Monday, 2 April 2012

ರೈತರ ಆತ್ಮಹತ್ಯೆ:


ರೈತರ ಆತ್ಮಹತ್ಯೆ: ಇದುವರೆಗಿನ ಸಂಶೋಧನೆ.
ರೈತರ ಆತ್ಮಹತ್ಯೆಗಳು ಕರ್ನಾಟಕವಲ್ಲದೇ ಭಾರತದ ಹಲವು ರಾಜ್ಯಗಳನ್ನು ಕಾಡುತ್ತಿವೆ. ಒಂದು ಅಧ್ಯಯನದ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ೩೦೦೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು, ವಾರ್ತಾಪತ್ರಿಕೆಗಳು, ರಾಜಕಾರಣಿಗಳು, ಸಂಶೋಧಕರು, ಬುದ್ಧಿಜೀವಿಗಳು ಹೀಗೆ ಎಲ್ಲರೂ ರೈತರೇಕೆ ತಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ತಮ್ಮದೇ ಆದ ಕಾರಣಗಳನ್ನು ಕೊಟ್ಟಿದ್ದಾರೆ. ಈ ವಿಷಯವಾಗಿ ಹಲವಾರು ಚರ್ಚೆಗಳು, ವಿಚಾರಗೋಷ್ಠಿಗಳು ನಡೆದು, ಹಲವು ರಾಜ್ಯಗಳ ಸರ್ಕಾರಗಳು ಪರಿಹಾರಧನ, ಸಹಾಯಧನವನ್ನು ಘೋಷಿಸಿಯೂ ಆಗಿದೆ. ಆದರೂ ರೈತರ ಆತ್ಮಹತ್ಯೆಗಳು ಕೇಳಿಬರುತ್ತಲೇ ಇವೆ. ರೈತ ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ, ಸಮಸ್ಯೆಯ ಪರಿಹಾರಕ್ಕೆ ಇಷ್ಟು ಮಾಡಿದರೆ ಸಾಕು ಎನ್ನುವಷ್ಟು ಖಡಾಖಂಡಿತವಾಗಿ ಹೇಳವಷ್ಟು ಸರಳ ಸಮಸ್ಯೆ ಇದಲ್ಲವೆಂದು ಹಲವು ಅಧ್ಯಯನಗಳು ತೋರಿಸಿವೆ. ರೈತರ ಆತ್ಮಹತ್ಯೆಗೆ ಹಲವು (ಬಗೆಯ) ಕ್ಲಿಷ್ಟ ಕಾರಣಗಳರಿಬಹುದೆಂದು ಈಗಾಗಲೇ ಸಾಬೀತಾಗಿದೆ ಮತ್ತು ಅವುಗಳನ್ನೆದುರಿಸಲು ಸರ್ಕಾರಕ್ಕೆ ಹಲವು (ಬಗೆಯ) ಸಲಹೆಗಳನ್ನು ಕೊಡಲಾಗಿದೆ. ಒಂದಂತೂ ದಿಟ. ಈ ಜ್ವಲಂತ ಸಮಸ್ಯೆಯನ್ನು ನಿವಾರಿಸುವ ನಿಜವಾದ ಶಕ್ತಿಯಿರುವುದು ಸರ್ಕಾರಕ್ಕೆ ಮಾತ್ರವೇ. ಮೇಲೆ ಹೇಳಿದಂತೆ, ಹಲವು ಜನ ಈಗಾಗಲೇ ಈ ಸಮಸ್ಯೆಯನ್ನು ಹತ್ತಿರದಿಂದ ಗಮನಿಸಿ, ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ. ನಾವೇ ಕಣ್ಮುಂದೆಯೇ ಎಲ್ಲವನ್ನು ನೋಡುತ್ತಿರುವಾಗ ಯಾರೋ ಮಾಡಿದ ಸಂಶೋಧನೆಗಳು ನಮಗೇಕೆ ಮುಖ್ಯ ಎನ್ನುವ ಪ್ರಶ್ನೆ ಓದುಗರಿಗೆ ಬರಬಹುದು. ಆದರೆ, ಜನನಾಯಕರು ಮುಂದಿನ ಹೆಜ್ಜೆಯನ್ನಿಡುವಾಗ ರೈತರಿಗೆ ಏನು ಸಹಾಯವಾಗಬಹುದು ಎಂಬುದು ಅವರು ಯಾವ ಯಾವ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ,ಆ ವರದಿಗಳಲ್ಲೇನಿದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.ಆದ್ದರಿಂದ ಈ ಲೇಖನ ಸಂಚಿಕೆಯು, ರೈತರ ಆತ್ಮಹತ್ಯೆಗಳ ಕಾರಣವನ್ನು ಹುಡುಕುವ ಮತ್ತೊಂದು ಪ್ರಯತ್ನ ಮಾಡದೇ, ಈ ಸಮಸ್ಯೆಯನ್ನು ಸುಧಾರಿಸುವ ಮತ್ತೊಂದು ವಿಧಾನವನ್ನು ಸೂಚಿಸದೇ, ಈ ಸಮಸ್ಯೆಯ ಜಟಿಲತೆಯನ್ನು, ಹಾಗು ಅದನ್ನೆದುರಿಸಲು ಸೂಚಿಸಲಾಗಿರುವ ಹಲವು ವಿಧಾನಗಳನ್ನು ಓದುಗರಿಗೆ ತಿಳಿಸುವ ಯತ್ನವಾಗಿದೆ.ಈ ಅದ್ಯಯನಗಳು ಮತ್ತು ಸಮಿತಿಗಳು ಕೊಟ್ಟ ಸಲಹೆ ಉಚಿತವೇ ಇವುಗಳು ಓದುಗರಿಗೆ ಬಿಟ್ಟದ್ದು
