Saturday, 20 May 2023

ಮತದಾನ


ಭಾರತದ ಪ್ರಜಾಪ್ರಭುತ್ವದ ಆಧಾರವು ಚುನಾವಣಾ ಫಲಿತಾಂಶಗಳನ್ನ ಆಧರಿಸಿದೆ. ನಮ್ಮ ಶಾಸಕಾಂಗಗಳು ಮತ್ತು ಸಂಸತ್ತುಗಳು ಜನರಿಂದ ಮತ್ತು ಜನರಿಗಾಗಿ ಚುನಾಯಿತವಾಗಿವೆ. ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮೆಲ್ಲರ ಅದೃಷ್ಟ. ಹೀಗಿದ್ದು ಕೂಡ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳನ್ನ ಗಮನಿಸಿದಾಗ, ಚುನಾವಣಾ ಪ್ರಕ್ರಿಯೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿ ಕಾಣುತ್ತಿದೆ. ಅದರಲ್ಲೂ ಯುವ ಸಮೂಹ ತನ್ನದೇ ಆದ ಕಾರಣಗಳಿಂದಾಗಿ ಚುನಾವಣೆಗಳಿಂದ ದೂರ ಉಳಿಯುತ್ತಿದ್ದಾರೆ.

ಕರ್ನಾಟಕದ ಜನಸಂಖ್ಯೆಯು ಸುಮಾರು ಆರು ಕೋಟಿ ಇದೆ. ಕರ್ನಾಟಕ ಚುನಾವಣಾ ಆಯೋಗದ 2018 ಪರಿಷ್ಕೃತ ಮತದಾರರ ಕರಡು ಪ್ರತಿಯ ಪ್ರಕಾರ ಮತದಾನದ ಹಕ್ಕು ಪಡೆದಿರುವವರು ಸುಮಾರು 4.9 ಕೋಟಿಯಷ್ಟುಬೆಂಗಳೂರಿನ ಜನಸಂಖ್ಯೆಯು ಸುಮಾರು 1.2ಕೋಟಿಯಷ್ಟಿದ್ದರೆ, ಇವರಲ್ಲಿ ಮತದಾನದ ಹಕ್ಕನ್ನು ಪಡೆದವರು 85,92,815 ಪ್ರಜೆಗಳು.

 2008 ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 47.22% ಮತದಾನವಾಗಿತ್ತು, 2013 ರಲ್ಲಿ 58.27% ಮತದಾನವಾಗಿತ್ತುಇದರ ಅರ್ಥ ಅರ್ಧದಷ್ಟು ಜನ ಮಾತ್ರ ತಮ್ಮ ಹಕ್ಕನ್ನ ಚಲಾಯಿಸಿದ್ದರು. ಒಂದರ್ಥದಲ್ಲಿ ಹೇಳುವುದಾದರೆ ಸರ್ಕಾರದ ನಿರ್ಮಾಣ ಮತ್ತು ನಿರ್ಧಾರಗಳಲ್ಲಿ ಇನ್ನೂ ಅರ್ಧದಷ್ಟು ಜನರ ಪಾಲುದಾರಿಕೆಯೇ ಇರಲಿಲ್ಲ.

ಗ್ರಾಮೀಣ ಪ್ರದೇಶಗಳಿಗೆ ಗಮನಿಸದರೆ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣವು ಕಡಿಮೆಯಾಗಿರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಮತದಾನದಿಂದ ದೂರ ಉಳಿಯುವವರಲ್ಲಿ ಅತಿ ದೊಡ್ಡ ಸಂಖ್ಯೆ ಯುವಕರದ್ದು ಅದರಲ್ಲೂ ಮೊದಲ ಬಾರಿ ಮತ ಚಲಾಯಿಸುವ ಯುವಕರಂತು ಬಹಳ ದೊಡ್ಡ ಸಂಖ್ಯೆಯಲ್ಲಿ ಮತದಾನದಿಂದ ದೂರ ಉಳಿಯುತ್ತಿದ್ದಾರೆ.

