡುವುದು. ಈಗಿರುವ ಪ್ಲಾಸ್ಟಿಕ್‌ನ ಮರುಬಳಕೆಗೆ ಮುಂದಾಗುವುದು. ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಸಣಬಿನ ಬ್ಯಾಗ್, ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಆಗ ಮಾತ್ರ ಭೂಮಿ ತಾಯಿ ನೆಮ್ಮದಿಯ ಉಸಿರು ಬಿಡಬಹುದು. ಅಂಥದೊಂದು ಅರಿವು ನಮ್ಮೆಲ್ಲರಲ್ಲೂ ಮೂಡಲಿ. ಈ ಭೂಮಿ, ಗಾಳಿ, ನೀರು ಮತ್ತೆ ಆರೋಗ್ಯದಿಂದ ನಳನಳಿಸುವಂತಾಗಲಿ.
No comments:
Post a Comment