Sunday, 26 December 2010

ವೈದ್ಯೋ ನಾರಾಯಣೋ ಹರಿ


ಅಸ್ಪತ್ರೆ ತ್ಯಾಜ್ಯ

ಸೋಂಕು ತಗುಲಿದಾಗ ಅನಾರೋಗ್ಯ ಉಂಟಾಗುತ್ತದೆ. ಆಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೀತೀವಿ. ಆದರೆ, ಆಸ್ಪತ್ರೆಗಳೇ ರೋಗ ಹರಡೋ ತಾಣಗಳಾದ್ರೆ ಗತಿ ಏನು? ನಮಗೆ ಗೊತ್ತಿಲ್ಲದಂತೆ, ಆಸ್ಪತ್ರೆ ತ್ಯಾಜ್ಯಗಳು ರೋಗ ಹರಡ್ತಾ ಹೋಗ್ತಿವೆ.
ವೈದ್ಯೋ ನಾರಾಯಣೋ ಹರಿ ಅಂತೀವಿ. ಅಂದ್ರೆ, ಗುಣಪಡಿಸೋ ವೈದ್ಯನೇ ದೇವರ ಸಮಾನ. ವೈದ್ಯರೊಂದಿಗೆ ನಾವೆಲ್ಲ ವರ್ತಿಸುವುದೂ ಹಾಗೇನೇ. ಅನಾರೋಗ್ಯ ಕಾಡಿದಾಗ, ಗುಣಮುಖರಾಗಲು ಆಸ್ಪತ್ರೆಗಳಿಗೆ ಹೋಗ್ತೀವಿ. ಆದ್ರೆ, ಅಲ್ಲಿಗೆ ಹೋಗಿದ್ದರಿಂದಲೆ, ಹಲವಾರು ಗಂಭೀರ ಕಾಯಿಲೆಗಳು ಅಂಟಿಕೊಳ್ಳಬಹುದೆಂಬ ವಿಷಯ ನಿಮಗೆ ಗೊತ್ತೆ? ಇವತ್ತಿನ ಬಹುತೇಕ ಸೋಂಕು ರೋಗಗಳ ಮೂಲ ಆಸ್ಪತ್ರೆಗಳು ಎಂಬ ಮಾತು ನಿಮಗೆ ಅಚ್ಚರಿ ಉಂಟು ಮಾಡಬಹುದು. ಇದಕ್ಕೆ ಕಾರಣ ಆಸ್ಪತ್ರೆಗಳಲ್ಲಿನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ.
ಎಲ್ಲಕ್ಕಿಂತ ಮುಖ್ಯ: ತ್ಯಾಜ್ಯ ಅಂದ್ರೆ ಏನು? ವಸ್ತುವೊಂದರ ಬಳಕೆ ನಂತರ ಬೇಡವಾಗಿ ಉಳಿಯುವ ಉತ್ಪನ್ನವೇ ತ್ಯಾಜ್ಯ. ಮನೆ, ಆಸ್ಪತ್ರೆ, ಕಾರ್ಖಾನೆ, ಕಚೇರಿ- ಹೀಗೆ, ಹಲವಾರು ಸ್ಥಳಗಳು ತ್ಯಾಜ್ಯವನ್ನು ಉತ್ಪಾದಿಸ್ತಾ ಹೋಗ್ತವೆ. ಒಬ್ಬರಿಗೆ ತ್ಯಾಜ್ಯವೆನಿಸುವ ವಸ್ತುಗಳು ಇನ್ನೊಬ್ಬರಿಗೆ ಉಪಯುಕ್ತ ಅನಿಸಬಹುದು. ಕಬ್ಬಿನ ರಸ ಮಾರುವ ವ್ಯಕ್ತಿಗೆ ಕಬ್ಬಿನ ಸಿಪ್ಪೆ ತ್ಯಾಜ್ಯವಾದರೆ, ಕಾಗದ ಕಾರ್ಖಾನೆಗೆ ಅದೇ ಮೂಲವಸ್ತು. ಜೀವ ವೈದ್ಯಕೀಯ ತ್ಯಾಜ್ಯವೂ ಇಂತಹದ್ದೇ. ಗಾಳಿ, ನೀರು ಹಾಗೂ ಮನುಷ್ಯನ ಮೇಲೆ ಈ ಜೀವ ವ್ಯದ್ಯಕೀಯ ತಾಜ್ಯ ಅಪಾಯಕಾರಿ ಪರಿಣಾಮವನ್ನು ಬೀರಬಲ್ಲುದು. ಸೋಂಕಿತ ತ್ಯಾಜ್ಯ, ದ್ರವರೂಪದ ತ್ಯಾಜ್ಯ, ಹಾನಿಕಾರಕ ತ್ಯಾಜ್ಯ ಹಾಗೂ ಗೃಹಕೃತ್ಯದ ತ್ಯಾಜ್ಯಗಳೆಂಬ ನಾಲ್ಕು ರೂಪಗಳಲ್ಲಿರುತ್ತದೆ ಇದು. ವಿವಿಧ ಆರೋಗ್ಯ ಪಾಲನಾ ಕೇಂದ್ರಗಳು, ಆಸ್ಪತ್ರೆಗಳು, ಪಶು ಚಿಕಿತ್ಸಾಲಯಗಳು, ಔಷಧಾಲಯಗಳು, ನರ್ಸಿಂಗ್ ಹೋಮ್‌ಗಳು, ಪ್ರಯೋಗಾಲಯಗಳಿಂದ ಬರುವ ತ್ಯಾಜ್ಯವೇ ಜೀವ ವೈದ್ಯಕೀಯ ತ್ಯಾಜ್ಯ. ಇವುಗಳ ಪೈಕಿ ದೊಡ್ಡ ಪ್ರಮಾಣದಲ್ಲಿರುವ ಸೋಂಕಿತ ತಾಜ್ಯಗಳಲ್ಲಿ ಹೆಚ್ಚಿನವು ಆಪರೇಷನ್ ಥೇಟರ್‌ಗಳಿಂದಲೇ ಬರುವಂಥವು. ನಳಿಕೆಗಳು, ಮೂತ್ರ ನಳಿಕೆಗಳು, ಡ್ರಿಪ್ ಸೆಟ್‌ಗಳು, ಗ್ರಾಸ್‌ಗಳು, ಮಾನವನ ಶರೀರದ ಅಂಗಾಂಶಗಳು, ಅವಯವಗಳು ಮತ್ತು ಮಾನವನ ಹಾಗೂ ಪ್ರಾಣಿಗಳ ಶರೀರದ ಅಂಗಾಂಗಗಳೆಲ್ಲ ಇರ್ತವೆ. ಅಲ್ಲದೇ, ಪ್ರಯೋಗಾಲಯದ ಮೂಳೆಗಳು, ತಳಿಗಳು, ಲಸಿಕೆಗಳು, ಜೀವ ವಿಜ್ಞಾನದಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು, ಜೀವಾಣು ವಿಷಯುಕ್ತ ವಸ್ತುಗಳು, ಸೂಜಿ, ಸಿರೀಂಜುಗಳು, ಚಾಕು, ಬ್ಲೇಡುಗಳು ಇರುತ್ತವೆ. ತಿರಸ್ಕೃತ ಔಷಧಿಗಳು, ಹತ್ತಿ, ಗಾಯದ ಪಟ್ಟಿ, ಬಟ್ಟೆಗಳು, ಕೊಳಕಾದ ಪ್ಲಾಸ್ಟರ್ ಅಚ್ಚುಗಳು, ಹಾಸಿಗೆ ಮತ್ತು ರಕ್ತದಿಂದ ಸೋಂಕಿತವಾದ ಇತರೆ ವಸ್ತುಗಳು ಸೇರಿರುತ್ತವೆ. ಗೃಹ ತಾಜ್ಯಗಳ ಪಟ್ಟಿಯೂ ದೊಡ್ಡದು. ಆಸ್ಪತ್ರೆಗೆ ಬರುವ ಎಳನೀರು, ತಿಂಡಿ ಪದಾರ್ಥಗಳು, ಕಾಗದ, ಪ್ಲಾಸ್ಟಿಕ್, ಗಾಜಿನ ಪಾತ್ರೆಗಳನ್ನೆಲ್ಲ ಗೃಹ ತಾಜ್ಯಗಳೆಂದು ವಿಂಗಡಿಸಬಹುದು. ಹಾನಿಕಾರಕ ತಾಜ್ಯಗಳಲ್ಲಿ ರೇಡಿಯೋ ವಿಕರಣ ಸೂಸುವ ವಸ್ತುಗಳು, ಸೈಟೋಟ್ಯಾಕ್ಸಿಕ್ ಔಷಧಿಗಳು ಹಾಗೂ ಹೆಚ್ಚು ಒತ್ತಡದ ಧಾರಕಗಳು ಬರುತ್ತವೆ.

ದ್ರವ ತಾಜ್ಯಗಳಲ್ಲಿ ವಾಷ್ ಬೇಸಿನ್, ಅಡಿಗೆಗೆ ಬಳಿಸಿದ ಹಾಗೂ ಶೌಚಾಲಯದಿಂದ ಬರುವ ನೀರು, ರೋಗಿಗಳ ರಕ್ತ, ಮಲ, ಮೂತ್ರ, ಮತ್ತು ಶರೀರದಿಂದ ಸ್ರ್ರವಿಸುವ ದ್ರವಗಳಿರುತ್ತವೆ. ಇಷ್ಟೆಲ್ಲ ವಿವಿಧ ರೀತಿಯ ತ್ಯಾಜ್ಯಗಳನ್ನು ಒಂದೆಡೆ ಸುರಿದಾಗ ಉಂಟಾಗುವ ಅಪಾಯವನ್ನು ಊಹಿಸಲೂ ಆಗದು. ಆಸ್ಪತ್ರೆಯ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಪರಿಸರ ಹಾಗೂ ಮನುಷ್ಯರ ಮೇಲೆ ಅವು ಗಂಭೀರ ಪರಿಣಾಮಗಳನ್ನು ಬೀರುತ್ತವೆ.
ಸಾಮಾನ್ಯ ತ್ಯಾಜ್ಯಗಳಿಂದಲೇ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಹೀಗಿರುವಾಗ, ಅಪಾಯಕಾರಿ ರೋಗಾಣುಗಳನ್ನು, ವಿಕಿರಣಶೀಲ ವಸ್ತುಗಳನ್ನು ಹೊಂದಿರುವ ಜೀವವೈದ್ಯಕೀಯ ತ್ಯಾಜ್ಯದಿಂದ ಅದೆಂಥ ಗಂಭೀರ ಅಪಾಯಗಳು ಸಂಭವಿಸಬಹುದು, ಯೋಚಿಸಿ. ಜೀವ ವೈದ್ಯಕೀಯ ತ್ಯಾಜ್ಯ ಅಷ್ಟು ಸುಲಭವಾಗಿ ನಾಶವಾಗುವಂಥದಲ್ಲ. ಇದು ಚರಂಡಿ ಸೇರಿದರೆ, ಹರಿಯುವ ನೀರಿನೊಂದಿಗೆ ಬಹುದೂರಕ್ಕೆ ಹರಡಬಲ್ಲುದು. ಸಂಸ್ಕರಿಸದೇ ನೆಲದಲ್ಲಿ ಹೂಳಿದರೆ, ಅಲ್ಲಿಯೂ ನಾಶವಾಗದೇ ಇರಬಲ್ಲುದು. ಬಹಿರಂಗವಾಗಿ ಬಿಟ್ಟರೆ, ಗಾಳಿ ಹಾಗೂ ನೊಣಗಳ ಮೂಲಕ ಸೋಂಕು ತರುವ ರೋಗಾಣುಗಳು ಪ್ರಸಾರವಾಗುತ್ತವೆ. ಪ್ರಾಣಿಗಳು ಅಥವಾ ಮನುಷ್ಯರ ದೇಹ ಸೇರಿ ಎಲ್ಲೆಡೆ ಹಬ್ಬುತ್ತವೆ. ಒಂದು ವೇಳೆ ತಿಪ್ಪೆಗುಂಡಿಯಲ್ಲಿ ಬಿಸಾಕಿರುವ ಜೀವವೈದ್ಯಕೀಯ ತಾಜ್ಯಗಳಿಗೆ ಬೆಂಕಿ ಏನಾದರೂ ತಗುಲಿದರೆ, ಅನೇಕ ರೀತಿಯ ವಿಷಾನಿಲಗಳು ಉತ್ಪತಿಯಾಗುತ್ತವೆ. ಗಾಳಿ ಮೂಲಕ ನಮ್ಮ ಪುಪ್ಫುಸಗಳನ್ನು ಸೇರಿಕೊಳ್ತವೆ. ಇಂಥ ತಾಜ್ಯಗಳಿಂದ ಹರಡಬಹುದಾದ ರೋಗಗಳೆಂದರೆ, ಹೆಪಟೈಟಿಸ್ ಎ. ಬಿ. ಮತ್ತು ಸಿ.; ಎಚ್.ಐ.ವಿ. ಏಡ್ಸ್, ಕಾಲರಾ, ಟೈಫಾಯ್ಡ್, ಆಮಶಂಕೆ, ಸ್ಟ್ರೆಪ್ಟೋಕೊಕಾಲ್ ಸೋಂಕು, ನೆರಡಿ (ಅಂಥ್ರಾಕ್ಸ್), ಕ್ಯಾಂಡಿಡಾ ಮುಂತಾದವು. ಇಂಥ ತ್ಯಾಜ್ಯಗಳ ವಿಲೇವಾರಿ ನಿರ್ವಹಣೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಸ್ವಲ್ಪ ಹೆಚ್ಚು ಕಡಿಮೆ ಮಾಡಿದರೆ, ಅವರ ಆರೋಗ್ಯಕ್ಕೂ ಅಪಾಯ ತಪ್ಪಿದ್ದಲ್ಲ. ಜೀವವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ತುಂಬಾ ಜವಾಬ್ದಾರಿಯ ಕೆಲಸ. ಯಾವ ಯಾವ ವಸ್ತುಗಳನ್ನು ಉಪಯೋಗಿಸಲಾಗಿದೆ? ಅವುಗಳ ಪೈಕಿ ತ್ಯಾಜ್ಯಗಳಾವವು? ಎಂಬುದನ್ನು ಚೆನ್ನಾಗಿ ತಿಳಿದಿರಬೇಕು. ಇವುಗಳಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂಬುದು ಖಚಿತವಾಗುವವರೆಗೂ ಈ ಪ್ರಕ್ರಿಯೆ ನಡೆಯಬೇಕು. ಕೇವಲ ತ್ಯಾಜ್ಯವನ್ನು ತೆಗೆದು, ತಿರಸ್ಕರಿಸಿ ಅಥವಾ ವಿಲೇವಾರಿ ಮಾಡುವುದಷ್ಟೇ ಕೆಲಸವಾಗಬಾರದು ಆರೋಗ್ಯ ಪಾಲನಾ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ತ್ಯಾಜ್ಯ ವಸ್ತುಗಳಲ್ಲಿ ಶೇಕಡಾ ೧೦ರಿಂದ ೧೫ ಭಾಗ ತ್ಯಾಜ್ಯ ಸೋಂಕಿತವಾಗಿರುತ್ತದೆ. ಇದನ್ನು ನಿಭಾಯಿಸಲು ಸಂಘಟಿತ ಪ್ರಯತ್ನ ಅಗತ್ಯ. ಇದರಲ್ಲಿ ಆಸ್ಪತ್ರೆಗಳು ಹಾಗೂ ಜೀವವೈದ್ಯಕೀಯ ತ್ಯಾಜ್ಯ ಉತ್ಪಾದಿಸುವ ಘಟಕಗಳ ಜವಾಬ್ದಾರಿ ಹೆಚ್ಚು. ತ್ಯಾಜ್ಯ ನಿರ್ವಹಣೆಯನ್ನು ಅವು ಆರೋಗ್ಯ ಪಾಲನೆಯ ಅಂಗವಾಗಿ ಪರಿಗಣಿಸಬೇಕು. ಇದಕ್ಕಾಗಿ ಸೂಕ್ತ ತಂತ್ರಜ್ಞಾನ ಹಾಗೂ ವಿಧಾನಗಳನ್ನು ಅವು ಅಳವಡಿಸಿಕೊಳ್ಳಬೇಕು. ಸೋಂಕಿತ ತ್ಯಾಜ್ಯದೊಂದಿಗೆ ಬೆರೆತಾಗ ಸೋಂಕಿತವಲ್ಲದ ತ್ಯಾಜ್ಯ ಕೂಡ ಹಾನಿಕಾರಕವಾಗುತ್ತದೆ. ಆದ್ದರಿಂದ, ವಸ್ತುಗಳ ಬಳಕೆ ನಂತರ ಆಸ್ಪತ್ರೆಗಳು ತ್ಯಾಜ್ಯ ವಸ್ತುಗಳನ್ನು ತಕ್ಷಣ ವರ್ಗೀಕರಿಸಬೇಕು. ಒಂದು ಅಂದಾಜಿನ ಪ್ರಕಾರ ಆಸ್ಪತ್ರೆಗಳಲ್ಲಿ ಪ್ರತಿ ಹಾಸಿಗೆಗೆ ದಿನವೊಂದಕ್ಕೆ ಒಂದುವರೆ ಕೆ.ಜಿ.ಯಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಸಾಧಾರಣ ಆಸ್ಪತ್ರೆಗಳಲ್ಲಿ ಇದರ ಪ್ರಮಾಣ ವರ್ಷಕ್ಕೆ ೨೦೦ ಕೆ.ಜಿ. ಇವೆಲ್ಲವೂ ಅಪಾಯಕಾರಿ ರೋಗಾಣುಗಳನ್ನು ಒಳಗೊಂಡಿರುತ್ತವೆ ಎಂಬುದು ಗಮನಾರ್ಹ. ಹಾಗಾದರೆ, ಇವುಗಳ ವಿಲೇವಾರಿ ಹೇಗೆ? ಜೀವವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಒಂದು ಕಡೆ ಒಟ್ಟುಗೂಡಿಸಬೇಕು. ಇದಕ್ಕಾಗಿ ಪ್ರತ್ಯೇಕ ಸ್ಥಳಗಳನ್ನು ಮೀಸಲಾಗಿಡಬೇಕು. ಪ್ರತಿ ತ್ಯಾಜ್ಯಕ್ಕೂ ಡಬ್ಬ ಅಥವಾ ಚೀಲಗಳು ಬೇರೆಯಾಗಿರಬೇಕು. ಇದಕ್ಕೆ ಕಲರ್ ಕೋಡಿಂಗ್ ಅಂತಾರೆ. ಅಂದರೆ, ಹಳದಿ ಬಣ್ಣದ ಬಕೆಟ್‌ನಲ್ಲಿ ಸೋಂಕಿತ ತ್ಯಾಜ್ಯ, ನೀಲಿ ಹಾಗೂ ಅರೆಪಾರರ್ದಕ ಬಿಳಿ ಡಬ್ಬಗಳಲ್ಲಿ ಪುನರ್ ಸಂಸ್ಕರಣೆಯಾಗುವಂಥ ತ್ಯಾಜ್ಯ, ಕೆಂಪು ಬಕೆಟ್‌ನಲ್ಲಿ ಮಾನವ ಅಂಗಗಳನ್ನ ಮತ್ತು ಕಪ್ಪು ಬಕೆಟ್‌ನಲ್ಲಿ ಮುನಸಿಪಲ್ ಕಸ ಸಂಗ್ರಹಕ್ಕೆ ಸಾಗಿಸುವ ತ್ಯಾಜ್ಯವನ್ನು ಶೇಖರಿಸುವುದು ಕಡ್ಡಾಯ. ತ್ಯಾಜ್ಯ ಸಂಗ್ರಹಿಸಿರುವ ಪ್ರತಿ ಬಕೆಟ್‌ನ ಮುಚ್ಚಳದ ಮೇಲೆ ವಿವರಗಳನ್ನು ಬರೆದಿರುವ ಚೀಟಿಯನ್ನು ಅಂಟಿಸಬೇಕು. ಶೇಖರಿಸಿದ ತ್ಯಾಜ್ಯಗಳು ತುಂಬ ಭಾರವಿರಬಾರದು. ಒಣ ತ್ಯಾಜ್ಯವನ್ನು ಗರಿಷ್ಠ ೧೦೦ ಲೀಟರ್ ಮತ್ತು ದ್ರವ ತ್ಯಾಜ್ಯವನ್ನು ಗರಿಷ್ಠ ೫೦ ಲೀಟರ್ ಪಾತ್ರೆಗಳಲ್ಲಿ ಶೇಖರಿಸಬೇಕು. ಅನಧಿಕೃತ ವ್ಯಕ್ತಿಗಳು ತ್ಯಾಜ್ಯದ ಹತ್ತಿರ ಸುಳಿಯದಂತೆ ಕ್ರಮ ಕೈಗೊಳ್ಳಬೇಕು. ಶೇಖರಣಾ ಕೊಠಡಿಗಳಲ್ಲಿ ಕೆಲಸ ಮಾಡುವವರು ಸೂಕ್ತ ಉಡುಪು, ಗ್ಲೋಸ್, ಬೂಟು ಇತ್ಯಾದಿಗಳನ್ನು ಧರಿಸಬೇಕು. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಂದು ವೇಳೆ ಯಾವುದೇ ಕಾಯಿಲೆ/ಗಾಯ ಆದರೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಬೇಕು. ಪ್ರತಿಯೊಂದು ಜೀವ ವೈದ್ಯಕೀಯ ತ್ಯಾಜ್ಯ ಉತ್ಪಾದನಾ ಸ್ಥಳಕ್ಕೆ ವಿಂಗಡಣಾ-ಸಂಗ್ರಹಣಾ ವಾಹನ ದಿನಕ್ಕೆ ಕನಿಷ್ಟ ೨ ಸಲವಾದರೂ ಬರುವಂತಿರಬೇಕು. ತ್ಯಾಜ್ಯ ಸಾಗಾಟಕ್ಕೆ ಉಪಯೋಗಿಸುವ ಕೈಗಾಡಿಯನ್ನು ಪ್ರತಿ ಸಲವೂ ಸಾಬೂನು ಮತ್ತು ಬಿಸಿ ನೀರಿನಿಂದ ತೊಳೆಯಬೇಕು ಹಾಗೂ ಸೋಂಕುಹರಣಗೊಳಿಸಿ ಬಳಸಬೇಕು. ಇದು ಸಾಮಾನ್ಯ ಎಚ್ಚರಿಕೆ ಕ್ರಮದ ಮಾತಾಯ್ತು. ಆದ್ರೆ, ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಶೇಕಡಾ ೫೦ರಷ್ಟು ಸಿರಿಂಜ್‌ಗಳು ಮರುಬಳಕೆಯಾಗ್ತಿವೆ. ಇದು ಅತ್ಯಂತ ಅಪಾಯಕಾರಿ. ಇದನ್ನ ತಡೆಯೋದು ಹೇಗೆ?