ಯುವಕರು ಮತದಾನದಿಂದ ದೂರ ಉಳಿಯಲು ಕೆಲವು ಕಾರಣಗಳಿವೆ. ಸಿಟಿಯಲ್ಲಿ ವಾಸಿಸುವ ಪ್ರಜೆಗಳು ಬಹಳಷ್ಟು ಮಂದಿ ವಲಸೆ ಬಂದಿರುವವರು, ಬೆಂಗಳೂರು ನಗರ ನಮಗೆ ಸೇರಿಲ್ಲ ಎಂಬ ಮನೋಭಾವ ಹೊಂದಿರುವವರು, ನನ್ನ ಒಂದು ಮತದಿಂದ ನಗರವನ್ನ ಬದಲಾವಣೆ ಮಾಡಲಾಗುವುದಿಲ್ಲ ಎಂಬ ನಿರಾಶಾವಾದ, ರಾಜಕಾರಣಿಗಳೆಲ್ಲ ಒಂದೇ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂಬ ಮನೋಭಾವ, ಹೇಟ್ ಪೋಲಿಟಿಕ್ಸ್ ಎಂಬ ನುಡಿ ಹೀಗೇ ಹಲವಾರು ಕಾರಣಗಳು.

ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತೀಯ ಸಂವಿಧಾನ ನೀಡಿರುವ ಒಂದು ಬಲವಾದ ಅಸ್ತ್ರ. ಸಮಾಜದಲ್ಲಿ ಏನೇ ಬದಲಾವಣೆ ತರಬೇಕೆಂದರು ಮುಕ್ತ ಮತದಾನದಿಂದ ಮಾತ್ರ ಸಾಧ್ಯ, ಸಂವಿಧಾನವು ಹೇಳುವ ಪ್ರಕಾರ ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಂತೆಯೇ ನಡೆಯಬೇಕು. ಪ್ರಜೆಗಳಿಗೆ ಸರಕಾರವನ್ನು ಸ್ಥಾಪಿಸುವ ಮತ್ತು ಅಧಿಕಾರದಿಂದ ಕೆಳಗಿಸುವ ಹಕ್ಕನ್ನು ಮತದಾನವು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

ಬದಲಾವಣೆಯನ್ನ ಮಾಡುವಲ್ಲಿ ನಿಮ್ಮ ಮತ ಪ್ರಮುಖ ಪಾತ್ರವನ್ನು ವಹಿಸುತ್ತದೆ ನೀವು ಪ್ರಸ್ತುತ ಸರ್ಕಾರದ ಬಗ್ಗೆ ಅತೃಪ್ತರಾಗಿದ್ದರೆ, ನೀವು ಉತ್ತಮ ಸರ್ಕಾರಕ್ಕೆ ಮತ ಹಾಕಬಹುದು. ಭವಿಷ್ಯದಲ್ಲಿ ನೀವು ಬಯಸಿದ ಸರ್ಕಾರವನ್ನ ನಿರ್ಮಿಸಬಹುದು. ನೀವು ಮತ ಚಲಾಯಿಸದೇ ಇದ್ದಾಗ, ಕಡಿಮೆ ಮತದಾನವಾದಾಗ ಅವಕಾಶವನ್ನ ಪಡೆದ ಸಮಾಜಘಾತಕ ಶಕ್ತಿಗಳು ಅಧಿಕಾರಕ್ಕೆ ಬರುವ ಅವಕಾಶವಿರುತ್ತದೆ‌. ಇಂಥವರು ಅಧಿಕಾರಕ್ಕೆ ಬಂದಾಗ ಸಮಾಜವನ್ನು ಒಡೆದು ತಮ್ಮ ಹಿತಾಸಕ್ತಿಯನ್ನ ಕಾಯ್ದುಕೊಳ್ಳುವಲ್ಲಿ ಮಗ್ನರಾಗುತ್ತಾರೆ. ಇದರಿಂದಾಗಿ ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆಗೆ ಅಪಾಯವಾಗುತ್ತದೆ. ನೀವು ಚಲಾಯಿಸುವ ಮತದಿಂದ ಆಯ್ಕೆಯಾಗಿ ಬರುವ ಶಾಸಕ ಸಂಸದರಿಗೆ ಕಾನೂನುಗಳನ್ನ ರೂಪಿಸುವ ಅಥವಾ ತಿರಸ್ಕರಿಸುವ ಹಕ್ಕನ್ನ ನೀಡುತ್ತದೆನಿಮ್ಮ ಮತವನ್ನ ಚಲಾಯಿಸಿ ಮತ್ತು ನಿಮ್ಮ ಉತ್ತಮ ಹಿತಾಸಕ್ತಿಯನ್ನು ಮನಸ್ಸಲ್ಲಿಟ್ಟುಕೊಂಡಿರುವ ಜನರನ್ನ ಆಯ್ಕೆ ಮಾಡಿ ನಿಮ್ಮ ಪ್ರೀತಿ ಪಾತ್ರರಿಗಾಗಿ ಇದನ್ನು ಮಾಡಿ ಇದರಿಂದ ಅವರು ನಿಮ್ಮ ದೃಷ್ಟಿಕೋನಗಳನ್ನ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಸುವ ವ್ಯಕ್ತಿಗಳಾಗುತ್ತಾರೆ.