ರೈತರ ಆತ್ಮಹತ್ಯೆಗೆ ಕಾರಣವಾದ ಅಂಶಗಳು ಒಂದಕ್ಕೊಂದು ಹೊಂದಿಕೊಂಡಿದ್ದಾಗಿಯೂ, ಸರಳತೆಗಾಗಿ ಸ್ಥೂಲವಾಗಿ ಮೂರುವರ್ಗಗಳಾಗಿ ವಿಂಗಡಿಸಬಹುದು ಕೃಷಿಯಲ್ಲಿನ ಅನಿಶ್ಚಯ ಸ್ವಭಾವ
ಕೈಕೊಟ್ಟ ಬೆಳೆಗಳು ,ಪ್ರತಿಕೂಲ ಹವಾಮಾನ ಗಳು ರೈತರನ್ನು ಪ್ರತಿಕೂಲ ಪರಿಸ್ಥಿತಿಗೆ ತಳ್ಳುತ್ತವೆ. ಹೆಚ್ಚಾದ ಪರಿಸರ ಮಾಲಿನ್ಯವೂ ರೈತರಿಗೆ ಮುಳುವಾಗಿ ನಿಂತಿದೆ. ಇದರ ಜೊತೆಗೆ, ನೀರಾವರಿ ಬೀಜ, ಗೊಬ್ಬರ, ಕೀಟನಾಶಕ ಮುಂತಾದ ಕೃಷಿಗೆ ಬೇಕಾದ ಹೂಡುವಳಿಗಳು ಸರಿಯಾಗಿ ಸಮಯಕ್ಕೆ ತಕ್ಕಂತೆ ಸರಬರಾಜಾಗದೇ ಇರುವುದು, ಬೇಕಾದ ಪ್ರಮಾಣ, ಗುಣಮಟ್ಟದಲ್ಲಿ ಸಿಗದೇ ಇರುವುದು ರೈತನನ್ನು ದು:ಸ್ಥಿತಿಗೆ ತಳ್ಳುವುದರಲ್ಲಿ ಅನುಮಾನವಿಲ್

ಕೃಷಿಉತ್ಪನ್ನಗಳಬೆಲೆಗಳು:
ಕೃಷಿಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಲೇ ಬೇಕಾಗಿರುವುದರಿಂದ ಕೃಷಿಕನು ಮಾರುಕಟ್ಟೆಯ ಏಳುಬೀಳುಗಳಿಗೆ ಸಹಜವಾಗಿ ಹೊರತಾಗಿರುವುದಿಲ್ಲ. ವಾಣಿಜ್ಯಬೆಳೆಗಳ ದರಗಳು ಇತ್ತೀಚಿನ ದಿನಗಳಲ್ಲಿ (೧೯೯೧ರ ಮೇಲೆ) ಹೆಚ್ಚು ಓಲಾಡಿವೆ. ಹಲವು ವರದಿಗಳು ಇದಕ್ಕೆ WTO, ಅಂತರ-ರಾಷ್ಟ್ರೀಯ ಮುಕ್ತ ಮಾರುಕಟ್ಟೆ ಮುಂತಾದ ಜಾಗತಿಕ ಮಟ್ಟದ ಅಂಶಗಳೇ ಕಾರಣವೆಂದು, ಜಗತ್ತಿನ ಬಡ ರೈತರೆಲ್ಲರೂ ಇದರಿಂದಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳುತ್ತವೆ. ಆದರೆ, ನಮ್ಮ ಪ್ರಾಂತೀಯ ಮಟ್ಟದಲ್ಲಿ ವಾಣಿಜ್ಯ ಬೆಳೆಗಳ ಏರಿಳಿತವು ಕೇವಲ ಬೇಡಿಕೆ, ಪೂರೈಕೆಗಳ ಪ್ರಮಾಣದ ಮೇಲೆ ನಿಂತಿರುವುದಿಲ್ಲ. ಕೆಲವೊಮ್ಮೆ ಮಧ್ಯವರ್ತಿಗಳಿಂದಾಗಿ ಕೃತಕವಾಗಿ ಬೆಲೆಯೇರುವುದು,ಕೃತಕವಾಗಿ ಬೆಲೆ ಕುಸಿಯುವುದು ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ, ಮಾರುಕಟ್ಟೆಯ ಕುರಿತಾದ ಮಾಹಿತಿಯು ಅಮೂಲ್ಯವಾಗಿರುತ್ತದೆ. APMC ನಿರ್ವಾಹಕರು, ಬೀಜ, ಗೊಬ್ಬರ, ಕೀಟನಾಶಕಗಳ ವರ್ತಕರು ಈ ಮಾಹಿತಿಯಿಂದ ಅಕ್ರಮ ಲಾಭಪಡೆದುಕೊಳ್ಳುವುದು ಸಾಮಾನ್ಯ. ಇದರಿಂದ ಉತ್ಲನ್ನಗಳ ಬೇಡಿಕೆ ಮತ್ತು ದರಗಳ ತಪ್ಪು ಸೂಚನೆ ರೈತರಿಗೆ ತಲುಪುತ್ತಿದೆ.ಇದರಿಂದ ರೈತನು ದರಗಳನ್ನು ತಪ್ಪಾಗಿ ಗ್ರಹಿಸಿ ಇರುವುದನ್ನೆಲ್ಲ ತೊಡಗಿಸಬಹುದು. ಯಾರ ಬಳಿಯೂ, ಮಾರಿಕಟ್ಟೆಯ ಮಾಹಿತಿಯಿರದಿದ್ದರೂ ಹೆಚ್ಚು ತೊಂದರೆಯಿಲ್ಲ, ಆದರೆ ತಪ್ಪು ಮಾಹಿತಿಯು ರೈತನಿಗೆ ಅಪಯಾಕಾರಿ.