ವೈದ್ಯಕೀಯ ವಸ್ತುಗಳ ಮರುಬಳಕೆ ಒಂದು ಗಂಭೀರ ಸಾಮಾಜಿಕ-ಆರ್ಥಿಕ ಸಮಸ್ಯೆ. ಕಡಿಮೆ ಬೆಲೆಯಲ್ಲಿ ಸಿಕ್ತವೆ ಅನ್ನೋ ಕಾರಣಕ್ಕೆ, ಮರುಬಳಕೆ ಸಿರಿಂಜ್ ಮತ್ತು ಸೂಜಿಗಳನ್ನು ಬಳಸಬಾರದು. ಸರ್ಕಾರ ಕೂಡ ಇವನ್ನು ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹೊಸಾ ಸಿರಿಂಜ್ ಮತ್ತು ಸೂಜಿಗಳೇ ಆಗಿರಲಿ, ಅವನ್ನು ಉಪಯೋಗಿಸುವ ಮುಂಚೆ ಸೋಂಕುಹರಣ ದ್ರಾವಕದಲ್ಲಿ ತೊಳೆಯಬೇಕು. ಬಳಕೆಯ ನಂತರ ಅವನ್ನು ವಿರೂಪಗೊಳಿಸಿ ಹರಿತ ತ್ಯಾಜ್ಯ ಧಾರಕದಲ್ಲಿ ತಕ್ಷಣ ವಿಸರ್ಜಿಸಬೇಕು. ಇಲ್ಲದಿದ್ರೆ, ಅವು ಹಿಂಬಾಗಿಲಿನ ಮೂಲಕ ಮತ್ತೆ ಬಳಕೆಗೆ ಬರ್ತವೆ. ಜೊತೆಗೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗ್ತವೆ. ಆಸ್ಪತ್ರೆ ತ್ಯಾಜ್ಯವನ್ನು ನಿಶ್ಚಿತ ಗುತ್ತಿಗೆದಾರರಿಗೇ ನೀಡುವ ವ್ಯವಸ್ಥೆ ಆಗಬೇಕು. ಈ ತ್ಯಾಜ್ಯವನ್ನು ವಿಲೇವಾರಿ ಮಾಡಲೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೀವ ವೈದ್ಯಕೀಯ ತ್ಯಾಜ್ಯ ಸಾಗಿಸುವ ವಾಹನ ಮುಚ್ಚಿದ ವಾಹನವಾಗಿರಬೇಕು. ಜೀವ ವೈದ್ಯಕೀಯ ತ್ಯಾಜ್ಯವನ್ನು ಆಸ್ಪತ್ರೆಗಳ ನಿಗದಿತ ದಹನ ಕುಂಡದಲ್ಲಿ ಹಾಕಿ ಸುಡಬೇಕು. ಆದರೆ, ಕ್ಲೋರಿನೀಕೃತ ಪ್ಲಾಸ್ಟಿಕ್‌ಗಳನ್ನು ಯಾವ ಕಾರಣಕ್ಕೂ ಸುಡಬಾರದು. ತ್ಯಾಜ್ಯದ ಬೂದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿ ಪಡಿಸಿರುವ ಸ್ಥಳದಲ್ಲೇ ಹೂಳಬೇಕು. ೫ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಲ್ಲಿ ಮಾತ್ರ ತ್ಯಾಜ್ಯಗಳನ್ನು ಹೂಳಲು ಅವಕಾಶವಿರುತ್ತದೆ. ದಹನ ಕಟ್ಟಡ ಹೇಗಿರಬೇಕೆಂಬುದಕ್ಕೂ ನಿಯಮಗಳಿವೆ. ಇಂಥ ಕಟ್ಟಡದಲ್ಲಿ ಎರಡು ಕೋಣೆಗಳಿರಬೇಕು. ತ್ಯಾಜ್ಯ ಸುಡಲು ಒಂದು ಕೋಣೆಯಾದರೆ, ಅದರಿಂದ ಬರುವ ಇತರೆ ವಸ್ತುಗಳನ್ನು ಸುಡಲು ಇನ್ನೊಂದು. ಹೀಗಿದ್ದಲ್ಲಿ ಮಾತ್ರ ಅಪಾಯಕಾರಿ ಅನಿಲಗಳು ನಿರುಪದ್ರವಿಗಳಾಗುತ್ತವೆ. ಹೊಗೆ ಕೊಳವೆಗಳ ಉದ್ದ ೩೦ ಅಡಿಗೂ ಹೆಚ್ಚಿರಬೇಕು. ಇದನ್ನು ಇಷ್ಟೆಲ್ಲ ವಿವರವಾಗಿ ಏಕೆ ಹೇಳ್ತಿದ್ದೀನಿ ಅಂದ್ರೆ, ತುಂಬಾ ಕಡೆ ಜೀವ ವೈದ್ಯಕೀಯ ತ್ಯಾಜ್ಯದ ವಿಲೇವಾರಿ ನಿಯಮದ ಪ್ರಕಾರ ನಡೀತಿಲ್ಲ. ಒಂದ್ವೇಳೆ, ಎಲ್ಲಿಯಾದ್ರೂ ಇಂಥ ತ್ಯಾಜ್ಯ ಸುಡುತ್ತಿರುವ ವಾಸನೆ ನಿಮಗೆ ಬಂದ್ರೆ, ಅಥವಾ ಬಹಿರಂಗವಾಗಿ ಇಂಥ ತ್ಯಾಜ್ಯ ಸುರಿದಿದ್ದು ಕಂಡು ಬಂದ್ರೆ, ತಕ್ಷಣ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನ ಸಂಪರ್ಕಿಸಿ. ಏಕೆಂದ್ರೆ, ನಿರ್ಲಕ್ಷ್ಯ ತೋರಿದ್ರೆ, ನಿಮಗೇ ಅಪಾಯ ಸಂಭವಿಸ್ಬಹುದು.
ನಿಮಗೆ ಗೊತ್ತಿರಲಿ: ಪ್ಲಾಸ್ಟಿಕ್ ಬಾಟಲ್‌ಗಳು, ಇಂಜಕ್ಷನ್ ಟ್ಯೂಬ್‌ಗಳು, ಐವಿ ಟ್ಯೂಬ್‌ಗಳು, ನಳಿಕೆಗಳನ್ನು ಮರುಬಳಕೆ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ, ಇಂಥ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಪುಡಿ ಮಾಡುವ ಮೂಲಕ ಶಾಶ್ವತವಾಗಿ ನಾಶ ಮಾಡಬೇಕು. ಜೀವ ವೈದ್ಯಕೀಯ ತ್ಯಾಜ್ಯದ ವಿಲೇವಾರಿಗೆ ಕೊಟ್ಟಷ್ಟೇ ಗಮನ ನಾಶಪಡಿಸುವಿಕೆಗೂ ಅಗತ್ಯ ಆರೋಗ್ಯ ಪಾಲನೆಯಲ್ಲಿ ತ್ಯಾಜ್ಯ ವಿಲೇವಾರಿ ಒಂದು ಮಹತ್ವದ ಸಂಗತಿ. ಜೀವವೈದ್ಯಕೀಯ ತ್ಯಾಜ್ಯವಂತೂ ಎಲ್ಲಕ್ಕಿಂತ ಅಪಾಯಕಾರಿ. ಈ ಕುರಿತ ನಿರ್ಲಕ್ಷ್ಯ ಇಡೀ ಸಮುದಾಯದ ಆರೋಗ್ಯದ ಮೇಲೆ ಪ್ರಭಾವ ಬೀರಬಲ್ಲದು. ಇವುಗಳನ್ನು ಸಮರ್ಥವಾಗಿ ನಿರ್ವಹಿಸುವುದು ಸಂಬಂಧಿಸಿದ ಸಂಸ್ಥೆಗಳದಷ್ಟೇ ಅಲ್ಲ, ನಮ್ಮ ನಿಮ್ಮ ಕರ್ತವ್ಯವೂ ಹೌದು. ಆಗ ಮಾತ್ರ ನಮ್ಮ ಪರಿಸರ ಆರೋಗ್ಯಕರವಾಗಬಲ್ಲುದು. ಅಂಥದೊಂದು ಸಾರ್ವತ್ರಿಕ ಅರಿವು ಎಲ್ಲರಲ್ಲೂ ಮೂಡಲಿ ಅಂತ ಆಶಿಸ್ತಾನೆ.

Friday, 17 December 2010

ಎಲ್ಲಿದೆ ಗೋಮಾಳ?


ಎಲ್ಲಿದೆ ಗೋಮಾಳ?
ಭಾರತಾದ್ಯಂತ ನಗರೀಕರಣವು ಭರದಿಂದ ಸಾಗಿದೆ.ಎಲ್ಲೆಲ್ಲಿ ನೋಡಿದರೂ ಹೊಸ ಹೊಸ ನಿವೇಶನಗಳು, ಮಳಿಗೆ ಕಾಂಪ್ಲೆಕ್ಸುಗಳು, ಮಾಲ್‍ಗಳು... ಇವುಗಳಿಂದ ದೇಶದ ಗ್ರಾಮೀಣ ಪ್ರದೇಶಗಳ ಮೇಲಾಗುತ್ತಿರುವ ಪರಿಣಾಮಗಳೇನು ಎಂಬುದನ್ನು ಊಹಿಸುವುದಕ್ಕೂ ಕಷ್ಟವಾಗುವಷ್ಟು ಕ್ಲಿಷ್ಟಕರವಾಗುತ್ತಿದೆ. ದೊಡ್ಡ ದೊಡ್ಡ ನಗರಗಳ ಸುತ್ತಮುತ್ತಲಿನ ಕೃಷಿ ಪ್ರದೇಶಗಳು ನೀವೇಶನಗಳಾಗಲು ಸಜ್ಜಾಗಿ ಬೇಸಾಯ ಕಾಣದೇ, ಬೀಳಾಗಿ ನಿಂತಿವೆ. ಬೇಸಾಯಕ್ಕೊಳಪಟ್ಟಿರುವ ಕೃಷಿ ಪ್ರದೇಶಗಳು ಆಹಾರಧಾನ್ಯಗಳನ್ನು ಬದಿಗೊತ್ತಿ ನಗರಪ್ರದೇಶಕ್ಕೆ ಬೇಕಾದ ಹಣ್ಣು-ತರಕಾರಿ ಮತ್ತಿತರ ವಾಣಿಜ್ಯ ಬೆಳೆಗಳನ್ನು ಆಹ್ವಾನಿಸಿವೆ; ಮಾರುಕಟ್ಟೆಯ ಏರಿಳಿತದ ಬಿಸಿಯನ್ನು ರೈತರ ಮನೆಯ ಬಾಗಿಲಿಗೇ ತಂದಿವೆ. ಆದರೆ ಇವೆಲ್ಲದರ ನಡುವೆ,ಭಾರತೀಯ ಗ್ರಾಮೀಣ ಸಂಸ್ಕೃತಿಯ ವಿಶಿಷ್ಟ ಮತ್ತು ಅವಿಭಾಜ್ಯ ಅಂಗವಾಗಿದ್ದ ಗೋಮಾಳಗಳು ಭಾರತದೆಲ್ಲೆಡೆ ತ್ವರಿತಗತಿಯಲ್ಲಿ ಹೇಳಹೆಸರಿಲ್ಲದಂತೆ ಕಾಣೆಯಾಗುತ್ತಿವೆ.
ಗೋಮಾಳಗಳ ಹಲವು ಪ್ರಯೋಜನಗಳು ಇಂದು ಗ್ರಾಮೀಣಪ್ರದೇಶದಲ್ಲಿ ಸಿಗದಂತಾಗಿದೆ. ಗ್ರಾಮದೆಲ್ಲ ಜನರ ಜಾನುವಾರುಗಳನ್ನು ಮೇಯಿಸಲು ಇದ್ದ ಗೋಮಾಳಗಳಿಗೆ, ಸಾಮಾನ್ಯವಾಗಿ ಇತರ ಗ್ರಾಮಗಳ ಜಾನುವಾರುಗಳಿಗೆ ಪ್ರವೇಶವಿರಲಿಲ್ಲ. ಕೇವಲ ದನಕರುಗಳ ಮೇವಲ್ಲದೇ, ಮನೆಗೆ ಬೇಕಾಗುತ್ತಿದ್ದ ಕಟ್ಟಿಗೆ, ಸೌದೆ,ಸಣ್ಣ ಪುಟ್ಟ ಹಣ್ಣು ಹಂಪಲುಗಳನ್ನೂ ಗೋಮಾಳದಿಂದ ಪಡೆಯಬಹುದಾಗಿತ್ತು. ಇದರ ಜೊತೆಗೆ ಗೋಮಾಳಗಳು ಅರಣ್ಯ ಮತ್ತು ಜನನಿಬಿಡ ಪ್ರದೇಶಗಳ ನಡುವೆ ಅತ್ಯುತ್ತಮ Buffer ಪ್ರದೇಶವಾಗಿತ್ತು. ಅಂತರ್ಜಲದ ಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲೂ ಇವುಗಳ ಪಾತ್ರವಿತ್ತು. ಗೋಮಾಳಗಳಂತಹ ಸಾರ್ವಜನಿಕ ಆಸ್ತಿಗಳ ಮೇಲ್ವಿಚಾರಣೆಯು ಗ್ರಾಮೀಣ ಭಾರತದ ವಿಕೇಂದ್ರೀಕೃತ ಆಡಳಿತದ ವಿಶೇಷವಾಗಿತ್ತು.
ಸಮೃದ್ಧವಾಗಿದ್ದ ಗೋಮಾಳಗಳು, ಕಾಲಾಂತರದಲ್ಲಿ ಕೆಲಸಕ್ಕೆ ಬಾರದಷ್ಟು ಸೊರಗಿಹೋಗಿರುವುದು ಇಂದಿನ ವಾಸ್ತವ. ಬೆಳೆಯುತ್ತಿರುವ ಜನಸಂಖ್ಯೆ, ಆಮೆಗತಿಯಲ್ಲಿ ಬೆಳೆದ ಕೃಷಿಯ ಉದ್ಯೋಗಾವಕಾಶ,ಪಟ್ಟಣಗಳಿಗೆ ಗ್ರಾಮೀಣ ಪ್ರದೇಶದ ಯುವಪೀಳಿಗೆಯ ವಲಸೆ,ಕೃಷಿಯ ಯಾಂತ್ರೀಕರಣ, ಕೇವಲ ಹಾಲಿಗಾಗಿ ಜಾನುವಾರುಗಳ ಪಾಲನೆ ಹೀಗೆ ಹಲವು ಬೆಳವಣಿಗೆಗಳು ಗೋಮಾಳಗಳ ಪ್ರಾಮುಖ್ಯತೆಯನ್ನು ಕಮ್ಮಿಗೊಳಿಸಿವೆ. ಹಾಗೆಯೇ, ಬರ್ತಾ ಬರ್ತಾ, ಇತರ ಕಸುಬುಗಳಿಗೆ ಹೋಲಿಸಿದಲ್ಲಿ ಕೃಷಿಯ ಲಾಭಾಂಶವೂ ಕಮ್ಮಿಯಾಗುತ್ತಾ ಹೋದಂತೆ, ಗೋಮಾಳಗಳ ಕಬಳಿಕೆ, ಒತ್ತುವರಿಯೂ ಹೆಚ್ಚಾಯಿತು.
ಇನ್ನು, ಸರ್ಕಾರದ ಭೂಸುಧಾರಣೆ ಕಾಯ್ದೆಯಡಿ ಸರ್ಕಾರ ತೆಗೆದುಕೊಂಡ ಹೆಚ್ಚುವರಿ ಜಾಗಗಳನ್ನು ಬಡವರಿಗೆ, ಸಮಾಜದ ಕೆಳಸ್ತರದಲ್ಲಿರುವವರಿಗೆ ಹಂಚಲು ಆರಂಭಿಸಿದಾಗ, ಈ ಹೆಚ್ಚುವರಿ ಪ್ರದೇಶಗಳ ಜೊತೆಗೆ, ಸುಮಾರು ಗೋಮಾಳಗಳನ್ನು ಬರಡು, ಬಂಜರು ಭೂಮಿಯೆಂದು ಪರಿಗಣಿಸಿ, ಅವುಗಳನ್ನೂ ಫಲಾನುಭವಿಗಳಿಗೆ ಹಂಚಲಾಯಿತು. ತಮಗೆ ಸಿಕ್ಕ ಜಾಗವು ಈಗಾಗಲೇ ಅತಿಕ್ರಮವಾಗಿರುವುದನ್ನು ಕಂಡು ಹಲವರಿಗೆ ಹೆಸರಿಗೆ ಜಮೀನು ಬಂದರೂ ವಾಸ್ತವದಲ್ಲಿ ಏನೂ ಇಲ್ಲದಂತಾಯಿತು. ಅವರು ಹತಾಶರಾಗಿ ಮತ್ತಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಂಡರು. ಹೀಗೆ, ಇಂದು ಅಕ್ರಮ ಭೂಸಾಗುವಳಿಗೆ ಎಲ್ಲರ ಬಳಿಯೂ ಹಲವು ಕಾರಣಗಳಿವೆ, ನೈತಿಕ ಸಮಜಾಯಷಿಗಳಿವೆ.
ಇಂದು, ನಮ್ಮ ರೈತರ ದೃಷ್ಟಿಯಲ್ಲಿ ಒತ್ತುವರಿಯು ಒಂದು ಅಕ್ರಮ ಹೆಜ್ಜೆಯಾಗಿಯೋ ಅನೈತಿಕ ಕೆಲಸವಾಗಿಯೋ ಉಳಿದೇ ಇಲ್ಲ. ರಾಜಕಾರಣಿಗಳು, ಹಳ್ಳಿಯ ಮುಖ್ಯಸ್ಥರೂ, ಮೇಲು-ಕೀಳೆನ್ನದೇ ಸಕಲರೂ ಈ ದುಷ್ಕೃತ್ಯದಲ್ಲಿ ಸಮಭಾಗಿಗಳಾಗಿರುವುದು ಮುಕ್ತಗುಟ್ಟಾಗಿದೆ. ಇದು ಎಷ್ಟರಮಟ್ಟಿಗೆ ನಮ್ಮ ಯೋಚನೆಗಳಲ್ಲಿ ಹಾಸುಹೊಕ್ಕಾಗಿದೆಯೆಂದರೆ, ಮಾರಟಕ್ಕಿರುವ ಜಮೀನಿನ ಪಕ್ಕ ಒತ್ತುವರಿಗೆ ಅವಕಾಶವಿದ್ದರೆ, ಆ ಜಮೀನಿನ ದರ ಸಾಮಾನ್ಯಕ್ಕಿಂತಲೂ ಹೆಚ್ಚಿರುತ್ತದೆ. ಅಕ್ರಮವನ್ನು ಸಕ್ರಮ ಮಾಡಿಸಿಕೊಂಡುಬಿಡುವ ಭಂಡ ಧೈರ್ಯ ಸಮಸ್ತರಿಗೂ ಇರುವುದು ದುರ್ಧೈವ.ಇದು ಎಷ್ಟು ದೊಡ್ಡ ಸಮಸ್ಯೆಯೆಂದರೆ, ರಾಜ್ಯದಲ್ಲಿ ಬಂದ ಹಲವು ಸರ್ಕಾರಗಳು ಇದನ್ನು ಪರಿಹರಿಸಲಾಗದೇ, ಅಕ್ರಮ ಭೂಮಿಯನ್ನು ಸಕ್ರಮಗೊಳಿಸುವುದೇ ದೊಡ್ಡ ಸಾಧನೆಗಳನ್ನಾಗಿ, ಗುರಿಗಳನ್ನಾಗಿ ಗುರುತಿಸಿಕೊಂಡಿವೆ. ಇದನ್ನು ಚೆನ್ನಾಗಿ ಅರಿತಿರುವ ರೈತರು, ಭಯ ಬಿಟ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದಕ್ಕೇ ಪೈಪೋಟಿ ನಡೆಸಿದ್ದಾರೆ.
ಸರ್ಕಾರವು ಅಳಿದುಳಿದ ಗೋಮಾಳಗಳನ್ನು ಸಾಮಾಜಿಕ ಅರಣ್ಯಗಳನ್ನಾಗಿ (social forestry) ಅಭಿವೃದ್ಧಿಗೊಳಿಸಲು, ಪ್ರಯತ್ನಿಸಿದೆ. ಸ್ಥಳೀಯರ ಸಹಮತ, ಸಹಕಾರದೊಂದಿಗೆ ಈ ಪ್ರಯತ್ನಗಳು ಸಫಲವಾಗಿರುವುದು ಕೆಲವೇ ಉದಾಹರಣೆಗಳಲ್ಲಿ. ಇತ್ತ, ಗೋಮಾಳಗಳಿಲ್ಲದೇ ಜನರು ಹಲವು ತೊಂದರೆಗಳಿಗೆ ಒಳಗಾಗಿದ್ದಾರೆ. ಅಳಿದುಳಿದ ಗೋಮಾಳಗಳು ಮೇವನ್ನು ಉತ್ಪಾದಿಸುವ ಶಕ್ತಿಯನ್ನು ಕಳೆದುಕೊಂಡು ಕೇವಲ ಹೆಸರಿಗಷ್ಟೇ ಇವೆ.ಹಲವು ಸನ್ನಿವೇಶಗಳಲ್ಲಿ, ಜಾನುವಾರುಗಳ ಪೂರ್ತಿ ಮೇವನ್ನು ಹೊರಗಡೆಯಿಂದಲೇ ತರಿಸಿಕೊಳ್ಳಲಾಗುತ್ತದೆ. ವರ್ಷವಿಡೀ ಮೇವು ಲಭ್ಯವಿರುವುದೇ ಅನಿಶ್ಚತೆಯಿಂದ ಕೂಡಿದೆ. ಮೇವಿನ ವಿಷಯದಲ್ಲಿ ಹಳ್ಳಿಗರಲ್ಲಿ ಹೊಡೆದಾಟಗಳೂ ನಡೆದಿವೆ. ರೈತನು ಭದ್ರ ಬುನಾದಿಯಿಲ್ಲದೇ ಮಾರುಕಟ್ಟೆಯಲ್ಲಿ ವಿಲೀನನಾಗಿ ಗೋಳಾಡಲು ಗೋಮಾಳಗಳ ಅವನತಿಯೂ ಒಂದು ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಗೋಮಾಳಗಳನ್ನು ಪುನಃಶ್ಚೇತನಗಳಿಸಬೇಕು ಎಂಬ ಪ್ರಯತ್ನವೇ ಅವ್ಯಾವಹಾರಿಕ ಎನ್ನುವ ಮಟ್ಟಕ್ಕೆ ಬಂದಿದೆ.ಇಂದಿನ ಸಾಮಾಜಿಕ ಮತ್ತ್ತುಆರ್ಥಿಕ ಒತ್ತಡಗಳ ನಡುವೆಯೂ ಹಿಂದಿನಂತೆಯೇ ಗೋಮಾಳಗಳಿರಬೇಕು ಎನ್ನುವುದು ಅಪ್ರಸ್ತುತವಾದರೂ, ಕಾಲಕ್ಕೆ ತಕ್ಕಂತೆ ಇರುವ ಪೋಲಾಗುತ್ತಿರುವ ಗೋಮಾಳಗಳ ಸದ್ಬಳಕೆಯಾದರೂ ಆಗಲೇ ಬೇಕು.ಗೋಮಾಳಗಳು ಹಿಂದಿನಷ್ಟು ಮುಖ್ಯವಲ್ಲದಿರಬಹುದು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಹಾಲು ಮತ್ತು ಮಾಂಸಾಹಾರದ ಬಳಕೆಯು,ಮೇವಿನ ಬೇಡಿಕೆಯನ್ನು ಪೂರೈಕೆಗಿಂತ ಹೆಚ್ಚಿಸಲಿದೆ. ಈ ಪರಿಸ್ಥಿತಿಯಲ್ಲಿ ಗೋಮಾಳಗಳ ಉಪಸ್ಥಿತಿ ಕೃಷಿಕನಿಗೂ ಸಹಕಾರಿಯಾಗಬಲ್ಲದು, ಪರಿಸರದ ಮೇಲಿನ ಒತ್ತಡ ಕಡಿಮೆಯಾಗಬಹುದು (ಮತ್ತು ಇದರಿಂದ ರೈತನೂ ಲಾಭ ಪಡೆಯಬಹುದು) ಎಂಬುದನ್ನು ಹಲವು ಸಂಶೋಧನೆಗಳು ಎತ್ತಿ ತೋರಿಸಿವೆ. ಗ್ರಾಮೀಣ ಜನತೆ ಮತ್ತು ಸ್ಥಳೀಯ ಸರ್ಕಾರದ ಮಧ್ಯೆ ಉತ್ತಮ ಸಹಕಾರವಿದ್ದಲ್ಲಿ ಉಳಿದಿರುವ ಗೋಮಾಳಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವುದು ಅಸಾಧ್ಯವೇನಲ್ಲ. ಇದು ಇಂದಿನ ಮತ್ತು ಭವಿಷ್ಯದ ಅವಶ್ಯಕತೆ ಕೂಡ.

