ಸಾಮಾಜಿಕ ಮಾಧ್ಯಮಗಳ ವ್ಯಸನ
ಕಳೆದ ದಶಕದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಶೀಲಿಸುವುದು ಮತ್ತು ಸ್ಕ್ರೋಲಿಂಗ್ ಮಾಡುವುದು ಹೆಚ್ಚು ಜನಪ್ರಿಯ ಚಟುವಟಿಕೆಯಾಗಿದೆ. ಸಾಮಾಜಿಕ ಮಾಧ್ಯಮದ ಬಹುಪಾಲು ಜನರ ಬಳಕೆಯು ಸಮಸ್ಯಾತ್ಮಕವಲ್ಲದಿದ್ದರೂ, ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಿಗೆ ವ್ಯಸನಿಯಾಗುವ ಮತ್ತು ಮಿತಿಮೀರಿದ ಅಥವಾ ಬಲವಂತದ ಬಳಕೆಯಲ್ಲಿ ತೊಡಗಿಸಿಕೊಳ್ಳುವ ಸಣ್ಣ ಶೇಕಡಾವಾರು ಬಳಕೆದಾರರಿದ್ದಾರೆ.
ವಾಸ್ತವವಾಗಿ, ಮನೋವಿಜ್ಞಾನಿಗಳ ಪ್ರಕಾರ ಅಂದಾಜು 5 ರಿಂದ 10% ಜನ ಇಂದು ಸಾಮಾಜಿಕ ಮಾಧ್ಯಮ ವ್ಯಸನದ ಮಾನದಂಡಗಳ ಅಡಿ ಬರುತ್ತಾರೆ. ಸಾಮಾಜಿಕ ಮಾಧ್ಯಮವನ್ನು ಅನಿಯಂತ್ರಿತವಾಗಿ ಬಳಸುವುದು ಮತ್ತು ಸಾಮಾಜಿಕ ಮಾಧ್ಯಮಕ್ಕೆ ಹೆಚ್ಚು ಸಮಯ ಮತ್ತು ಶ್ರಮವನ್ನು ವಿನಿಯೋಗಿಸುವುದರಿಂದ, ಜೀವನದ ಇತರ ಪ್ರಮುಖ ವಿಷಯಗಳನ್ನ ದುರ್ಬಲಗೊಳಿಸುತ್ತದೆ. ಹೀಗಾಗಿ ಈ ವ್ಯಸನವನ್ನು ವರ್ತನೆಯ ವ್ಯಸನ ಎಂದು ಕರೆಯುತ್ತಾರೆ.
ಇಂದು ನಾವು ಪ್ರಪಂಚದ ಯಾವ ಮೂಲೆಯಲ್ಲಿ ಇದ್ದರೂ, ಸಮಾಜದಲ್ಲಿ ಏನು ನಡೆಯುತ್ತಿದೆ? ಎನ್ನುವುದನ್ನು ನಮ್ಮ ಕೈಯಲ್ಲಿ ಇರುವ ಮೊಬೈಲಿಂದಲೇ ತಿಳಿದುಕೊಳ್ಳಬಹುದು. ಅಂತೆಯೇ ಮೊಬೈಲ್ ಸಹಾಯದಿಂದ ಸಾಕಷ್ಟು ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸಬಹುದು. ಬಹುತೇಕ ಜನರು ಸಾಮಾಜಿಕ ಜಾಲತಾಣದಲ್ಲಿ ನೋಡುವ ಸಾಕಷ್ಟು ಸಂಗತಿಗಳು ವ್ಯಕ್ತಿಯ ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಅವು ವ್ಯಕ್ತಿಯಲ್ಲಿ ಕೆಟ್ಟ ಚಿಂತನೆಗಳನ್ನು ಹುಟ್ಟು ಹಾಕುತ್ತದೆ.