ಸಾಮಾಜಿಕತೊಂದರೆಗಳು:
ಕೃಷಿಯ ಪ್ರಾಮುಖ್ಯತೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಉದ್ಯೋಗ ಸೃಷ್ಟಿಯೂ ಕಡಿಮೆಯೇ.ಹಾಗೇ ಕೃಷಿಯ ಲಾಭಾಂಶವೂ ಕಡಿಮೆಯಾಗುತ್ತಿದೆ. ಇದರಿಂದ ಕೃಷಿಯೆಂಬ ವೃತ್ತಿಗಿರಬೇಕಾದ ಮರ್ಯಾದೆ ಕಡಿಮೆಯಾಗುತ್ತಿದೆ. ಇದರಿಂದ ರೈತರು ಕೀಳರಿಮೆಯಿಂದ ಬಳಲುತ್ತಿದ್ದಾರೆ ಎಂದು ಹಲವು ಸಂಶೋಧನೆಗಳು ಹೇಳುತ್ತವೆ.
ಭಾರತದಲ್ಲಿ ಸಣ್ಣ ಮತ್ತು ಅತೀ ಸಣ್ಣ (marginal) ರೈತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಣ್ಣ ಹಿಡುವಳಿದಾರರು ಕೃಷಿಯಲ್ಲಿ ಲಾಭವನ್ನು ಕಾಣಲು ಕಷ್ಟವಾಗುತ್ತದೆ ಎಂಬ ಕಾರಣವನ್ನು ಹಲವು ಮಂದಿ ಒಪ್ಪುತ್ತಾರೆ.ಇದಕ್ಕೆ ಅರವತ್ತರ ದಶಕದಲ್ಲಾದ ಭೂಸುಧಾರಣಾ ಕಾಯ್ದೆಗಳೇ ಕಾರಣವೆಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕಂಟಿಕೊಂಡಂತೆಯೇ ರೈತರು ಮೊದಲಿಗಿಂತಲೂ ಹೆಚ್ಚಾಗಿ ಸಾಲಕ್ಕೆ ಸಿಕ್ಕಿ ತೊಂದರೆಗೊಳಗಾಗಿದ್ದಾರೆ. ದುಡ್ಡಿಗಾಗಿ ಕೃಷಿ ಸಾಲವಲ್ಲದೇ ಬ್ಯಾಂಕುಗಳಿಂದ, ಮಧ್ಯವರ್ತಿಗಳಿಂದ ಸಾಲ ತೆಗೆಯುವುದು ಹೆಚ್ಚಾಗಿದೆ. ಜೊತೆಗೆ ಈ ತರಹದ ಸಾಲಗಳಿಗೆ ಬಡ್ಡಿ ದರವು ಸರ್ಕಾರ ಘೋಷಿಸಿರುವುದಕ್ಕಿಂತಲು ಹೆಚ್ಚಾಗಿರುತ್ತದೆ. ಸಾಲ ಮಾಡುವುದಕ್ಕೆ ಕೃಷಿಯನ್ನೂ ಸೇರಿದಂತೆ ಆರೋಗ್ಯ, ಮಕ್ಕಳ ಶಿಕ್ಷಣ, ಮದುವೆ, ಮನೆ ಮುಂತಾದ ಹಲವು ಸಾಮಾಜಿಕ ಕಾರಣಗಳೂ ಸೇರಿವೆ. ಇವೆಲ್ಲದರ ಜೊತೆಗೆ ಹಿಂದಿದ್ದ ಸಾಮಾಜಿಕ ಭದ್ರತೆಗಳು ಕಳಚುತ್ತಾ ಹೋದಂತೆ ರೈತರ ಪ್ರತಿರೋಧಶಕ್ತಿಯೂ ಕಮ್ಮಿಯಾಗುತ್ತಾ ಹೋಗಿದೆ.
ಅಧಿಕಾರಿಗಳು ಮತ್ತು ಪುಢಾರಿಗಳು ಮಾಡುವ ಅನ್ಯಾಯವನ್ನು ನೋಡಿಯೂ ಸುಮ್ಮನಿರುವ, ಅವರಿಂದಲೇ ಸಹಾಯಪಡೆಯುವ ಅವಶ್ಯಕತೆ ರೈತರಿ ಅನಿವಾರ್ಯವಾಗಿದೆ.