Thursday, 16 December 2010

ಪಾಪಿ ಪ್ಲಾಸ್ಟಿಕ್.





ಆಕಾಶಕ್ಕೆ ಎಲ್ಲೆ ಇಲ್ಲ, ಮನುಷ್ಯನ ಆಸೆಗೆ ಕೊನೆ ಇಲ್ಲ. ಇವತ್ತು ನಾವು ನೋಡುವ ಬಹುತೇಕ ಪರಿಸರ ಸಮಸ್ಯೆಗಳಿಗೆ ಮನುಷ್ಯನ ಕೊನೆಯಿಲ್ಲದ ಆಸೆಯೇ ಕಾರಣ. ಏಕೆಂದರೆ, ಭೂಮಿ ತಾಯಿ ನಮ್ಮ ಅವಶ್ಯಕತೆಗಳನ್ನು ಈಡೇರಿಸಬಲ್ಲಳೇ ಹೊರತು ದುರಾಸೆಗಳನ್ನಲ್ಲ. ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಂದಾಗಿ ವಸುಂಧರೆ ಒಡಲು ಬರಿದಾಗುತ್ತಿದೆ. ಮಡಿಲು ಕೊಳೆಯಾಗುತ್ತಿದೆ. ಇದಕ್ಕೆ ಕಾರಣ: ಆಧುನಿಕ ಜೀವನಶೈಲಿ. ಇದರಿಂದಾಗಿ ವಸ್ತುಗಳ ಉತ್ಪನ್ನ ಹಾಗೂ ಬಳಕೆ ಹೆಚ್ಚಿದೆ. ಇವುಗಳ ಪೈಕಿ ಶೇಕಡಾ ೮೦ರಷ್ಟು ಉತ್ಪನ್ನಗಳು ಪ್ಲಾಸ್ಟಿಕ್‌ಮಯ. ಬೆಳಿಗ್ಗೆ ಬಳಸುವ ಟೂತ್‌ಬ್ರ್ರಷ್‌ನಿಂದ ಪ್ರಾರಂಭವಾಗಿ ಮೊಬೈಲ್ ಫೋನ್, ಪೆನ್, ಪ್ಲೇಟ್, ಕ್ಯಾರಿಬ್ಯಾಗ್, ಕಂಪ್ಯೂಟರ್, ವಾಹನ ಭಾಗಗಳು, ಆಹಾರ ಉತ್ಪನ್ನಗಳ ಕವರ್‌ಗಳು- ಹೀಗೆ ಎಲ್ಲವೂ ಪ್ಲಾಸ್ಟಿಕ್ ನಿರ್ಮಿತ. ಇವುಗಳ ಮೇಲಿನ ಅವಲಂಬನೆ ಎಷ್ಟೊಂದು ಹೆಚ್ಚಿದೆ ಎಂದರೆ, ಪ್ಲಾಸ್ಟಿಕ್ ನಮಗೆ ಅನಿವಾರ್ಯ ಪೀಡೆ.
ಇದರಿಂದ ಏನಾಗ್ತಿದೆ. ನಿಧಾನವಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಮೂಲ, ವಾಯುಮೂಲಗಳು ಮಲಿನಗೊಳ್ಳುತ್ತಿವೆ. ಹೀಗೆ ಮುಂದುವರಿದಲ್ಲಿ ಇನ್ನು ೨೫ ಅಥವಾ ೩೦ ವರ್ಷಗಳಲ್ಲಿ ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗ, ಚರ್ಮರೋಗ ಮುಂತಾದ ಕಾಯಿಲೆಗಳು ಸಾಮಾನ್ಯವಾಗಬಹುದು ಅದಕ್ಕಿಂತ ಹೆಚ್ಚಿನ ಅಪಾಯ ಈಗಾಗಲೇ ಕಾಣಿಸಿಕೊಂಡಿದೆ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಪ್ಲಾಸ್ಟಿಕ್ ತಯಾರಿಸುವಾಗ ಬಿಡುಗಡೆಯಾಗುವ ವಿಷಾನಿಲಗಳ ಸೇವನೆಯಿಂದ ಕ್ಯಾನ್ಸರ್ ರೋಗ ಹೆಚ್ಚುತ್ತಿದೆ. ಎಲ್ಲಕ್ಕಿಂತ ಗಂಭೀರ ಸಮಸ್ಯೆ ಎಂದರೆ ಪ್ಲಾಸ್ಟಿಕ್ ತ್ಯಾಜ್ಯ ನೂರಾರು ವರ್ಷಗಳಾದರೂ ಕರಗುವುದಿಲ್ಲ. ಇದರಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಮಳೆ ನೀರು ಭೂಮಿಯಲ್ಲಿ ಇಂಗದಂತೆ ತಡೆಯುತ್ತದೆ. ಒಂದು ಪ್ಲಾಸ್ಟಿಕ್ ಚೀಲ ಮಣ್ಣಿನಲ್ಲಿ ಲೀನವಾಗಲು ಸಾವಿರ ವರ್ಷಗಳು ಬೇಕು.

೧೯೮೦ರಿಂದ ಈಚೆಗೆ ಪ್ಲಾಸ್ಟಿಕ್‌ನ ಬಳಕೆಯಲ್ಲಿ ಶೇ.೨೦ ರಷ್ಟು ಹೆಚ್ಚಳವಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ೧೦೦೦ ಲಕ್ಷ ಟನ್ ಪ್ಲಾಸ್ಟಿಕ್ ವಸ್ತುಗಳು ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಭಾರತದ ಪಾಲು ೨೦ ಲಕ್ಷ ಟನ್. ಈ ಪೈಕಿ ಶೇಕಡಾ ೮೦ರಷ್ಟು ಪ್ಲಾಸ್ಟಿಕ್ ಸೀದಾ ಮಣ್ಣು ಸೇರಿದರೆ ಪುನರ್‌ಬಳಕೆಯಾಗುವ ಪ್ಲಾಸ್ಟಿಕ್ ಪ್ರಮಾಣ ಕೇವಲ ಶೇಕಡಾ ೭ ಮಾತ್ರ. ಜಗತ್ತಿನಾದ್ಯಂತ ಪ್ರತಿ ವರ್ಷ ೩೮ ಸಾವಿರ ಕೋಟಿ ಪ್ಲಾಸ್ಟಿಕ್ ಬ್ಯಾಗ್‌ಗಳು ಉತ್ಪತ್ತಿಯಾಗುತ್ತವೆ. ಈ ಪೈಕಿ ಕೇವಲ ಶೇಕಡಾ ೫.೨ರಷ್ಟು ಪ್ರಮಾಣದ ಬ್ಯಾಗ್‌ಗಳನ್ನು ಮಾತ್ರ ಪುನರ್‌ಬಳಕೆ ಮಾಡಲಾಗುತ್ತದೆ.

ಭಾರತದಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷದಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳು ೨ ಕೆಜಿ. ಆದರೆ, ಈ ಪ್ರಮಾಣ ಯುರೋಪ್‌ನಲ್ಲಿ ೬೦ ಕೆಜಿ ಹಾಗು ಅಮೆರಿಕಾದಲ್ಲಿ ೮೦ ಕೆಜಿಯಷ್ಟು. ಪ್ರತಿ ವರ್ಷ ಪ್ರಪಂಚದಾದ್ಯಂತ ಬಳಕೆಯಾಗುವ ಪ್ಲಾಸ್ಟಿಕ್ ಬ್ಯಾಗ್‌ಗಳ ತೂಕವೇ ೫೦೦ ಮಿಲಿಯನ್ ಟನ್. ಇದರಲ್ಲಿ ಅಮೆರಿಕಾದ ಪಾಲು ೧೦೦೦ ಲಕ್ಷ ಬ್ಯಾಗ್‌ಗಳು. ಒಟ್ಟಾರೆ ಪ್ರಪಂಚಾದ್ಯಂತ ಉತ್ಪಾದನೆ ಆಗುವ ಈ ೫೦೦೦ ಲಕ್ಷ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಕೇವಲ ಶೇ.೧ ರಷ್ಟು ಮಾತ್ರ ಪುನರ್ ಬಳಕೆ ಆಗುತ್ತದೆ.
ಇನ್ನು ನೀರಿನ ಕಥೆ. ನೀರನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯ ಕೊಳಚೆ ನೀರು ಹರಿಯಲು ತಡೆ ಒಡ್ಡುತ್ತದೆ. ಇದರಿಂದ ರೋಗಾಣುಗಳ ಹೆಚ್ಚಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ೧೯೯೮ರಲ್ಲಿ ಮುಂಬೈನಲ್ಲಿ ಭಾರಿ ಮಳೆ ಬಿದ್ದಾಗ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಮಳೆ ನೀರು ಹರಿದುಹೋಗಲು ಅಡ್ಡಿಯಾಗಿ, ಇಡೀ ನಗರ ತೊಂದರೆ ಎದುರಿಸಬೇಕಾಯ್ತು. ಜಗತ್ತಿನಾದ್ಯಂತ ಕೊಳಚೆ ನೀರು, ಹಳ್ಳ, ನದಿ ನೀರಿನ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯ ವರ್ಷಕ್ಕೆ ೮೦ ಲಕ್ಷ ಟನ್. ಸಮುದ್ರ ಜೀವಿಗಳು ಪ್ಲಾಸ್ಟಿಕ್‌ನ್ನು ಆಹಾರವೆಂದು ಭಾವಿಸಿ ಸೇವಿಸುತ್ತವೆ. ಆದರೆ, ಜಠರ ಹಾಗು ಕರುಳಿಗೆ ಪ್ಲಾಸ್ಟಿಕ್ ಸುತ್ತಿಕೊಳ್ಳುವುದರಿಂದ ಸಾಯುತ್ತವೆ. ಇದರಿಂದಾಗಿ ವರ್ಷಕ್ಕೆ ಸುಮಾರು ಒಂದು ನೂರು ಕೋಟಿ ಕಡಲ ಪಕ್ಷಿಗಳು ಹಾಗೂ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಸುಮಾರು ೧ ಲಕ್ಷಕ್ಕೂ ಹೆಚ್ಚು ಜಲಚರಿಗಳು ಸಾವಿಗೀಡಾಗುತ್ತಿವೆ. ಸಾಕು ಪ್ರಾಣಿಗಳು ಕೂಡ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಿನ್ನುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಸತ್ತ ಹಸುವಿನ ದೇಹದಲ್ಲಿ ೩೫ ಕೆ.ಜಿ. ಪ್ಲಾಸ್ಟಿಕ್ ಪತ್ತೆಯಾಗಿತ್ತು ಮಣ್ಣು, ನೀರು, ಯಾವುದರಲ್ಲೂ ಸೇರಿ ನಾಶವಾಗದ, ಪುನರ್ ಬಳಕೆಯಾಗದ ಪ್ಲಾಸ್ಟಿಕ್‌ನ್ನು ಸುಟ್ಟು ನಾಶ ಮಾಡಲು ಹೊರಡುವುದೂ ಅನಾಹುತಕಾರಿಯೇ. ಏಕೆಂದರೆ, ಸುಡುವ ಪ್ಲಾಸ್ಟಿಕ್ ವಿಷಾನಿಲ ಸೂಸುತ್ತದೆ.

ಈ ಅಂಕಿ ಅಂಶಗಳನ್ನೆಲ್ಲಾ ಗಮನಿಸಿದಾಗ ಗಾಳಿ, ನೀರು, ಹಾಗು ಮನುಷ್ಯನ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಪರಿಣಾಮ ಎಂಥಹದ್ದು ಎಂದು ಗೊತ್ತಾಗುತ್ತದೆ. ಪುನರ್‌ಬಳಕೆ ಇವೆಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ವೆ ಅಂತ ಅನಿಸಬಹುದು. ಆದರೆ, ಅದು ದುಬಾರಿ ಕೆಲಸ. ಒಂದು ಸಾವಿರ ಕೆ.ಜಿ. ಬಳಸಿದ ಪ್ಲಾಸ್ಟಿಕ್ ಬ್ಯಾಗ್‌ಗಳ ಪುನರ್‌ಬಳಕೆಗೆ ಸುಮಾರು ೧ ಲಕ್ಷದ ೭೨ ಸಾವಿರ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ, ಉತ್ಪಾದಕರು ಇದಕ್ಕೆ ಒಲವು ತೋರುತ್ತಿಲ್ಲ. ಅಲ್ಲದೇ, ಪುನರ್‌ಬಳಕೆಗೆ ಯೋಗ್ಯವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಸದಿಂದ ಬೇರ್ಪಡಿಸುವುದೂ ಖರ್ಚಿನ ಕೆಲಸವೇ. ಸಮಸ್ಯೆ ಇಷ್ಟಕ್ಕೇ ಮುಗಿದಿಲ್ಲ. ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಪಿವಿಸಿ, ಪಿಇಟಿ ಮುಂತಾದ ಪ್ಲಾಸ್ಟಿಕ್ ಉತ್ಪಾದನೆಗಳ ಪುನರ್‌ಬಳಕೆ ಭಾರತದಲ್ಲಿ ಇನ್ನೂ ಪ್ರಾರಂಭವೇ ಆಗಿಲ್ಲ. ಇದಕ್ಕೆ ಕಾರಣ, ಪುನರ್‌ಬಳಕೆ ಸಂಸ್ಕರಣದಲ್ಲಿ ಅವು ಹೆಚ್ಚಿನ ಪ್ರಮಾಣದ ವಿಷಾನಿಲ ಹೊರಸೂಸುವುದು. ಅಪಾಯಕಾರಿ ಸಂಗತಿ ಎಂದರೆ, ಮಕ್ಕಳ ಆಟಿಕೆಗಳು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವುದು ಇಂಥ ಪ್ಲಾಸ್ಟಿಕ್‌ನಿಂದಲೇ. ಇದರಿಂದಾಗಿ ಎಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಪುನರ್‌ಬಳಕೆಯಾಗಬೇಕೆಂದರೆ ಪ್ಲಾಸ್ಟಿಕ್ ಬ್ಯಾಗ್‌ನ ದಪ್ಪ ೨೦ ಮೈಕ್ರಾನ್‌ಗಿಂತ ಹೆಚ್ಚಿರಬೇಕು. ಆದರೆ, ಬಳಕೆಯನ್ನೇ ನಿಲ್ಲಿಸುವ ದೃಷ್ಟಿಯಿಂದ ೪೦ ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ್‌ಗಳ ಉತ್ಪಾದನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ.
ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳ ನಿಷೇಧ ಈಗಾಗಲೇ ಜಾರಿಯಲ್ಲಿದೆ. ಆದರೆ, ಎಷ್ಟೇ ನಿಷೇಧ ಕ್ರಮಗಳನ್ನು ಪ್ರಕಟಿಸಿದರೂ, ಸರಿಯಾಗಿ ಜಾರಿಗೊಳಿಸದ ಕಾರಣ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಲ್ಲಿ ಅವು ವಿಫಲವಾಗುತ್ತಿವೆ. ಇದಕ್ಕೆ ಕಣ್ಣೆದುರಿನ ಉದಾಹರಣೆ ಎಂದರೆ ಬೆಂಗಳೂರಿನ ಸಮಿಪವಿರುವ ನಂದಿ ಬೆಟ್ಟ. ಇಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದ್ದರೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿದ್ದಿರುವುದನ್ನು ನೋಡಬಹುದು ತನ್ನ ಜೀವಿತಾವಧಿಯಲ್ಲಿ ಒಬ್ಬ ಮನುಷ್ಟ ೨೨,೧೭೬ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತಾನೆ. ಒಂದು ವೇಳೆ ನಾವು ಬಟ್ಟೆ ಬ್ಯಾಗ್ ಬಳಸಲು ಪ್ರಾರಂಭಿಸಿದರೆ ದಿನಕ್ಕೆ ೬ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಉಳಿಸಬಹುದು. ಅಂದರೆ, ವರ್ಷಕ್ಕೆ ೨ ಕೆ.ಜಿ.ಯಷ್ಟು ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ನಿಲ್ಲುತ್ತದೆ. ಚೀನಾ ದೇಶ ಈ ನಿಟ್ಟಿನಲ್ಲಿ ನಮಗೆಲ್ಲ ಮಾದರಿ. ಅಲ್ಲೀಗ ಪ್ಲಾಸ್ಟಿಕ ಬ್ಯಾಗ್‌ಗಳ ಉತ್ಪಾದನೆಯನ್ನೇ ನಿಷೇದಿಸಲಾಗಿದೆ. ಇದರಿಂದಾಗಿ ಅಲ್ಲಿ ಪ್ರತಿ ವರ್ಷ ಉಳಿತಾಯವಾಗುವ ಇಂಧನದ ಮೊತ್ತ ೩೭ ಲಕ್ಷ ಬ್ಯಾರಲ್. ಅಮೆರಿಕಾದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳ ದರವನ್ನು ಹೆಚ್ಚಿಸುವ ಮೂಲಕ ಅದರ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಇಂಗ್ಲೆಂಡ್ ಮತ್ತು ಆಸ್ತ್ರಿಯಾದಲ್ಲಿ ಕರಗಿಹೋಗುವ ಪ್ಲಾಸ್ಟಿಕ್ ಬಳಕೆಯಲ್ಲಿದೆ. ಇವಿಷ್ಟು ಎಚ್ಚರಿಕೆ ಕ್ರಮಗಳಾದರೆ, ಪ್ರತಿ ವರ್ಷ ಉಂಟಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವ ನಿಟ್ಟಿನಲ್ಲೂ ಪ್ರಯೋಗಗಳು ನಡೆದಿವೆ. ಮಧುರೈನಲ್ಲಿರುವ ಪ್ರೊ. ಆರ್. ವಾಸುದೇವನ್ ಅವರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆ ನಿರ್ಮಾಣದಲ್ಲಿ ಬಳಸಿಕೊಳ್ಳುವುದನ್ನು ತೋರಿಸಿಕೊಟ್ಟಿದ್ದಾರೆ. ಬೆಂಗಳೂರು ಮತ್ತು ಮದ್ರಾಸ್‌ನಲ್ಲಿ ಕೆಲ ರಸ್ತೆಗಳು ಈ ವಿಧಾನದಲ್ಲಿ ನಿರ್ಮಾಣವಾಗಿವೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ತಯಾರಿಸಬಹುದು ಎನ್ನುವುದನ್ನು ನಾಗಪುರದಲ್ಲಿ ೨೦೦೩ರಲ್ಲಿಯೇ ಸಾಧಿಸಲಾಗಿದೆ.

ಇಷ್ಟೆಲ್ಲ ಬದಲಿ ಮಾರ್ಗಗಳಿದ್ದರೂ, ಪ್ಲಾಸ್ಟಿಕ್ ಬ್ಯಾಗ್ ತಯಾರಿಕೆ ಮೇಲೆ ನಿಷೇಧ ಹೇರಲು, ಇರುವ ಬ್ಯಾಗ್‌ಗಳ ಪುನರ್‌ಬಳಕೆ ಕ್ರಮಗಳನ್ನು ಜಾರಿಗೊಳಿಸುವ ಮನಸ್ಸು ನಮ್ಮ ಸರ್ಕಾರಕ್ಕಿಲ್ಲ. ಹೀಗಾಗಿ, ಪ್ಲಾಸ್ಟಿಕ್ ಬಳಕೆ ಹಾಗೂ ಬೀಸಾಡುವಿಕೆ ಎಲ್ಲೆಡೆ ಹೆಚ್ಚುತ್ತಲೇ ಇದೆ. ಇದಕ್ಕೆ ಒಂದೇ ಪರಿಹಾರ ಎಂದರೆ, ವೈಯಕ್ತಿಕವಾಗಿ ನಾವೆಲ್ಲ ಪ್ಲಾಸ್ಟಿಕ್ ಬ್ಯಾಗ್‌ಗಳ ಬಳಕೆ ಕಡಿಮೆ ಮಾಡುವುದು. ಈಗಿರುವ ಪ್ಲಾಸ್ಟಿಕ್‌ನ ಮರುಬಳಕೆಗೆ ಮುಂದಾಗುವುದು. ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಾಗಿ ಸಣಬಿನ ಬ್ಯಾಗ್, ಪೇಪರ್ ಬ್ಯಾಗ್, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು. ಆಗ ಮಾತ್ರ ಭೂಮಿ ತಾಯಿ ನೆಮ್ಮದಿಯ ಉಸಿರು ಬಿಡಬಹುದು. ಅಂಥದೊಂದು ಅರಿವು ನಮ್ಮೆಲ್ಲರಲ್ಲೂ ಮೂಡಲಿ. ಈ ಭೂಮಿ, ಗಾಳಿ, ನೀರು ಮತ್ತೆ ಆರೋಗ್ಯದಿಂದ ನಳನಳಿಸುವಂತಾಗಲಿ.