ನೀವು ಆಯ್ಕೆ ಮಾಡುವ ಶಾಸಕರು ಸಂಸದರು, ನಿಮ್ಮ ಪಿಂಚಣಿ ಯೋಜನೆ, ಆರೋಗ್ಯ ಸೇವೆಗಳ ಕುರಿತಾದ ಯೋಜನೆಗಳು, ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವ ಸರ್ಕಾರದ ಯೋಜನೆಗಳ ಕುರಿತಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನೀವು ಮತ ಚಲಾಯಿಸಿ ನಿಮ್ಮ ಆಯ್ಕೆಯನ್ನ ಮಾಡಿದಾಗ ಮಾತ್ರ ನಿಮ್ಮ ಧ್ವನಿಗೂ ಒಂದು ನ್ಯಾಯ ಸಿಗುತ್ತದೆ.

ನಿಮ್ಮ ಮತದಿಂದ ಚುನಾಯಿತರಾದ ಜಿಲ್ಲಾ ಪಂಚಾಯತಿ ಸದಸ್ಯರು ತಾಲೂಕು ಪಂಚಾಯಿತಿ ಸದಸ್ಯರು ಕಾರ್ಪೊರೇಟರ್ ಗಳು ಶಾಸಕರು ಸಂಸದರು, ನಮ್ಮ ತೆರಿಗೆಗಳಿಂದ ಸಂಗ್ರಹಿಸಿದ ಹಣದಿಂದ ಸಾರ್ವಜನಿಕ ಸೇವೆಗಳಿಗೆ ಹೇಗೆ ಪಾವತಿಸಬೇಕು ಮತ್ತು ತೆರಿಗೆ ಹೊರೆಯನ್ನ ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆನಿಮ್ಮ ಮತದ ಹಕ್ಕನ್ನ ನೀವು ಚಲಾಯಿಸದೇ ಇದ್ದಾಗ ತಪ್ಪಾದ ವ್ಯಕ್ತಿ ಆಯ್ಕೆ ಆಗಿ ಬರುವ ಸಂಭವವಿರುತ್ತದೆ. ಆಗ ವ್ಯಕ್ತಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳ ಪ್ರಭಾವವನ್ನು ನೀವು ಅನುಭವಿಸಬೇಕಾಗುತ್ತದೆ.   ನಿಮ್ಮ ಮತವನ್ನ ನೀವೇ ಚಲಾಯಿಸಿ ನಿಮ್ಮ ಬದುಕನ್ನ ಪ್ರಜಾಪ್ರಭುತ್ವದಲ್ಲಿ ನೀವೇ ಕಟ್ಟಿಕೊಳ್ಳಿ.

 ನಿಮ್ಮ ಪ್ರತಿನಿಧಿಗಳಿಗೆ ಮತವನ್ನ ಚಲಾಯಿಸಿದಾಗ ಅವರು ಕನಿಷ್ಠ ವೇತನ ನೇಮಕಾತಿಯಲ್ಲಿ ನ್ಯಾಯ ಸಮ್ಮತತೆ ವೇತನ ಸಮಾನತೆ ಉದ್ಯೋಗ ಭದ್ರತೆ ಕೆಲಸದ ಸುರಕ್ಷತೆ ಮತ್ತು ನಿಮ್ಮ ಉದ್ಯೋಗ ಧಾತರು ಒದಗಿಸುವ ಆರೋಗ್ಯ ವಿಮೆಗಳ ಬಗ್ಗೆ ಪರಿಣಾಮ ಬೀರುವ ಕಾನೂನುಗಳ ಬಗ್ಗೆ ನಿರ್ಧಾರಗಳನ್ನ ತೆಗೆದುಕೊಳ್ಳಲು ಅನೂಕುಲವಾಗುತ್ತದೆ.