ಹಲವು ವರದಿಗಳು ಹೇಳುವಂತೆ (ವಿಶೇಷವಾಗಿ ವೀರೇಶ್ ಸಮಿತಿಯ ವರದಿ), ಕುಡಿತ ಮತ್ತು ಮಾದಕ ದ್ರವ್ಯಗಳ ವ್ಯಸನವು ರೈತರ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿದೆ. ಹಾಗೆಯೇ, ಅನುಕೂಲಕರ ಜೀವನವೆಂದರೆ ಹೇಗಿರಬೇಕು, ಅದಕ್ಕಾಗಿ ನಮ್ಮ ಖರ್ಚುವೆಚ್ಚಗಳು ಎಷ್ಟಿರಬೇಕು ಇವುಗಳು ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಬಹಳ ಬೇಗ ಬದಲಾಗಿವೆ. ಕಂಡ ಕನಸನ್ನು ನನಸು ಮಾಡಲಾಗದೆ ಅಥವ ಹೊತ್ತ ಜವಾಬ್ದಾರಿಗಳನ್ನು ಪೂರೈಸಲಾಗದೇ ಹೋದ ಹತಾಶೆಯು ರೈತನನ್ನು ಆತ್ಮಹತ್ಯೆಗೆ ತಳ್ಳುತ್ತದೆ ಎಂಬ ವಾದವೂ ಇದೆ.
ಒಟ್ಟಿನಲ್ಲಿ, ರೈತರ ಆತ್ಮಹತ್ಯೆಗಳ ವಿಚಾರದಲ್ಲಿ ಸಂಶೋಧನೆಗಳು ತೋರಿಸಿರುವ ಕಾರಣಗಳ್ ಚಿತ್ರಣ ಇದು. ಇವುಗಳಲ್ಲಿ ಹಲವು ಸಮಸ್ಯೆಗಳು ಕೃಷಿಗೆ ಹೊಸದೇನಲ್ಲ. ಹಾಗೆಯೇ ಹಲವು ಸಂಶೋಧಕರು ಹೇಳುವ ಹಾಗೆ, ಇವೆಲ್ಲವೂ ರೈತರ ಆತ್ಮಹತ್ಯೆಗೆ ಕಾರಣವಲ್ಲ. ರೈತನ ಪರಿಸ್ಥಿತಿಯನ್ನು ಬಿಗಡಾಯಿಸುವಲ್ಲಿ ಇವುಗಳ ಮಹತ್ವದ ಪಾತ್ರವಿದೆ. ರೈತನನ್ನು ಹತಾಶೆಯ ತುತ್ತುದಿಗೆ ತಳ್ಳುವ ಬಲವಿದೆ. ಹತಾಶೆಯ ಈ ಹಂತ ತಲುಪಿದ ಮೇಲೆ ಆತ್ಮಹತ್ಯೆಯ ಮುಂದಿನ ಹೆಜ್ಜೆಗೆ, ರೈತನಿಗೆ ಅತ್ಯಂತ ಕ್ಷುಲ್ಲಕ ಕಾರಣವೂ ಸಾಕು.
ಹೀಗೆ, ರೈತರ ಇಂದಿನ ದುಃಸ್ಥಿತಿಗೆ ನಾವು ಹಲವು ಕಾರಣಗಳನ್ನು ಕೊಡಬಹುದು. ಆದರೆ ನಮ್ಮೆದುರಿರುವ ತೊಂದರೆಏನೆಂದರೆ,
೧.ಇವೆಲ್ಲವೂ ರೈತರ ಆತ್ಮಹತ್ಯೆಗೆ ಕಾರಣವಲ್ಲ. ೨. ಇವೆಲ್ಲವೂ ರೈತರಿಗೆ ಹೊಸತೇನಲ್ಲ. ಆತ್ಮಹತ್ಯೆಗಳಿಗೆ ಯಾವುದೇ ನಿರ್ದಿಷ್ಟವಾದ ಕಾರಣಗಳಿಲ್ಲದೇ ಇರುವುದು ಕೃಷಿಯ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಸರ್ಕಾರಗಳಿಗೆ ವಿಚಿತ್ರವಾದ ಸವಾಲನ್ನೆಸೆದಿದೆ. ರೈತರ ಆತ್ಮಹತ್ಯೆಗಳನ್ನು ನಿಲ್ಲಿಸುವ ಹಲವು ಸರ್ಕಾರಗಳ ಪ್ರಯತ್ನಗಳು ವಿಫಲವಾಗಿರುವುದಕ್ಕೂ‌ ಇದೇ ಕಾರಣವಿರಬಹುದು. ಈ ಪರಿಸ್ಥಿತಿಯಲ್ಲಿ ಹಲವು ವಿಷಯತಜ್ಙರ ಅಭಿಪ್ರಾಯವೇನೆಂದರೆ, ರೈತರ ಈ ‌ಸಮಸ್ಯೆಯು ಉದ್ಭವವಾದದ್ದು ನಿನ್ನೆ ಮೊನ್ನೆಯಲ್ಲ.