Friday, 10 December 2010

ಎಲ್ಲಾಮಾಯಾ ನಾಳೆ ನಾವು ಮಾಯಾ



ಕೆರೆ.. ಕೆರೆ.. ಕೆರೆ

ಬೆಂದಕಾಳೂರಿನ ಹೃದಯ ಬಾಗದಲ್ಲಿದ್ದ ಧರ್ಮಾಂಬುದಿ ಕೆರೆ ಮೆಜೆಸ್ಟಿಕ್ ಆಗಿದೆ ಚಳಘಟ್ಟಕೆರೆ ಗಾಲ್ಪ್ ಕೋರ್ಸ ಆಗಿಬದಲಾಗಿದೆ ಕೋರಮಂಗಲದ ಕೆರೆ ನ್ಯಾಷನಲ್ ಗೇಮ್ಸ ವಿಲೆಜ್ ಆಗಿಬದಲಾಗಿದೆ ಇದು ಬರಿ ಬೆಂಗಳುರಿನ ಕೆರೆಗಳ ಕತೆಅಲ್ಲ ರಾಜ್ಯದ ಪ್ರತಿ ಉರಿನ ಕೆರೆಯ ಕತೆಯು ಇದೆ ಆಗಿದೆ.ಕೆರೆಗಳು ನಾಶವಾಗ್ತಿರೋದು ನಿಜ. ಅದ್ಕೂ ಮುಂಚೆ, ಕೆರೆಗಳನ್ನು ಏಕೆ ನಿರ್ಮಿಸ್ತಿದ್ರು ಎಂಬ ಪ್ರಶ್ನೆ ಮುಖ್ಯ
ಮೂಲ ದ್ರವ್ಯಗಳಲ್ಲಿ ನೀರು ಅತ್ಯಂತ ಪ್ರಾಥಮಿಕವಾದದ್ದು. ಜೀವ ಸೃಷ್ಟಿ ಮತ್ತು ಪೋಷಣೆಗೆ ನೀರೇ ಪ್ರಾಣಾಧಾರ. ವಿಶಾಲ ಅರ್ಥದಲ್ಲಿ ನೋಡುವುದಾದರೆ ನೀರು ಮತ್ತು ಮನುಷ್ಯನ ನಡುವೆ ಏರ್ಪಟ್ಟ ಸಂಘರ್ಷವೇ ಜಗತ್ತಿನ ಚರಿತ್ರೆ. ನೀರಿನ ಬಳಕೆಯನ್ನು ಮನುಷ್ಯ ಕಂಡುಕೊಂಡಿದ್ದೇ ಕೃಷಿ, ವಿಜ್ಞಾನ ಮತ್ತು ನಾಗರಿಕತೆಗಳ ಹುಟ್ಟಿಗೆ ಕಾರಣವಾಯ್ತು. ಪ್ರಪಂಚದ ಎಲ್ಲಾ ನಾಗರಿಕತೆಗಳೂ ನೀರನ್ನು ಒಂದು ಮೌಲ್ಯವಾಗಿ, ಪ್ರಕೃತಿಯ ಪ್ರತೀಕವಾಗಿ ಮಹಾಮಾತೃದೇವತೆಯಾಗಿ ಸ್ವೀಕರಿಸಿವೆ. ವಿಶ್ವವನ್ನು ವಿವರಿಸುವ ಮುಖ್ಯ ಚಿಂತನ ಕ್ರಮಗಳಲ್ಲಿ ಜಲಸಂಸ್ಕೃತಿಯ ಪರಿಕಲ್ಪನೆಯೂ ಒಂದು. ಇಂದಿಗೂ ಜನಪದರ ಜೀವನ ಕ್ರಮಗಳನ್ನು ರೂಪಿಸಿರುವ ಅಂತಃಸತ್ವವು ಜಲತತ್ವವೇ ಆಗಿದೆ. ಆದ್ದರಿಂದಲೇ ಜನಪದ ಸಂಸ್ಕೃತಿಯನ್ನು ಜಲಸಂಸ್ಕೃತಿ ಎಂದು ಗುರುತಿಸಲಾಗಿದೆ. ನೀರಿನ ಮಹತ್ವ ಗೊತ್ತಿದ್ದರಿಂದಲೇ ನಮ್ಮ ಹಿರಿಯರು ಅದಕ್ಕೆ ದೈವತ್ವವದ ರೂಪ ಕೊಟ್ಟಿದ್ದರು. ಹೆಚ್ಚಿನ ನಾಗರಿಕತೆಗಳು ನದಿದಡದಲ್ಲೆ ಬೆಳೆದಿವೆ. ಜನಸಂಖ್ಯ ಹೆಚ್ಚಾದಂತೆ, ಜನ ನಿಬಿಡ ಪ್ರದೇಶಗಳಿಗೆ ಜಲಾಧಾರವಾಗಿದ್ದು ಕೆರೆಗಳೇ. ನಿತ್ಯದ ಅವಶ್ಯಕತೆಗಳಿಗೆ ಮತ್ತು ಕೃಷಿಗೆ ನೀರು ಕೆರೆಗಳಿಂದಲೇ ಪೂರೈಕೆಯಾಗುತ್ತಿತ್ತು. ಪ್ರಕೃತಿಯ ಮಡಿಲಲ್ಲಿ ಮಳೆನೀರನ್ನ ಸಂಗ್ರಹಿಸಿ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳುವುದಲ್ಲದೇ ಅಂತರ್ಜಲ ಮಟ್ಟ ಕಾಪಾಡುವಲ್ಲಿ ಕೆರೆಗಳ ಪಾತ್ರ ಮಹತ್ವದ್ದು.
ಹೀಗಾಗಿ ಕೆರೆಗಳು ನೀರು ಸಂಗ್ರಹಿಸುವ ಸ್ಥಳವಾಗದೆ, ನಮ್ಮ ಸಂಸ್ಕೃತಿ ಹಾಗು ಆಚಾರ ವಿಚಾರಗಳ ಅವಿಭಾಜ್ಯ ಅಂಗವಾದವು. ಕೆರೆಗಳಿಗೆ ಸಾಮಾಜಿಕ, ಆರ್ಥಿಕ ಹಾಗು ಧಾರ್ಮಿಕ ಆಚರಣೆಗಳಲ್ಲೂ ಪ್ರಾಮುಖ್ಯತೆ ನೀಡಲಾಗಿತ್ತು. ನಿಸರ್ಗವನ್ನು ಚನ್ನಾಗಿ ಅರ್ಥೈಸಿಕೊಂಡಿದ್ದ ನಮ್ಮ ಹಿರಿಯರು ಪರಿಸರಕ್ಕೆ ಮಹತ್ವವನ್ನು ಕೊಟ್ಟಿದ್ದರು. ನಿಸರ್ಗ ಹಸಿರಾಗಿದ್ದರೆ ನಮ್ಮ ಬದುಕು ಸಮೃದ್ಧವಾಗಿರುತ್ತೆ ಎನ್ನುವುದನ್ನ ಅರ್ಥ ಮಾಡಿಕೊಂಡಿದ್ದ ನಮ್ಮ ಪೂರ್ವಜರ ಪ್ರತಿ ಆಚರಣೆಯಲ್ಲೂ ಇದನ್ನ ಗಮನಿಸಬಹುದು. ಹಾಗೆಯೇ ಕೆರೆಗಳ ನಿರ್ಮಾಣದಲ್ಲಿ ಕೂಡಾ. ಇಂಜಿನಿಯರಿಂಗ್ ಓದಿರದ ಜನ ನಿರ್ಮಿಸಿದ ಕೆರೆಗಳ ತಂತ್ರಜ್ಞಾನ ನಿಬ್ಬೆರಗಾಗುವಂಥದ್ದು.
ನಿಸರ್ಗದಲ್ಲಿನ ಸಹಜವಾದ ತಗ್ಗು ಪ್ರದೇಶಗಳನ್ನ ಕೆರೆಯಾಗಿ ನಿರ್ಮಿಸಲಾಗುತ್ತಿತ್ತು. ಆಗ ಸುತ್ತಮುತ್ತಲಿನ ಪ್ರದೇಶದ ಮಳೆನೀರು ಸಹಜವಾಗಿ ಅಲ್ಲಿಗೆ ಹರಿದು ಬರುತಿತ್ತು. ಪ್ರತಿ ಕೆರೆಗೂ ನೀರು ಹರಿದು ಬರಲು ಅವಕಾಶವಿದ್ದಂತೆ, ಹರಿದು ಮುಂದಿನ ಕೆರೆಗೆ ಹೋಗಲೂ ಅವಕಾಶವಿರುತಿತ್ತು. ಕೆರೆಗಳಿಗೆ ಪರಸ್ಪರ ಸಂಪರ್ಕವಿದ್ದರಿಂದ ಅತಿಯಾಗಿ ಮಳೆಯಾದಾಗಲೂ ಪ್ರವಾಹ ಉಂಟಾಗುತ್ತಿರಲಿಲ್ಲ. ಅಷ್ಟೆ ಅಲ್ಲ, ಸುತ್ತಮುತ್ತಲಿನ ಕೃಷಿಪ್ರದೇಶಕ್ಕೆ ಅವಶ್ಯಕವಾಗುವಷ್ಟು ನೀರನ್ನು ಸಂಗ್ರಹಿಸಿ ಉಳಿದಿದ್ದನ್ನ ಮುಂದಿನ ಕೆರೆಗೆ ಬಿಡಲಾಗುತ್ತಿತ್ತು. ಮಳೆನೀರನ್ನ ಸಂಗ್ರಹಿಸುವುದರಿಂದ ಆ ಪ್ರದೇಶದ ಅಂತರ್ಜಲ ಸಮೃದ್ಧವಾಗಿರುತ್ತಿತ್ತು. ಹೀಗಾಗಿ ಬಾವಿಗಳಲ್ಲಿ ಸದಾ ನೀರಿರುತ್ತಿತ್ತು. ಕೆರೆಗಳಲ್ಲಿ ಸಂಗ್ರಹವಾದ ನೀರಿನ ಪ್ರಮಾಣವನ್ನ ಆಧರಿಸಿ ಆ ವರ್ಷದ ಬೆಳೆಗಳನ್ನ ನಿರ್ಧರಿಸಲಾಗುತ್ತಿತ್ತ್ತು.
ಕೆರೆ ಅಂದ್ರೆ ಬರಿ ನೀರು ನಿಲ್ಲುವ ಜಾಗವಲ್ಲ. ಹಿಂದಿನ ಕಾಲದಲ್ಲಿ ರಾಜಮಾತೆಯರು ತಮ್ಮ ಮಕ್ಕಳ ಕಿವಿಯಲ್ಲಿ, ‘ಕೆರೆ ಕಟ್ಟಿಸು, ಕಾಡು ಬೆಳೆಸು’ ಅಂತ ಹೇಳುತ್ತಿದ್ದರು. ಊರಿನಲ್ಲಿ ಯಾವುದೆ ಧಾರ್ಮಿಕ ಕಾರ್ಯ ನಡೆದರೂ ಮೊದಲ ಪೂಜೆಯನ್ನು ಕೆರೆಗೆ ಸಲ್ಲಿಸಲಾಗುತ್ತಿತ್ತು. ಕೆರೆ ಎಂಬುದು ಇಡಿ ಊರಿನ ಅರ್ಥಿಕ ಬೆನ್ನೆಲುಬಾಗಿರುತ್ತಿತ್ತು. ಊರ ಕೆರೆಯಲ್ಲಿ ನೀರುಕ್ಕಲಿ ಅಂತ ನರಬಲಿ ಕೊಟ್ಟ ‘ಕೆರೆಗೆ ಹಾರ’ ಎಂಬ ಜಾನಪದ ಹಾಡನ್ನು ನಾವೆಲ್ಲ ಕೇಳಿದ್ದೀವಿ. ಆದ್ರೆ, ಈಗ ಪರಿಸ್ಥಿತಿ ಬದಲಾಗಿದೆ. ಮನುಷ್ಯನೇ ಕೆರೆಯನ್ನು ಬಲಿ ತೆಗೆದುಕೊಳ್ತಿದ್ದಾನೆ. ಇದು ರಿವರ್ಸ್ ಜಾನಪದ.
ನಮ್ಮ ಕೆರೆಗಳು ಏಕೆ ಮಾಯವಾಗ್ತಿವೆ? ಯಾರು ಈ ಕೆಲಸ ಮಾಡ್ತಿರೋದು? ಇದ್ರಿಂದ ನಮ್ಮ ಪರಿಸರ, ಜನಜೀವನದ ಮೇಲೆ ಎಂಥ ಪರಿಣಾಮವಾಗ್ತಿದೆ ಅನ್ನೂ ಗಂಭಿರ ಸಮಸ್ಯೆಯ ಬಗ್ಗೆ ನಾವ್ಯಾರು ಇಂದು ಯೋಚಿಸುತ್ತಿಲ್ಲ. ಆದರೆ ನಮ್ಮ ಮುಂದಿನ ಪಿಳಿಗಯವರು ಖಂಡಿತವಾಗಲು ಇದರ ಪರಿಣಾಮಗಳನ್ನ ಎದುರಿಸುತ್ತಾರೆ.
೧೮ನೆ ಶತಮಾನದಲ್ಲಿ ಕರ್ನಾಟಕದ ೨೭೦೨೮ ಹಳ್ಳಿಗಳಲ್ಲಿ ೩೮ ಸಾವಿರಕ್ಕೂ ಹೆಚ್ಚು ಕೆರೆಗಳು ೬೯ ಲಕ್ಷ ಎಕರೆ ಜಾಗದಲ್ಲಿ ಹರಡಿಕೊಂಡಿದ್ದವು. ಕುಡಿಯುವ ನೀರಿನ ಜೊತೆಗೆ ಸುಮಾರು ೨೪ ಲಕ್ಷ ಎಕರೆ ಕೃಷಿ ಭೂಮಿಗೆ ಈ ಕೆರೆಗಳಿಂದ ನೀರು ಪೂರೈಕೆಯಾಗುತ್ತಿತ್ತು. ಸ್ವಾತಂತ್ರದ ನಂತರದ ದಿನಗಳಲ್ಲಿ ಅಭಿವೃದ್ಧಿ ಹಾಗೂ ನಗರಿಕರಣದ ಹೆಸರಿನಲ್ಲಿ ಈ ಕೆರೆಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಈಗ ರಾಜ್ಯದಲ್ಲಿ ಉಳಿದಿರುವ ಕೆರೆಗಳ ಸಂಖ್ಯೆ ೩೦ ಸಾವಿರ. ಅವುಗಳಲ್ಲಿ ೨೫೦೦ಕ್ಕೂ ಹೆಚ್ಚು ಕೆರೆಗಳು ಬಳಕೆಗೆ ಯೋಗ್ಯವಾಗಿ ಉಳಿದಿಲ್ಲ.
ಕೆರೆಗಳು ಹೆಚ್ಚಾಗಿ ಸಮುದಾಯದ ಆಸ್ತಿಗಳಾಗಿದ್ದವು. ನಗರಿಕರಣ ಹೆಚ್ಚಾದಾಗ ಇವುಗಳ ಜವಾಬ್ದಾರಿಯನ್ನ ಹೊರುವವರು ಯಾರು ಇರಲಿಲ್ಲ. ಹೀಗಾಗಿ ಸರ್ಕಾರದ ಆಧೀನದಲ್ಲಿದ್ದ ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಳ್ಳುವ ಜನ ಹೆಚ್ಚಾದರು. ಹಾಗಾದ್ರೆ ಇಷ್ಟೊಂದು ಕೆರೆಗಳು ಎಲ್ಲಿಗ ಹೋದ್ವು? ಆ ಜಾಗಗಳು ಈಗ ಅಪಾರ್ಟ್‌ಮೆಂಟ್, ಬಸ್ ನಿಲ್ದಾಣ, ಮಾರ್ಕೆಟ್, ಬಿಲ್ಡಿಂಗ್ ಇತ್ಯಾದಿಗಳಾಗಿವೆ.
ನಗರಿಕರಣ ಹೆಚ್ಚಾದಂತೆ ಅದಕ್ಕೆ ಮೊದಲು ಬಲಿಯಾಗಿದ್ದೇ ಕೆರೆಗಳು. ಬೆಂಗಳೂರು ಇದಕ್ಕೆ ಉತ್ತಮ ನಿದರ್ಶನ. ಇಲ್ಲಿನ ಹೆಚ್ಚಿನ ಕೆರೆಗಳು ಇಂದು ಬಿಡಿಏ ಲೇಔಟ್‌ಗಳಾಗಿವೆ. ಆದರೆ, ನೀರಿಗೆ ಈ ವಿಷಯ ಗೊತ್ತಿಲ್ಲ. ಪಾಪ, ಅದಕ್ಕೆ ಹರಿದು ಬರುವ ಹಳೇ ಅಭ್ಯಾಸ. ಹೀಗಾಗಿ, ಮಳೆ ಬೀಳುತ್ತಲೇ ಹರಿದು ಓಡೋಡಿ ಕೆರೆಯಿದ್ದ ಜಾಗಕ್ಕೆ ಬರುತ್ತದೆ. ಆದ್ರೆ, ಇಲ್ಲಿ ನಿಲ್ಲಲು ಅದಕ್ಕೆ ಕೆರೆಯೇ ಇಲ್ಲ. ಏನ್ಮಾಡೋದು? ಅಪಾರ್ಟ್‌ಮೆಂಟ್ ಒಳಗೆ ನುಗ್ಗುತ್ತೆ. ಅಯ್ಯೋ ಪಾಪ, ಅಪಾರ್ಟ್‌ಮೆಂಟು. ಅದೀಗ ಮಳೆ ನೀರಿನ ಕಂಪಾರ್ಟ್‌ಮೆಂಟು.

ಕೆರೆ ಜಾಗದಲ್ಲಿ ಬಿಲ್ಡಿಂಗ್ ಕಟ್ಟಿದ್ರೆ ಏನಾಗುತ್ತೆ? ಬಿಲ್ಡಿಂಗೊಳಗೆ ನೀರು ನುಗ್ಗುತ್ತೆ. ಸಹಜ ಪರಿಸರದಲ್ಲಿ ನಿಲ್ಲುವ ನೀರು ಯಾವ ಸಮಸ್ಯೆಯನ್ನೂ ಮಾಡಲ್ಲ. ಆದ್ರೆ, ಮನುಷ್ಯ ನಿರ್ಮಿಸಿದ ಪರಿಸರದಲ್ಲಿ ನಿಲ್ಲುವ ನೀರು ಎಂತೆಂಥ ಸಮಸ್ಯೆ ಉಂಟು ಮಾಡ್ತದೆ ಗೊತ್ತ? ಅದು ತರುವ ಫಜೀತಿ ಅಷ್ಟಿಷ್ಟಲ್ಲ ಅದಕ್ಕೊಂದು ಉತ್ತಮ ಉದಾಹರಣೆ ಹರಳುಕುಂಟೆ ಕೆರೆ,

ಕೆರೆಯನ್ನು ಹುಡುಕಲು ಕಷ್ಟಪಡಬೇಕೆ? ಬೆಂಗಳೂರಿನಲ್ಲಿ ನಿಮಗೆ ಇಂಥದೊಂದು ಪ್ರಶ್ನೆ ಎದುರಾದ್ರೆ ಅಚ್ಚರಿಯಿಲ್ಲ. ಈಗ ನಾನು ಹೇಳುತ್ತಿರುವ ಹರಳುಗುಂಟೆ ಕೆರೆ ಅಂಥದ್ದು. ಈ ಕೆರೆಯನ್ನು ಹುಡುಕುವುದೇ ಸಾಹಸದ ಕತೆ. ಏಕೆಂದ್ರೆ ದೊಡ್ಡ ಕೆರೆಯಿದ್ದ ಜಾಗದಲ್ಲಿ ಈಗ ಉಳಿದಿರುವುದು ಒಂದು ಕೊಳಚೆ ಹೊಂಡ ಮಾತ್ರ. ಹಿಂದೂಮ್ಮೆ ಈ ಕೆರೆ ೧೭ ಎಕರೆಯಷ್ಟು ವಿಸ್ತಾರವಾಗಿತ್ತು. ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರನ್ನು ಹಾಗು ರೈತರು ಬೆಳೆಯುತ್ತಿದ್ದ ಕಬ್ಬು ಬೆಳೆಗೆ ನೀರನ್ನ ಪುರೈಸುತ್ತಿತ್ತು.

ಇಂದಿಲ್ಲಿ ಕಬ್ಬು ಇಲ್ಲ. ಕಬ್ಬು ಬೆಳೆಯವರು ಇಲ್ಲ. ಏಕೆಂದ್ರೆ ಹರಳುಕುಂಟೆ ಕೆರೆಯೇ ಉಳಿದಿಲ್ಲ. ಬೆಂಗಳೂರು ಬೆಳೆದಂತೆ ಕೊರಮಂಗಲ ಎಚ್.ಎಸ್.ಆರ್. ಲೇಔಟ್‌ನಲ್ಲಿ ಜಮಿನಿಗೆ ಚಿನ್ನದ ಬೆಲೆ ಬಂದಾಗ ಈ ಕೆರೆಯನ್ನು ಒಂದು ಕಡೆಯಿಂದ ರಿಯಲ್ ಎಸ್ಟೇಟ್‌ನವರು ಒತ್ತುವರಿ ಮಾಡುತ್ತಾ ಬಂದರು. ಇನ್ನೊಂದೆಡೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಕಸವನ್ನೆಲ್ಲ ಇಲ್ಲಿಗೆ ತಂದು ಹಾಕುವ ಮೂಲಕ ಕೆರೆಯನ್ನು ಮುಚ್ಚುತ್ತಾ ಹೋಯಿತು. ಸಾಲದ್ದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬಿಡಿಎ ಈ ಭಾಗದಲ್ಲಿನ ಕೆರೆಗಳನ್ನು ಲೇಔಟ್‌ಗಳನ್ನಾಗಿ ಮಾಡಿತು.

ಇದೆಲ್ಲದರ ಪರಿಣಾಮ ಏನಾಯ್ತೆಂದ್ರೆ, ಜೋರು ಮಳೆ ಬಂದಾಗ, ಮಳೆ ನೀರು ಇಲ್ಲಿನ ಲೇಔಟ್‌ಗಳತ್ತ ಹರಿದು ಬರುತ್ತದೆ. ಮುಂದೆ ಹರಿದುಹೋಗುವ ದಾರಿ ಮುಚ್ಚಿಹೋಗಿದ್ದರಿಂದ ಇಲ್ಲಿಯೇ ನಿಲ್ಲುತ್ತೆ. ಹೀಗಾಗಿ, ಒಮ್ಮೆ ಸಮೃದ್ಧ ಕೆರೆ ಇದ್ದ ಜಾಗ ಈಗ ಕೊಚ್ಚೆಗುಂಡಿಯಾಗಿ ಮಾರ್ಪಟ್ಟಿದೆ. ಕೆರೆ ದಂಡೆಯ ಮೇಲೆ ಸುರಿಯುತ್ತಿರುವ ಕಸ-ತ್ಯಾಜ್ಯವೆಲ್ಲ ಕೆರೆಯನ್ನು ಸೇರುತ್ತದೆ.

ಹೀಗಾಗಿ, ಒಮ್ಮೆ ಕುಡಿಯಲು ಯೋಗ್ಯವಾಗಿದ್ದ ಯೂಗ್ಯವಾಗಿದ್ದ ಹರಳುಕುಂಟೆ ಕೆರೆ ನೀರು ಇಂದು ವಿಷಪೂರಿತವಾಗಿದೆ. ಅತ್ಯಂತ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇಲ್ಲಿನ ನೀರಿನಲ್ಲಿ ಕಂಡು ಬಂದಿದೆ. ಕೆರೆಯ ನೀರು ಭೂಮಿಯಲ್ಲಿ ಇಂಗುವುದರಿಂದ ಸುತ್ತಮುತ್ತಲಿನ ಪ್ರದೇಶದ ಅಂರ್ತಜಲ ಕೂಡಾ ಕಲುಷಿತಗೊಂಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ತಂಡ ಇತ್ತಿಚೆಗೆ ನಡೆಸಿದ ಅಧ್ಯಯನದಲ್ಲಿ ಹರಳುಕುಂಟೆ ಕೆರೆ ನೀರಿನಲ್ಲಿ ಸುಮಾರು ೧೨ ರಿತಿಯ ವಿಷಕಾರಿ ರಾಸಾಯನಿಕಗಳಿರುವುದನ್ನು ಪತ್ತೆ ಹಚ್ಚಿದೆ. ಕೆರೆಯಲ್ಲಿರುವ ಕಲುಷಿತ ನೀರಿನಿಂದಾಗಿ ಇಲ್ಲಿನ ಗಾಳಿ ಮತ್ತು ಮಣ್ಣು ಕೂಡ ಸಂಪುರ್ಣವಾಗಿ ಕಲುಷಿತಗೊಂಡಿವೆ.