ಸಾಮಾಜಿಕ ಮಾಧ್ಯಮಗಳು ತೋರಿಸುವ ಸಂಗತಿಗಳನ್ನು ಮೊಬೈಲ್ ಅಲ್ಲಿ ನೋಡುತ್ತಾ ವ್ಯಕ್ತಿ ಅದರ ದಾಸನಾಗುತ್ತಾನೆ. ಪದೇ ಪದೇ ಮೊಬೈಲ್ ವೀಕ್ಷಿಸುತ್ತಾ ಸಾಮಾಜಿಕ ಮಾಧ್ಯಮಗಳ ಕಡೆಗೆ ಹೆಚ್ಚು ಆಕರ್ಷಿತನಾಗುವನು. ಜೊತೆಗೆ ತನ್ನ ಜೀವನ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ನಿಷ್ಕಾಳಜಿ ತೋರುವನು. ತನ್ನ ಮಾನಸಿಕ ಶಕ್ತಿ ಹಾಗೂ ಚಿಂತನೆಗಳನ್ನು ಸಹ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲನಾಗುತ್ತಾನೆ . ಅಲ್ಲಿ ತೋರಿಸುವ ಲೈಕ್ಗಳು ಮತ್ತು ಕಾಮೆಂಟ್ಗಳು ವ್ಯಕ್ತಿಯನ್ನು ಹೆಚ್ಚು ಆಕರ್ಷಿಸುವುದು. ಮತ್ತೆ ಮತ್ತೆ ಸಾಮಾಜಿಕ ಮಾಧ್ಯಮದತ್ತ ಹಿಂತಿರುಗುವಂತೆ ಮಾಡುತ್ತವೆ.
ತಜ್ಞರು ಹೇಳುವ ಪ್ರಕಾರ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ನೋಡುವುದರಿಂದ ಸ್ವಂತ
ಜೀವನ ಮತ್ತು ಪರಿಕಲ್ಪನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ದೇಹದಲ್ಲಿ ಬಿಡುಗಡೆಯಾಗುವ ಡೋಪಮೈನ್ ಎಂಬ ಹಾರ್ಮೋನ್ ಈ ಚಟುವಟಿಕೆಯಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತದೆ ಮತ್ತು
ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ನೋಡುವಂತೆ ಪ್ರಚೋದನೆಯನ್ನು ಮಾಡುತ್ತದೆ.
ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳು ಹೇಗೆ ನಿಮ್ಮನ್ನು ಆಕರ್ಷಿಸುವುದು ಎಂದರೆ, ನೀವು ಯಾವುದೇ
ಕೆಲಸ ಮಾಡುವ ಮೊದಲು ಒಮ್ಮೆ ಮೊಬೈಲ್ ನೋಡಲು ಬಯಸುವಿರಿ. ಮೊಬೈಲ್ನಲ್ಲಿ ನಿಮ್ಮ ಇಷ್ಟದ ಮಾಧ್ಯಮಗಳನ್ನು ಒಮ್ಮೆ ಸ್ಕ್ರೋಲ್ ಮಾಡಿ ನೋಡಿದ ಮೇಲೆಯೇ ಮಾನಸಿಕವಾಗಿ ನೆಮ್ಮದಿ ದೊರೆಯುವುದು. ನಂತರ ಬೇರೆ ಕೆಲಸದ ಕಡೆಗೆ ಗಮನ ನೀಡುವಿರಿ. ಇಂತಹ ಭಾವನೆಗಳನ್ನು ನೀವು ಕೊಡಾ ಅನುಭವಿಸುತ್ತಿದ್ದೀರಿ ಎಂದಾದರೆ ಮೊದಲು ಸಾಮಾಜಿಕ ಮಾಧ್ಯಮಗಳಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಬಹಿರಂಗಪಡಿಸುವಿಕೆಯು ವ್ಯಸನಕಾರಿ ವಸ್ತುವನ್ನು ತೆಗೆದುಕೊಳ್ಳುವಾಗ ಮಿದುಳಿನ ಅದೇ ಭಾಗವನ್ನು ಬೆಳಗಿಸುತ್ತದೆ. ಮೆದುಳಿನಲ್ಲಿರುವ ಪ್ರತಿಫಲ ಪ್ರದೇಶ ಮತ್ತು ಅದರ ರಾಸಾಯನಿಕ ಸಂದೇಶವಾಹಕ ಮಾರ್ಗಗಳು ನಿರ್ಧಾರಗಳು ಮತ್ತು ಸಂವೇದನೆಗಳ ಮೇಲೆ ಪರಿಣಾಮ ಬೀರುತ್ತವೆ. ಯಾರಾದರೂ ಲಾಭದಾಯಕವಾದದ್ದನ್ನು ಅನುಭವಿಸಿದಾಗ ಅಥವಾ ವ್ಯಸನಕಾರಿ ವಸ್ತುವನ್ನು ಬಳಸಿದಾಗ, ಮೆದುಳಿನಲ್ಲಿನ ಪ್ರಮುಖ ಡೋಪಮೈನ್-ಉತ್ಪಾದಿಸುವ ಪ್ರದೇಶಗಳಲ್ಲಿನ ನ್ಯೂರಾನ್ಗಳು ಸಕ್ರಿಯಗೊಳ್ಳುತ್ತವೆ ಮತ್ತು ಡೋಪಮೈನ್ ಮಟ್ಟಗಳು ಏರುತ್ತವೆ. ಆದ್ದರಿಂದ, ಮೆದುಳು "ಬಹುಮಾನ" ಪಡೆಯುತ್ತದೆ ಮತ್ತು ಧನಾತ್ಮಕ ಬಲವರ್ಧನೆಯೊಂದಿಗೆ ಚಟುವಟಿಕೆಯನ್ನು ಸಂಯೋಜಿಸುತ್ತದೆ.