ಕ್ರಮಾಗತವಾಗಿ ಕೃಷಿ ನೀತಿಗಳಲ್ಲಿ, ಕೃಷಿಕ್ಷೇತ್ರವನ್ನು ಮತ್ತದರ ಜಟಿಲತೆಯನ್ನು ಪೂರ್ಣವಾಗಿ ಊಹಿಸದೇ ತೀರ ಸರಳವಾಗಿ ಕಾಣುತ್ತ ಬಂದಿರುವುದು, ಕೃಷಿಗೆ ಸಂಬಂಧಪಟ್ಟ ಮುಖ್ಯ ಆರ್ಥಿಕ ನೀತಿ, ನಿಲುವುಗಳ ಒಡಕುಗಳು ಇವೆಲ್ಲವೂ‌ ಹಲವು ದಶಕಗಳಿಂದ (ಹಸಿರು ಕ್ರಾಂತಿಗೂ‌ ಹಿಂದಿನಿಂದ) ಒಂದರ ಮೇಲೊಂದು ಸೇರಿಕೊಳ್ಳುತ್ತಾ ಬಂದು ಇವುಗಳ ಒಟ್ಟು ಪರಿಣಾಮಗಳು ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗಳ ಮೂಲಕ ಪ್ರಕಟವಾಗುತ್ತಿವೆ.
ಇದಕ್ಕೆ ದೇಶದ ನೀತಿಶಾಸ್ತ್ರತಜ್ಞರೂ, ರಾಜಕಾರಣಿಗಳು, ಅಧಿಕಾರಿಗಳು ಮತ್ತವರ ಆರ್ಥಿಕ ನೀತಿಗಳೇ ಕಾರಣ ಎಂದು ತಪ್ಪನ್ನು ಹುಡುಕಿಯೂ‌ ಆಗಿದೆ. ಆದ್ದರಿಂದ ಕೃಷಿಕ್ಷೇತ್ರದ ಅಮೂಲಾಗ್ರ ಬದಲಾವಣೆಯೇ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸುವ ನಿಜವಾದ ಉತ್ತರ ಎಂಬುದು ಹಲವು ಸಂಶೋಧಕರ ಅಭಿಪ್ರಾಯ. ಇಡೀ ಕೃಷಿಕ್ಷೇತ್ರವನ್ನು ಸರಿಪಡಿಸಲು ತರಬೇಕಾದ ಬದಲಾವಣೆಗಳು ಹಲವಿವೆ. ಇವುಗಳನ್ನು ಬಹಳ ವಿಷಯತಜ್ಞರು ಗುರುತಿಸಿಯೂ‌ ಇದ್ದಾರೆ.
ಉದಾಹರಣೆಗೆ, ಕೃಷಿ ವಿಶ್ವವಿದ್ಯಾಲಯಗಳ/ನಿರ್ದೇಶನಾಲಯದ ಚಟುವಟಿಕೆಗಳಲ್ಲಿ ಬದಲಾವಣೆ, ಕೃಷಿಕ್ಷೇತ್ರದ ಸಬಲೀಕರಣ, ಕೃಷಿ ಮಾರುಕಟ್ಟೆ ಮತ್ತು ಅದರ ಚಟುವಟಿಕೆಗಳ ಪಾರದರ್ಶಕತೆ, ಆಡಳಿತದಲ್ಲಿ ದಕ್ಷತೆ, ರೈತರ ತುರ್ತುನಿಧಿಗಳ ಸ್ಥಾಪನೆ, ರೈತರ ಅಭಿಪ್ರಾಯಕ್ಕೆ ಒತ್ತುಕೊಡುವಂತಹ ಪದ್ಧತಿ, ಕೃಷಿವಿದ್ಯಾಲಯಗಳ ಸಂಶೋಧನೆಗಳನ್ನು, ಮಾಹಿತಿಯನ್ನು ದೇಶ/ರಾಜ್ಯಗಳ ಅತೀ ಬಡ ರೈತರ ಬಾಗಿಲಿಗೂ‌ ಕೊಂಡೊಯ್ಯುವುದು, ತಮಗೆ ರುಚಿಸುವ ವಿಷಯದಲ್ಲಿ ಸಂಶೋಧನೆ ನಡೆಸದೇ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ನೆರವಾಗುವಂತಹ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ಕೊಡುವುದು, ಕೇವಲ ಬೇಸಾಯಕ್ಕೆ ಸಂಬಂಧಪಟ್ಟಂತಹ ಸಂಶೋಧನೆಗಳಲ್ಲದೇ ಕೃಷಿಯ, ರೈತರ ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಸಂಶೋಧನೆ, ಭೂ ಕಾಯ್ದೆಯ ಸಡಿಲಿಕೆ ಇತ್ಯಾದಿ.