ಒಂದಲ್ಲ  ಇನ್ನೊಂದು ರೀತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತೆರಿಗೆಗಳನ್ನು ಪಾವತಿಸುತ್ತಾನೆ. ತೆರೆಗೆಯ ಹಣ   ಆರೋಗ್ಯ, ರಕ್ಷಣೆ, ಶಿಕ್ಷಣ  ಮತ್ತು ಸಾಮಾಜಿಕ ಸೇವೆಗಳಿಗೆ ಖರ್ಚು ಮಾಡಲಾಗುತ್ತದೆ ತೆರಿಗೆ ಹಣದ ಸದುಪಯೋಗ ಆಗುತ್ತಿದಿಯಾ? ಅಥವಾ ಇದರ ನಿರ್ವಹಣೆಯಲ್ಲಿ ಭ್ರಷ್ಟಾಚಾರ ನೇಡೆಯುತ್ತಿದೆಯಾ  ಎನ್ನುವುದರ ಬಗ್ಗೆ ನಮಗೆಲ್ಲ ಹಲವು ಪ್ರಶ್ನೇಗಳಿರುತ್ತವೆಇದಕ್ಕೆ ಉತ್ತರ ಒಂದೆ. ನಿಮ್ಮ ಮತದ ಮೂಲಕ ಸೂಕ್ತ ವ್ಯಕ್ತಿಯನ್ನ ಆಯ್ಕೆಮಾಡಿ ಭವಿಷ್ಯವನ್ನ ಭದ್ರಗೋಳಿಸ ಬೇಕು.

ಪ್ರತಿ ಮತವು ಮುಖ್ಯ. ನಿಮಗಾಗಿ ನಿಮ್ಮ ಕುಟುಂಬ ಮತ್ತು ನಿಮ್ಮ ಸಮುದಾಯಕ್ಕಾಗಿ, ನೀವು ಬಯಸುವ ಜೀವನದ ಗುಣಮಟ್ಟದ ಮೇಲೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀವು ಹೊಂದಿದ್ದೀರಿಕೈಗೆಟುಕುವ ವಸತಿ, ಆರ್ಥಿಕ ನ್ಯಾಯ, ಉದ್ಯೋಗ, ಉತ್ತಮ ಆರೋಗ್ಯ ಸೇವೆಗಳು, ಪರಿಸರ ಸಂರಕ್ಷಣೆ ಮತ್ತು ಗುಣಮಟ್ಟದ ಶಿಕ್ಷಣ ದಂತಹ ನೀವು ಕಾಳಜಿ ವಹಿಸುವ ಸಮಸ್ಯೆಗಳ ಪರವಾಗಿ ನಿಲ್ಲಲು ಮತದಾನವು ನಿಮ್ಮ ಒಂದು ಅವಕಾಶವಾಗಿದೆ. ಅದರಲ್ಲೂ ಮೂದಲ ಬಾರಿ ಮತ ಚಲಾಯಿಸಲಿರುವ ಯುವಕ ಎಲ್ಲ ವಿಷಯಗಳ ಬಗ್ಗೆ ಜಾಗೃತನಾಗಿದ್ದರೆ ದೇಶದ ಭವಿಷ್ಯವು ಭದ್ರವಾಗಿರುತ್ತದೆ. ನಿಮ್ಮ ಮತವನ್ನ ನೀವೆ ಚಲಾಯಿಸಿ ನಿಮ್ಮ ಸ್ವಾತಂತ್ಯ್ರವನ್ನು ಸಂಭ್ರಮೀಸಿ.

Friday, 28 April 2023

ಸಾಮಾಜಿಕ ಮಾಧ್ಯಮಗಳ ವ್ಯಸನ

 ಸಾಮಾಜಿಕ ಮಾಧ್ಯಮಗಳ ವ್ಯಸನ

ಕಳೆದ ದಶಕದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಪರಿಶೀಲಿಸುವುದು ಮತ್ತು ಸ್ಕ್ರೋಲಿಂಗ್ ಮಾಡುವುದು ಹೆಚ್ಚು ಜನಪ್ರಿಯ ಚಟುವಟಿಕೆಯಾಗಿದೆ. ಸಾಮಾಜಿಕ ಮಾಧ್ಯಮದ ಬಹುಪಾಲು ಜನರ ಬಳಕೆಯು ಸಮಸ್ಯಾತ್ಮಕವಲ್ಲದಿದ್ದರೂ, ಸಾಮಾಜಿಕ ನೆಟ್ವರ್ಕಿಂಗ್ ಸೈಟ್ಗಳಿಗೆ ವ್ಯಸನಿಯಾಗುವ ಮತ್ತು ಮಿತಿಮೀರಿದ ಅಥವಾ ಬಲವಂತದ ಬಳಕೆಯಲ್ಲಿ ತೊಡಗಿಸಿಕೊಳ್ಳುವ ಸಣ್ಣ ಶೇಕಡಾವಾರು ಬಳಕೆದಾರರಿದ್ದಾರೆ.