ಇದು ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಗಮನಿಸಬಹುದಾಗಿದೆ. ಒಬ್ಬ ವ್ಯಕ್ತಿಯು ಲೈಕ್ ಅಥವಾ ಉಲ್ಲೇಖದಂತಹ ಅಧಿಸೂಚನೆಯನ್ನು ಪಡೆದಾಗ, ಮೆದುಳು ಡೋಪಮೈನ್ನ ರಶ್ ಅನ್ನು ಪಡೆಯುತ್ತದೆ ಮತ್ತು ಅದನ್ನು ಪ್ರತಿಫಲ ಮಾರ್ಗಗಳಲ್ಲಿ ಕಳುಹಿಸುತ್ತದೆ, ಇದರಿಂದಾಗಿ ವ್ಯಕ್ತಿಯು ಸಂತೋಷವನ್ನು ಅನುಭವಿಸುತ್ತಾನೆ. ಸಾಮಾಜಿಕ ಮಾಧ್ಯಮವು ತುಲನಾತ್ಮಕವಾಗಿ ಕನಿಷ್ಠ ಪ್ರಯತ್ನಕ್ಕಾಗಿ ಇತರರಿಂದ ಗಮನದ ರೂಪದಲ್ಲಿ ಅಂತ್ಯವಿಲ್ಲದ ತಕ್ಷಣದ ಪ್ರತಿಫಲಗಳನ್ನು ಒದಗಿಸುತ್ತದೆ. ಈ ಧನಾತ್ಮಕ ಬಲವರ್ಧನೆಯ ಮೂಲಕ ಮೆದುಳು ತನ್ನನ್ನು ತಾನೇ ರಿವೈರ್ ಮಾಡುತ್ತದೆ, ಜನರು ಇಷ್ಟಗಳು, ರಿಟ್ವೀಟ್ಗಳು ಮತ್ತು ಎಮೋಟಿಕಾನ್ ಪ್ರತಿಕ್ರಿಯೆಗಳನ್ನು ಬಯಸುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ
3 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕಳೆಯುವ ಅಂದಾಜು 27% ಮಕ್ಕಳು ಕಳಪೆ ಮಾನಸಿಕ ಆರೋಗ್ಯದ ಲಕ್ಷಣಗಳನ್ನು
ಪ್ರದರ್ಶಿಸುತ್ತಾರೆ. ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನವು ವಾರಕ್ಕೆ ಕನಿಷ್ಠ
58 ಬಾರಿ ಯಾವುದೇ ಸಾಮಾಜಿಕ ಮಾಧ್ಯಮ ಸೈಟ್ಗೆ ಭೇಟಿ ನೀಡಿದ ವ್ಯಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವಾರಕ್ಕೆ
9 ಕ್ಕಿಂತ ಕಡಿಮೆ ಬಾರಿ ಬಳಸುವವರಿಗೆ ಹೋಲಿಸಿದರೆ ಸಾಮಾಜಿಕವಾಗಿ ಪ್ರತ್ಯೇಕತೆ ಮತ್ತು ಖಿನ್ನತೆಗೆ
ಒಳಗಾಗುವ ಸಾಧ್ಯತೆ 3 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಬರುವ ವಿಷಯ ಮತ್ತು ವಿಚಾರಗಳು ನಿಮಗೆ ಅತ್ಯಂತ ಮಹತ್ವದ್ದು ಹಾಗೂ ಅದರ ಬಗ್ಗೆ ನೀವು ಏನಾದರೂ ಪ್ರತಿಕ್ರಿಯೆ ಮಾಡಲೇ ಬೇಕು ಎನ್ನುವ ಭಾವನೆಯನ್ನು ಹೊಂದಿದ್ದರೆ. ಅದಕ್ಕಾಗಿ ಸಾಕಷ್ಟು ನಿಮ್ಮ ಸಮಯವನ್ನು ವಿನಿಯೋಗಿಸುತ್ತಿರಿ. ಹೀಗಾದಾಗ ಸಾಮಾಜಿಕ ಮತ್ತು ನೈಜ ಜೀವನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುವುದನ್ನು ನೀವು ಮರೆಯುತ್ತಿರಿ. ಅವುಗಳ ಕಾರಣದಿಂದ ನೀವು ನಿಮ್ಮ ಹಸಿವು, ದೈನಂದಿನ ಚಟುವಟಿಕೆ, ನಿಮ್ಮವರೊಂದಿಗೆ ಬೆರೆಯುವ ಸಮಯ ಎಲ್ಲವೂ ಬದಲಾಗುತ್ತದೆ. ನಿಮಗೆ ನಿಮ್ಮ ಸಾಮಾಜಿಕ ಮಾಧ್ಯಮಗಳೇ ಹೆಚ್ಚು ಮಹತ್ವವಾದುದ್ದು