ಬೆಳೆಗಳ ಮತ್ತು ಕೃಷಿ ಪರಿಕರಗಳ (ಗೊಬ್ಬರ, ಬೀಜ, ಕೀಟನಾಶಕಗಳನ್ನು ಸೇರಿ) ಬೆಲೆಗಳ ಮಾರ್ಪಾಡಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಹಲವು ಅಭಿಪ್ರಾಯಗಳು, ಗೊಂದಲ ಮತ್ತು ವಿವಾದಗಳು ಕಂಡುಬರುತ್ತದೆ. ಹಲವರು ರೈತರಿಗೆ ರಿಯಾಯತಿ ದರದಲ್ಲಿ ಪರಿಕರಗಳನ್ನು ಸರಬರಾಜು ಮಾಡುವುದು ತಪ್ಪೆಂದು ಹೇಳಿದರೆ, ಮತ್ತಿನಿತರು ಬೇರೆಯ ದೇಶಗಳಿಗೆ ಹೋಲಿಸಿದರೆ ಈ ರಿಯಾಯತಿ ಭಾರತದಲ್ಲಿ ಕಡಿಮೆ, ಆದ್ದರಿಂದ ಇವುಗಳನ್ನು ಮತ್ತಷ್ಟೂ‌ ಹೆಚ್ಚಿಸಬೇಕೆಂದೂ ಹೇಳುತ್ತಾರೆ. ರಿಯಾಯತಿ ದರಗಳಲ್ಲಿ ಈ‌ ಸರಕುಗಳು ಸಿಗುವುದೇ‌ ದುಸ್ತರ, ಹಾಗು ರೈತರಲ್ಲಿಯೇ ಕೇವಲ ದೊಡ್ಡ ದೊಡ್ಡ ರೈತರಿಗೆ ಮಾತ್ರ ಈ‌ ಸವಲತ್ತುಗಳು ಸಿಗುತ್ತಿವೆ ಎಂಬ ದೂರುಗಳೂ ಇವೆ. ಇವುಗಳ ಜೊತೆಗೆ, ರಿಯಾಯತಿ ದರದಲ್ಲಿ ಸಿಕ್ಕ ಸರಕುಗಳ ದುಂದು ಬಳಕೆಯಾಗುವುದನ್ನು ನಿಲ್ಲಿಸುವುದೂ‌ ಅತ್ಯವಶ್ಯಕ ಎಂದು ಹೇಳುವರೂ‌ ಇದ್ದಾರೆ.
ಆದರೆ, ಇಡೀ ವ್ಯವಸ್ಥೆಯಲ್ಲಿಯೇ ತೊಂದರೆ ಇರುವುದು ನಿಜವಾದರೆ ಅದನ್ನು ಸರಿಪಡಿಸುವುದೂ‌ ಕೂಡ ದೀರ್ಘಾವಧಿಯ ಕೆಲಸವೇ. ಆದ್ದರಿಂದ, ಮೊದಲು ಆಗಿರುವ/ಆಗುತ್ತಿರುವ ಅನಾಹುತಕ್ಕೆ ಕಡಿವಾಣ ಹಾಕಲೂ‌ ಕೂಡ ಹಲವು ಸಲಹೆಗಳನ್ನು ವರದಿಗಳು ಸೂಚಿಸಿವೆ.
ಸಾವಿನ ದವಡೆಗೆ ದೂಡಿದ ಧೀರ್ಘಾವಧಿಯ ಕಾರಣಗಳೇನೇ ಇರಲಿ, ಸಾವಿಗೆ ಮದ್ಯಪಾನ, ಕುಸಿದ ಆತ್ಮಸ್ಥೈರ್ಯಗಳೇ ನೇರ ಕಾರಣ. ಆದ್ದರಿಂದ ರೈತರಿಗೆ ಮನೋವೈಜ್ಞಾನಿಕ ಚಿಕಿತ್ಸೆಗಳನ್ನು ತಕ್ಷಣಕ್ಕೆ ಕೊಡಬೇಕು ಎನ್ನುವ ಸಲಹೆಗಳು ಒಂದು ಕಡೆಯಾದರೆ, ಸಾಲ ಮನ್ನ, ಕಡಿಮೆ ಬಡ್ಡಿಯ ಸಾಲಗಳ ವಿಸ್ತರಣೆ.. ಹೀಗೆ ತಾತ್ಕಾಲಿಕವಾಗಿ ಅನಾಹುತಗಳನ್ನು ನಿಲ್ಲಿಸುವ ಸಲಹೆಗಳನ್ನೂ‌ ನೀಡಲಾಗಿದೆ.
ಹಾಗೆಯೇ, ಇಷ್ಟರವರೆಗೂ‌ ಕೊಟ್ಟ ಸಲಹೆಗಳು ವಿಫಲವಾಗಿರುವುದೂ, ಅವುಗಳನ್ನಿತ್ತ 'ತಜ್ಞ್'ರ ವೈಫಲ್ಯ.. ಇವುಗಳನ್ನು ತೋರಿಸುವ ಸಂಶೋಧನೆಗಳೂ‌ ಇವೆ. ಮತ್ತೊಂದು ಮುಖ್ಯ ವಿಧದ ಅಧ್ಯಯನಗಳು ರೈತರ ಸಧ್ಯದ ಪರಿಸ್ಥಿತಿ, ಅವರ ಧ್ವನಿಯ ಒಗ್ಗಟ್ಟು, ಹಾಗು ರೈತರ ವಿವಿಧ ಶ್ರೇಣಿಗಳಲ್ಲಿ ಬದಲಾಗುವ ಆಶಯಗಳೇನು, ಇವುಗಳನ್ನು ಮನದಲ್ಲಿಟ್ಟುಕೊಂಡು ಸಲಹೆಗಳನ್ನು ಸೂಚಿಸುತ್ತವೆ. ಇವುಗಳ ಪ್ರಕಾರ, ಹೆಚ್ಚು ಧ್ವನಿಯಿರುವ, ತಕ್ಕಮಟ್ಟಿಗೆ ಅನುಕೂಲವಂತರಾಗಿರುವ ರೈತರ ಬೇಡಿಕೆಗಳನ್ನು ಪೂರೈಸುವತ್ತ ಸಮಾಜದ ಇತರ ವರ್ಗಗಳೂ, ರಾಜಕೀಯ ಶಕ್ತಿಗಳೂ ಹೆಚ್ಚಾಗಿ ಕಾಳಜಿಹೊಂದಿರುವುದು, ತೀರ ಕೆಳಸ್ತರದಲ್ಲಿರುವ ರೈತರಿಗೆ ಆರ್ಥಿಕವಾಗಿ ಉತ್ತಮವಾಗಿರುವ ರೈತರೇ‌ ಮುಳುವಾಗಿರುವುದನ್ನೂ ದಾಖಲಿಸಿವೆ.