ವಾಸ್ತವವಾಗಿ, ಮನೋವಿಜ್ಞಾನಿಗಳ ಪ್ರಕಾರ ಅಂದಾಜು 5 ರಿಂದ 10%  ಜನ ಇಂದು ಸಾಮಾಜಿಕ ಮಾಧ್ಯಮ ವ್ಯಸನದ ಮಾನದಂಡಗಳ ಅಡಿ ಬರುತ್ತಾರೆ. ಸಾಮಾಜಿಕ ಮಾಧ್ಯಮವನ್ನು  ಅನಿಯಂತ್ರಿತವಾಗಿ ಬಳಸುವುದು ಮತ್ತು ಸಾಮಾಜಿಕ ಮಾಧ್ಯಮಕ್ಕೆ ಹೆಚ್ಚು ಸಮಯ ಮತ್ತು ಶ್ರಮವನ್ನು ವಿನಿಯೋಗಿಸುವುದರಿಂದ,  ಜೀವನದ ಇತರ ಪ್ರಮುಖ ವಿಷಯಗಳನ್ನ ದುರ್ಬಲಗೊಳಿಸುತ್ತದೆ.  ಹೀಗಾಗಿ ಈ ವ್ಯಸನವನ್ನು ವರ್ತನೆಯ ವ್ಯಸನ ಎಂದು ಕರೆಯುತ್ತಾರೆ.

ಇಂದು ನಾವು ಪ್ರಪಂಚದ ಯಾವ ಮೂಲೆಯಲ್ಲಿ ಇದ್ದರೂ, ಸಮಾಜದಲ್ಲಿ ಏನು ನಡೆಯುತ್ತಿದೆ? ಎನ್ನುವುದನ್ನು ನಮ್ಮ ಕೈಯಲ್ಲಿ ಇರುವ ಮೊಬೈಲಿಂದಲೇ ತಿಳಿದುಕೊಳ್ಳಬಹುದು. ಅಂತೆಯೇ ಮೊಬೈಲ್ ಸಹಾಯದಿಂದ ಸಾಕಷ್ಟು ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸಬಹುದು. ಬಹುತೇಕ ಜನರು ಸಾಮಾಜಿಕ ಜಾಲತಾಣದಲ್ಲಿ ನೋಡುವ ಸಾಕಷ್ಟು ಸಂಗತಿಗಳು ವ್ಯಕ್ತಿಯ ಮನಸ್ಸಿನ ಮೇಲೆ ಆಳವಾಗಿ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಅವು ವ್ಯಕ್ತಿಯಲ್ಲಿ ಕೆಟ್ಟ  ಚಿಂತನೆಗಳನ್ನು ಹುಟ್ಟು ಹಾಕುತ್ತದೆ.

ಸಾಮಾಜಿಕ ಮಾಧ್ಯಮಗಳು ತೋರಿಸುವ ಸಂಗತಿಗಳನ್ನು ಮೊಬೈಲ್ ಅಲ್ಲಿ ನೋಡುತ್ತಾ ವ್ಯಕ್ತಿ ಅದರ ದಾಸನಾಗುತ್ತಾನೆ. ಪದೇ ಪದೇ ಮೊಬೈಲ್ ವೀಕ್ಷಿಸುತ್ತಾ ಸಾಮಾಜಿಕ ಮಾಧ್ಯಮಗಳ ಕಡೆಗೆ ಹೆಚ್ಚು ಆಕರ್ಷಿತನಾಗುವನು. ಜೊತೆಗೆ ತನ್ನ ಜೀವನ ಹಾಗೂ ಮಾನಸಿಕ ಸ್ಥಿತಿಯ ಬಗ್ಗೆ ನಿಷ್ಕಾಳಜಿ ತೋರುವನು. ತನ್ನ ಮಾನಸಿಕ ಶಕ್ತಿ ಹಾಗೂ ಚಿಂತನೆಗಳನ್ನು ಸಹ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲನಾಗುತ್ತಾನೆ . ಅಲ್ಲಿ ತೋರಿಸುವ ಲೈಕ್ಗಳು ಮತ್ತು ಕಾಮೆಂಟ್ಗಳು ವ್ಯಕ್ತಿಯನ್ನು ಹೆಚ್ಚು ಆಕರ್ಷಿಸುವುದು. ಮತ್ತೆ ಮತ್ತೆ ಸಾಮಾಜಿಕ ಮಾಧ್ಯಮದತ್ತ ಹಿಂತಿರುಗುವಂತೆ ಮಾಡುತ್ತವೆ.