ಎನ್ನುವ ತಪ್ಪು ಗ್ರಹಿಕೆ ಉಂಟಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಬರುವ ಎಲ್ಲಾ ಸಂಗತಿಗಳು ನಿಜವಲ್ಲ. ಅವುಗಳಿಂದಾಗಿ ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳುಮಾಡಿಕೊಳ್ಳದಿರಿ. ಮಾನಸಿಕ ತಜ್ಞರು ಸಲಹೆ ನೀಡುವ ಪ್ರಕಾರ ನೀವು ಪದೇ ಪದೇ ಮೊಬೈಲ್ ಅಥವಾ ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸುವ ಬದಲು ಅದಕ್ಕಾಗಿ ಒಂದು ಸೀಮಿತ ಸಮಯವನ್ನು ನಿಗದಿ ಪಡಿಸಿ. ಆ ಸಮಯದಲ್ಲಿ ಮಾತ್ರ ನೋಡಿ. ಉಳಿದ ಸಮಯವನ್ನು ನಿಮ್ಮ ಇತರ ಅಗತ್ಯ ಕೆಲಸಗಳ ನಿರ್ವಹಣೆಗೆ ಬಳಸಿ. ಆಗ ಮಾಧ್ಯಮಗಳಿಗೆ ದಾಸರಾಗುವುದನ್ನು ತಡೆಯಬಹುದು. ನಿಮಗೆ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ? ಎನ್ನುವುದನ್ನು ಮೊದಲು ಪರಿಶೀಲಿಸಿ. ನಂತರ ಅದನ್ನು ಪೂರೈಸಲು ಮುಂದಾಗಿ.
ಮೊಬೈಲ್ ನೋಡುವುದರ ಮೂಲಕ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು ಆ ಸಮಯವನ್ನು ನಿಮ್ಮ ಹೊಸ ಹವ್ಯಾಸಗಳಿಗೆ ವಿನಿಯೋಗಿಸಿ. ಸಮಯ ಇದೆ ಎಂದಾಗ ಸ್ವಲ್ಪ ಸಮಯಗಳ ಕಾಲ ಧ್ಯಾನ ಮಾಡಿ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವುದು. ಜೊತೆಗೆ ಉತ್ತಮ ನಿರ್ಧಾರ ಕೈಗೊಳ್ಳುವಂತಹ ಶಕ್ತಿಯನ್ನು ಹೆಚ್ಚಿಸುವುದು. ಹೊಸ ಹೊಸ ಆಲೋಚನೆಗಳ ಮೂಲಕ ನಿಮ್ಮ ಸಾಧನೆ ಹಾಗೂ ಕೆಲಸದ ಕಡೆಗೆ ಹೆಚ್ಚು ಗಮನ ನೀಡಬಹುದು. ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ನಾವು ನಮ್ಮ ಮಾನಸಿಕ ಸ್ಥಿತಿ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ.
ಸಮುದಾಯದ ಸಾಮಾಜಿಕ ಮಾಧ್ಯಮ ವೇದಿಕೆಯಾದ
Local Circles ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ 40 ಪ್ರತಿಶತದಷ್ಟು ಭಾರತೀಯ ಪೋಷಕರು ತಮ್ಮ 9
ರಿಂದ 17 ವರ್ಷದೊಳಗಿನ ಮಕ್ಕಳು ವೀಡಿಯೊಗಳು, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಯಾಗಿದ್ದಾರೆ
ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಿಷಯದ ಗಂಭಿರತೆ ಮತ್ತು ಸಮಸ್ಯೆಯ ತಿರ್ವತೆಯನ್ನ ಯುವಸುಮುದಾಯಕ್ಕೆ
ತಿಳಿಸುವ ಅವಶ್ಯಕತೆ ಇದೆ.
No comments:
Post a Comment