ಆದ್ದರಿಂದ ಕೃಷಿನೀತಿಯಲ್ಲಿ 'ಕೃಷಿ in general'ಗಿಂತ ಸಣ್ಣ ರೈತರ ಬವಣೆಗಳು, ಮತ್ತು ಅವರ ಸ್ವಾವಲಂಬ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂದು ಸೂಚಿಸಿವೆ. ತನ್ನೆಲ್ಲ ದೋಷಗಳನ್ನೆದುರಿಸುತ್ತಲೇ, ಜನಪ್ರಿಯ ನೀತಿಗಳನ್ನು ನೀಡಲು ಹಂಬಲಿಸುತ್ತಲೇ, ಧೀರ್ಘಾಧಿಯ ಬದಲಾವಣೆಗಳಿಗೆ ಚಾಲನೆ ನೀಡಿ, ತಕ್ಷಣದ ಬವಣೆಗಳ ಪರಿಹಾರಗಳತ್ತಲೂ ಗಮನಹರಿಸಬೇಕಾಗಿರುವುದು ಸರ್ಕಾರದ ಮುಂದಿರುವ ಸವಾಲು.
ಆದರೆ ಒಂದಂತೂ‌ ದಿಟ. ಸರ್ಕಾರ ರೈತರ ಹಿತಕ್ಕಾಗಿ ಏನೂ‌ ಮಾಡುತ್ತಿಲ್ಲ ಎಂದು ಹೇಳುವುದು ಸುಲಭ. ಆದರೆ, ಉಪಯೋಗಕಾರಿ ಸಲಹೆಗಳನ್ನಿತ್ತು, ಅವುಗಳ ಯಶಸ್ಸನ್ನು ಪ್ರದರ್ಶಿಸುವುದು ತೀರಾ ಕಷ್ಟ. ಈ ಸಂದರ್ಭದಲ್ಲಿ ರೈತನನ್ನು ಕಾಪಾಡುವ ಶಕ್ತಿ, ಯುಕ್ತಿ ಮತ್ತು ಕಾಳಜಿ ನಮ್ಮ ಸರ್ಕಾರ, ವಿಜ್ಞಾನಿ ವರ್ಗ ಮತ್ತು ನಮ್ಮ ಸಮಾಜಕ್ಕಿದೆಯೇ‌ ಎಂಬ ಸವಾಲಿಗೆ ಕಾಲವೇ ಉತ್ತರ ಹೇಳಬಲ್ಲದು.
ರೈತರ ಆತ್ಮಹತ್ಯೆ: ಇದುವರೆಗಿನ ಸಂಶೋಧನೆ
ಮಹಾರಾಷ್ಟ್ರದ ರೈತರು ಅತಿ-ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಯ ಬಲಿಪಷುಗಳಾಗಿದ್ದಾರೆ. ಅದೂ ಹತ್ತಿಬೆಳೆಯುವ ರೈತಬಾಂಧವರು. ರಾಜ್ಯಸರ್ಕಾರದ,’ ಮನೋಪಲಿ ಕಾಟನ್ ಗ್ರೋಯಿಂಗ್ ಸ್ಕೀಮ್, ಎನ್ನುವ ಅವೈಜ್ಞಾನಿಕ ಪದ್ಧತಿಯ ವತಿಯಿಂದ ಎಂದು ಹೇಳಬಯಸುತ್ತೇನೆ. ರೈತರಿಗೆ ಸರಿಯಾದ ಒಳ್ಳೆಯಬೀಜ ಸಿಗದಿರುವುದು ಒಂದುಕಾರಣವಾದರೆ, ಬೆಳೆದ ಉತ್ಪನ್ನಕ್ಕೆ ಸರಿಯಾದ ಕ್ರಯಸಿಗದಿರುವುದು ಮತ್ತೊಂದು. ಅವರ ವೈಯಕ್ತಿಕ ಜೀವನದ ಸಮಸ್ಯೆಗಳೂ ಇದರ ಜೊತೆ ಸೇರಿವೆ.
ರೈತರ ಆತ್ಮಹತ್ಯೆ: ಇದುವರೆಗಿನ ಸಂಶೋಧನೆ

ಈಗಾಗಲೇ ನಿಮ್ಮ ಲೇಖನದಲ್ಲಿ ಸಾಕಷ್ಟು ಮಾಹಿತಿಗಳನ್ನು ಪಟ್ಟಿಮಾಡಿದ್ದೀರಿ. ಧನ್ಯವಾದಗಳು. ನಾನು ಹತ್ತಿ ಅನುಸಂಧಾನ ಸಂಸ್ಥೆಯಲ್ಲಿ ಮೂರೂವರೆ ದಶಕಗಳ ಕಾಲ ಕೆಲಸಮಾಡಿರುವುದರಿಂದ ಇದರ ಕೆಲವು ಮಗ್ಗಲುಗಳನ್ನು ನೋಡಿದ್ದೇನೆ. ಹಲವಾರು ಸೆಮಿನಾರ್ ಗಳಲ್ಲಿ ಪಾಲ್ಗೊಂಡಿದ್ದೇನೆ. ಅದರಿಂದ ಕೆಲವು ಮಾತುಗಳನ್ನು ಇಲ್ಲಿ ನಮೂದಿಸಿದಲು ಇಚ್ಛಿಸುತ್ತೇನೆ.