ತಜ್ಞರು ಹೇಳುವ ಪ್ರಕಾರ ಮೊಬೈಲ್  ಮತ್ತು ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ನೋಡುವುದರಿಂದ ಸ್ವಂತ  ಜೀವನ ಮತ್ತು ಪರಿಕಲ್ಪನೆಯ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆದೇಹದಲ್ಲಿ  ಬಿಡುಗಡೆಯಾಗುವ   ಡೋಪಮೈನ್ ಎಂಬ ಹಾರ್ಮೋನ್   ಚಟುವಟಿಕೆಯಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತದೆ ಮತ್ತು  ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಹೆಚ್ಚು ನೋಡುವಂತೆ ಪ್ರಚೋದನೆಯನ್ನು ಮಾಡುತ್ತದೆ.

ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳು ಹೇಗೆ ನಿಮ್ಮನ್ನು ಆಕರ್ಷಿಸುವುದು ಎಂದರೆ, ನೀವು ಯಾವುದೇ  ಕೆಲಸ ಮಾಡುವ ಮೊದಲು ಒಮ್ಮೆ ಮೊಬೈಲ್ ನೋಡಲು ಬಯಸುವಿರಿ. ಮೊಬೈಲ್ನಲ್ಲಿ ನಿಮ್ಮ ಇಷ್ಟದ ಮಾಧ್ಯಮಗಳನ್ನು ಒಮ್ಮೆ ಸ್ಕ್ರೋಲ್ ಮಾಡಿ ನೋಡಿದ ಮೇಲೆಯೇ ಮಾನಸಿಕವಾಗಿ ನೆಮ್ಮದಿ ದೊರೆಯುವುದು. ನಂತರ ಬೇರೆ ಕೆಲಸದ ಕಡೆಗೆ ಗಮನ ನೀಡುವಿರಿ. ಇಂತಹ ಭಾವನೆಗಳನ್ನು ನೀವು ಕೊಡಾ ಅನುಭವಿಸುತ್ತಿದ್ದೀರಿ ಎಂದಾದರೆ ಮೊದಲು ಸಾಮಾಜಿಕ ಮಾಧ್ಯಮಗಳಿಂದ ಸ್ವಲ್ಪ ಅಂತರವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ.

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನದ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಬಹಿರಂಗಪಡಿಸುವಿಕೆಯು ವ್ಯಸನಕಾರಿ ವಸ್ತುವನ್ನು ತೆಗೆದುಕೊಳ್ಳುವಾಗ ಮಿದುಳಿನ ಅದೇ ಭಾಗವನ್ನು ಬೆಳಗಿಸುತ್ತದೆ. ಮೆದುಳಿನಲ್ಲಿರುವ ಪ್ರತಿಫಲ ಪ್ರದೇಶ ಮತ್ತು ಅದರ ರಾಸಾಯನಿಕ ಸಂದೇಶವಾಹಕ ಮಾರ್ಗಗಳು ನಿರ್ಧಾರಗಳು ಮತ್ತು ಸಂವೇದನೆಗಳ ಮೇಲೆ ಪರಿಣಾಮ ಬೀರುತ್ತವೆ. ಯಾರಾದರೂ ಲಾಭದಾಯಕವಾದದ್ದನ್ನು ಅನುಭವಿಸಿದಾಗ ಅಥವಾ ವ್ಯಸನಕಾರಿ ವಸ್ತುವನ್ನು ಬಳಸಿದಾಗ, ಮೆದುಳಿನಲ್ಲಿನ ಪ್ರಮುಖ ಡೋಪಮೈನ್-ಉತ್ಪಾದಿಸುವ ಪ್ರದೇಶಗಳಲ್ಲಿನ ನ್ಯೂರಾನ್ಗಳು ಸಕ್ರಿಯಗೊಳ್ಳುತ್ತವೆ ಮತ್ತು ಡೋಪಮೈನ್ ಮಟ್ಟಗಳು ಏರುತ್ತವೆ. ಆದ್ದರಿಂದ, ಮೆದುಳು "ಬಹುಮಾನ" ಪಡೆಯುತ್ತದೆ ಮತ್ತು ಧನಾತ್ಮಕ ಬಲವರ್ಧನೆಯೊಂದಿಗೆ  ಚಟುವಟಿಕೆಯನ್ನು ಸಂಯೋಜಿಸುತ್ತದೆ.