ಇದು ಕೇವಲ ಹರಳಕುಂಟೆ ಕೆರೆಯ ಕತೆ ಮಾತ್ರ ಅಲ್ಲ. ರಾಜ್ಯದಾದ್ಯಂತ ಸಾವಿರಾರು ಕೆರೆಗಳು ಇಂಥ ಕಣ್ಣೀರ ಕತೆ. ಈ ಕಥೆ ನಿಮ್ಮಲ್ಲಿ ಜಲಪ್ರಜ್ಞೆ ಮೂಡಿಸಲಿ, ಕೆರೆಗಳ ಮಹತ್ವದ ಅರಿವು ಹೆಚ್ಚಿಸಲಿ ಅನ್ನೋದು ನನ್ನ ಆಶಯ.

Thursday, 2 December 2010

ಇದು ಗಾಳಿ ಮಾತಲ್ಲ


ಪ್ರಾಣವಾಯುವಿಗೆ ಕುತ್ತು.

ಗಾಳಿ ಎಲ್ಲ ಜೀವಿಗಳ ಪ್ರಾಣವಾಯು. ಗಾಳಿಯ ಒಂದು ಪ್ರಮುಖ ಅಂಶ ಆಮ್ಲಜನಕ. ಇದಿಲ್ಲದೆ ಭೂಮಿಯ ಮೇಲೆ ಯಾವ ಜೀವಿಯೂ ಬದುಕಲಾರದು. ಆದರೆ, ಇಂಥ ಜೀವವಾಯು ಅತ್ಯಂತ ವೇಗವಾಗಿ ಕಲುಷಿತಗೊಳ್ಳುತ್ತಿದೆ. ಇಡೀ ಜೀವಜಗತ್ತನ್ನೇ ಆಪತ್ತಿಗೆ ಸಿಲುಕಿಸಿದೆ.
ಭೂಮಿಯನ್ನು ರೂಪಿಸಿರುವ ಮೂಲವಸ್ತುಗಳ ಪೈಕಿ ಆಮ್ಲಜನಕದ್ದು ಪ್ರಮುಖ ಪಾಲು. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಐದರಲ್ಲಿ ಒಂದು ಭಾಗ. ಭೂಮಿಯ ಘನಭಾಗದಲ್ಲಿ ಶೇಕಡಾ ೪೯ ಹಾಗೂ ನೀರಿನಲ್ಲಿ ಶೇಕಡಾ ೮೯ರಷ್ಟು ಆಮ್ಲಜನಕವಿದೆ
ಹಾಗಂತ ಗಾಳಿಯಲ್ಲಿ ಬರೀ ಆಮ್ಲಜನಕವೇ ತುಂಬಿಕೊಂಡಿಲ್ಲ. ನಾವು ಉಸಿರಾಡುವ
ಗಾಳಿಯಲ್ಲಿ ಶೇಕಡಾ ೭೮ರಷ್ಟು ಭಾಗ ಸಾರಜನಕ, ಅಂದ್ರೆ ನೈಟ್ರೋಜನ್‌ನಿಂದ ತುಂಬಿದೆ. ಉಳಿದಂತೆ ಆಮ್ಲಜನಕ, ಕಾರ್ಬನ್ ಡೈಆಕ್ಸೈಡ್ ಹಾಗೂ ಇತರ ಅನಿಲಗಳಿವೆ.

ಉಸಿರಾಡುವ ಗಾಳಿಯನ್ನು ಪ್ರಾಣವಾಯು ಅಂತೀವಿ. ಆದರೆ, ನಮ್ಮ ಪ್ರಯೋಗಗಳ ಮೊದಲ ಬಲಿಪಶುವೇ ಈ ವಾತಾವರಣ. ತಂತ್ರಜ್ಞಾನದ ಅವಲಂಬನೆ ಹೆಚ್ಚಿದಂತೆ ಪರಿಸರ ಕಲುಷಿತವಾಗ್ತಿದೆ. ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲೂ, ಗಾಳಿ ಕಲುಷಿತಗೊಳ್ಳುವ ವೇಗ ತುಂಬ ಗಂಭೀರ ಪರಿಣಾಮಗಳನ್ನು ಉಂಟು ಮಾಡ್ತಿದೆ. ಏಕೆಂದರೆ, ಜೀವಿಗಳೆಲ್ಲ ಬದುಕಿರುವುದೇ ಉಸಿರಾಟದಿಂದ. ಮನುಷ್ಯ ಪ್ರತಿ ನಿಮಿಷಕ್ಕೆ ೧೬ ಬಾರಿ ಉಸಿರಾಡುತ್ತಾನೆ. ಆದರೆ, ಈ ಕ್ರಿಯೆ ನಮ್ಮ ಇಚ್ಛೆಗೆ ಒಳಪಟ್ಟಿಲ್ಲ. ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ಹೀಗಾಗಿ, ಉಸಿರಾಟದ ಮಹತ್ವದ ಬಗ್ಗೆ ನಾವು ಯೋಚಿಸುವುದು ಕಡಿಮೆ.
ಶುದ್ಧ ಗಾಳಿಯಿಂದ ಲಾಭಗಳು ಬಹಳ. ದೀರ್ಘವಾಗಿ ಉಸಿರೆಳೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಉಸಿರಾಟದ ಗತಿ ನಿಮಿಷಕ್ಕೆ ೭ ಅಥವಾ ೮ಕ್ಕೆ ಇಳಿಯುತ್ತದೆ. ರಕ್ತದೊತ್ತಡ ತಗ್ಗಿ, ಮಾಂಸಖಂಡಗಳು ಸಡಿಲಗೊಂಡು ದೇಹಕ್ಕೆ ವಿಶ್ರಾಂತಿ ಸಿಕ್ಕಂತಾಗುತ್ತದೆ. ಶುದ್ಧ ಗಾಳಿಯ ದೀರ್ಘ ದೀರ್ಘ ಸ್ವಾಸೋಚ್ಛಾಸದಿಂದ ಹೃದಯ ಬಡಿತವೂ ಕಡಿಮೆಯಾಗುತ್ತದೆ. ದೀರ್ಘಾಯುಷ್ಟದ ಗುಟ್ಟು ಇದೇ ಶುದ್ಧ ಗಾಳಿಯ ಶ್ವಾಸೋಚ್ಛಾಸದಿಂದ ಮಾನಸಿಕ ಉದ್ವೇಗ ತಗ್ಗುತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಆದರೆ, ಈಗಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ನಿಜಕ್ಕೂ ನಾವು ಮಾಲಿನ್ಯಗೊಂಡ ವಾಯುವನ್ನೇ ಅವಸರದಿಂದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡುತ್ತಿದ್ದೇವೆ. ಇದರಿಂದಾಗಿ ಮಾನಸಿಕ ಒತ್ತಡ, ಆತಂಕ ಹಾಗೂ ಉದ್ವೇಗಗೊಳ್ಳುವಿಕೆ ಹೆಚ್ಚಾಗುತ್ತಿದೆ. ಬದುಕಲು ಇಷ್ಟೊಂದು ಅವಶ್ಯವಾಗಿರುವ ಪ್ರಾಣವಾಯು ಅಪಾಯದಲ್ಲಿದೆ. ಪರಿಸರಕ್ಕೆ ತೀವ್ರ ಹಾನಿಯಾಗ್ತಿದೆ. ಜೀವರಾಶಿಗಳು ತೊಂದರೆಗೆ ಸಿಲುಕಿವೆ.
ವಾಯು ಮಾಲಿನ್ಯ ಎಂಬುದು ನಿಧಾನವಾಗಿ ಹಬ್ಬುವಂಥದು. ಸಸ್ಯ, ಪ್ರಾಣಿ, ಸಹಜ ಪರಿಸರಕ್ಕೆ ಹಾನಿಯುಂಟು ಮಾಡುವ ರಾಸಾಯನಿಕಗಳು, ಸೂಕ್ಷ್ಮ ಕಣಗಳು ಅಥವಾ ಜೈವಿಕ ಸಾಮಗ್ರಿಗಳು ವಾತಾವರಣಕ್ಕೆ ಸೇರಿಕೊಳ್ಳುವುದನ್ನ ವಾಯುಮಾಲಿನ್ಯ ಎಂದು ಕರೀತಾರೆ.
ವಾತಾವರಣ ಎಂಬುದು ಒಂದು ಸಂಕೀರ್ಣ ಹಾಗೂ ಚಲನಶೀಲ ವ್ಯವಸ್ಥೆ. ಭೂಮಿಯ ಮೇಲಿನ ಜೀವಜಾಲಕ್ಕೆ ಅಗತ್ಯವಾಗಿ ಬೇಕಿರುವಂಥದ್ದು. ವಾಯು ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಪ್ರಾಥಮಿಕ ಹಾಗೂ ದ್ವಿತೀಯ ಎಂದು ವರ್ಗೀಕರಿಸಬಹುದು. ಪ್ರಾಥಮಿಕ ಕಾರಣಗಳಲ್ಲಿ ವಾಯುಮಾಲಿನ್ಯ ನೈಸರ್ಗಿಕ ಕ್ರಿಯೆಯಿಂದ ಉಂಟಾಗ್ತವೆ. ಉದಾಹರಣೆಗೆ ಅಗ್ನಿಪರ್ವತದ ಸ್ಫೋಟ. ಅಗ ಹೊರಚಿಮ್ಮುವ ಬೂದಿ ಮತ್ತು ಇಂಧನಗಳು ದಹನ ಕ್ರಿಯೆಗೆ ಒಳಪಡ್ತವೆ. ಸಾರಜನಕದ ಆಕ್ಸೈಡ್‌ಗಳು, ಗಂಧಕದ ಡೈಆಕ್ಸೈಡ್, ದೂಳುಕಣಗಳು ಹಾಗೂ ಅತಿ ಸೂಕ್ಷ್ಮ ಕಣಗಳು ನೇರವಾಗಿ ಗಾಳಿಯಲ್ಲಿ ಸೇರುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ದ್ವಿತೀಯ ಮಾಲಿನ್ಯಕಾರಕಗಳು ನೇರವಾಗಿ ಹೊಮ್ಮುವುದಿಲ್ಲ. ಪ್ರಾಥಮಿಕ ಮಾಲಿನ್ಯಕಾರಕಗಳು ವಾತಾವರಣವನ್ನು ಸೇರಿದಾಗ ನಡೆಯುವ ರಾಸಾಯನಿಕ ಕ್ರಿಯೆಯಿಂದ ಇವು ಉತ್ಪತ್ತಿಯಾಗ್ತವೆ. ಇಲ್ಲಿ ಗಂಧಕದ ಆಕ್ಸೈಡ್‌ಗಳು ಸಲ್ಫೇಟ್ ಆಗಿ ಮಾರ್ಪಡ್ತ್ತವೆ. ಸಾರಜನಕದ ಆಕ್ಸೈಡ್‌ಗಳು ಸಲ್ಫೈಡ್ ಹಾಗೂ ಅಮೋನಿಯಾ ಆಗಿ ಬದಲಾಗ್ತವೆ. ಇವೇ ದ್ವಿತೀಯ ಮಾಲಿನ್ಯಕಾರಕಗಳು.
ಇನ್ನು ದೂಳು ಕಣಗಳು ಹಾಗೂ ಸೂಕ್ಷ್ಮಕಣಗಳ ಬಗ್ಗೆ. ಇವುಗಳಲ್ಲಿ ಎರಡು ವಿಧ: ಸೊನ್ನೆಯಿಂದ ೧೦ ಮೈಕ್ರಾನ್ ಗಾತ್ರದ ದೂಳುಕಣಗಳು ನಾವು ಉಸಿರಾಡುವಾಗ ಶ್ವಾಸಕೋಶವನ್ನು ಸೇರಬಲ್ಲಂಥವು. ಇದೇ ರೀತಿ ಸೊನ್ನೆಯಿಂದ ೧೦೦ ಮೈಕ್ರಾನ್ ಗಾತ್ರದ ದೂಳುಕಣಗಳೂ ವಾತಾವರಣದಲ್ಲಿ ತೇಲಾಡುತ್ತಿರುತ್ತವೆ. ಇವು ಘನ ಅಥವಾ ದ್ರವ ರೂಪದ ಪದಾರ್ಥಗಳಾಗಿರಬಹುದು. ನೈಸರ್ಗಿಕ ಅಥವಾ ಮನುಷ್ಯ ನಿರ್ಮಿತವಾಗಿರಬಹುದು. ಕಟ್ಟಡ ನಿರ್ಮಾಣದ ವೇಳೆ ಹಾಗೂ ವಾಹನಗಳ ಓಡಾಟದಿಂದಾಗಿ ಇಂಥ ಧೂಳಿನ ಕಣಗಳು ಉತ್ಪತಿಯಾಗುತ್ತವೆ.
ವಾಯುಮಾಲಿನ್ಯದ ಕಾರಣದಿಂದ ಉಂಟಾಗುವ ದುಷ್ಪರಿಣಾಮಗಳು ಅನೇಕ, ಇವುಗಳಲ್ಲಿ ವಾಯುಮಂಡಲದ ಓಝೋನ್ ಪದರ ಕರಗುವುದೂ ಒಂದು. ಇದರಿಂದಾಗಿ ಸೂರ್ಯನಿಂದ ಬರುವ ಅಪಾಯಕಾರಿ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ. ಇವು ಚರ್ಮದ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗ್ತಿವೆ. ವಾಯುಮಾಲಿನ್ಯ ಹಲವಾರು ಮೂಲಗಳಿಂದ ಉಂಟಾಗ್ತದೆ. ತೈಲ ಉದ್ಯಮದಿಂದ ಶೇಕಡಾ ೫ರಷ್ಟು ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳು ಶೇಕಡಾ ೯ರಷ್ಟು ವಾಯುಮಾಲಿನ್ಯಕ್ಕೆ ಕಾರಣವಾಗ್ತವೆ. ಅತಿ ಹೆಚ್ಚಿನ ಮಾಲಿನ್ಯ ಉಂಟಾಗ್ತಿರೋದು ವಾಹನಗಳಿಂದ. ಶೇಕಡಾ ೮೫ರಷ್ಟು ಮಾಲಿನ್ಯ ವಾಹನಗಳಿಂದ ಆಗ್ತಿರೋದು ಕಳವಳಕಾರಿ ಅಂಶ.
ಜಗತ್ತಿನಲ್ಲಿ ೮೦೦೦ ಲಕ್ಷ ವಾಹನಗಳಿವೆ ಎಂಬುದು ಒಂದು ಅಂದಾಜು. ಜಗತ್ತಿನ ಜನಸಂಖ್ಯೆಯ ಶೇಕಡಾ ೨ರಷ್ಟು ಜನ ಮಾತ್ರ ಕಾರುಗಳನ್ನ ಬಳಸುತ್ತಿದ್ದರೆ ದ್ವಿಚಕ್ರವಾಹನಗಳನ್ನ ಬಳಸುವವರು ಶೇಕಡಾ ೧೮ ಮಾತ್ರ. ಕರ್ನಾಟಕದ ಅಂಕಿಅಂಶಗಳು ಹೀಗಿವೆ: ೧೯೯೦ರಲ್ಲಿ ನೊಂದಣಿಯಾಗಿದ್ದು ೧೪ ಲಕ್ಷದ ೩೭ ಸಾವಿರ ವಾಹನಗಳು ಮಾತ್ರ. ಆದರೆ, ಕೇವಲ ೨೦೦೯ರ ಜನವರಿಯಿಂದ ನವೆಂಬರ್‌ವರೆಗೆ ನೊಂದಣಿಯಾದ ವಾಹನಗಳ ಸಂಖ್ಯೆ ೯೦ ಲಕ್ಷಕ್ಕೆ ಏರಿತು. ಇವುಗಳ ಪೈಕಿ, ಶೇಕಡಾ ೭೧ರಷ್ಟು ದ್ವಿಚಕ್ರವಾಹನಗಳು. ಉಳಿದಂತೆ ಶೇಕಡಾ ೧೧ರಷ್ಟು ಕಾರುಗಳು, ಶೇಕಡಾ ೩ರಷ್ಟು ಆಟೊರಿಕ್ಷಾಗಳು ಹಾಗೂ ಶೇಕಡಾ ೧೫ರಷ್ಟು ಇತರ ವಾಹನಗಳು ಸೇರಿವೆ. ಇನ್ನು, ರಾಜ್ಯದಲ್ಲಿರುವ ವಾಹನಗಳ ಪೈಕಿ ಬೆಂಗಳೂರು ನಗರದ ಪಾಲು ಅತಿ ಹೆಚ್ಚು. ಕೇವಲ ೭ ಲಕ್ಷ ವಾಹನಗಳಿಗಷ್ಟೇ ಅವಕಾಶ ಇರುವ ರಾಜಧಾನಿಯಲ್ಲಿ ಇಂದು ೨೩ ಲಕ್ಷ ವಾಹನಗಳಿವೆ. ಪ್ರತಿ ದಿನ ೨ ಸಾವಿರಕಕೂ ಹೆಚ್ಚು ವಾಹನಗಳು ಬೆಂಗಳೂರಿನಲ್ಲಿ ನೊಂದಣಿಯಾಗ್ತಿವೆ. ಈ ವಾಹನಗಳಿಂದ ಹೊರಬರುವ ಕಾರ್ಬನ್ ಮೋನಾಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಹಾಗೂ ದೊಡ್ಡ ಪ್ರಮಾಣದ ದೂಳಿನ ಕಣಗಳು ತೀವ್ರ ವಾಯುಮಾಲಿನ್ಯ ಉಂಟು ಮಾಡ್ತಿವೆ.
ಅಮೆರಿಕಾದ ಹಾರ್ವರ್ಡ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ನ ಪರಿಸರ ವಿಜ್ಞಾನಿಗಳು ಹೇಳುವಂತೆ, ಜಗತ್ತಿನಾದ್ಯಂತ ಸುಮಾರು ೨೪ ಲಕ್ಷ ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ಅಮೆರಿಕವೊಂದರಲ್ಲೇ ಶೇಕಡಾ ೪ ರಷ್ಟು ಜನರ ಸಾವಿಗೆ ಇದೇ ಕಾರಣ. ಇನ್ನು ನಮ್ಮ ದೇಶದ ಪರಿಸ್ಥಿತಿ ಹೇಗಿರಬೇಡ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಜನ ಸಾಯುತ್ತಿದ್ದಾರೆ. ಆದರೆ ಜಗತ್ತಿನಾದ್ಯಂತ ವಾಹನಗಳ ಅಪಘಾತದಲ್ಲಾಗುಗುವ ಸಾವಿಗಿಚಿತ, ವಾಯುಮಾಲಿನ್ಯದಿಂದಾಗಿ ಸಂಭವಿಸುವ ಸಾವುಗಳೇ ಅಧಿಕ. ಇದು ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು. ೨೦೦೫ರ ಪರಿಸರ ಏಜೆನ್ಸಿ ವರದಿಯೊಂದರ ಪ್ರಕಾರ, ಪ್ರತಿ ವರ್ಷ ಯುರೋಪ್ ಒಂದರಲ್ಲೇ ೩ ಲಕ್ಷ ೧೦ ಸಾವಿರ ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ಭಾರತದಲ್ಲಿ ಈ ಪ್ರಮಾಣ ೫,೨೭,೭೦೦ ಜನ. ಪ್ರತಿ ವರ್ಷ ಜಗತ್ತಿನಾದ್ಯಂತ ೨೦
ಲಕ್ಷಕ್ಕೂ ಹೆಚ್ಚು ಜನ ವಾಯುಮಾಲಿನ್ಯದಿಂದಾಗಿ ಸಾಯ್ತಿದ್ದಾರೆ. ವಾಯುಮಾಲಿನ್ಯ ಹೇಗೆ ಕೊಲ್ತದೆ ಗೊತ್ತೆ? ವಾಹನಗಳಿಂದ ಹೂರಹಾಕಲ್ಪಡುವ ಇಂಗಾಲದ ಡೈಆಕ್ಸೈಡ್ ನೈಟ್ರರೋಜನ್ ಆಗಿ ಬದಲಾಗ್ತದೆ. ನೆಲಮಟ್ಟದಿಂದ ೩ ಅಡಿಗಳವರೆಗೆ ಇದರ ಸಾಂದ್ರತೆ ಹೆಚ್ಚು. ಚಿಕ್ಕಮಕ್ಕಳು ಈ ಮಲಿನಯುಕ್ತ ಗಾಳಿ ಉಸಿರಾಡುವುದರಿಂದ, ತೀವ್ರ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೆ ಈಡಾಗ್ತಾರೆ. ಮಕ್ಕಳ ದೈಹಿಕ ಬೆಳವಣಿಗೆ ಚಿಕ್ಕ ವಯಸ್ಸಿನಲ್ಲಿಯೇ ಜೋರಾಗಿರ್‍ತದೆ. ಆದರೆ, ನೆಲ ಮಟ್ಟದ ೩ ಅಡಿ ಎತ್ತರ ದಾಟಿ ಬರುವಷ್ಟರಲ್ಲಿ, ಅವರಲ್ಲಿನ ಜೀವಕೋಶಗಳು ಹಾಗೂ ಹಾರ್‍ಮೋನ್‌ಗಳ ಸ್ರವಿಕೆ ಹಾನಿಗೊಳಗಾಗಿರುತ್ವೆ. ಹೀಗಾಗಿ, ವಯಸ್ಕರಲ್ಲಿ ಕಾಣಿಸಿಕೊಳ್ಳುವ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಮಕ್ಕಳು ತುತ್ತಾಗ್ತಾರೆ. ಬೆಂಗಳೂರಿನ ಟ್ರಾಫಿಕ್ ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ವಾಯುಮಾಲಿನ್ಯವಿದೆ. ಅದರಲ್ಲೂ ವಿಕ್ಟೋರಿಯಾ ಆಸ್ಪತ್ರೆ, ಆನಂದರಾವ್ ಸರ್ಕಲ್, ಸಿಟಿ ರ್ಮಾಕೆಟ್‌ನಂಥ ಬಹುತೇಕ ಪ್ರದೇಶಗಳಲ್ಲಿ ನೈಟ್ರೋಜನ್ ಪ್ರಮಾಣ ನಿಗದಿತ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಾಗಿರ್‍ತದೆ. ಟ್ರಾಫಿಕ್ ಜಾಮ್ ಉಂಟಾದಾಗಲಂತೂ ವಾಯುಮಾಲಿನ್ಯ ಸಮಸ್ಯೆ ವಿಪರೀತ.