ಈಗ ನಮ್ಮ ರೈತರು ಜೈವಿಕ ಕೃಷಿಗೆ ತಮ್ಮ ಒಪ್ಪಿಗೆ ಕೊಟ್ಟಿರುತ್ತಾರೆ. ಯಾವುದಾದರು ಹೊಸ ತಂತ್ರಜ್ಞಾನ ಬಂದಾಗ ಈರೀತಿಯ ಸಮಸ್ಯೆಗಳು ಸ್ವಾಭಾವಿಕ. ನಮ್ಮದೇಶದಲ್ಲಿ ಅದು ಇನ್ನೂ ಹೆಚ್ಚು. ಕಾರಣಗಳು ಹಲವಾರು. ಮೊಟ್ಟಮೊದಲನೆಯ ’ಹಸಿರುಕ್ರಾಂತಿ’ ಬಂದಾಗ ’ನಾರ್ಮನ್ ಬೋರ್ಲಾಗ್” ರಂತಹ ವಿಶ್ವವಿಖ್ಯಾತ ಕೃಷಿವಿಜ್ಞಾನಿ ತಲೆಚಚ್ಚಿಕೊಳ್ಳಬೇಕಾಯಿತು. ಕೊನೆಗೆ ಆದದ್ದೇನು ? ಹಸಿವು, ಬಡತನ, ಆಹಾರದ ಕೊರೆತೆ ದೇಶಕ್ಕೆ ಅಂಟಿದ ಕ್ಷಾಮಗಳು ಈ ನಿಟ್ಟಿನಲ್ಲಿ ದಾರಿಯನ್ನು ಕಂಡುಹಿಡಿದು, ಆ ಕಾರ್ಯಕ್ರಮ ಯಶಸ್ವಿಯಾಗಿ ಇಂದು ಆಹಾರದ ಉತ್ಪಾದನೆಯಲ್ಲಿ ನಾವು ಸ್ವಾವಲಂಭಿಗಳಗಿದ್ದೇವೆ.
ಇನ್ನು, ಮಹಾರಾಷ್ಟ್ರದಂದಹ ಮಂಚೂಣಿಯಲ್ಲಿರುವ ರಾಜ್ಯ, ಒಂದು ವಿಶೇಷ ಕಾರ್ಯಕ್ರಮವನ್ನು ತಮ್ಮ ರೈತರಿಗಾಗಿ ಹಮ್ಮಿಕೊಂಡಿದೆ. ಅದೇ,’ ಮಾನೋಪಲಿ ಕಾಟನ್ ಪ್ರಕ್ಯೂರ್ ಮೆಂಟ್ ಸ್ಕೀಮ್,” ಇದರ ಉದ್ದೇಶಗಳು ಬಹಳ ಹಿತಕಾರಿಯಾಗಿವೆ. ಇದರಡಿಯಲ್ಲಿ ರೈತರಿಗೆ ಅವರು ಬೆಳೆದ ಹತ್ತಿಗೆ ಸರ್ಕಾರ ಒಂದು ಉತ್ತಮ ಬೆಲೆಯನ್ನು ನಿಗದಿಮಾಡಿ ಅವರ ಹಿತಾಸಕ್ತಿಗೆ ನೀರೆರೆಯುತ್ತಿದ್ದಾರೆ. ಆದರೆ, ಅವೆಲ್ಲಾ ಬೇರೆ ಎಲ್ಲಾ ಯೋಜನೆಗಳಂತೆ ಸರಿಯಾಗಿ ನಿರ್ವಹಣೆಮಾಡದೆ ಕಾಗದದ ಮೇಲಿವೆ. ಇದಲ್ಲದೆ, ಮಿಲ್ ಮಾಲೀಕರಿಗೆ ಹತ್ತಿ, ಅತಿ ಹೆಚ್ಚಿನ ಬೆಲೆಯಲ್ಲಿ ಮಾರಾಟಮಾಡಿದರೆ, ಯಾವ ಉದ್ಯಮಿತಾನೆ ಮುಂದೆಬಂದಾನು ?
ಹೀಗೆ ಎರಡೂ ಕಡೆ ಅದು ವಿಫಲವಾಗಿದೆ. ರೈತರಿಗೆ ಇಷ್ಟು ಎಕರೆ ಹತ್ತಿ ಬೆಳೆಯಲೇ ಬೇಕೆಂಬ ಸುಗ್ರೀವಾಜ್ಞೆ ಉಸುರುಕಟ್ಟಿಸುವಂತಹದು. ಏಕೆಂದರೆ, ಮಹಾರಾಷ್ಟ್ರ ಮತ್ತು ಗುಜರಾತ್, ಅತಿ ಹೆಚ್ಚು ಹತ್ತಿ ಉತ್ಪಾದನೆಮಾಡುವ ರಾಜ್ಯಗಳು. ಅವು ತಮ್ಮ ಸ್ಥಾನವನ್ನು ಕಾದಿರಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸುತ್ತವೆ.