ಇದು ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಗಮನಿಸಬಹುದಾಗಿದೆಒಬ್ಬ ವ್ಯಕ್ತಿಯು ಲೈಕ್ ಅಥವಾ ಉಲ್ಲೇಖದಂತಹ ಅಧಿಸೂಚನೆಯನ್ನು ಪಡೆದಾಗ, ಮೆದುಳು ಡೋಪಮೈನ್ನ ರಶ್ ಅನ್ನು ಪಡೆಯುತ್ತದೆ ಮತ್ತು ಅದನ್ನು ಪ್ರತಿಫಲ ಮಾರ್ಗಗಳಲ್ಲಿ ಕಳುಹಿಸುತ್ತದೆ, ಇದರಿಂದಾಗಿ ವ್ಯಕ್ತಿಯು ಸಂತೋಷವನ್ನು ಅನುಭವಿಸುತ್ತಾನೆ. ಸಾಮಾಜಿಕ ಮಾಧ್ಯಮವು ತುಲನಾತ್ಮಕವಾಗಿ ಕನಿಷ್ಠ ಪ್ರಯತ್ನಕ್ಕಾಗಿ ಇತರರಿಂದ ಗಮನದ ರೂಪದಲ್ಲಿ ಅಂತ್ಯವಿಲ್ಲದ ತಕ್ಷಣದ ಪ್ರತಿಫಲಗಳನ್ನು ಒದಗಿಸುತ್ತದೆ. ಧನಾತ್ಮಕ ಬಲವರ್ಧನೆಯ ಮೂಲಕ ಮೆದುಳು ತನ್ನನ್ನು ತಾನೇ ರಿವೈರ್ ಮಾಡುತ್ತದೆ, ಜನರು ಇಷ್ಟಗಳು, ರಿಟ್ವೀಟ್ಗಳು ಮತ್ತು ಎಮೋಟಿಕಾನ್ ಪ್ರತಿಕ್ರಿಯೆಗಳನ್ನು ಬಯಸುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 3 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕಳೆಯುವ ಅಂದಾಜು 27% ಮಕ್ಕಳು ಕಳಪೆ ಮಾನಸಿಕ ಆರೋಗ್ಯದ ಲಕ್ಷಣಗಳನ್ನು ಪ್ರದರ್ಶಿಸುತ್ತಾರೆ. ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಅಧ್ಯಯನವು ವಾರಕ್ಕೆ ಕನಿಷ್ಠ 58 ಬಾರಿ ಯಾವುದೇ ಸಾಮಾಜಿಕ ಮಾಧ್ಯಮ ಸೈಟ್ಗೆ ಭೇಟಿ ನೀಡಿದ ವ್ಯಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವಾರಕ್ಕೆ 9 ಕ್ಕಿಂತ ಕಡಿಮೆ ಬಾರಿ ಬಳಸುವವರಿಗೆ ಹೋಲಿಸಿದರೆ ಸಾಮಾಜಿಕವಾಗಿ ಪ್ರತ್ಯೇಕತೆ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆ 3 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಬರುವ ವಿಷಯ ಮತ್ತು ವಿಚಾರಗಳು ನಿಮಗೆ ಅತ್ಯಂತ ಮಹತ್ವದ್ದು ಹಾಗೂ ಅದರ ಬಗ್ಗೆ ನೀವು ಏನಾದರೂ ಪ್ರತಿಕ್ರಿಯೆ ಮಾಡಲೇ ಬೇಕು ಎನ್ನುವ ಭಾವನೆಯನ್ನು ಹೊಂದಿದ್ದರೆ. ಅದಕ್ಕಾಗಿ ಸಾಕಷ್ಟು ನಿಮ್ಮ ಸಮಯವನ್ನು ವಿನಿಯೋಗಿಸುತ್ತಿರಿ. ಹೀಗಾದಾಗ ಸಾಮಾಜಿಕ ಮತ್ತು ನೈಜ ಜೀವನದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ ಎನ್ನುವುದನ್ನು ನೀವು ಮರೆಯುತ್ತಿರಿ. ಅವುಗಳ ಕಾರಣದಿಂದ ನೀವು ನಿಮ್ಮ ಹಸಿವು, ದೈನಂದಿನ ಚಟುವಟಿಕೆ, ನಿಮ್ಮವರೊಂದಿಗೆ ಬೆರೆಯುವ ಸಮಯ ಎಲ್ಲವೂ ಬದಲಾಗುತ್ತದೆ. ನಿಮಗೆ ನಿಮ್ಮ ಸಾಮಾಜಿಕ ಮಾಧ್ಯಮಗಳೇ ಹೆಚ್ಚು ಮಹತ್ವವಾದುದ್ದು ಎನ್ನುವ ತಪ್ಪು ಗ್ರಹಿಕೆ ಉಂಟಾಗುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಬರುವ ಎಲ್ಲಾ ಸಂಗತಿಗಳು ನಿಜವಲ್ಲ. ಅವುಗಳಿಂದಾಗಿ ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳುಮಾಡಿಕೊಳ್ಳದಿರಿ. ಮಾನಸಿಕ ತಜ್ಞರು ಸಲಹೆ ನೀಡುವ ಪ್ರಕಾರ ನೀವು ಪದೇ ಪದೇ ಮೊಬೈಲ್ ಅಥವಾ ಸಾಮಾಜಿಕ ಮಾಧ್ಯಮಗಳನ್ನು ವೀಕ್ಷಿಸುವ ಬದಲು ಅದಕ್ಕಾಗಿ ಒಂದು ಸೀಮಿತ ಸಮಯವನ್ನು ನಿಗದಿ ಪಡಿಸಿ. ಸಮಯದಲ್ಲಿ ಮಾತ್ರ ನೋಡಿ. ಉಳಿದ ಸಮಯವನ್ನು ನಿಮ್ಮ ಇತರ ಅಗತ್ಯ ಕೆಲಸಗಳ ನಿರ್ವಹಣೆಗೆ ಬಳಸಿ. ಆಗ ಮಾಧ್ಯಮಗಳಿಗೆ ದಾಸರಾಗುವುದನ್ನು ತಡೆಯಬಹುದು. ನಿಮಗೆ ನಿಮ್ಮ ಜೀವನದಲ್ಲಿ ಯಾವುದು ಮುಖ್ಯ? ಎನ್ನುವುದನ್ನು ಮೊದಲು ಪರಿಶೀಲಿಸಿ. ನಂತರ ಅದನ್ನು ಪೂರೈಸಲು ಮುಂದಾಗಿ.