ವಾಯುಮಾಲಿನ್ಯಕ್ಕೆ ಕಾರಣವಾಗುವ ಅನಿಲಗಳಿಂದ ಬರುವ ರೋಗಗಳ ಪಟ್ಟಿ ದೊಡ್ಡದು ಹಾಗೂ ಅಪಾಯಕಾರಿ. ಸಲ್ಫರ್ ಡೈಆಕ್ಸೈಡ್‌ನಿಂದ ಆಸ್ತಮಾದಂಥ ಪುಪ್ಫುಸ ಸಂಬಂಧಿ ರೋಗಗಳು ಬರ್‍ತವೆ. ಆಕ್ಸೈಡ್ ಆಫ್ ನೈಟ್ರೋಜನ್ ಗಾಳಿಯಲ್ಲಿ ಸೇರಿದಾಗ ವಿಷಕಾರಿ ಅನಿಲವಾಗಿ ಮಾರ್ಪಡುತ್ತದೆ. ಇದು ಪರಿಸರದ ಮೇಲೆ ಬೀರುವ ದುಷ್ಪರಿಣಾಮ ಅಷ್ಟಿಷ್ಟಲ್ಲ. ಈ ಕಾರಣದಿಂದಾಗಿಯೇ ಆಮ್ಲ ಮಳೆಯಾಗುತ್ತದೆ. ಇದು ಮನುಷ್ಯನ ಗಂಟಲು ಹಾಗೂ ಮೂಗಿಗೆ ಕಿರಿಕಿರಿ ಉಂಟುಮಾಡುತ್ತದೆ. ಧೂಳಿನ ಕಣಗಳಿಂದಾಗಿ ಹೃದಯ ಬಡಿತ ಏರುಪೇರಾಗ್ತದೆ. ಶ್ವಾಸಕೋಶ ತೊಂದರೆ ತಲೆದೋರುವುದಲ್ಲದೇ ಹೃದಯಾಘಾತಕ್ಕೂ ಕಾರಣವಾಗ್ತದೆ. ಕಣ್ಣು ಉರಿ, ತಲೆ ನೋವು, ಚiಸಂಬಂಧಿ ಸಮಸ್ಯೆಗಳಿಗೆ ಕಾರಣ ಗಾಳಿಯಲ್ಲಿನ ಬೆಂಝೀನ್.
ವಾಯುಮಾಲಿನ್ಯದ ದುಷ್ಪರಿಣಾಮಗಳ ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ. ಎಲ್ಲ್ಲ ರೀತಿಯ ಮಾಲಿನ್ಯಗಳಿಗೆ ಮನುಷ್ಯನೆ ಕಾರಣನಾಗಿದ್ದರಿಂದ, ಪರಿಹಾರವೂ ನಮ್ಮಿಂದಲೇ ಶುರುವಾಗಬೇಕಿದೆ. ಸರ್ಕಾರವೇ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ, ಮಾಲಿನ್ಯ ನಿಯಂತ್ರಣಕ್ಕೆ ನಾವು ವೈಯಕ್ತಿಕ ಮಟ್ಟದಲ್ಲೇ ಪ್ರಯತ್ನಗಳನ್ನು ಮಾಡಬೇಕಿದೆ.
ಓಡಾಟಕ್ಕೆ ಸಾಧ್ಯವಾದಷ್ಟೂ ಸಾರ್ವಜನಿಕ ವಾಹನಗಳನ್ನೇ ಬಳಸುವುದು; ೨ ಸ್ಟ್ರೋಕ್ ವಾಹನಗಳ ಬದಲಿಗೆ ೪ ಸ್ಟ್ರೋಕ್ ವಾಹನಗಳ ಬಳಕೆ; ವಾಹನಳಿಂದ ಹೆಚ್ಚು ಹೂಗೆ ಬಾರದಂತೆ ನೋಡಿಕೊಳ್ಳುವುದು; ಚಿಕ್ಕಮಕ್ಕಳಿರುವ ಶಾಲೆ, ಆಸ್ಪತ್ರೆ ಹಾಗೂ ವಾಸಸ್ಥಳಗಳ ಸುತ್ತಮುತ್ತ ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳುವುದು ಕೆಲ ಮುಖ್ಯ ಪರಿಹಾರ ಮಾರ್ಗಗಳು. ಎಲ್ಲಕ್ಕಿಂತ ಹೆಚ್ಚಾಗಿ ಪರಿಸರವನ್ನು ಸದಾ ಹಸಿರಾಗಿಡಲು ನಾವೆಲ್ಲ ಪ್ರಯತ್ನಿಸಬೇಕು. ಏಕೆಂದರೆ, ಮರಗಿಡಗಳು ಗಾಳಿಯಲ್ಲಿನ ಇಂಗಾಲದ ಡೈಆಕ್ಸೈಡ್‌ಗಳನ್ನು ಹೀರಿಕೊಂಡು ನಮಗೆ ಅವಶ್ಯವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ನಮಗೆ ಅಗತ್ಯವಲ್ಲದ ವಸ್ತುಗಳ ಬಳಕೆ ಕಡಿಮೆ ಮಾಡುವುದು, ಪರಿಸರಸ್ನೇಹಿ ವಸ್ತುಗಳನ್ನೇ ಹೆಚ್ಚು ಬಳಸುವುದು ಕೂಡ ಎಲ್ಲ ರೀತಿಯ ಮಾಲಿನ್ಯವನ್ನು ನಿಯಂತ್ರಿಸಬಲ್ಲುದು.
ನಾವೆಲ್ಲ ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು. ಹಾಗೇನೇ, ಉಸಿರಾಡುವ ಗಾಳಿಯೂ ಒಂದೇ. ಯಾವುದನ್ನ ಪ್ರಾಣವಾಯು ಅಂತ ಹೇಳುತ್ತೇವೆಯೋ, ಅದನ್ನೇ ಮಲಿನಗೊಳಿಸಿದರೆ, ಎಲ್ಲರ ಜೀವಕ್ಕೂ ಆಪತ್ತು ತಪ್ಪಿದ್ದಲ್ಲ. ಅಂಥ ತಪ್ಪನ್ನು ನಾವ್ಯಾರೂ ಮಾಡದಿರೋಣ. ಹಸಿರುಪ್ರೀತಿಯನ್ನು ಬೆಳೆಸಿಕೊಳ್ಳೋಣ ಅಂತ ಆಶಿಸ್ತಾತ್ತೆನೆ.

Wednesday, 1 December 2010

ಮಲೀನ ನೀರು


ಮಲಿನ ನೀರು, ಜೀವ ದ್ರವ್ಯ ವಿಷವಾಗತ್ತಿದೆ.

ಭೂಮಿಯ ಮೊದಲ ಜೀವ ನೀರಿನಲ್ಲಿ ಹುಟ್ಟಿತು. ಜೀವಜಗತ್ತಿನ ಉಳಿವಿಗೆ ನೀರೇ ಮುಖ್ಯ ಆಧಾರ. ಆದರೆ, ಇಂಥ ಜೀವದಾಯಿನಿ ನೀರು ಈಗ ಜೀವ ತೆಗೆಯುವ ಸಾಧನವಾಗುತ್ತಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ೩೦ ಲಕ್ಷ ಜನ ಕಲುಷಿತ ನೀರಿನಿಂದ ಸಾಯುತ್ತಿದ್ದಾರೆ. ಬದುಕಿನ ಮೂಲ ಅವಶ್ಯಕತೆಯಾದ ನೀರು ಮಲಿನಗೊಳ್ಳಲು ಕಾರಣಗಳೇನು? ಇದಕ್ಕೇನು ಪರಿಹಾರ?
ನೀರು ಸಕಲ ಜೀವ ಸಂಕುಲಕ್ಕೆ ಆಧಾರ. ನೀರಿಲ್ಲದೆ ಯಾವ ಜೀವಿಯು ಬದುಕಲಾರದು. ನಾಗರಿಕತೆ ಹುಟ್ಟಿ ಬೆಳೆದಿದ್ದೇ ಜಲಮೂಲಗಳ ಸುತ್ತ. ಪ್ರತಿಯೊಂದು ನಾಗರಿಕತೆಯೂ ನೀರನ್ನು ದೇವರೆಂದು ಪೂಜಿಸಿವೆ. ಗೌರವಾನ್ವಿತ ಸ್ಥಾನ ನೀಡಿವೆ. ಬದುಕಲು ಬೇಕಾದಂತೆ ನಮ್ಮ ನಿತ್ಯದ ಅವಶ್ಯಕತೆಗಳಿಗೂ ನೀರು ಅವಶ್ಯ. ಅಡುಗೆಗೆ, ಸ್ನಾನಕ್ಕೆ, ಸ್ವಚ್ಛತೆಗೆ, ಕೃಷಿಗೆ ಅಷ್ಟೇ ಅಲ್ಲ, ಬಹುತೇಕ ಉದ್ಯಮಗಳಿಗೂ ನೀರು ಬೇಕು. ಹೀಗಾಗಿ, ನೀರು ಮೂಲಭೂತ ಅವಶ್ಯಕತೆ.
ಭೂಮಿ ಕೂಡ ನೀರಿನಿಂದ ಸಮೃದ್ಧ. ಜಗತ್ತಿನ ೭೯ ಭಾಗ ನೀರಿನಿಂದ ಆವೃತವಾಗಿದ್ದು, ಅದರಲ್ಲಿ ಶೇಕಡಾ ೯೭.೨ ಭಾಗ ಸಮುದ್ರದಲ್ಲಿರುವ ಉಪ್ಪು ನೀರು. ಬಳಕೆಗೆ ಯೋಗ್ಯವಾದ ಶೇಕಡಾ ೩ ಭಾಗ. ಇದರಲ್ಲಿ ಭೂಮೇಲ್ಭಾಗದಲ್ಲಿರುವ ನೀರಿನ ಪ್ರಮಾಣ ಶೇಕಡಾ ೨.೫೯. ಇದರ ಪೈಕಿ ಶೇಕಡಾ ೧.೭೯ ಭಾಗ ಹಿಮಗಡ್ಡೆಗಳ ರೂಪದಲ್ಲಿದೆ.
ವಿಜ್ಞಾನಿಗಳು ಏನೆಲ್ಲ ಸಂಶೋಧನೆಗಳನ್ನು ಮಾಡಿದ್ದಾರೆ. ಬದುಕಿನ ಮಟ್ಟ ಏರಿಸಿದ್ದಾರೆ. ಆದರೆ, ನೀರಿಗೆ ಪರ್ಯಾಯ ಕಂಡುಹಿಡಿಯಲು ಆಗಿಲ್ಲ. ಹೀಗಾಗಿ ಅದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳೋದು ಅನಿವಾರ್ಯ.
ಮಾನವನಿಗೆ ಬದುಕಲು ಗಾಳಿಯಷ್ಟೇ ಅವಶ್ಯಕ ನೀರು. ನಮ್ಮ ದೇಹದ ಶೇಕಡಾ ೭೦ ಭಾಗ ನೀರಿನಿಂದ ಕೂಡಿದೆ. ಅಂದರೆ, ಆರೋಗ್ಯವಂತ ಮನುಷ್ಯನ ದೇಹದಲ್ಲಿ ಸುಮಾರು ೪೨ ಲೀಟರ್ ನೀರಿರುತ್ತದೆ. ಇದರಲ್ಲಿ ಕೇವಲ ೨.೭ ಲೀಟರ್ ನೀರಿನ ಕೊರತೆಯಾದರೂ ಡಿಹೈಡ್ರೇಶನ್ ಆಗುತ್ತದೆ. ವ್ಯಕ್ತಿ ಅಸ್ವಸ್ಥನಾಗುತ್ತಾನೆ. ಅಸಮಾಧಾನ, ಸುಸ್ತು ತಲೆದೋರುತ್ತದೆ. ಕಣ್ಣ ಸುತ್ತಲಿನ ಭಾಗ ಕಪ್ಪುಗಟ್ಟುತ್ತದೆ. ತಲೆನೋವಿನಿಂದ ವ್ಯಕ್ತಿ ಬಳಲತೊಡಗುತ್ತಾನೆ. ನಿತ್ಯ ಕನಿಷ್ಠ ಎಂಟು ಗ್ಲಾಸ್ ಅಥವಾ ೨ ಲೀಟರ್ ನೀರು ಕುಡಿಯುವುದರಿಂದ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಇದು ದೇಹದ ಅವಶ್ಯಕತೆಗಾಯ್ತು. ನಿತ್ಯದ ಬಳಕೆಗೆ ಎಷ್ಟು ಲೀಟರ್ ನೀರು ಬೇಕು? ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ದಿನದಲ್ಲಿ ಬಳಸುವ ನೀರಿನ ಪ್ರಮಾಣ ೧೬೮ ಲೀಟರ್‌ನಷ್ಟು. ಯುರೋಪ್‌ನಲ್ಲಿ ೧೩೫ ಲೀಟರ್. ಭಾರತದಲ್ಲಿ ನಿತ್ಯ ಬಳಕೆಯ ನೀರಿನ ಪ್ರಮಾಣ ಸರಾಸರಿ ೧೦೦ ಲೀಟರ್. ಆದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಾಗ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರಪಂಚದಾದ್ಯಂತ ೧೦ ಲಕ್ಷ ಜನ ಶುದ್ಧ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದಾರೆ. ಪ್ರತಿ ೮ ನಿಮಿಷಕ್ಕೆ ೧ ಮಗು ಜೀವ ಕಳೆದುಕೊಳ್ಳುವುದು ಕಲುಷಿತ ನೀರಿನಿಂದ. ಇದಕ್ಕೆ ಕಾರಣ ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ವಾಹನಗಳ ಸ್ವಚ್ಛತೆಗೆ ಕುಡಿಯುವ ನೀರನ್ನೇ ಬಳಸುತ್ತಿರುವುದು.
ಭಾರತದಲ್ಲಿ ಲಭ್ಯವಿರುವ ಅಂತರ್ಜಲದಲ್ಲಿ ಶೇಕಡಾ ೬೦ರಷ್ಟು ವ್ಯವಸಾಯಕ್ಕೇ ಬಳಕೆಯಾಗ್ತದೆ. ಉಳಿದಿದ್ದು ಮನುಷ್ಯನ ಬಳಕೆಗೆ. ಆದರೆ, ಮರುಪೂರಣ ವ್ಯವಸ್ಥೆ ಮಳೆಯನ್ನೇ ಅವಲಂಬಿಸಿರುವ ನಮ್ಮ ದೇಶದಲ್ಲಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದರ ನೇರ ಪರಿಣಾಮವಾಗ್ತಿರೋದು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಮೇಲೆ.
ಕರ್ನಾಟಕದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ರಾಜ್ಯದಲ್ಲಿರುವ ಒಟ್ಟು ೨೦೮ ಸ್ಥಳಿಯ ಸಂಸ್ಥೆಗಳ ಪೈಕಿ ೪೧ ಸಂಸ್ಥೆಗಳು ಸಂಪೂರ್ಣವಾಗಿ ಅವಲಂಬಿಸಿರೋದು ಅಂತರ್ಜಲವನ್ನ. ಭಾರತದಲ್ಲಿ ಇಂದಿಗೂ ೧೧.೮ ಕೋಟಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದು ಪರಿಸ್ಥಿತಿಯ ಗಂಭೀರತೆಗೆ ನಿದರ್ಶನ.
ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ಹಾಗೂ ಸೂಕ್ತ ಮರುಪೂರಣ ವ್ಯವಸ್ಥೆ ಇಲ್ಲದ್ದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಶೇಕಡಾ ೬೦ರಷ್ಟು ಅಂತರ್ಜಲ ವ್ಯವಸಾಯಕ್ಕೆ ಬಳಕೆಯಾಗ್ತಿರೋದ್ರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ, ನಗರ ಪ್ರದೇಶದಲ್ಲಿಯೂ ಇದು ದೊಡ್ಡ ಸಮಸ್ಯೆ.

ಮಹಾನಗರಗಳು ಕೂಡ ನೀರಿನ ಸಮಸ್ಯೆಯಿಂದ ಮುಕ್ತವಾಗಿಲ್ಲ. ರಾಜಧಾನಿ ಬೆಂಗಳೂರು ಈಗ ೧೯೮ ವಾಡ್ಗಳ ಬೃಹತ್ ಮಹಾನಗರ ಪಾಲಿಕೆ. ಕಾವೇರಿ ನದಿಯನ್ನೇ ಅವಲಂಬಿಸಿರುವ ಬೆಂಗಳೂರಿನ ನೀರಿನ ದಾಹ ಸುಲಭವಾಗಿ ತೀರುವಂಥದಲ್ಲ. ಇಂಥದೇ ಪರಿಸ್ಥಿತಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಲ್ಲೂ ಇದೆ. ಧಾರವಾಡ, ಹುಬ್ಬಳ್ಳಿ ಉದಾಹರಣೆ ತೆಗೆದುಕೊಳ್ಳುವುದಾದರೆ ಅಲ್ಲಿ ನೂತನವಾಗಿ ೬೧ ಹೊಸ ವಲಯಗಳು, ವಸತಿ ಸಂಕೀರ್ಣಗಳು ನಿರ್ಮಾಣವಾಗಿವೆ. ಆದರೆ ಇಂದಿಗೂ ಹೊಸ ಜನವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲ. ೨೦೦೭ರಲ್ಲಿನ ಅಧ್ಯಯನ ಒಂದರ ಅಂಕಿ-ಅಂಶಗಳ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ೧೧ ಸಾವಿರ ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ೨೦೦೯ಕ್ಕೆ ಇವುಗಳ ಸಂಖ್ಯೆ ೨೫% ಏರಿಕೆ ಕಂಡಿದೆ.
ಒಂದೆಡೆ ನಾವು ಭೂಮಿ ಬಗೆದು ನೀರು ತೆಗೆಯುತ್ತಿದ್ದೆವೆ. ಇನ್ನೊಂದೆಡೆ ಔದ್ಯೋಗಿಕ ರಂಗದ ಕ್ರಾತಿಯ ಹೆಸರಿನಲ್ಲಿ, ಇರುವ ನೀರನ್ನು ದಿನದಿಂದ ದಿನಕ್ಕೆ ಮಲಿನಗೊಳಿಸುತ್ತಾ ನಡೆದಿದ್ದೇವೆ. ಭಾರತದಲ್ಲಿ ೧೧.೮ ಕೋಟಿ ಕುಟುಂಬಗಳು ಇಂದಿಗೂ ಶುದ್ಧ ಕುಡಿಯುವ ನೀರಿಲ್ಲದೇ ಬದುಕುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾದರೆ ಅಚ್ಚರಿಯಿಲ್ಲ.
ಮನುಷ್ಯ ನಡೆಯುವ ದಾರಿಯಲ್ಲಿ ಹುಲ್ಲು ಕೂಡ ಬೆಳೆಯಲ್ಲ. ಇದರರ್ಥ: ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಪ್ರಮಾಣದಲ್ಲೇ ಹಾನಿಯನ್ನೂ ಮಾಡುತ್ತಾನೆ ಮನುಷ್ಯ. ಹಾಗಾದ್ರೆ, ಜೀವಜಲ ನೀರು ಮಾಲಿನ್ಯವಾಗ್ತಿರೋದಾದ್ರೂ ಹೇಗೆ?
ನೀರು ಎರಡು ರೀತಿಯಲ್ಲಿ ಮಾಲಿನ್ಯಕ್ಕೊಳಗಾಗುತ್ತೆ. ಅಂತರ್ಜಲದಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗೋದ್ರಿಂದ ಹಾಗೂ ಕೈಗಾರಿಕೆಗಳು ಹಾಗೂ ಮನುಷ್ಯನ ನಿತ್ಯ ಬಳಕೆಯಿಂದ ಬರುವ ತ್ಯಾಜ್ಯದಿಂದ.
ಶೇಕಡಾ ೮೦ ಪ್ರಮಾಣ ನೀರು ಮಾಲಿನ್ಯವಾಗಲು ಕೊಳಚೆ ನೀರು ಮುಖ್ಯ ಕಾರಣ. ಮನುಷ್ಯನ ಬಳಕೆಯಿಂದ ಹೊರಬರುವ ತ್ಯಾಜ್ಯ ನೀರಿನಲ್ಲಿ ಡಿಟರ್ಜೆಂಟ್ ಮಿಶ್ರಿತ ರಾಸಾಯನಿಕ ಅಂಶ ಸೇರಿಕೊಂಡಿರುತ್ತೆ. ಇದರ ಜೊತೆಗೆ, ಘನ ತ್ಯಾಜ್ಯಗಳೂ ಸೇರಿಕೊಂಡು ಸಮುದ್ರ ಹಾಗೂ ನದಿ ನೀರನ್ನ ಮಲಿನಗೊಳಿಸುತ್ವೆ.
ಪ್ರತಿ ವರ್ಷ ಸುಮಾರು ೮೦ ಲಕ್ಷ ಟನ್ ಕರಗದ ಪ್ಲಾಸ್ಟಿಕ್ ತ್ಯಾಜ್ಯ ಸಮುದ್ರ ಸೇರುತ್ತಿದೆ. ಇನ್ನು ಕೊಳಚೆ ನೀರಿನಲ್ಲಿ ಸೇರಿರುವ ಬಣ್ಣ, ಮಸಿ, ತೈಲದಂಥ ವಸ್ತುಗಳು ನೀರಿನಲ್ಲಿ ಕರಗದ್ದರಿಂದ ಜಲಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ.
ವ್ಯವಸಾಯವೂ ನೀರಿನ ಮಾಲಿನ್ಯ ಹೆಚ್ಚಿಸುತ್ತಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆಧುನಿಕ ವ್ಯವಸಾಯ ಪದ್ಧತಿಯ ಹೆಸರಿನಲ್ಲಿ, ಹೆಚ್ಚು ಇಳುವರಿ ಆಸೆಯಿಂದ ಹೆಚ್ಚೆಚ್ಚು ರಾಸಾಯನಿಕಗಳ ಬಳಕೆಯಾಗ್ತಿದೆ. ಇವುಗಳಲ್ಲಿರೋ ನೈಟ್ರೇಟ್ ಅಂಶ ಮಣ್ಣಿನ ಮೂಲಕ ನದಿ ನೀರನ್ನ ಸೇರುತ್ತೆ. ನೀರಿನಲ್ಲಿನ ಬ್ಯಾಕ್ಟೀರಿಯಾಗಳ ವೃದ್ಧಿಗೆ ಈ ರಾಸಾಯನಿಕ ಸಹಾಯ ಮಾಡೋದ್ರಿಂದ, ಜಲಮಾಲಿನ್ಯ ತೀವ್ರವಾಗಿ ಹರಡ್ತಿದೆ.
ಇಂಥದೇ ಮಾಲಿನ್ಯ ಕೈಗಾರಿಕೆಗಳ ತ್ಯಾಜ್ಯದಿಂದ್ಲೂ ಆಗ್ತಿದೆ. ಒಂದು ಅಧ್ಯಯನದ ಪ್ರಕಾರ ೨ನೇ ಮಹಾಯುದ್ಧದ ನಂತರದ ದಿನಗಳಲ್ಲಿ ಪ್ರಾರಂಭವಾದ ಕೆಮಿಕಲ್ ಕ್ರಾಂತಿ ಇದಕ್ಕೆ ಮುಖ್ಯ ಕಾರಣ. ಜಗತ್ತಿನಾದ್ಯಂತ ಹರಡಿರುವ ಕಾರ್ಖಾನೆಗಳಲ್ಲಿ ೧೨ ಸಾವಿರ ವಿಭಿನ್ನ ರೀತಿಯ ವಿಷಕಾರಿ ರಾಸಾಯನಿಕಗಳನ್ನು ಬಳಸ್ತಿದ್ದಾರೆ. ಇದಲ್ಲದೇ ಪ್ರತಿ ವರ್ಷ ೫೦೦ಕ್ಕೊ ಹೆಚ್ಚು ರಸಾಯನಿಕಗಳ ಸಂಶೋಧನೆಯಾಗ್ತಿದೆ. ಇವುಗಳ ಪೈಕಿ ಜನರಿಗೆ ಗೊತ್ತಿರೋದು ಕೇವಲ ಶೇಕಡಾ ೪೦ ರಸಾಯನಿಕಗಳು ಮಾತ್ರ. ಉಳಿದ ೨೦೦ ರೀತಿಯ ರಸಾಯನಿಕಗಳು ಪರೀಕ್ಷೆಗೆ ಒಳಪಡದೆ ಬಳಕೆಯಾಗ್ತಿವೆ.
ಪ್ರಪಂಚದಲ್ಲಿ ಇಂದು ೧೮,೧೦೦ ವಿಷಪೂರಿತ ಕೈಗಾರಿಕೆ ಕೊಳಚೆ ಹೊಂಡಗಳಿವೆ. ಪ್ರತಿ ವರ್ಷ ಇವುಗಳಿಂದ ಹೊರಬರುವ ವಿಷಕಾರಿ ರಾಸಾಯನಿಕ ತ್ಯಾಜ್ಯದ ಮೊತ್ತ ೪ ಸಾವಿರ ಲಕ್ಷ ಟನ್. ಸೂಕ್ತ ನಿರ್ವಹಣೆಗೆ ಒಳಪಡದ ಈ ತ್ಯಾಜ್ಯ ಕೊಳಚೆ ನೀರಿನ ಮೂಲಕ ಸಮುದ್ರ ಸೇರುತ್ತಿದೆ. ಹವಾಮಾನ ಏಜೆನ್ಸಿಯೊಂದರ ಪ್ರಕಾರ ಸುಮಾರು ೭೭೦ ಲಕ್ಷ ಟನ್ ರಾಸಾಯನಿಕ ಮಿಶ್ರಿತ ನೀರನ್ನ ಅಮೆರಿಕವೊಂದೇ ಸಮುದ್ರಕ್ಕೆ ಬಿಡ್ತಿದೆ.
ನಾವು ಬಳಸುವ ಕುಡಿಯುವ ನೀರಿನಲ್ಲಿ ಕೆಲವು ಕಡೆ ೨೦೦ಕ್ಕೊ ಹೆಚ್ಚು ರಾಸಾಯನಿಕಗಳು ಮಿಶ್ರವಾಗಿರ್ತವೆ. ೨೦೦೮ರ ಹವಾಮಾನ ಏಜೆನ್ಸಿಯೊಂದರ ವರದಿ ಪ್ರಕಾರ, ಇಂಥ ರಾಸಾಯನಿಕಗಳಿಂದ ೪ ಸಾವಿರಕ್ಕೂ ಹೆಚ್ಚಿನ ಬೇರೆ ಬೇರೆ ಕಾಯಿಲೆಗಳಿಗೆ ಜನ ಬಲಿಯಾಗ್ತಿದ್ದಾರೆ.
ಅಮೇರಿಕಾದಲ್ಲಿ ನಿತ್ಯ ೪ ಲಕ್ಷ ಕಾರ್ಖಾನೆಗಳು ಶುದ್ಧ ನೀರನ್ನು ಬಳಸಿಕೊಂಡು ಮಲಿನ ನೀರನ್ನು ಸಮುದ್ರಕ್ಕೆ ಸೇರಿಸ್ತಿವೆ. ಇಂಥ ನೀರು ಆಮ್ಲಜನಕದ ಪ್ರಮಾಣವನ್ನು ತಗ್ಗಿಸಿ ನೀರನ್ನ ಗಡಸಾಗಿಸ್ತದೆ. ಮಲಿನ ನೀರಿನ ಸೇವನೆಯಿಂದ ಕಾಲರಾ, ಟೈಫಾಯಿಡ್, ಜ್ವರ, ಮಲೇರಿಯಾ, ಪೋಲಿಯೊ, ಕಾಮಾಲೆ ಮುಂತಾದ ಗಂಭೀರ ಕಾಯಿಲೆಗಳು ಹರಡುತ್ವೆ. ಇವೆಲ್ಲಕ್ಕೂ ಮುನ್ನ ಅಪ್ಪಳಿಸೋದೇ ಅತಿಸಾರ ರೋಗ.
ಭಾರತ, ಆಫ್ರಿಕಾ, ದಕ್ಷಿಣ ಅಮೇರಿಕಾದಲ್ಲಿ ಪ್ರತಿ ವರ್ಷ ೩೦ ಲಕ್ಷ ಜನ ಅತಿಸಾರದಿಂದಾಗಿ ಸಾಯ್ತಿದ್ದಾರೆ. ಕೈಗಾರಿಕಾ ತ್ಯಾಜ್ಯವಾದ ಅಲ್ಯಮೀನಿಯಂ ಸಲ್ಫೇಟ್, ಸೀಸ ಮುಂತಾದವು ನೀರನ್ನು ಹೆಚ್ಚು ಪ್ರಮಾಣದಲ್ಲಿ ಮಲಿನಗೊಳಿಸ್ತಿವೆ. ಇಂಥ ನೀರು ಸೇವಿಸಿದರೆ ನರ ದೌರ್ಬಲ್ಯ, ಕಿಡ್ನಿ ಸಮಸ್ಯೆ ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುವಿಕೆಯಂಥ ಸಮಸ್ಯೆಗಳು ತಲೆದೋರ್ತವೆ.
ನೀರನ್ನು ಮಲಿನಗೊಳಿಸುತ್ತಿರುವ ಪ್ರಮುಖ ಕೈಗಾರಿಕೆಗಳೆಂದರೆ ಅಣುಸ್ಥಾವರ, ಸಕ್ಕರೆ ಕಾರ್ಖಾನೆ ಹಾಗೂ ಚರ್ಮ ಉತ್ಪಾದನಾ ಘಟಕಗಳು. ಅಣುಸ್ಥಾವರದಿಂದ ಬರುವ ತ್ಯಾಜ್ಯಗಳು ನೀರಿನ ಸಂಪರ್ಕಕ್ಕೆ ಬಂದಾಗ ಹೈಡ್ರೋಜನ್ ಸಲ್‌ಫೈಡ ಎನ್ನುವ ಅನಿಲವನ್ನು ಉತ್ಪತ್ತಿ ಮಾಡ್ತವೆ. ನೀರಿಗೆ ಆಗ ಕೊಳೆತ ಮೊಟ್ಟೆಯ ವಾಸನೆ ಹರಡುತ್ತದೆ. ಇಂಥ ನೀರು ಮನುಷ್ಯನಿಗಷ್ಟೇ ಅಲ್ಲ, ಪರಿಸರಕ್ಕೂ ಅಪಾಯಕಾರಿ.
ವಸುಂಧರೆಯ ಪುಸ್ತಕದಲ್ಲಿ ಆದಾಯ ಮತ್ತು ಖರ್ಚಿನ ಲೆಕ್ಕ ಸಮನಾಗಲೇಬೇಕು. ಬಳಕೆಯಾದ ನೀರನ್ನ ಹೆಚ್ಚು ಮಲಿನಗೊಳಿಸದೇ ಮರಳಿ ಬಿಡುವುದು ನಮ್ಮೆಲ್ಲರ ಹೊಣೆ.

Tuesday, 30 November 2010

ಅರಿವೇ ಬದಲಾವಣೆಗೆ ದಾರಿ




ಇ-ವೇಸ್ಟ್.
ಈ ಭೂಮಿ ನಮ್ಮ ಮನೆ. ನಾವೆಲ್ಲ ವಸುಂಧರೆಯ ಮಕ್ಕಳು. ಆದರೆ, ಪ್ರಗತಿಯ ಹೆಸರಿನಲ್ಲಿ ನಾವು ಮಾಡುತ್ತಿರುವುದು ಪರಿಸರ ನಾಶ. ಇದರಿಂದ ಭೂಮಿ ತಲ್ಲಣಿಸುತ್ತಿದ್ದು, ಬದುಕು ಏರುಪೇರಾಗುತ್ತಿದೆ. ಮಾತೇ ಆಡದ ನಿಸರ್ಗ ತನ್ನನ್ನು ತಾನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೆ ಅನ್ನೋದನ್ನ ಗಮನಿಸಿದ್ದೀರಾ? ಅದರ ಪಾಡಿಗೆ ಅದನ್ನು ಬಿಟ್ಟರೆ ಭೂಮಿ ಹಸಿರಿನ ಉಡುಗೆ ತೊಡ್ತದೆ. ನದಿಗಳು ಸ್ವಚ್ಛವಾಗ್ತವೆ. ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಇರ್ತವೆ. ಆದ್ರೆ, ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ನಿಸರ್ಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡ್ತಾನೆ. ಜೈವಿಕ ಸಮತೋಲನ ಹದಗೆಡಿಸ್ತಾನೆ. ಅದಕ್ಕೆ ಲೇಟೆಸ್ಟ್ ಕೊಡುಗೆ ಅಂದ್ರೆ ಇ-ವೇಸ್ಟ್. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಮಾಡಿದ ಅನಾಚಾರದ ವಿಕೃತ ರೂಪ. ಯಾವುದನ್ನ ನಾವು ಪ್ರಗತಿ ಅಂತೀವೋ ಅದು ಕೊನೆಗೆ ಪ್ರಕೃತಿಯ ಮಡಿಲು ಸೇರೋದು ಬೆಡದ ವಸ್ತುವಾಗಿ( ಕಸವಾಗಿ)
ಅಭಿವೃದ್ಧಿಯ ಹೆಸರಿನಲ್ಲಿ ಹೊಸ ಹೊಸ ವಸ್ತುಗಳು ಸಂಶೋಧನೆಯಾಗ್ತಿವೆ. ದೊಡ್ಡ ಪ್ರಮಾಣದಲ್ಲಿ ಅವನ್ನು ಉತ್ಪಾದಿಸ್ತೇವೆ. ಒಂದಷ್ಟು ಕಾಲ ಅವನ್ನು ಬಳಸ್ತೇವೆ. ಅಷ್ಟರಲ್ಲಿ ಸುಧಾರಿತ ಉತ್ಪನ್ನ ಮಾರ್ಕೆಟ್ಟಿಗೆ ಬಂದಿರ್ತದೆ ಎಂದೋ, ಅಥವಾ ಈ ವಸ್ತು ಹಳೆಯದಾಗಿದೆ ಅಂತಾನೋ ಬೀಸಾಕ್ತೀವಿ.
ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾದ ಇಂಥ ಎಲ್ಲ ವಸ್ತುಗಳು ಬಳಕೆ ಅವಧಿ ಮುಗಿದ ನಂತರ ಕಸವಾಗಿ ಬೀಡತ್ತದೆ. ಖರೀದಿಸಿ, ಬಳಸಿ, ಬೀಸಾಡಿ ಎಂಬುದು ನಾಗರಿಕತೆಯ ಹೊಸ ಮಂತ್ರ. ಆನಂತರ ಏನು ಮಾಡ್ಬೇಕು ಅನ್ನೋದು ಯಾರಿಗೂ ಗೊತ್ತಿಲ್ಲ. ಉತ್ಪಾದಿಸುವವರಾಗಲಿ, ಬಳಸುವವರಾಗಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ, ನಮ್ಮ ಹೆಮ್ಮೆಯ ವಸ್ತುಗಳು, ಉತ್ಪಾದನೆಗಳು ಕೊನೆಗೆ ತಲುಪುವ ಸ್ಥಿತಿ ಇದು. ಇವನ್ನು ಹೀಗೇ ಬಿಟ್ರೆ ಭೂಮಿ, ನೀರು ಹಾಗೂ ವಾಯುಮಂಡಲವನ್ನು ಕಲುಷಿತಗೊಳಿಸಬಲ್ಲವು. ನಾಗರಿಕತೆಗೇ ಕುತ್ತು ತರಬಲ್ವು. "ಇಟ್ಟರೆ ಸೆಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ" ಎನ್ನಲು ಇವೇನು ಸಾವಯವ ವಸ್ತುಗಳಲ್ಲ. ಹಲವಾರು ಅಪಾಯಕಾರಿ ವಸ್ತುಗಳು ಇವುಗಳ ಉತ್ಪಾದನೆಯಲ್ಲಿ ಬಳಕೆಯಾಗಿರ್ತವೆ. ಪ್ಲ್ಯಾಸ್ಟಿಕ್, ವಿಷಕಾರಿ ಲೋಹಗಳು, ರಾಸಾಯನಿಕಗಳು, ವಿಕಿರಣ ಸೂಸುವಂಥ ಸಂಯುಕ್ತಗಳು ಇರ್ತವೆ.
ಪ್ರಕೃತಿಯ ಕೆಲಸದಲ್ಲಿ ಮನುಷ್ಯ ಮಾಡುವ ಹಸ್ತಕ್ಷೇಪವೇ ನಾಗರಿಕತೆ. ಒಂದು ಹಂತದವರೆಗೆ ಪ್ರಕೃತಿ ಇದನ್ನು ಸಹಿಸುತ್ತೆ. ಹಸ್ತಕ್ಷೇಪವನ್ನು ಜೀರ್ಣಿಸಿಕೊಂಡು ಮತ್ತೆ ಎಂದಿನಂತಾಗಲು ಪ್ರಯತ್ನಿಸುತ್ತೆ. ಆದರೆ, ಮನುಷ್ಯನ ದಾಹಕ್ಕೆ ಕೊನೆ ಎಲ್ಲಿದೆ? ಇವತ್ತು ನಾಗರಿಕತೆಯ ಹೆಸರಿನಲ್ಲಿ ಮನುಷ್ಯ ಮಾಡುತ್ತಿರುವ ಅನಾಚಾರ ಈ ಸುಂದರ ಜಗತ್ತನ್ನು ದೊಡ್ಡ ಕೊಳೆಗೇರಿಯನ್ನಾಗಿ ಮಾಡ್ತಿದೆ.
ಕಂಪ್ಯೂಟರ್‌ಗಳು, ಮಾನಿಟರ್‌ಗಳು, ಕೀ ಬೋರ್ಡ್‌ಗಳು, ಸರ್ಕ್ಯೂಟ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಅವುಗಳ ಬಿಡಿ ಭಾಗಗಳು, ವೈರುಗಳು, ಗಾಜು ಮುಂತಾದವೆಲ್ಲ ಒಂದು ಸಮಯದಲ್ಲಿ ನಮ್ಮ ನಿತ್ಯಬಳಕೆಯ ವಸ್ತುಗಳೇ. ಬಳಕೆಯ ಅವಧಿ ಮುಗಿದ ನಂತರ ಇವು ಕಸದ ಪಟ್ಟಿಗೆ ಸೇರಿವೆ. ನಮ್ಮ ನಾಗರಿಕತೆಯ ಅನಿವಾರ್ಯ ಅಂಗಗಳು ಇವೆಲ್ಲ. ಈ ಉಪಕರಣಗಳಿಲ್ಲದೇ ಮನುಷ್ಯನ ನಿತ್ಯದ ಜೀವನ ನಡೆಯುವುದು ಸಾಧ್ಯವಿಲ್ಲ. ಅಷ್ಟೊಂದು ಅವಲಂಬನೆ ಈ ಉಪಕರಣಗಳ ಮೇಲಿದೆ.
ಯಂತ್ರೋಪಕರಣಗಳ ಮೇಲಿನ ಅವಲಂಬನೆ ಹೆಚ್ಚಾದಂತೆ, ಅವುಗಳ ಉತ್ಪಾದನೆಯೂ ಹೆಚ್ತಿದೆ. ಈಗ ಅಭಿವೃದ್ಧಿ ಅಂದ ಕೂಡಲೇ ಕೇಳಿಬರುವುದು ಐಟಿ ಮತ್ತು ಬಿಟಿ ಹೆಸರು. ನಮ್ಮ ದಿನಚರಿಯ ಎಲ್ಲ ಆಗುಹೋಗು ಇಂದು ಸಂಪೂರ್ಣವಾಗಿ ಅವಲಂಬಿಸಿರೋದು ಇವನ್ನೇ. ಬೆಳಿಗ್ಗೆ ಏಳಿಸುವ ಅಲಾರಾಮ್‌ನಿಂದ ಹಿಡಿದು, ರೆಡಿಯೋ, ಟಿವಿ, ಕ್ಯಾಲ್ಕುಲೇಟರ್, ಮೊಬೈಲ್, ವಾಷಿಂಗ್ ಮಷೀನ್, ಫ್ರಿಜ್, ವಿಸಿಡಿ, ಸಿಡಿ, ಕಂಪ್ಯ್ಯೂಟರ್- ಹೀಗೆ ಪ್ರತಿಯೊಂದು ವಸ್ತುವೂ ಎಲೆಕ್ಟ್ರಾನಿಕ್‌ಮಯ.ಇವುಗಳಿಂದಾಗಿ ಹೊಸ ಹೊಸ ಎಲೆಕ್ಟ್ರಾನಿಕ್ಸ್ ಉಪಕರಣಗಳ ಅವಿಷ್ಕಾರ ದಿನೇ ದಿನೇ ಹೆಚ್ಚಿದೆ.
ಹೀಗಾಗಿ, ಮಾರುಕಟ್ಟೆಗೆ ಮಾತ್ರವಲ್ಲದೆ ನಮ್ಮ ಮನೆಗೂ ಈ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರವಾಹ ಹರಿದು ಬರ್ತಿದೆ. ಇದನ್ನು ತಡೆಯುವುದಂತೂ ಅಸಾಧ್ಯ. ಜೊತೆಗೆ, ಇವುಗಳಿಂದ ಉಂಟಾಗುತ್ತಿರುವ ತ್ಯಾಜ್ಯದ ವಿಲೇವಾರಿ ಕೂಡ ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ.
ಇದರಿಂದ ಏನಾಗ್ತದೆ? ಯಾವ ವಸ್ತುಗಳು ನಮಗೆ ತೀರ ಅವಶ್ಯವೋ, ಅವು ಬಳಕೆ ಅವಧಿ ಮುಗಿದ ನಂತರ ನಮಗೆ ಬೇಡಾದ, ನಿಸರ್ಗಕ್ಕೆ ಹಾನಿಕರವಾದ ವಸ್ತುಗಳಾಗಿ ಬದಲಾಗ್ತವೆ
ಹೀಗಾಗಿ, ಇಂಥ ವಸ್ತುಗಳನ್ನು ಉತ್ಪಾದಿಸುವಾಗಿನ ಯೋಜನೆ ಅವುಗಳ ತ್ಯಾಜ್ಯ ವಿಲೇವಾರಿಗೂ ಇರಬೇಕಾಗುತ್ತೆ. ಆದರೆ, ಅಂಥ ಪ್ರಯತ್ನಗಳು ನಡೀತಿಲ್ಲ.
ನೈಸರ್ಗಿಕ ಸಂಪನ್ಮೂಲಗಳನ್ನು ಮನುಷ್ಯ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸ್ತಾ ಹೋಗ್ತಾನೆ. ಭೂಮಿ ಉಳುಮೆ ಮಾಡಿ ಬಿತ್ತುವುದು, ಹರಿಯುವ ನೀರನ್ನು ತಡೆದು ನೀರಾವರಿ ಮಾಡಿಕೊಳ್ಳೋದು, ಮರ ಕಡಿದು ಉರುವಲಿಗೆ ಬಳಸೋದು ಇಂಥ ಚಟುವಟಿಕೆಗಳು. ಇದನ್ನೆಲ್ಲ ಪ್ರಕೃತಿ ಒಂದು ಹಂತದವರೆಗೆ ಸಹಿಸಿಕೊಳ್ಳುತ್ತದೆ. ಆದರೆ, ಪುನರ್‌ಬಳಕೆಯಾಗದ ವಸ್ತುಗಳ ನಿರಂತರ ತ್ಯಾಜ್ಯ ಉತ್ಪಾದನೆ ಜೀರ್ಣಿಸಿಕೊಳ್ಳುವುದು ಪ್ರಕೃತಿಗೆ ಸಾಧ್ಯವಿಲ್ಲ. ಇಂಥ ತ್ಯಾಜ್ಯವಸ್ತುಗಳು ಅಪಾಯಕಾರಿ ರಾಸಾಯನಿಕ ವಸ್ತುಗಳ ಉತ್ಪತ್ತಿಗೆ ಕಾರಣವಾಗ್ತವೆ. ಇವನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸದಿದ್ದರೆ, ಅಪಾಯ ತಪ್ಪಿದ್ದಲ್ಲ. ಎಲೆಕ್ಟ್ರಾನಿಕ್ಸ್ ವಸ್ತುಗಳ ಸಂಶೋಧನೆ ಹಾಗೂ ಉತ್ಪಾದನೆ ನಿರಂತರವಾಗಿ ನಡೆದಿದೆ. ಭಾರತವೊಂದರಲ್ಲೇ ಪ್ರತಿ ಒಂದು ವರದಿಯ ಪ್ರಕಾರ ಕಂಪ್ಯೂಟರ್ ಬಳಕೆದಾರರು ೧೯೯೭ರಲ್ಲಿ ಪ್ರತಿ ಆರು ವರ್ಷಕೊಮ್ಮೆ ಸಿಸ್ಟಮ್ ಬದಲಾಯಿಸ್ತಿದ್ರು. ಆದ್ರೆ, ೨೦೦೫ರಲ್ಲಿ ಈ ಪ್ರಮಾಣ ಎರಡು ವರ್ಷಕ್ಕೆ ಇಳೀತು. ಈಗ ಪ್ರಪಂಚದಲ್ಲಿ ಅಂದಾಜು ೭೧೬೦ ಲಕ್ಷ ಕಂಪ್ಯೂಟರ್ ಬಳಕೆದಾರರಿದ್ದಾರೆ. ಭಾರತದಲ್ಲಿ ಈ ಪ್ರಮಾಣ ಸುಮಾರು ೮೦೦ ಲಕ್ಷ. ಬೆಂಗಳೂರೊಂದರಲ್ಲೇ ವರ್ಷಕ್ಕೆ ೧೭,೦೦೦ ಲಕ್ಷ ಸಾಫ್ಟವೇರ್ ಉಪಕರಣಗಳನ್ನ ತಯಾರಿಸುವ ಕಂಪನಿಗಳಿವೆ.ವರ್ಷ ೨೦೦ರಿಂದ ೫೦೦ ಲಕ್ಷ ಟನ್ ಎಲೆಕ್ಟ್ರಾನಿಕ್ಸ್ ತ್ಯಾಜ್ಯ ಉತ್ಪತ್ತಿಯಾಗ್ತಿದೆ. ಒಂದು ಅಧ್ಯಯನದ ಪ್ರಕಾರ ೧೮ ತಿಂಗಳಿಗೊಮ್ಮೆ ಹೊಸ ಮಾದರಿಯ ಕಂಪ್ಯೂಟರ್ ಮಾರ್ಕೆಟ್‌ಗೆ ಬರ್ತಿದೆ. ಆದೆ, ಅದೇ ಒಂದು ಹಳೆಯ ಕಂಪ್ಯೂಟರ್ ವಿಲೇವಾರಿ ಮಾಡಲು ೪ರಿಂದ ೫ ವರ್ಷಗಳೇ ಬೇಕಾಗುತ್ತೆ.
ಹೊಸ ಉಪಕರಣಗಳ ಖರೀದಿಯೂ ಭರದಿಂದ್ಲೇ ನಡೀತಿದೆ. ಮಾರ್ಕೆಟ್ನಲ್ಲಿ ಯಾವುದೇ ಹೊಸ ಫೀಚರ್‍ಸ್, ಗೆಜೆಟ್, ಮೊಬೈಲ್, ಕಂಪ್ಯೂಟರ್ ಬರೋದೇ ತಡ, ಅದನ್ನ ಕೊಳ್ಳಲು ಜನ ನುಗ್ತಾರೆ. ಹೊಸ ಪೀಳಿಗೆಯ ಈ ಉತ್ಸಾಹ ಇ-ವೇಸ್ಟ್ ಹೆಚ್ಚಳಕ್ಕೆ ಪ್ರಮುಖ ಕಾರಣ.
ಈಗ ಕಂಪ್ಯೂಟರ್ ಹಾದಿಯಲ್ಲಿ ಮೊಬೈಲ್ ಬಂದಿದೆ. ಪ್ರತಿ ೨ ವರ್ಷಕ್ಕೊಮ್ಮೆ ಮೊಬೈಲ್ ಬದಲಾಯಿಸಲಾಗ್ತಿದೆ. ಒಮ್ಮೆ ಬಳಸಿದ ಮೊಬೈಲ್‌ಗಳು ಮತ್ತೆ ಬಳಕೆಗೆ ಬರೋದು ಅಪರೂಪ. ಇಂಥ ಮೊಬೈಲ್‌ಗಳ ಜೊತೆಗೆ ಅದರ ಪೂರಕ ಉಪಕರಣಗಳೂ ಸೇರ್ತಿರೋದ್ರಿಂದ ಎಲೆಕ್ಟ್ರಾನಿಕ್ಸ್ ತ್ಯಾಜ್ಯದ ಪ್ರಮಾಣ ಸತತವಾಗಿ ಏರ್ತಿದೆ. ಅಮೇರಿಕಾ ಒಂದರಲ್ಲೇ ಸುಮಾರು ೨೦೦ ಕೋಟಿ ಮೊಬೈಲ್‌ಗಳು ಬಳಕೆಯಾಗ್ತಿವೆ. ಎಷ್ಟೋ ಜನ ೨ ಹಾಗೂ ೩ನೇ ಮೊಬೈಲ್ ಕೂಡ ಬಳಸ್ತಿದಾರೆ. ಹೀಗಾಗಿ, ಪ್ರತಿ ವರ್ಷ ಅಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣ ಸುಮಾರು ೬೦೦೦ರಿಂದ ೮೦೦೦ ಟನ್. ಭಾರತದಲ್ಲಿಯೂ ಇಂಥ ತ್ಯಾಜ್ಯದ ಪ್ರಮಾಣ ನಿಧಾನವಾಗಿ ಏರ್ತಾ ಇದೆ. ತಂತ್ರಜ್ಞಾನದ ಬಳಕೆ ಹೆಚ್ತಿರೋ ಜೊತೆಗೆ ಅದು ಉಂಟು ಮಾಡುವ ಸಮಸ್ಯೆಯ ಗಂಭೀರತೆಯೂ ಹೆಚ್ತಿದೆ. ಏಕೆಂದ್ರೆ, ಎಲೆಕ್ಟ್ರಾನಿಕ್ಸ್ ತ್ಯಾಜ್ಯ, ಅಂದ್ರೆ ಇ-ತ್ಯಾಜ್ಯದ ವಿಲೇವಾರಿ ಅಷ್ಟು ಸುಲಭವಲ್ಲ.
ಪ್ರತಿ ವರ್ಷ ಜಗತ್ತಿನಾದ್ಯಂತ ೪೦೦ ಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತೆ. ಇದರಲ್ಲಿ ಮೊಬೈಲ್ ಫೋನ್‌ಗಳದು ಸಿಂಹಪಾಲು. ಭಾರತದಲ್ಲಿ ಸದ್ಯ ೧೭೦೦ ಟನ್ ಮೊಬೈಲ್ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ.