ಮೊಬೈಲ್ ನೋಡುವುದರ ಮೂಲಕ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು ಸಮಯವನ್ನು ನಿಮ್ಮ ಹೊಸ ಹವ್ಯಾಸಗಳಿಗೆ ವಿನಿಯೋಗಿಸಿ. ಸಮಯ ಇದೆ ಎಂದಾಗ ಸ್ವಲ್ಪ ಸಮಯಗಳ ಕಾಲ ಧ್ಯಾನ ಮಾಡಿ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸುವುದು. ಜೊತೆಗೆ ಉತ್ತಮ ನಿರ್ಧಾರ ಕೈಗೊಳ್ಳುವಂತಹ ಶಕ್ತಿಯನ್ನು  ಹೆಚ್ಚಿಸುವುದು. ಹೊಸ ಹೊಸ ಆಲೋಚನೆಗಳ ಮೂಲಕ ನಿಮ್ಮ ಸಾಧನೆ ಹಾಗೂ ಕೆಲಸದ ಕಡೆಗೆ ಹೆಚ್ಚು ಗಮನ ನೀಡಬಹುದು. ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ನಾವು ನಮ್ಮ ಮಾನಸಿಕ ಸ್ಥಿತಿ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ.

ಸಮುದಾಯದ ಸಾಮಾಜಿಕ ಮಾಧ್ಯಮ ವೇದಿಕೆಯಾದ Local Circles ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ 40 ಪ್ರತಿಶತದಷ್ಟು ಭಾರತೀಯ ಪೋಷಕರು ತಮ್ಮ 9 ರಿಂದ 17 ವರ್ಷದೊಳಗಿನ ಮಕ್ಕಳು ವೀಡಿಯೊಗಳು, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ವ್ಯಸನಿಯಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ವಿಷಯದ ಗಂಭಿರತೆ ಮತ್ತು ಸಮಸ್ಯೆಯ ತಿರ್ವತೆಯನ್ನ ಯುವಸುಮುದಾಯಕ್ಕೆ ತಿಳಿಸುವ ಅವಶ್ಯಕತೆ ಇದೆ.