೨೦೦೭ರಲ್ಲಿ ಜಾಗತಿಕ ಮೊಬೈಲ್ ಹ್ಯಾಂಡ್‌ಸೆಟ್‌ಗಳ ಉತ್ಪಾದನೆ ಪ್ರಮಾಣ ೧೦೦ ಕೋಟಿಗೂ ಹೆಚ್ಚು. ಆದ್ರೆ, ಈ ಪೈಕಿ ಬಹುಪಾಲು ಮೊಬೈಲ್‌ಗಳು ಕಸದ ತೊಟ್ಟಿ ಸೇರ್ತವೆ ಎಂಬುದು ಒಂದು ಅಂದಾಜು. ಇನ್ನೆರಡು ವರ್ಷ ಕಳೆದರೆ, ಸುಮಾರು ೮೦೦೦ ಟನ್ ಮೊಬೈಲ್ ತ್ಯಾಜ್ಯ ಉತ್ಪತ್ತಿಯಾಗುವ ಅಂದಾಜಿದೆ. ಇಷ್ಟೊಂದು ಪ್ರಮಾಣದ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡೋದು ಹೇಗೆ?
ಮೊಬೈಲ್, ಕಂಪ್ಯೂಟರ್‌ಗಳಷ್ಟೇ ಅಲ್ಲ, ಒಟ್ಟಾರೆ ಎಲೆಕ್ಟ್ರಾನಿಕ್ ತ್ಯಾಜ್ಯದ ಉತ್ಪಾದನೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇದರಲ್ಲಿ ಅಮೆರಿಕಾ ದೇಶದ್ದು ಸಿಂಹಪಾಲು. ಪ್ರತಿ ವರ್ಷ ಅಮೆರಿಕಾ ಒಂದೇ ೩೦ ಲಕ್ಷ ಟನ್ ಇ-ವೇಸ್ಟ್ ಉತ್ಪಾದಿಸ್ತಿದೆ.
ಅಮೆರಿಕಾದ ನಂತರ ಅತಿ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಉತ್ಪಾದಿಸ್ತಿರೋದು ಚೀನಾ. ಅದು ಪ್ರತಿ ವರ್ಷ ೨೩ ಲಕ್ಷ ಟನ್ ಇ-ತ್ಯಾಜ್ಯ ಹೊರಹಾಕ್ತಿದೆ. ಸದ್ಯಕ್ಕೆ ಭಾರತದ ಇ-ವೇಸ್ಟ್ ಕೊಡುಗೆ ವರ್ಷಕ್ಕೆ ೧.೪೫ ಲಕ್ಷ ಟನ್ ಇದೆಯಾದ್ರೂ, ಇನ್ನೆರಡು ವರ್ಷದಲ್ಲಿ ಈ ಪ್ರಮಾಣ ೮ ಲಕ್ಷ ಟನ್‌ಗೆ ಏರುವ ಸಂಭವವಿದೆ. ಒಂದು ಅಂದಾಜಿನ ಪ್ರಕಾರ, ಭಾರತದ ಇ-ವೇಸ್ಟ್ ಪ್ರತಿ ವರ್ಷ ಶೇಕಡಾ ೫೦೦ರ ಪ್ರಮಾಣದಲ್ಲಿ ಹೆಚ್ತಾ ಇದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿ.
ಸರ್ಕಾರೇತರ ಸಂಸ್ಥೆಯೊಂದರ ವರದಿಯ ಪ್ರಕಾರ, ಬೆಂಗಳೂರು ನಗರದಲ್ಲಿ ೧,೩೨೨ ಸಾಫ್ಟ್‌ವೇರ್ ಕಂಪನಿಗಳು ಹಾಗೂ ೩೬ ಹಾರ್ಡ್‌ವೇರ್ ಕಂಪನಿಗಳಿವೆ. ಇವೆಲ್ಲ ಸೇರಿ ಪ್ರತಿ ವರ್ಷ ೮೦೦೦ ಟನ್ ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಉತ್ಪಾದಿಸ್ತಿವೆ. ಆದ್ರೆ, ಈ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂಥ ಒಂದೇ ಒಂದು ಯೋಜನೆಯೂ ಇಲ್ಲ.
ಎಲೆಕ್ಟ್ರಾನಿಕ್ ತ್ಯಾಜ್ಯದ ಬಗ್ಗೆ ಇಷ್ಟೊಂದು ಧಾವಂತ ಏಕೆ ಎಂಬ ಪ್ರಶ್ನೆ ಎದುರಾಗುತ್ತೆ. ನಿಜ, ಮೇಲ್ನೋಟಕ್ಕೆ ಈ ವಸ್ತುಗಳು ಅಷ್ಟೊಂದು ಅಪಾಯಕಾರಿ ಅನ್ನಿಸಲ್ಲ. ಆದ್ರೆ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದಿದ್ರೆ, ಇವು ಪರಿಸರಕ್ಕೆ ಉಂಟು ಮಾಡುವ ಹಾನಿ ಅಷ್ಟಿಷ್ಟಲ್ಲ.
ಏಕೆಂದ್ರೆ, ಜೀವಜಗತ್ತಿಗೆ ಅಪಾಯಕಾರಿಯಾದ ಸೀಸ, ಪಾದರಸ, ಕ್ರೋಮಿಯಮ್, ಕ್ಯಾಡ್ಮಿಯಮ್, ಪಾಲಿವಿನೈಲ್ ಕ್ಲೋರೈಡ್, ಪಾಲಿಕ್ಲೋರಿನೇಟೆಡ್ ಬೈಫಿನೈಲ್ಸ್, ಡಯಾಕ್ಸಿನ್ಸ್, ಫ್ಯೂರಾನ್ಸ್, ಬ್ರೊಮೈಡ್ಸ್, ಆಂಟಿಮನಿ ಆಕ್ಸೈಡ್‌ಗಳಂಥ ಹಲವಾರು ಅಪಾಯಕಾರಿ ರಸಾಯನಿಕಗಳು ಎಲೆಕ್ಟ್ರಾನಿಕ್ ವಸ್ತುಗಳಲ್ಲಿರುತ್ವೆ. ಇವುಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತೆ.
ಎಲೆಕ್ಟ್ರಾನಿಕ್ ತ್ಯಾಜ್ಯ ಪರಿಸರ ಸೇರೋದು ಹೇಗೆ? ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಕ್ಯಾಥೋಡ್ ರೇ ಟ್ಯೂಬ್‌ಗಳು, ಪ್ರಿಂಟೆಡ್ ಬೋರ್ಡ್ ಅಸೆಂಬ್ಲಿಗಳು, ಕೆಪ್ಯಾಸಿಟರ್‌ಗಳು, ಮರ್ಕ್ಯೂರಿ ಸ್ವಿಚ್‌ಗಳು, ರಿಲೇಗಳು, ಬ್ಯಾಟರಿಗಳು ಹಾಗೂ ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇಗಳು ಫೊಟೊ ಕಾಪಿಯಿಂಗ್ ಯಂತ್ರಗಳಲ್ಲಿರುವ ಕಾರ್‍ಟ್ರಿಜ್‌ಗಳು, ಸೆಲೆನಿಯಮ್ ಡ್ರಮ್‌ಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ ಅಪಾಯ ತಪ್ಪಿದ್ದಲ್ಲ.
ಸರ್ಕ್ಯೂಟ್ ಬೋರ್ಡ್‌ಗಳಲ್ಲಿ ಸೀಸ ಮತ್ತು ಕ್ಯಾಡ್ಮಿಯಂ ಅಂಶ ಇರುತ್ತೆ. ಮಾನಿಟರ್‌ಗಳಲ್ಲಿರುವ ಕ್ಯಾಥೋಡ್ ರೇ ಟ್ಯೂಬ್‌ನಲ್ಲಿ ಸೀಸದ ಆಕ್ಸೈಡ್ ಮತ್ತು ಕ್ಯಾಡ್ಮಿಯಂ ಬಳಸಿರ್ತಾರೆ. ಸ್ವಿಚ್ ಹಾಗೂ ಸಮತಟ್ಟಾದ ಮೇಲ್ಮೈನ ಮಾನಿಟರ್‌ಗಳಲ್ಲಿ ಪಾದರಸವಿದ್ದರೆ ಕಂಪ್ಯೂಟರ್ ಬ್ಯಾಟರಿಗಳಲ್ಲಿ ಕ್ಯಾಡ್ಮಿಯಂ, ಹಳೆಯ ಕೆಪ್ಯಾಸಿಟರ್‌ಗಳು ಹಾಗೂ ಟ್ರಾನ್ಸ್‌ಫಾರಮ್‌ಗಳಲ್ಲಿ ಪಾಲಿಕ್ಲೋರಿನೇಟೆಡ್ ಬೈಫಿನೈಲ್ ಎಂಬ ರಾಸಾಯನಿಕ ಇರುತ್ತದೆ. ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಪ್ಲ್ಯಾಸ್ಟಿಕ್ ಆವರಣಗಳು, ಕೇಬಲ್‌ಗಳು ಹಾಗೂ ಪಾಲಿವಿನೈಲ್ ಕ್ಲೋರೈಡ್ ಕೇಬಲ್ ಇನ್ಸುಲೇಶನ್‌ಗಳಲ್ಲಿ ಬ್ರೋಮಿನೇಟೆಡ್ ಬೆಂಕಿ ನಿರೋಧಕಗಳಿರ್ತವೆ. ಇವನ್ನು ಸುಟ್ಟಾಗ ಅತ್ಯಂತ ವಿಷಕಾರಿಯಾದ ಅನಿಲಗಳನ್ನು ಹೊರಸೂಸುತ್ವೆ.
ಇಷ್ಟೊಂದು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ಸೂಕ್ತವಾಗಿ ಸಂಸ್ಕರಿಸದಿದ್ದರೆ ಅವು ನೀರು, ಗಾಳಿ, ಮಣ್ಣಲ್ಲಿ ಸೇರಿಕೊಳ್ಳುತ್ತವೆ. ಆಗ ಉಂಟಾಗುವ ಹಾನಿಯನ್ನು ಸುಲಭದಲ್ಲಿ ಊಹಿಸಲಾಗದು.
ಜಗತ್ತಿನ ಶೇಕಡಾ ೮೦ರಷ್ಟು ಇ-ತ್ಯಾಜ್ಯವನ್ನ ವಿಲೇವಾರಿ ಹೆಸರಿನಲ್ಲಿ ಭೂಮಿಗೆ ಹಾಕಲಾಗ್ತಿದೆ ಅಥವಾ ಸುಡಲಾಗ್ತಿದೆ. ಇದರಿಂದಾಗಿ ಅಂತರ್ಜಲ ವಿಷಪೂರಿತವಾಗುತ್ತೆ. ಇಂಥ ನೀರನ್ನ ಕುಡಿದಾಗ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟಾಗುತ್ತೆ.
ಎಲೆಕ್ಟ್ರಾನಿಕ್ ತ್ಯಾಜ್ಯವನ್ನ ಸುಡುವ ಅಥವಾ ಹೂಳುವ ಪ್ರದೇಶಗಳ ಮಕ್ಕಳ ರಕ್ತ ತಪಾಸಣೆ ನಡೆಸಿದಾಗ, ಶೇಕಡಾ ೭೦ರಷ್ಟು ಜನ ಮಕ್ಕಳ ರಕ್ತದಲ್ಲಿ ಅತಿ ಹೆಚ್ಚು ಪ್ರಮಾಣದ ಸೀಸ ಕಂಡು ಬಂದಿದೆ. ಇದು ಮೆದುಳು ಬೆಳವಣಿಗೆಯನ್ನು ಕುಂಠಿತಗೊಳಿಸುತ್ತೆ.
ಮುಂದುವರಿದ ದೇಶಗಳು ತಮ್ಮ ಇ-ತ್ಯಾಜ್ಯವನ್ನು ಭಾರತದಂಥ ದೇಶಗಳಿಗೆ ರಫ್ತು ಮಾಡ್ತಿವೆ. ಇದರಿಂದಾಗಿ, ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗ್ತಿವೆ.
ಸೂಕ್ತ ಯೋಜನೆ ಹಾಗೂ ಉತ್ತಮ ದರ್ಜೆಯ ಸಂಸ್ಕರಣ ಘಟಕಗಳ ನಿರ್ಮಾಣದಿಂದ ಮಾತ್ರ ಇ-ವೇಸ್ಟ್‌ನಿಂದಾಗುವ ಅಪಾಯ ಪ್ರಮಾಣವನ್ನು ತಗ್ಗಿಸಬಹುದು. ಇದಕ್ಕಾಗಿ ಸರ್ಕಾರ,
ಪ್ರತಿ ಜಿಲ್ಲೆಗೆ ಒಂದು ಇ-ತ್ಯಾಜ್ಯ ವಿಲೇವಾರಿ ಘಟಕ ತೆರೆಯಬೇಕು
ಇ-ತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ಕಾನೂನುಗಳನ್ನ ರಚಿಸಬೇಕು
ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಪರಿಸರಸ್ನೇಹಿ ಕಚ್ಚಾ ಪದಾರ್ಥಗಳನ್ನ ಬಳಸುವುದನ್ನು ಕಡ್ಡಾಯ ಮಾಡಬೇಕು
ಉತ್ಪಾದನೆಯಾಗುವ ಹಾಗೂ ಆಮದು-ರಫ್ತಾಗುವ ಉಪಕರಣಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಬೇಕು.
ಹೊರರಾಷ್ಟ್ರಗಳಿಂದ ಆಮದಾಗುತ್ತಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳ ಪರೀಕ್ಷೆ ಕಡ್ಡಾಯವಾಗಬೇಕು.
ಎಲೆಕ್ಟ್ರಾನಿಕ್ಸ್ ತ್ಯಾಜ್ಯವನ್ನು ಹೂಳುತ್ತಿರುವ ಪದ್ಧತಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ಜವಾಬ್ದಾರಿ ಕೇವಲ ಸರ್ಕಾರದ್ದಷ್ಟೇ ಅಲ್ಲ, ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದಕರದೂ ಹೌದು. ಅಪಾಯಕಾರಿ ವಸ್ತುಗಳ ಬಳಕೆ ನಿಲ್ಲಿಸುವುದು, ಗುಣಮಟ್ಟಕ್ಕೆ ಗಮನ, ದೀರ್ಘಕಾಲ ಬಾಳುವಂಥ ವಸ್ತುಗಳ ಉತ್ಪಾದನೆ, ಮರುಬಳಕೆ ಮೂಲಕ ಇ-ತ್ಯಾಜ್ಯ ಉತ್ಪಾದನೆ ಪ್ರಮಾಣ ತಗ್ಗಿಸಬಹುದು.
ಇದುವರೆಗೆ ಕೇವಲ ಶೇಕಡಾ ೧೮ರಿಂದ ೨೦ರಷ್ಟು ಇ-ತ್ಯಾಜ್ಯ ಮಾತ್ರ ಮರು ಬಳಕೆಯಾಗ್ತಿದೆ. ಈ ಪ್ರಮಾಣ ಸಾಕಷ್ಟು ಹೆಚ್ಚಬೇಕು. ಸೂಕ್ತ ತಿಳಿವಳಿಕೆ, ತಂತ್ರಜ್ಞಾನ ಹಾಗೂ ಕಾನೂನಿನಿಂದ ಮಾತ್ರ ಎಲೆಕ್ಟ್ರಾನಿಕ್ ತ್ಯಾಜ್ಯ ವಿಲೇವಾರಿ ಸಮಸ್ಯೆ ಹತೋಟಿಗೆ ಬರಲು ಸಾಧ್ಯ. ಅಂಥದೊಂದು ಪ್ರಯತ್ನಕ್ಕೆ ನಾವೆಲ್ಲ ಕೈ ಜೋಡಿಸೋಣ

Monday, 22 November 2010

ಮತ್ತೆ ಬರುವನು ಚಂದಿರಾ





ಮತ್ತ ಹೂಳ್ಯ ಚಂದ್ರ ಬಂದಾನ, 

ಆದರ ನೀ ಬರಲಿಲ್ಲ ನೋಡು. 

ಅವನು ನೀನ್ನ ಹಂಗ್ ,

ನೋಂದರ ಮಾಡಿನ ಸೆರಗ್ಯಿನಾಗ ಮರಿಆಗತಾನ್ .

ಆದರ ಮರತ ಬರತಾನ,

ಎಂದಿನಂಗ್ ಆದರ ನೀ ಬರಲಿಲ್ಲ ನೋಡು. 

ಮತ್ತ ಹೂಳ್ಯ ಚಂದ್ರ ಬಂದಾನ, 

ಆದರ ನೀ ಬರಲಿಲ್ಲ ನೋಡು. 

ಅವನಿದ್ದರ ರಾತ್ರಿಗೆ ರಾತ್ರಿ ಅನ್ನು ಹೆಸರು, 

ನೀ ಇದ್ದರ ಬದುಕಿಗು ಒಂದ ಅರ್ಥನೋಡು. 

ನೀಲಿ ಇಲ್ಲದ ಮುಗಲು, ನೀರ ಇಲ್ಲದ ಮೀನು, 

ನೀ ಇಲ್ಲದ ಕನಸ, ನೀ ಇಲ್ಲದ ರಾತ್ರಿ,  

ಮಲಗುದಾರ ಹ್ಯಾಂಗ್?

ಮತ್ತ ಹೂಳ್ಯ ಚಂದ್ರ ಬಂದಾನ, ಆದರ ನೀ ಬರಲಿಲ್ಲ ನೋಡು........

Tuesday, 7 September 2010

ನಾ ಹ್ಯಾಂಗ್ ಮರಿಲಿ ನಿನ್ನ


ನಾ ಹ್ಯಾಂಗ್ ಮರಿಲಿ ನೀನ್ನ,

 ಮುರಹೂತ್ತು ಮರಿಯಾಗದ ಮನಸಿನ್ ತೇರಿಮ್ಯಾಗ ಮಾರಿ ನೀಂದ ಅಯತಿ, 

ನಾ ಹ್ಯಾಂಗ್ ಮರಿಲಿ ನೀನ್ನ. 

ನೀ ನೆಡದಾಗಿನ ನಡುವಿನ ವಯ್ಯಾರ,

 ನಡ ರಾತ್ರ್ಯಾಗು ನೀದ್ದಿ ಹಾಳಗೇಡವ್ಯತಿ. 

ಹ್ಯಾಂಗರ್ ಮರಿಲಿ ನೀನ್ನ .

ನೀ ಹೆಜ್ಜಿ ಇಟ್ಟಾಗಿನ ಗೆಜ್ಜಿಸದ್ದು ,

ಕೀವ್ಯಾಗ ಹಂಗ ಅಯತಿ. 

ನಾ ಹ್ಯಾಂಗ್ ಮರಿಲಿ ನೀನ್ನ.

ನೀರ ಇಲ್ಲದ ಮೀನು, ನೀಲಿ ಇಲ್ಲದ ಮುಗಿಲು,
 
ನೀ ಇಲ್ಲದ ಬದಕು,ಎಲ್ಲಾ ಒಂದ.

ಮರತರ ಮರವು ಮರತೆನು, ನೀನನ್ನ ಅಲ್ಲ. 

ನೀನ ಹೇಳು !

ನಾ ಹ್ಯಾಂಗ್ ಮರಿಲಿನಿನ್ನ ನಾ ಹ್ಯಾಂಗ್ ಮರಿಲಿ ನೀನ್ನ.........